ದೀಪಾವಳಿ ಹಬ್ಬಕ್ಕೆ ಸಿಹಿತಿಂಡಿ ಬೇಡ ಅನಿಸಿದ್ಯಾ: ಹಾಗಿದ್ದರೆ ಈ ಮುರುಕ್ಕು ನಮ್ಕೀನ್ ತಯಾರಿಸಿ, ಇಲ್ಲಿದೆ ರೆಸಿಪಿ ಮಾಡುವ ವಿಧಾನ
ಈ ದೀಪಾವಳಿಯಲ್ಲಿ ನಿಮ್ಮ ಮನೆ ಸದಸ್ಯರು ಸಿಹಿತಿಂಡಿ ಬದಲು ಕರಂಕುರುಂ ತಿಂಡಿ ತಿನ್ನಬೇಕು ಎಂಬ ಬಯಕೆಯುಂಟಾಗಿದೆ ಎಂದರೆ, ಈ ಪಾಕವಿಧಾನವನ್ನು ತಯಾರಿಸಬಹುದು. ಬಹಳ ಸುಲಭ ಹಾಗೂ ಸರಳವಾದ ಮುರುಕ್ಕು ನಮ್ಕೀನ್ ತಯಾರಿಸಿ, ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಿ. ಇಲ್ಲಿದೆ ರೆಸಿಪಿ.
ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿದೆ. ಮನೆತುಂಬಾ ದೀಪಗಳನ್ನಿಟ್ಟು, ನಾರಿಯರು ಚಂದದ ಸೀರೆಯುಟ್ಟು ಕಂಗೊಳಿಸುತ್ತಾರೆ. ಜತೆಗೆ ಹಬ್ಬಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿರುತ್ತಾರೆ. ಹಬ್ಬ ಅಂದರೆ ನೆನಪಾಗುವುದು ಸಿಹಿ-ತಿಂಡಿಗಳು. ಬಗೆ-ಬಗೆಯ ತಿನಿಸುಗಳನ್ನು ಹಬ್ಬಕ್ಕೆ ವಿಶೇಷವಾಗಿ ತಯಾರಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಫ್ರೀಕ್ ಆಗಿರುವುದರಿಂದ ಅಥವಾ ಪ್ರತಿ ಮನೆಯಲ್ಲೂ ಸಿಹಿ ತಿಂಡಿ ಏನನ್ನಾದರೂ ಸವಿಯುವುದರಿಂದ, ಅನೇಕ ಬಾರಿ ಜನರು ಸಿಹಿತಿಂಡಿಗಳನ್ನು ತಿನ್ನುವುದಿಲ್ಲ. ಈ ದೀಪಾವಳಿಯಲ್ಲಿ ನಿಮ್ಮ ಮನೆಯಲ್ಲಿ ಯಾರಿಗಾದರೂ ಸಿಹಿ ತಿನ್ನುವ ಬದಲು ಏನಾದರೂ ಕುರುಂ ಕುರುಂ ತಿಂಡಿ ತಿನ್ನಬೇಕು ಎನ್ನುವ ಬಯಕೆಯಿದ್ದರೆ ಮುರುಕ್ಕು ನಮ್ಕೀನ್ ಅನ್ನು ತಯಾರಿಸಬಹುದು. ದೀಪಾವಳಿಗೆ ವಿಶೇಷವಾಗಿ ಈ ತಿಂಡಿಯನ್ನು ತಯಾರಿಸಬಹುದು.
ಮುರುಕ್ಕು ನಮ್ಕೀನ್‌ನ ಈ ಪಾಕವಿಧಾನವು ತಿನ್ನಲು ತುಂಬಾ ರುಚಿಕರವಾಗಿರುವುದಲ್ಲದೆ ತಯಾರಿಸುವುದು ಕೂಡ ಅಷ್ಟೇ ಸುಲಭ. ಬಾಣಸಿಗ ಪಂಕಜ್ ಎಂಬುವವರು ತಮ್ಮ ದೀಪಾವಳಿ ತಿಂಡಿ ಪಾಕವಿಧಾನವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಗರಿಗರಿಯಾದ ಮತ್ತು ರುಚಿಕರವಾದ ಮುರುಕ್ಕು ನಮ್ಕೀನ್ ಅನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ಇಲ್ಲಿ ತಿಳಿಯಿರಿ.
ಮುರುಕ್ಕು ನಮ್ಕೀನ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು- 1 ಕಪ್, ಉಪ್ಪು- ರುಚಿಗೆ ತಕ್ಕಷ್ಟು, ನೀರು- ಅಗತ್ಯವಿದ್ದಷ್ಟು, ಹುರಿದ ಬೇಳೆ ಹಿಟ್ಟು- 1 ಚಮಚ, ಕಡಲೆಬೇಳೆ ಹಿಟ್ಟು- 2 ಟೀ ಚಮಚ, ಕರಿಯಲು ಎಣ್ಣೆ, ಬೆಣ್ಣೆ- 2 ಟೀ ಚಮಚ.
ಮಾಡುವ ವಿಧಾನ: ಮುರುಕ್ಕು ನಮ್ಕೀನ್ ತಯಾರಿಸಲು ಮೊದಲಿಗೆ ಒಂದು ಬಟ್ಟಲಿನಲ್ಲಿ ಬೆಣ್ಣೆ ಮತ್ತು ಉಪ್ಪನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಉಳಿದೆಲ್ಲಾ ಪದಾರ್ಥಗಳನ್ನು (ಎಣ್ಣೆ ಹೊರತುಪಡಿಸಿ) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ಬೆರೆಸಬೇಕು. ಹಿಟ್ಟನ್ನು ಮಿಶ್ರಣ ಮಾಡಿದ ನಂತರ, ಸೇವ್ (ಚಕ್ಕುಲಿ) ತಯಾರಿಸುವ ಯಂತ್ರದಲ್ಲಿ ಸ್ಟಾರ್ ನಳಿಕೆಯನ್ನು ಇರಿಸಿ. ಈಗ ಹಿಟ್ಟನ್ನು ಸೇವ್‌ನಲ್ಲಿ ತುಂಬಿಸಿ. ನಂತರ ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಸೇವ್ ಅನ್ನು ತಿರುಗಿಸಿ. ಚಾಕುವಿನ ಸಹಾಯದಿಂದ ಅದನ್ನು ಕತ್ತರಿಸಬಹುದು. ಮುರುಕನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಫ್ರೈ ಮಾಡಿ. ಇದನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿದರೆ ರುಚಿಕರವಾದ ಮತ್ತು ಕುರುಕಲು ಮುರುಕ್ಕು ಸವಿಯಲು ಸಿದ್ಧವಾಗಿರುತ್ತದೆ. ಕೆಲವು ದಿನಗಳವರೆಗೆ ಹಾಗೆಯೇ ಇಡಬೇಕು ಎಂದು ನಿಮಗನಿಸಿದರೆ ಅದು ತಣ್ಣಗಾದ ನಂತರ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು.