ಬೆಂಗಳೂರು ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನ ಪ್ರಯಾಣಿಕನ ಚಾಟ್ಸ್‌ ತಟ್ಟೆಯಲ್ಲಿ ಬ್ಲೇಡ್‌, ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರು ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನ ಪ್ರಯಾಣಿಕನ ಚಾಟ್ಸ್‌ ತಟ್ಟೆಯಲ್ಲಿ ಬ್ಲೇಡ್‌, ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ

ಬೆಂಗಳೂರು ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನ ಪ್ರಯಾಣಿಕನ ಚಾಟ್ಸ್‌ ತಟ್ಟೆಯಲ್ಲಿ ಬ್ಲೇಡ್‌, ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ

ವಿಮಾನ ಪ್ರಯಾಣ ಕೆಲವರಿಗೆ ಅನಿವಾರ್ಯವಾದರೆ, ಇನ್ನು ಕೆಲವರಿಗೆ ಕ್ರೇಜ್‌. ಎಲ್ಲರಿಗೂ ಒಂದೇ ರೀತಿಯ ಅನುಭವ ಆಗುವುದಿಲ್ಲ. ಒಬ್ಬೊಬ್ಬರ ಅನುಭವ ಒಂದೊಂದು. ಕೆಲವು ಕೆಟ್ಟ ಅನುಭವವನ್ನೂ ಅಲ್ಲಗಳೆಯಲಾಗದು. ಅಂಥದ್ಧೆ ಒಂದು ಇದು. ಬೆಂಗಳೂರು ಸ್ಯಾನ್‌ ಫ್ರಾನ್ಸಿಸ್ಕೋ ವಿಮಾನ ಪ್ರಯಾಣಿಕನ ಚಾಟ್ಸ್‌ ತಟ್ಟೆಯಲ್ಲಿ ಬ್ಲೇಡ್‌ ಕಂಡುಬಂದಿದೆ. ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.

ಮಥುರೇಸ್ ಪಾಲ್ ಶೇರ್ ಮಾಡಿಕೊಂಡ ಆಹಾರ ವಸ್ತುವಿನ ಫೋಟೋ. ಇದರಲ್ಲಿ ಬ್ಲೇಡ್ ತುಂಡು ಇರುವುದು ಗೋಚರಿಸಿದೆ.
ಮಥುರೇಸ್ ಪಾಲ್ ಶೇರ್ ಮಾಡಿಕೊಂಡ ಆಹಾರ ವಸ್ತುವಿನ ಫೋಟೋ. ಇದರಲ್ಲಿ ಬ್ಲೇಡ್ ತುಂಡು ಇರುವುದು ಗೋಚರಿಸಿದೆ. (@MathuresP)

ನವದೆಹಲಿ: ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋ (ಯುಎಸ್‌ಎ) ಗೆ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರಿಗೆ ವಿಮಾನದಲ್ಲಿ ನೀಡಿದ ಚಾಟ್ಸ್‌ ತಟ್ಟೆಯಲ್ಲಿ ಬ್ಲೇಡ್ ರೀತಿಯ ತುಂಡು ಕಾಣ ಸಿಕ್ಕಿದೆ. ಈ ಕೆಟ್ಟ ಅನುಭವವನ್ನು ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಏರ್‌ ಇಂಡಿಯಾ ಕೂಡ ಲೋಪವನ್ನು ಒಪ್ಪಿಕೊಂಡಿದೆ.

ಏರ್ ಇಂಡಿಯಾದ ಮುಖ್ಯ ಗ್ರಾಹಕ ಅನುಭವ ಅಧಿಕಾರಿ ರಾಜೇಶ್ ಡೋಗ್ರಾ ಅವರು ಈ ವಸ್ತುವನ್ನು ಅದರ ಕ್ಯಾಟರಿಂಗ್ ಪಾಲುದಾರರು ಬಳಸುವ ತರಕಾರಿ ಸಂಸ್ಕರಣಾ ಯಂತ್ರದಿಂದ ಬಂದಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆ ಮರುಕಳಿಸದಂತೆ ತಡೆಯಲು ತರಕಾರಿಗಳ ಸಂಸ್ಕರಣೆ ಮತ್ತು ಕತ್ತರಿಸುವಿಕೆಯನ್ನು ಪರಿಶೀಲಿಸುವ ವ್ಯವಸ್ಥೆಯನ್ನು ಬಲಪಡಿಸಲು ಕಂಪನಿಯು ತನ್ನ ಅಡುಗೆ ಪಾಲುದಾರರನ್ನು ಕೇಳಿ ಕೊಂಡಿದೆ ಎಂದು ಹೇಳಿದ್ದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಥುರೇಸ್ ಪಾಲ್‌ ಟ್ವೀಟ್‌, ಸ್ಪಂದಿಸಿದ ಏರ್ ಇಂಡಿಯಾ

ವಾರದ ಹಿಂದೆ, ಮಥುರೇಸ್‌ ಪಾಲ್ ಎಂಬುವವರು ಏರ್ ಇಂಡಿಯಾ ವಿಮಾನದಲ್ಲಿ ಕೊಟ್ಟ ಚಾಟ್ಸ್‌ನಲ್ಲಿ ಬ್ಲೇಡ್ ಕಂಡುಬಂದಿದೆ ಎಂದು ಎಕ್ಸ್‌ ಖಾತೆ ಮೂಲಕ ಅಹವಾಲು ಸಲ್ಲಿಸಿದ್ದರು. ಬಾಯಿಗೆ ಬಂದ ಬ್ಲೇಡ್ ತುಂಡನ್ನು ಉಗಿದು ಬಚಾವ್ ಆಗಿದ್ದೇನೆ. ಒಂದೊಮ್ಮೆ ಇದೇ ಆಹಾರ ಮಗುವಿಗೆ ಕೊಟ್ಟಿದ್ದರೆ ದೊಡ್ಡ ಸಮಸ್ಯೆ ಆಗಿಬಿಡುತ್ತಿತ್ತು ಎಂದು ಪೌಲ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದರು.

"ಏರ್ ಇಂಡಿಯಾದ ಆಹಾರವು ಚಾಕುವಿನಂತೆ ಹರಿತವಾದುದು. ಅದರ ಫ್ರೈಡ್‌ ಸ್ವೀಟ್ ಪೊಟೇಟೊ ಮತ್ತು ಅಂಜೂರದ ಚಾಟ್‌ನಲ್ಲಿ ಬ್ಲೇಡ್‌ನಂತೆ ಕಾಣುವ ವಸ್ತು ಇತ್ತು. ಅದನ್ನು ಗೊತ್ತಿಲ್ಲದೇ ಬಾಯಿಗೆ ಹಾಕಿ ಜಗಿದ ಕೂಡಲೇ ಸಮಸ್ಯೆ ಆಯಿತು. ಕೂಡಲೇ ಉಗಿದ ಬಚಾವ್ ಆದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಸಹಜವಾಗಿ, ಏರ್ ಇಂಡಿಯಾದ ಕ್ಯಾಟರಿಂಗ್ ಸೇವೆಯ ಬಗ್ಗೆ ಅಸಮಾಧಾನವಾಗಿದೆ. ಆದರೆ ಈ ಘಟನೆಯು ಏರ್ ಇಂಡಿಯಾದ ಬಗ್ಗೆ ನನ್ನಲ್ಲಿರುವ ಚಿತ್ರಣಕ್ಕೆ ಸಹಾಯ ಮಾಡುವುದಿಲ್ಲ. ಮಗುವಿಗೆ ಬಡಿಸಿದ ಆಹಾರದಲ್ಲಿ ಲೋಹದ ತುಂಡು ಇದ್ದರೆ ಏನು ಗತಿ?"ಎಂದು ಪಾಲ್ ಎಕ್ಸ್ ನಲ್ಲಿ ಬರೆದಿದ್ದಾರೆ.

"ಮೊದಲ ಚಿತ್ರವು ನಾನು ಉಗುಳಿದ ಲೋಹದ ತುಂಡನ್ನು ತೋರಿಸುತ್ತದೆ ಮತ್ತು ಎರಡನೇ ಚಿತ್ರವು ನನ್ನ ಜೀವನದಲ್ಲಿ ಲೋಹವನ್ನು ಸೇರಿಸುವ ಮೊದಲು ಊಟವನ್ನು ತೋರಿಸುತ್ತದೆ" ಎಂದು ಅವರು ಏರ್ ಇಂಡಿಯಾವನ್ನು ಉಲ್ಲೇಖಿಸಿ ಹೇಳಿದ್ದಾರೆ.

ಘಟನೆಯ ವಿವರ ನೀಡಿದ ಮಥುರೇಸ್‌ ಪೌಲ್

“ನಾನು ಜೂನ್ 9 ರಂದು ಅಪರಾಹ್ನ 1.50 ಕ್ಕೆ ಏರ್ ಇಂಡಿಯಾ ವಿಮಾನ (AI 175) ದಲ್ಲಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ (ಆಸನ ಸಂಖ್ಯೆ 7C) ಹೊರಟಿದ್ದೆ. ಹಾರಾಟದ ಮೊದಲ ಭಾಗವು ಸ್ವಲ್ಪ ಕಸಿವಿಸಿಯನ್ನು ಉಂಟುಮಾಡಿತು. ಊಟಕ್ಕೆಂದು ನೀಡಿದ ತಟ್ಟೆಯಲ್ಲಿ ಹಲವು ಐಟಂಗಳಿದ್ದವು. ನಾನು ಫಿಗ್ ಚಾಟ್‌ನೊಂದಿಗೆ ಊಟ ಶುರುಮಾಡಲು ಮುಂದಾದೆ. ಪ್ರಿಸ್ಸಿಲ್ಲಾ (ಬೋರ್ಡ್ ಎಂಟರ್‌ಟೈನ್‌ಮೆಂಟ್‌ನಲ್ಲಿ) ಚಲನಚಿತ್ರವನ್ನು ವೀಕ್ಷಿಸುತ್ತ ತಿನ್ನಲು ಶುರುಮಾಡಿದೆ. ಕೆಲವು ಸ್ಪೂನ್ ಚಾಟ್‌ ತಿಂದ ಬಳಿಕ ಮತ್ತೊಂದು ಸ್ಪೂನ್ ಬಾಯಿಗಿಟ್ಟೆ. ಏನೋ ಗಟ್ಟಿಯಾದ, ಲೋಹದ ಮಾದರಿಯ ವಸ್ತು ಬಾಯಿಯೊಳಗೆ ಇತ್ತು. ಅದನ್ನು ಬಟ್ಟಲಿಗೆ ಉಗುಳಿದೆ. ನೋಡಿದರೆ ಅದು ಬ್ಲೇಡ್ ಆಗಿತ್ತು. ಡೌಟೇ ಬೇಡ, ಕೂಡಲೇ ಗಗನಸಖಿಗೆ ದೂರು ನೀಡಿದೆ. ಆಕೆ, ಈ ಬಗ್ಗೆ ವಿಷಾದವಿದೆ. ಕ್ಷಮಿಸಿ ಮತ್ತು ನಾವು ಅಡುಗೆ ತಂಡಕ್ಕೆ ತಿಳಿಸುತ್ತೇವೆ. ಎಂದು ಹೋದ ಆಕೆ, ಕಡಲೆ ಸಲಾಡ್‌ನ ಬಟ್ಟಲಿನೊಂದಿಗೆ ಮರಳಿದಳು”ಎಂದು ಪೌಲ್ ಹೇಳಿದ್ದಾಗಿ ದ ಹಿಂದೂ ವರದಿ ಮಾಡಿದೆ.

ಮಥುರೇಸ್ ಪೌಲ್ ಅವರು ದ ಟೆಲಿಗ್ರಾಫ್‌ನ ಟೆಕ್ ಅಂಕಣಕಾರರು. ಅವರ ಈ ಟ್ವೀಟ್‌ಗೆ ಬಹಳಷ್ಟು ಜನ ಪ್ರತಿಕ್ರಿಯೆ ನೀಡಿದ್ದು, ನಿಮಗೆ ವಿಮಾನದಲ್ಲಿ ಹೋಗುವಾಗ ಪ್ರತಿಬಾರಿಯೂ ಆಹಾರ ಕೊಟ್ಟ ಕೂಡಲೇ ಫೋಟೋ ತೆಗೆಯುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಅವರು ಹೌದು ಎಂದು ಉತ್ತರಿಸಿದ್ದಾರೆ. ಒಟ್ಟಾರೆ ಇದೊಂದು ಕೆಟ್ಟ ಅನುಭವ ಎಂದು ಹೇಳಿಕೊಂಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.