ಐತಿಹಾಸಿಕ ತೀರ್ಪು: ಎಂಬಿಬಿಎಸ್ ಪ್ರವೇಶ ನಿರಾಕರಣೆಗೆ ಶೇ 40 ಅಂಗವೈಕಲ್ಯ ಮಾನದಂಡವಾಗದು; ವಿವರಣೆ ಕೊಡಬೇಕು ಎಂದ ಸುಪ್ರೀಂ ಕೋರ್ಟ್
ವೃತ್ತಿಪರ ಶಿಕ್ಷಣದ ಪ್ರವೇಶಕ್ಕೆ ಸಂಬಂಧಿಸಿದ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಸ್ಪಷ್ಟ ನಿಯಮ ರೂಪಿಸುವ ಅಗತ್ಯವನ್ನು ಒತ್ತಿಹೇಳಿದೆ. ಇದರಂತೆ, ಎಂಬಿಬಿಎಸ್ ಪ್ರವೇಶ ನಿರಾಕರಣೆಗೆ ಶೇ 40 ಅಂಗವೈಕಲ್ಯ ಮಾನದಂಡವಾಗದು. ಒಂದೊಮ್ಮೆ ನಿರಾಕರಿಸಿದರೆ ಅದಕ್ಕೆ ಸ್ಪಷ್ಟ ವಿವರಣೆ ಕೊಡಬೇಕು ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.
ನವದೆಹಲಿ: ಶೇಕಡ 40 ಅಂಗವೈಕಲ್ಯ ಇದೆ ಎಂಬ ಒಂದೇ ಕಾರಣಕ್ಕೆ ಎಂಬಿಬಿಎಸ್ ಪ್ರವೇಶ ನಿರಾಕರಿಸಬಾರದು. ಎಂಬಿಬಿಎಸ್ ಪ್ರವೇಶ ನಿರಾಕರಣೆಗೆ 40% ಅಂಗವೈಕಲ್ಯ ಮಾನದಂಡವಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಅಕ್ಟೋಬರ್ 15) ಮಹತ್ವದ ತೀರ್ಪು ನೀಡಿದೆ. ವೈದ್ಯಕೀಯ ಮೌಲ್ಯಮಾಪನ ಮಂಡಳಿಯು ಈ ಕುರಿತಾದ ಒಂದು ನಿರ್ದಿಷ್ಟ ನಿಯಮ ಜಾರಿಗೊಳಿಸದ ಹೊರತು ಈ ಮಾನದಂಡ ಮುಂದಿಟ್ಟುಕೊಂಡು ಶಿಕ್ಷಣ ಸಂಸ್ಥೆಗೆ ಅಥವಾ ಕೋರ್ಸ್‌ಗೆ ಪ್ರವೇಶ ನಿರಾಕರಿಸುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಅರವಿಂದ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಗಳು ಅಭ್ಯರ್ಥಿಯು ಕೋರ್ಸ್ ಅನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ತೀರ್ಮಾನಿಸಿದರೆ, ಅದು ಯಾಕೆ ಎಂಬುದನ್ನೂ ತಿಳಿಸಬೇಕು ಎಂದು ಹೇಳಿದೆ.
ಎಂಬಿಬಿಎಸ್ ಪ್ರವೇಶಕ್ಕೆ ಅಂಗವೈಕಲ್ಯ ಅಡ್ಡಿಯಾದ ಪ್ರಕರಣದ ವಿಚಾರಣೆ
ಮಹಾರಾಷ್ಟ್ರದ ನೀಟ್ (ಯುಜಿ) 24 ಪರೀಕ್ಷೆ ಉತ್ತೀರ್ಣರಾದ ಓಂಕಾರ್ ರಾಮಚಂದ್ರ ಗೊಂಡ್ ಎಂಬ ಎಂಬಿಬಿಎಸ್ ಪ್ರವೇಶ ನಿರಾಕರಿಸಲಾಗಿತ್ತು. ಅಂಗವೈಕಲ್ಯ ಮುಂದಿಟ್ಟುಕೊಂಡು ಪ್ರವೇಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಓಂಕಾರ್ ಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, “ಪ್ರಮಾಣೀಕೃತ ಅಂಗವೈಕಲ್ಯವು ಮಾನದಂಡದ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿ ಎಂಬ ಕಾರಣ ನೀಡಿ ಶಿಕ್ಷಣ ಸಂಸ್ಥೆಗೆ ಪ್ರವೇಶ ನಿರಾಕರಿಸಲಾಗದು ಎಂದು ನಾವು ಭಾವಿಸುತ್ತೇವೆ. ಅಭ್ಯರ್ಥಿಯು ಎಂಬಿಬಿಎಸ್ ಪ್ರವೇಶಕ್ಕೆ ಅರ್ಹನಾಗಿದ್ದು, ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಯು ಅಭಿಪ್ರಾಯ ಪಟ್ಟರೆ ಪ್ರಮಾಣೀಕೃತ ಅಂಗವೈಕಲ್ಯದ ಹೊರತಾಗಿಯೂ ಆಕಾಂಕ್ಷಿಯು ಕೋರ್ಸ್ ಮುಂದುವರಿಸಬಹುದು" ಎಂದು ವಿವರಿಸಿದೆ.
42 ಪುಟಗಳ ತೀರ್ಪು ಮತ್ತು ಗಮನಸೆಳೆದ ಅಂಶಗಳಿವು
ನ್ಯಾಯಮೂರ್ತಿ ವಿಶ್ವನಾಥನ್ ಅವರು ನ್ಯಾಯಪೀಠದ ಪರವಾಗಿ ತೀರ್ಪು ಬರೆದಿದ್ದು, 42 ಪುಟಗಳ ತೀರ್ಪು ಪ್ರಕಟವಾಗಿದೆ. ತೀರ್ಪಿನಲ್ಲಿ ಗಮನಸೆಳೆದ ಕೆಲವು ಅಂಶಗಳಿವು
1) ರಾಜ್ಯ ಸರ್ಕಾರವು ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮಿತಿಯಲ್ಲಿ ವಿಕಲಾಂಗ ವ್ಯಕ್ತಿಗಳು ಸೇರಿ ಶಿಕ್ಷಣದ ಹಕ್ಕನ್ನು ಪಡೆಯಲು ಪರಿಣಾಮಕಾರಿ ನಿಬಂಧನೆಗಳನ್ನು ಮಾಡಬೇಕು ಎಂಬುದು ಸಾಂವಿಧಾನಿಕವಾಗಿ ನೀಡಲಾಗಿರುವ ಗುರಿ.
2) ಕೋರ್ಸ್ ಸೇರಲು ಬಯಸಿದ ಅರ್ಹ ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡುವ ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಗಳು ಅಭ್ಯರ್ಥಿಯ ಅಂಗವೈಕಲ್ಯವು ಪ್ರಶ್ನೆಯಲ್ಲಿರುವ ಕೋರ್ಸ್ ಅನ್ನು ಅನುಸರಿಸುವ ಅಭ್ಯರ್ಥಿಗೆ ಅಡ್ಡಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಧನಾತ್ಮಕವಾಗಿ ದಾಖಲಿಸಬೇಕು.
3) ಅಂಗವೈಕಲ್ಯದ ಕಾರಣ ಕೋರ್ಸ್‌ಗೆ ಪ್ರವೇಶ ನಿರಾಕರಿಸಿದರೆ, ಅದು ಯಾಕೆ ಎಂಬುದನ್ನು ಅಭ್ಯರ್ಥಿಗೆ ವಿವರಿಸಿ ಮನದಟ್ಟು ಮಾಡುವ ಕೆಲಸವನ್ನು ಅಂಗವೈಕಲ್ಯ ಮೌಲ್ಯಮಾಪನ ಮಂಡಳಿ ಮಾಡಬೇಕು.
4) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಈ ವರ್ಷ ಜನವರಿ 25ಕ್ಕೆ ನೀಡಿರುವ ಸೂಚನೆ ಪ್ರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕಷ್ಟೆ. ಇದರಲ್ಲಿ ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಸಾಮಾಜಿಕ ಹಿತವನ್ನು ಗಮನಿಸಬೇಕು.
5) ಮೇಲ್ಮನವಿ ಸಮಿತಿಯ ರಚನೆ ಕೂಡ ಬಾಕಿ ಉಳಿದಿದೆ. ಅಭ್ಯರ್ಥಿಗೆ ಪ್ರವೇಶ ನಿರಾಕರಣೆಯ ಅಭಿಪ್ರಾಯ ನೀಡುವ ಮೊದಲು ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಗಳ ಅಂತಹ ನಿರ್ಧಾರಗಳು ನ್ಯಾಯಾಂಗ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಸವಾಲಿಗೆ ಗುರಿಯಾಗುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಏನಿದು ಪ್ರಕರಣ: ಓಂಕಾರ್ ಅವರಿಗೆ 1997 ರ ಪದವಿ ವೈದ್ಯಕೀಯ ಶಿಕ್ಷಣ ನಿಯಮಗಳ ಪ್ರಕಾರ 45 ಪ್ರತಿಶತದಷ್ಟು ಮಾತು ಮತ್ತು ಭಾಷಾ ಶಾಶ್ವತ ಅಂಗವೈಕಲ್ಯ ಇದೆ. ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ ಸೆಪ್ಟೆಂಬರ್ 18 ರಂದು ಎಂಬಿಬಿಎಸ್‌ಗೆ ಪ್ರವೇಶ ಅವಕಾಶ ನೀಡಬೇಕು ಎಂದು ಹೇಳಿತ್ತು. ಇದಕ್ಕೂ ಮೊದಲು ಎಂಬಿಬಿಎಸ್ ಕೋರ್ಸ್‌ಗೆ ಅವಕಾಶ ನೀಡದಿರುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಬಾಂಬೆ ಹೈಕೋರ್ಟ್‌ನ ಆಗಸ್ಟ್ 29 ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.