Kota Coaching: ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ, ರಾಜಸ್ಥಾನದ ಕೋಟಾ ಕೋಚಿಂಗ್ ಕೇಂದ್ರಗಳು 2 ತಿಂಗಳು ಬಂದ್
Coaching centres in Kota: ಪ್ರತಿವರ್ಷ ಕೋಟಾ ಎಂಬ ಜಿಲ್ಲೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. 2023ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆಸುತ್ತಿದ್ದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯ ಕೋಚಿಂಗ್ ಕೇಂದ್ರಗಳಿಗೆ ಜಿಲ್ಲಾಡಳಿತವು ಎರಡು ತಿಂಗಳ ಕಾಲ ಯಾವುದೇ ರೂಟಿನ್ ಪರೀಕ್ಷೆಗಳನ್ನು (ಮಾಕ್ ಟೆಸ್ಟ್ ಇತ್ಯಾದಿ) ನಡೆಸದಂತೆ ತಿಳಿಸಿದೆ. ಕೋಚಿಂಗ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಕೋಚಿಂಗ್ ಕೇಂದ್ರಗಳಿಗೆ ಸರಕಾರ ಈ ನಿರ್ದೇಶನ ನೀಡಿದೆ. ನೀಟ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಯಾವುದೇ ನಿಯಮಿತ ಪರೀಕ್ಷೆ ನಡೆಸದಂತೆ ಕೋಟಾ ಜಿಲ್ಲಾಡಳಿತ ಸೂಚಿಸಿದೆ.
ಪ್ರತಿವರ್ಷ ಕೋಟಾ ಎಂಬ ಜಿಲ್ಲೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಅಂದರೆ, ಜಂಟಿ ಪ್ರವೇಶ ಪರೀಕ್ಷೆ ಅಥವಾ ಜೆಇಇ, ಮೆಡಿಕಲ್ ಕಾಲೇಜು ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತೆ ಪರೀಕ್ಷೆ (ನೀಟ್) ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಇಲ್ಲಿನ ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ವಿದ್ಯಾರ್ಥಿಗಳು ಸೇರುತ್ತಾರೆ.
2023ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆಸುತ್ತಿದ್ದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಪ್ರಮಾಣದ ಆತ್ಮಹತ್ಯೆಯಾಗಿದೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೇ ಭಾನುವಾರ ಇಬ್ಬರು ವಿದ್ಯಾರ್ಥಿಗಳು ತಮ್ಮ ಜೀವವನ್ನು ಕೊನೆಗೊಳಿಸಿದ್ದಾರೆ. ಇವರಿಬ್ಬರು ನಾಲ್ಕು ಗಂಟೆಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆವಿಷ್ಕಾರ್ ಶಾಂಭಜಿ ಕಾಲ್ಸೆ ಎಂಬ 17 ವರ್ಷದ ವಿದ್ಯಾರ್ಥಿ ಜವಾಹರ್‌ಲಾಲ್ ನಗರದ ಕೋಚಿಂಗ್ ಕೇಂದ್ರದ 6ನೇ ಮಹಡಿಯಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದನು. ಈತ ನೀಟ್ ಅಣಕು ಪರೀಕ್ಷೆ ಎದುರಿಸಿದ ಬಳಿಕ ಕೊಠಡಿಯಿಂದ ಅಪರಾಹ್ನ 3.15 ಗಂಟೆಗೆ ಹೊರಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರ್ಶ್ ರಾಜ್ ಎಂಬ ವಿದ್ಯಾರ್ಥಿಯು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದನು. 18 ವರ್ಷದ ಈತ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದನು. ತನ್ನ ಬಾಡಿಗೆ ಮನೆಯಲ್ಲಿ ಸಂಜೆ ಏಳು ಗಂಟೆ ಸಮಯಕ್ಕೆ ಈ ಕೃತ್ಯ ಎಸಗಿದ್ದನು. ನಾಲ್ಕು ಗಂಟೆಯ ಅಂತರದಲ್ಲಿ ನಡೆದ ಈ ಎರಡು ಸಾವು ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿತ್ತು.
ಕೋಚಿಂಗ್ ಕೇಂದ್ರಗಳು ನಡೆಸುವ ಇಂತಹ ಸರಣಿ ಪರೀಕ್ಷೆಗಳಿಂದ ಒತ್ತಡಕ್ಕೆ ಒಳಗಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಮುಂದಿನ ಎರಡು ತಿಂಗಳು ಯಾವುದೇ ರೂಟಿನ್ ಪರೀಕ್ಷೆ ನಡೆಸಬಾರದು" ಎಂದು ಕೋಚಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಒಪಿ ಭಂಕರ್ ನಿರ್ದೇಶನ ನೀಡಿದ್ದಾರೆ. "ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ನೀಡಬೇಕು" ಎಂದು ಅವರು ಸೂಚಿಸಿದ್ದಾರೆ.
ಮಾನಸಿಕ ವ್ಯಥೆ ಇರುವವರಿಗೆ ಸಹಾಯ
ಮಾನಸಿಕ ವೇದನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ರತಿಯೊಬ್ಬರ ಮಾನಸಿಕ ಅನುಭವವೂ ಭಿನ್ನವಾಗಿದೆ. ಯಾರನ್ನಾದರೂ ಮಾನಸಿಕವಾಗಿ ಬೆಂಬಲಿಸಬೇಕು ಎಂದರೆ ಅವರ ಅಗತ್ಯತೆಗಳನ್ನು ಅರಿಯಿರಿ. ತಜ್ಞರ ಬೆಂಬಲ ಪಡೆಯಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಸಹಕಾರ ಅವರಿಗಿದೆ ಎಂಬುದನ್ನು ಮನವರಿಕೆ ಮಾಡಿಸಿ. ಈ ಕುರಿತಾದ ಸಲಹೆಗಳು ಇಲ್ಲಿವೆ.
ಆತ್ಮಹತ್ಯೆ ತಪ್ಪಿಸಿ- ಐಕಾಲ್ ಹೆಲ್ಪ್ ಲೈನ್‌ಗೆ ಕರೆ ಮಾಡಿ: 9152987821