ಕೋತಿಗಳನ್ನು ಹೆದರಿಸಲು ಅವುಗಳದ್ದೇ ಪೋಸ್ಟರ್ ಅಂಟಿಸಿದ ರೈಲ್ವೇ ಅಧಿಕಾರಿಗಳು..
ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದ ಅಧಿಕಾರಿಗಳು ಕೋತಿಗಳನ್ನು ಹೆದರಿಸಲು ಅವುಗಳದ್ದೇ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲ್ವೇ ನಿಲ್ದಾಣದ ಅಧಿಕಾರಿಗಳು ಕೋತಿಗಳನ್ನು ಹೆದರಿಸಲು ಅವುಗಳದ್ದೇ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಮತ್ತು ಪ್ರಮುಖ ಸ್ಥಳಗಳಲ್ಲಿ ಹನುಮಾನ್ ಲಂಗೂರ್‌ಗಳ ದೈತ್ಯ ಕಟ್‌ಔಟ್‌ಗಳನ್ನು ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಅನೇಕ ಮಾರಣಾಂತಿಕ ದಾಳಿಗಳನ್ನೂ ನಡೆಸಿವೆ. ಮಂಗಗಳು ಆಹಾರ ಸಿಗದಿದ್ದಾಗ, ಅವು ಆಕ್ರಮಣಕಾರಿಯಾಗಿ ತಿರುಗಿ ಪ್ರಯಾಣಿಕರ ಮೇಲೆ ದಾಳಿ ಮಾಡುತ್ತವೆ. ಮಕ್ಕಳ ಮೇಲೆ ದಾಳಿ ಮಾಡಿ ಆಹಾರ ಕಸಿದುಕೊಳ್ಳುತ್ತವೆ ಮತ್ತು ಆಗಾಗ್ಗೆ ಚೀಲಗಳನ್ನು ಎತ್ತಿಕೊಂಡು ಓಡಿ ಹೋಗುತ್ತವೆ.
ಅಷ್ಟೇ ಅಲ್ಲ ತಿಂಡಿ ಪ್ಯಾಕ್ಗಳನ್ನು ಮಂಗಗಳು ಕಸಿದುಕೊಳ್ಳುವುದರಿಂದ ಚಿಪ್ಸ್ ಅಥವಾ ಇತರ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಅಂಗಡಿಗಳಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ ಎಂದು ರೈಲ್ವೆ ಮಾರಾಟಗಾರರು ದೂರಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತುಕೊಳ್ಳಲಿಕ್ಕೇ ಕಷ್ಟವಾಗುತ್ತಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಹೀಗಾಗಿ ಇವನ್ನು ಹೆದರಿಸಲು ಅಧಿಕಾರಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ಸಾರ್ವಜನಿಕ ಸಂಪರ್ಕ ಅಧಿಕಾರಿ (ಎನ್‌ಸಿಆರ್ ವಲಯ) ಅಮಿತ್ ಕುಮಾರ್ ಸಿಂಗ್ ಮಾತನಾಡಿ ಕಾನ್ಪುರ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಪೋಸ್ಟರ್ ಮತ್ತು ಕಟೌಟ್ಗಳನ್ನು ಅಳವಡಿಸಿದ್ದೇವೆ. ಇದಲ್ಲದೇ, ಲಂಗೂರ್‌ಗಳ ಸದ್ದು ಕೇಳುವಂತೆ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಪೋಸ್ಟರ್ ಮತ್ತು ಕಟೌಟ್ ಪ್ರಯೋಗ ಯಶಸ್ವಿಯಾದರೆ ಇತರ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.