ಕನ್ನಡ ಸುದ್ದಿ  /  Nation And-world  /  Ram Janm Mahotsav Shri Ram Janmabhoomi Teerth Kshetra Trust Will Be Organising Ram Janm Mahotsav In Ayodhya From March 2

Ram Janm Mahotsav: ಅಯೋಧ್ಯೆಯಲ್ಲಿ 21ರಿಂದ 30ರ ತನಕ ರಾಮ ಜನ್ಮ ಮಹೋತ್ಸವ; ವಿವಿಧ ಕಾರ್ಯಕ್ರಮ ವಿವರ ಬಿಡುಗಡೆ ಮಾಡಿದ ರಾಮಜನ್ಮಭೂಮಿ ಟ್ರಸ್ಟ್‌

Ram Janm Mahotsav: ಶ್ರೀ ರಾಮನಗರಿ ಅಯೋಧ್ಯಾದಲ್ಲಿ ಮಾರ್ಚ್‌ 21ರಿಂದ ಮಾರ್ಚ್‌ 30ರ ತನಕ ʻರಾಮ ಜನ್ಮ ಮಹೋತ್ಸವʼ ಆಚರಿಸುವುದಕ್ಕೆ ತೀರ್ಮಾನಿಸಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಘೋಷಣೆ ಮಾಡಿದೆ.

ಶ್ರೀ ರಾಮ ಜನ್ಮ ಮಹೋತ್ಸವ
ಶ್ರೀ ರಾಮ ಜನ್ಮ ಮಹೋತ್ಸವ (ShriRamTeerth)

ಅಯೋಧ್ಯಾ: ಚೈತ್ರ ನವರಾತ್ರಿ ಸಂದರ್ಭದಲ್ಲಿ ಅಂದರೆ ಮಾರ್ಚ್‌ 21ರಿಂದ ಮಾರ್ಚ್‌ 30ರ ತನಕ ರಾಮನಗರಿ ಅಯೋಧ್ಯಾದಲ್ಲಿ ʻರಾಮ ಜನ್ಮ ಮಹೋತ್ಸವʼ ಆಚರಿಸುವುದಕ್ಕೆ ತೀರ್ಮಾನಿಸಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಘೋಷಣೆ ಮಾಡಿದೆ.

ಈ ಉತ್ಸವಕ್ಕೆ ಸಂಬಂಧಿಸಿದ ಅಧಿಕೃತ ಪೋಸ್ಟರ್‌ ಅನ್ನು ಟ್ರಸ್ಟ್‌ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಮಂಗಳವಾರ ಸಂಜೆ ತಡವಾಗಿ ಶೇರ್‌ ಮಾಡಿದೆ. ಆ ಪೋಸ್ಟರ್‌ನಲ್ಲಿರುವ ಮಾಹಿತಿ ಪ್ರಕಾರ, ʻರಾಮ ಜನ್ಮ ಮಹೋತ್ಸವʼ ಆಚರಣೆ ವೇಳೆ ʻರನ್‌ ಫಾರ್‌ ರಾಮ್‌ʼ ಮ್ಯಾರಥಾನ್‌ ರೇಸ್‌, ಕುಸ್ತಿ, ಕಬಡ್ಡಿ, ಬೋಟ್‌ ರೇಸ್‌, ಫೆನ್ಸಿಂಗ್‌ ಮತ್ತು ಸೈಕಲ್‌ ರೇಸ್‌ ಸೇರಿ ಹಲವು ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ʻರಾಮ ಜನ್ಮ ಮಹೋತ್ಸವʼದ ವೇಳೆ ಪ್ರತಿನಿತ್ಯ ಸಂಜೆ ಧಾರ್ಮಿಕ ಸಭೆಗಳು ನಡೆಯಲಿವೆ. ಇದಲ್ಲದೆ, ರಾಮಚರಿತ ಮಾನಸದ ಕಥೆಗಳನ್ನು ಆಧರಿಸಿದ ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕವಿ ಸಮಾವೇಶವೂ ಆಯೋಜನೆ ಆಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

ಹೊಸ ಅಯೋಧ್ಯೆ ರೂಪುಗೊಳ್ಳುತ್ತಿದೆ…

ಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಬಹುದು. ಆ ರೀತಿಯಾದ ಅಭಿವೃದ್ಧಿಗಳೊಂದಿಗೆ ಅಯೋಧ್ಯಾ ನಗರ ರೂಪುಗೊಳ್ಳುತ್ತಿದೆ ಎಂದು ಅಯೋಧ್ಯೆಯ ಪುನರುತ್ಥಾನ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಉತ್ತರ ಪ್ರದೇಶದ ಮು‍ಖ್ಯ ಕಾರ್ಯದರ್ಶಿ ದುರ್ಗಾಶಂಕರ್‌ ಮಿಶ್ರಾ ಜನವರಿ ತಿಂಗಳಲ್ಲಿ ಹೇಳಿದ್ದರು.

ಹನುಮಾನ್‌ಗಢಿಯಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷವಾಗಿ ವಿಕಲಚೇತನರು ಮತ್ತು ವಯೋ ವೃದ್ಧರಿಗಾಗಿ ಎಸ್ಕಲೇಟರ್‌ ಅಥವಾ ಲಿಫ್ಟ್‌ ಅಳವಡಿಸುವಂತೆ ಸೂಚಿಸಿದ್ದಾರೆ. ಇದು ಆ ವರ್ಗದ ಭಕ್ತರು ಯಾವುದೇ ತೊಂದರೆ ಇಲ್ಲದೆ ಭಗವಂತನ ದರ್ಶನ ಮಾಡಿ ಅನುಗ್ರಹ ಪಡೆಯಲು ನೆರವಾದೀತು. ಪಂಚಕೋಶಿ ಮಾರ್ಗ, ಚೌದಹ್‌ ಕೋಶಿ ಮಾರ್ಗಗಳಲ್ಲಿ ಭಕ್ತರಿಗೆ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಬೆಂಚ್‌ ಅಳವಡಿಸಬೇಕು. ರಸ್ತೆ ಅತಿಕ್ರಮಣವಾಗದಂತೆ ವಿಶೇಷ ಪ್ರಯತ್ನ ಜಾರಿಯಲ್ಲಿರಲಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

ʻಮುಂಬರುವ ದಿನಗಳಲ್ಲಿ ಹೊಸ ಅಯೋಧ್ಯೆ ರೂಪುಗೊಳ್ಳುತ್ತದೆ. ದೇಶವಾಸಿಗಳಷ್ಟೇ ಅಲ್ಲ, ವಿದೇಶದಿಂದಲೂ ಅಯೋಧ್ಯೆಗೆ ಬರಲಿದ್ದಾರೆ. ರಾಮಾಯಣದ ಭಗವಾನ್‌ ಶ್ರೀರಾಮಚಂದ್ರನ ಆದರ್ಶ ಮತ್ತು ಗುಣಗಳಿಗೆ ಅನುಗುಣವಾಗಿ ನಾವು ಅಯೋಧ್ಯೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇದಕ್ಕಾಗಿ ಪರಿಣತರ ಸಲಹೆ, ಸೂಚನೆಗಳನ್ನು ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲೆಲ್ಲ ಪಡೆದುಕೊಂಡು ಕೆಲಸ ಮಾಡುವುದು ಅಗತ್ಯ ಮತ್ತು ಅನಿವಾರ್ಯ. ನಿರ್ಮಾಣಕಾಮಗಾರಿಯಿಂದ ತೊಂದರೆ ಒಳಗಾಗಿರುವ ಜನರಿಗೆ ಸೂಕ್ತ ಪರಿಹಾರವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕುʼ ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಜನ್ಮಭೂಮಿ ಪಥ (ಸುಗ್ರೀವ ಕೋಟೆಯಿಂದ ಜನ್ಮಭೂಮಿ ಮಂದಿರ ಮಾರ್ಗಕ್ಕೆ ದಾರಿ) ಶೇಕಡ 51 ಕಾಮಗಾರಿ ಪೂರ್ಣವಾಗಿದೆ. ಉಳಿದ ಕೆಲಸಗಳು ಪ್ರಗತಿಯಲ್ಲಿವೆ. ಭಕ್ತಿಪಥ ನಿರ್ಮಾಣಕ್ಕಾಗಿ ಭೂಮಿ ಖರೀದಿ, ಪುನರ್ವಸತಿ ಕೆಲಸಗಳು ಪೂರ್ಣಗೊಂಡಿವೆ. 350 ಅಂಗಡಿಯವರಿಗೆ ಪರಿಹಾರ ಒದಗಿಸಿದ್ದು, ಹಳೆಕಟ್ಟಡ ನಾಶಗೊಳಿಸುವ ಕೆಲಸ ಮುಗಿದಿದೆ. ಸಿವಿಲ್‌ ಕೆಲಸ ಪ್ರಗತಿಯಲ್ಲಿದೆ. ರಾಮಪಥಕ್ಕಾಗಿ ಜಮೀನು ಸ್ವಾಧೀನ ಮಾಡುವ ಕೆಲಸ ಮುಗಿದು, ಹಳೆಯ ಕಟ್ಟಡ ನಾಶಗೊಳಿಸುವ ಕೆಲಸ ಪ್ರಗತಿಯಲ್ಲಿದೆ. 2196 ಅಂಗಡಿಗಳ ಪೈಕಿ 2130 ಅಂಗಡಿಗಳವರಿಗೆ ಪರಿಹಾರ ನೀಡಿದ್ದು, ಪುನರ್ವಸತಿ ಕೆಲಸ ಆಗಿದೆ ಎಂದು ಸರ್ಕಾರ ತಿಳಿಸಿದೆ.

IPL_Entry_Point