ಬ್ರಿಟನ್ ಚುನಾವಣೆ; ಲೇಬರ್ ಪಾರ್ಟಿಗೆ ಗೆಲುವು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿ, ರಿಷಿ ಸುನಕ್‌ಗೆ ಇಲ್ಲ ಎರಡನೇ ಅವಕಾಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬ್ರಿಟನ್ ಚುನಾವಣೆ; ಲೇಬರ್ ಪಾರ್ಟಿಗೆ ಗೆಲುವು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿ, ರಿಷಿ ಸುನಕ್‌ಗೆ ಇಲ್ಲ ಎರಡನೇ ಅವಕಾಶ

ಬ್ರಿಟನ್ ಚುನಾವಣೆ; ಲೇಬರ್ ಪಾರ್ಟಿಗೆ ಗೆಲುವು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿ, ರಿಷಿ ಸುನಕ್‌ಗೆ ಇಲ್ಲ ಎರಡನೇ ಅವಕಾಶ

ಬ್ರಿಟನ್ ಚುನಾವಣೆ; ಸಂಸತ್ ಚುನಾವಣೆಯಲ್ಲಿ ಲೇಬರ್ ಪಾರ್ಟಿಗೆ ಗೆಲುವು ಸಿಕ್ಕಿದ್ದು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಪ್ರಧಾನಿ ರಿಷಿ ಸುನಕ್‌ಗೆ ಎರಡನೇ ಅವಕಾಶ ಸಿಕ್ಕಿಲ್ಲ. ಅವರು ರಾಜೀನಾಮೆ ನೀಡಿದ ನಂತರ ಕೈರ್ ಸ್ಟಾರ್ಮರ್‌ ನೇತೃತ್ವದ ಸರ್ಕಾರ ರಚನೆಯಾಗಲಿದೆ.

ಬ್ರಿಟನ್ ಚುನಾವಣೆ; ಲೇಬರ್ ಪಾರ್ಟಿಗೆ ಗೆಲುವು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿ, ರಿಷಿ ಸುನಕ್‌ಗೆ ಇಲ್ಲ ಎರಡನೇ ಅವಕಾಶ.
ಬ್ರಿಟನ್ ಚುನಾವಣೆ; ಲೇಬರ್ ಪಾರ್ಟಿಗೆ ಗೆಲುವು, ಕೈರ್‌ ಸ್ಟಾರ್ಮರ್ ನೂತನ ಪ್ರಧಾನಿ, ರಿಷಿ ಸುನಕ್‌ಗೆ ಇಲ್ಲ ಎರಡನೇ ಅವಕಾಶ. (Bloomberg)

ಲಂಡನ್: ಯುನೈಟೆಡ್ ಕಿಂಗ್ಡಂನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್‌ ಸೋಲು ಒಪ್ಪಿಕೊಂಡಿದ್ದು, ಲೇಬರ್ ಪಾರ್ಟಿಯ ನಾಯಕ ಕೈರ್ ಸ್ಟಾರ್ಮರ್ ಅವರನ್ನು ಮುಂದಿನ ಪ್ರಧಾನಿಯಾಗುತ್ತಿರುವುದಕ್ಕೆ ಶುಕ್ರವಾರ ಅಭಿನಂದಿಸಿದರು.

ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸಂಸತ್ತಿನ ಒಟ್ಟು 650 ಸ್ಥಾನಗಳಲ್ಲಿ 326 ಸ್ಥಾನಗಳನ್ನು ಗೆಲ್ಲುವ ಮೂಲಕ ಲೇಬರ್ ಪಾರ್ಟಿಯು ಬಹುಮತದ ಗಡಿಯನ್ನು ದಾಟುತ್ತಿದ್ದಂತೆಯೇ ರಿಷಿ ಸುನಕ್ ಸೋಲು ಒಪ್ಪಿಕೊಂಡಿರುವುದಾಗಿ ಘೋಷಿಸಿದರು.

ಪ್ರಧಾನಿ ರಿಷಿ ಸುನಕ್ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ರಿಚ್ಮಂಡ್ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನ ಹೊಣೆಗಾರಿಕೆ ತಮ್ಮದು ಎಂದು ಹೇಳಿದ ರಿಷಿ ಸುನಕ್, ಜನಾದೇಶ ಬಹಳ ಗಂಭೀರವಾಗಿದೆ ಎಂದರು.

ಇದಕ್ಕೂ ಮೊದಲು ರಿಷಿ ಸುನಕ್ ರಿಚ್ಮಂಡ್ ಸ್ಥಾನದಲ್ಲಿ ಮತ ಎಣಿಕೆ ವೇಳೆ ಹಿನ್ನಡೆ ಸಾಧಿಸಿದ್ದರು. ಆದರೆ ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಭಾರಿಬಹುಮತದಿಂದ ಗೆಲುವು ಸಾಧಿಸಿದರು.

14 ವರ್ಷಗಳ ಬಳಿಕ ಗೆಲುವು ದಾಖಲಿಸಿದ ಲೇಬರ್ ಪಾರ್ಟಿ

ಕೈರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಯು ಕನಿಷ್ಠ 326 ಸ್ಥಾನಗಳನ್ನು ಗಳಿಸಿದೆ. ಸಂಸತ್ತಿನಲ್ಲಿ ಸ್ಪಷ್ಟ ಬಹುಮತಪಡೆದಿರುವ ಕಾರಣ ಸರ್ಕಾರ ರಚನೆಯ ಹಾದಿ ಸುಲಭವಾಗಿದೆ. ಈ ಗೆಲುವಿನೊಂದಿಗೆ ಪಕ್ಷವು 14 ವರ್ಷಗಳ ನಂತರ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಕನ್ಸರ್ವೇಟಿವ್ ಪಕ್ಷ ಇನ್ನು ವಿಪಕ್ಷ ಸ್ಥಾನದಲ್ಲಿ ಕೂರಬೇಕಿದೆ.

ಕೈರ್ ಸ್ಟಾರ್ಮರ್ ಬಹುಮತದ ಸರ್ಕಾರವನ್ನು ರಚಿಸುವ ಮೂಲಕ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಲಂಡನ್‌ನಲ್ಲಿ ವಿಜಯೋತ್ಸವ ಭಾಷಣ ಮಾಡುವಾಗ, ಸ್ಟಾರ್ಮರ್, “ನಾವು ವಿಜಯ ಸಾಧಿಸಿದೆವು. ಬದಲಾವಣೆ ಈಗ ಪ್ರಾರಂಭವಾಗುತ್ತದೆ” ಎಂದು ಘೋ‍ಷಿಸಿದರು.

"14 ವರ್ಷಗಳ ನಂತರ ತನ್ನ ಭವಿಷ್ಯವನ್ನು ಮರಳಿ ಪಡೆಯುವ ಅವಕಾಶವನ್ನು ಹೊಂದಿರುವ ದೇಶ ಮತ್ತೊಮ್ಮೆ ಹೊಳೆಯುತ್ತಿದೆ" ಎಂದು ಲೇಬರ್ ನಾಯಕ ಸ್ಟಾರ್ಮರ್ ಹೇಳಿದರು.

ರಿಷಿ ಸುನಕ್ ರಾಜೀನಾಮೆ ಬಳಿಕ ಹೊಸ ಸರ್ಕಾರ ರಚನೆ

ಯುಕೆ ಚುನಾವಣೆಯಲ್ಲಿ ಲೇಬರ್ ಪಕ್ಷದ ಐತಿಹಾಸಿಕ ವಿಜಯಗಳಿಸಿರುವ ಕಾರಣ, ಪ್ರಧಾನಿ ರಿಷಿ ಸುನಕ್ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರೀಕ್ಷೆಯಿದೆ. ಲಂಡನ್ ಗೆ ತೆರಳುವುದಾಗಿ ಸುನಕ್ ಹೇಳಿದ್ದು, ಲೇಬರ್ ಪಾರ್ಟಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಅಧಿಕೃತವಾಗಿ ರಾಜೀನಾಮೆ ನೀಡಲು ಸುನಕ್ ಶುಕ್ರವಾರ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿ ಮಾಡಲು ಹೋಗಲಿದ್ದಾರೆ. ಅದಾಗಿ, ಸರ್ಕಾರ ರಚಿಸಲು ರಾಜನ ಅನುಮತಿ ಪಡೆಯಲು ಸ್ಟಾರ್ಮರ್ ಅವರನ್ನು ಅರಮನೆಗೆ ಕರೆದೊಯ್ಯುವ ನಿರೀಕ್ಷೆಯಿದೆ.

ಲೇಬರ್ ಪಾರ್ಟಿಯು 326 ಸ್ಥಾನಗಳೊಂದಿಗೆ ಬಹುಮತವನ್ನು ಸ್ಥಾಪಿಸಿದರೆ, ಆಡಳಿತಾರೂಢ ಕನ್ಸರ್ವೇಟಿವ್ ಇಲ್ಲಿಯವರೆಗೆ 44 ಸ್ಥಾನಗಳನ್ನು ಗೆದ್ದಿದೆ. ಎಡಪಂಥೀಯ ಲಿಬರಲ್ ಡೆಮೋಕ್ರಾಟ್ಸ್ 32 ಸ್ಥಾನಗಳನ್ನು ಗೆದ್ದರೆ, ಬಲಪಂಥೀಯ, ವಲಸೆ ವಿರೋಧಿ ಸುಧಾರಣಾ ಯುಕೆ ಇಲ್ಲಿಯವರೆಗೆ 4 ಸ್ಥಾನಗಳನ್ನು ಗೆದ್ದಿದೆ. ಅಂತಿಮ ಫಲಿತಾಂಶ ಇನ್ನೂ ಘೋ‍ಷಣೆಯಾಗಿಲ್ಲ ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.