ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pfi Ban: ಪಿಎಫ್‌ಐ 2047ರ ವೇಳೆಗೆ ಭಾರತವನ್ನು..ʼನಿಧಾನ ವಿಷʼದ ಪ್ಲ್ಯಾನ್‌ ಬಿಚ್ಚಿಟ್ಟ ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥ!

PFI Ban: ಪಿಎಫ್‌ಐ 2047ರ ವೇಳೆಗೆ ಭಾರತವನ್ನು..ʼನಿಧಾನ ವಿಷʼದ ಪ್ಲ್ಯಾನ್‌ ಬಿಚ್ಚಿಟ್ಟ ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥ!

ಪಿಎಫ್‌ಐ ವಿರುದ್ಧ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ಘಟಕ(ಎಟಿಎಸ್‌)ದ ಮುಖ್ಯಸ್ಥ ವಿನೀತ್‌ ಅಗರವಾಲ್‌ ಮಾಡಿರುವ ಗಂಭೀರ ಆರೋಪಗಳು ಇದೀಗ ಇಡೀ ದೇಶದ ಗಮನ ಸೆಳೆದಿವೆ. ಪಿಎಎಫ್‌ಐ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿತ್ತು ಎಂದು ವಿನೀತ್‌ ಅಗರವಾಲ್‌ ಆರೋಪಿಸಿದ್ದಾರೆ. ವಿನೀತ್‌ ಅಗರವಾಲ್‌ ಮಾಡಿರುವ ಆರೋಪಗಳನ್ನು ಗಮನಿಸುವುದಾದರೆ…

ಪಿಎಫ್‌ಐ ಕಚೇರಿಗೆ ಬೀಗ
ಪಿಎಫ್‌ಐ ಕಚೇರಿಗೆ ಬೀಗ (PTI)

ಮುಂಬೈ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಸಂಘಟನೆಯನ್ನು ನಿಷೇಧಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪಿಎಫ್‌ಐ ಮೇಲಿನ ನಿಷೇಧವನ್ನು ಇಡೀ ದೇಶ ಒಕ್ಕೊರಲಿನಿಂದ ಸ್ವಾಗತಿಸಿದೆಯಾದರೂ, ಅಲ್ಲಲ್ಲಿ ಕೆಲವು ವಿರೋಧದ ಧ್ವನಿ ಕೇಳಿಬಂದಿವೆ. ಆದರೆ ಪಿಎಫ್‌ಐ ಸಂಘಟನೆ ವಿರುದ್ಧ ಕೇಳಿಬರುತ್ತಿರು ಆರೋಪಗಳು ಇವೆಲ್ಲವನ್ನೂ ಮರೆಮಾಚಿವೆ.

ಟ್ರೆಂಡಿಂಗ್​ ಸುದ್ದಿ

ಪಿಎಫ್‌ಐ ವಿರುದ್ಧ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ಘಟಕ(ಎಟಿಎಸ್‌)ದ ಮುಖ್ಯಸ್ಥ ವಿನೀತ್‌ ಅಗರವಾಲ್‌ ಮಾಡಿರುವ ಗಂಭೀರ ಆರೋಪಗಳು ಇದೀಗ ಇಡೀ ದೇಶದ ಗಮನ ಸೆಳೆದಿವೆ. ಪಿಎಎಫ್‌ಐ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿತ್ತು ಎಂದು ವಿನೀತ್‌ ಅಗರವಾಲ್‌ ಆರೋಪಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌), ಬಿಜೆಪಿಯ ಪ್ರಮುಖ ನಾಯಕರನ್ನು ಟಾರ್ಗೆಟ್‌ ಮಾಡಿದ್ದ ಪಿಎಫ್‌ಐ, ಒಬ್ಬೊಬ್ಬರನ್ನಾಗಿ ಈ ನಾಯಕರನ್ನು ಕೊಲೆ ಮಾಡಲು ಸಂಚು ರೂಪಿಸಿತ್ತು ಎಂದು ಮಹಾರಾಷ್ಟ್ರದ ಎಟಿಎಸ್‌ ಮುಖ್ಯಸ್ಥ ವಿನೀತ್‌ ಅಗರವಾಲ್‌ ತಿಳಿಸಿದ್ದಾರೆ. ಪಿಎಫ್‌ಐ ಮೇಲಿನ ನಷಿಏದ ಅತ್ಯಂತ ಸ್ವಾಗತಾರ್ಹ ಕ್ರಮ ಎಂದೂ ವಿನೀತ್‌ ಅಗರವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಪಿಎಫ್‌ಐ ಒಂದು ರೀತಿ ʼನಿಧಾನ ವಿಷʼದಂತೆ ಕೆಲಸ ಮಾಡುತ್ತಿತ್ತು. ಅಲ್ಪಸಂಖ್ಯಾತ ಯುವಕರಲ್ಲಿ ಆಕ್ರಮಣಕಾರಿ ಚಿಂತನೆಗಳನ್ನು ಬಿತ್ತುತ್ತಿದ್ದ ಪಿಎಫ್‌ಐ, 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಪರಿವರ್ತಿಸಲು ಬಯಸಿತ್ತು. ಇದಕ್ಕಾಗಿ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಇತರ ಹಿಂದೂ ಸಂಘಟನೆಗಳ ನಾಯಕರನ್ನು ಅದು ಕೊಲ್ಲಲು ಬಯಸಿತ್ತು ಎಂದು ವಿನೀತ್‌ ಅಗರವಾಲ್‌ ತಿಳಿಸಿದ್ದಾರೆ.

ಸೂಕ್ತ ಸಮಯದಲ್ಲಿ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 21 ಜನರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದೆ. ಬಂಧಿತರಿಂದ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳಲ್ಲಿ ಸಂಘಟನೆಯ ಗುರಿ ಮತ್ತು ಉದ್ದೇಶಗಳನ್ನು ವಿವರಿಸುವ ಮಾಹಿತಿಗಳೂ ಇವೆ ಎಂದು ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥರು ನುಡಿದರು.

ಪಿಎಫ್‌ಐ ಸಂಘಟನೆ ಮೇಲೆ ನಿಷೇಧ ಹೇರಿರುವುದರಿಂದ ಯಾರೂ ಕೂಡ ಸಂಘಟನೆ ಪರವಾಗಿ ಪ್ರತಿಭಟನೆ ನಡೆಸುವಂತಿಲ್ಲ. ಕಾನೂನು ಹೋರಾಟ ಹೊರತುಪಡಿಸಿ ಇನ್ಯಾವುದೇ ಚಟುವಟಿಕೆಯಲ್ಲಿ ಸಂಘಟನೆಯ ಬೆಂಬಲಿಗರು ತೊಡಗುವಂತಿಲ್ಲ ಎಂದೂ ವಿನೀತ್‌ ಅಗರವಾಲ್‌ ಸ್ಪಷ್ಟಪಡಿಸಿದ್ದಾರೆ.

ಪಿಎಫ್‌ಐ ಸಂಘಟನೆ ಮಹಾರಾಷ್ಟ್ರವೂ ಸೇರಿದಂತೆ ದೇಶಾದ್ಯಂತ ತರಬೇತಿ ಕೇಂದ್ರಗಳನ್ನು ತೆರೆದಿತ್ತು. ಮೇಲ್ನೋಟಕ್ಕೆ ಇದು ಸಾಮಾಜಿಕ ಸೇವಾ ಕೇಂದ್ರಗಳೆನಿಸಿದರೂ, ಇದರಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದವು. ಮುಸ್ಲಿಮರ ಮೇಲೆ ಈ ದೇಶದಲ್ಲಿ ನಿರಂತರವಾಗಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಬಿಂಬಿಸುವ ವಿಡಿಯೋಗಳನ್ನು ತೋರಿಸಿ, ಯುವಕರ ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು ಎಂದು ವಿನೀತ್‌ ಅಗರವಾಲ್‌ ಮಾಹಿತಿ ನೀಡಿದರು.

ಭಾರತೀಯ ಮುಸ್ಲಿಮರನ್ನು ರಕ್ಷಿಸಲು ಮೊಘಲರು ಬರುವುದಿಲ್ಲ. ಭಾರತೀಯ ಮುಸಲ್ಮಾನರೇ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಇದಕ್ಕೆ ಸೈನ್ಯ ತರಬೇತಿ ಅತ್ಯವಶ್ಯ ಎಂದು ಈ ತರಬೇತಿ ಕೇಂದ್ರಗಳಲ್ಲಿ ಹೇಳಿಕೊಡಲಾಗುತ್ತಿತ್ತು. ಹಿಂದೂ ಸಂಘಟನೆಗಳು ಮುಸ್ಲಿಂ ವಿರೋಧಿಯಾಗಿದ್ದು, ಈ ಸಂಘಟನೆಗಳ ನಾಯಕರನ್ನು ಕೊಲೆ ಮಾಡುವುದೇ ಸೂಕ್ತ ಎಂದು ಯುವಕರ ತಲೆಯಲ್ಲಿ ತುಂಬಲಾಗುತ್ತಿತ್ತು ಎಂದು ವಿನೀತ್‌ ಅಗರವಾಲ್‌ ತಿಳಿಸಿದ್ದಾರೆ.

ಬಂಧಿತರಿಂದ ಸಾಕಷ್ಟು ಮಾಹಿತಿ ಲಭ್ಯವಾಗಿದ್ದು, ಮಹಾರಾಷ್ಟ್ರವೊಂದರಲ್ಲೇ ಸುಮಾರು 2,000 ಜನರಿಗೆ ಶಸ್ತ್ರ ತರಬೇತಿ ನೀಡಲಾಗಿದೆ. 2047ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷಗಳಾಗುತ್ತವೆ. ಅಷ್ಟರಲ್ಲಿ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವುದು ಪಿಎಫ್‌ಐ ಗುರಿಯಾಗಿತ್ತಿ ಎಂದು ವಿನೀತ್‌ ಅಗರವಾಲ್‌ ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಪಿಎಫ್‌ಐ ಸಂಘಟನೆ ವಿರುದ್ಧ ಗುರುತರ ಆರೋಪಗಳು ಕೇಳಿ ಬಂದಿದ್ದು, ಬಂಧಿತ ನಾಯಕರಿಂದ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.

IPL_Entry_Point

ವಿಭಾಗ