Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್ ನೀಡಿದ ಬಿಜೆಪಿ
ಲೈಂಗಿಕ ಹಗರಣದ ಆರೋಪ ಎದುರಿಸುತ್ತಿದ್ದ ಸಂಸದ ಬ್ರಿಜ್ ಭೂಷಣ್‌ಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಅವರ ಪುತ್ರನಿಗೆ ಲೋಕಸಭೆಗೆ ಚುನಾವಣೆ ಟಿಕೆಟ್ ನೀಡಿದೆ.
ದೆಹಲಿ: ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಂಸದ ಹಾಗೂ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ ಮೊಕದ್ದಮೆ ದಾಖಲಾಗಿ ದೇಶ ಬಿಟ್ಟು ಪರಾರಿಯಾಗಿರುವ ಪ್ರಕರಣದ ವಿವಾದದ ನಡುವೆಯೇ, ಭಾರತೀಯ ಜನತಾಪಕ್ಷವು ಇಂತಹುದೇ ಆರೋಪ ಎದುರಿಸುತ್ತಿದ್ದ ತಮ್ಮದೇ ಪಕ್ಷದ ಸಂಸದನ ಬದಲು ಮಗನಿಗೆ ಟಿಕೆಟ್ ನೀಡಿದೆ. ಈ ಮೂಲಕ ಗಂಭೀರ ಆರೋಪ ಎದುರಿಸುತ್ತಿದ್ದ ಆರೋಪಿ ಬದಲು ಮಗನಿಗೆ ಟಿಕೆಟ್ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೂ ಒತ್ತು ನೀಡಿದೆ.
ಉತ್ತರ ಪ್ರದೇಶದ ಕೈಸರಗಂಜ್ (Kaiserganj ) ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕರಣ್ ಭೂಷಣ್ ಸಿಂಗ್ ಅವರ ಹೆಸರನ್ನು ಬಿಜೆಪಿ ಸಂಸದೀಯ ಮಂಡಳಿ ಅಂತಿಮಗೊಳಿಸಿ ಹೆಸರನ್ನು ಪ್ರಕಟಿಸಿದೆ. ಕರಣ್ ಸಿಂಗ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷಾಗಿದ್ದ ಬ್ರಿಜ್ ಭೂಷಣ್ ಸಿಂಗ್ ಅವರ ಪುತ್ರ.
ಬ್ರಿಜ್ ಭೂಷಣ್ ಸಿಂಗ್ ಅವರು ಹಲವಾರು ಕುಸ್ತಿ ಪಟುಗಳಿಗೆ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ನೂರಾರು ಕುಸ್ತಿಪಟುಗಳು ಮುಷ್ಕರ ನಡೆಸಿದ್ದರು. ಇದು ಅನಿರ್ದಿಷ್ಟಾವಧಿವರೆಗೂ ಮುಂದುವರೆದಿತ್ತು. ಇದರ ನಡುವೆ ಅವರು ಚುನಾವಣೆ ಎದುರಿಸಿ ಮತ್ತೆ ಕುಸ್ತಿ ಫಡರೇಷನ್ ಅಧ್ಯಕ್ಷರಾಗಿದ್ದರು. ಆರು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿರುವ ಬ್ರಿಜ್ ಭೂಷಣ್ ವಿರುದ್ದ ಗಂಭೀರ ಆರೋಪಗಳು ಕೇಳಿ ಬಂದಿದ್ದರಿಂದ ಬಿಜೆಪಿಗೂ ತೀವ್ರ ಮುಜುಗರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದರ ನಡುವೆ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಅವರ ಪುತ್ರ ಕರಣ್ ಸಿಂಗ್ ಗೆ ಟಿಕೆಟ್ ನೀಡಲಾಗಿದೆ. ಕರಣ್ ಉತ್ತರ ಪ್ರದೇಶ ಕುಸ್ತಿ ಫೆಡರೇಷನ್ ಅಧ್ಯಕ್ಷರೂ ಹೌದು.
ಬ್ರಿಜ್ ಭೂಷಣ್ ವಿರುದ್ದ ಆರೋಪಗಳು ಕೇಳಿ ಬಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ಕೇಸರಿಗಂಜ್ ಭಾಗದಲ್ಲಿ ಬಲವಾದ ಹಿಡಿತ ಹೊಂದಿರುವ ಬ್ರಿಜ್ ಭೂಷಣ್ ಕೈ ಬಿಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿತ್ತು. ಕೊನೆಗೆ ಅವರನ್ನು ಸಮಾಧಾನಪಡಿಸಲು ಪುತ್ರನಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನಲಾಗುತ್ತಿದೆ.
ಈಗಾಗಲೇ ಬ್ರಿಜ್ ಭೂಷಣ್ ಸಿಂಗ್ ಅವರ ಹಿರಿಯ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಈಗಾಗಲೇ ಶಾಸಕರಾಗಿದ್ಧಾರೆ. ಈಗ ಎರಡನೇ ಪುತ್ರನಿಗೆ ಅಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಿಂಗ್ ಪತ್ನಿ ಕೇತ್ಕಿ ದೇವಿ ಅವರು ಈ ಹಿಂದೆ ಸಂಸದರಾಗಿದ್ದರು. ಕೈಸರಿಗಂಜ್ ನಲ್ಲಿ ಮೇ 20 ರಂದು ಐದನೇ ಹಂತದ ಚುನಾವಣೆ ನಡೆಯಲಿದೆ. ಶುಕ್ರವಾರ ಅಲ್ಲಿ ನಾಮಪತ್ರ ಸಲ್ಲಿಸಲು ಕಡೆಯ ದಿನಾಂಕವಾಗಿದೆ.