Hima Das: ಧಿಂಗ್ ಎಕ್ಸ್‌ಪ್ರೆಸ್ ವೇಗಕ್ಕೆ ಅಡ್ಡಿಯಾದ ಗಾಯ; ಈ ಬಾರಿಯ ಏಷ್ಯನ್ ಗೇಮ್ಸ್‌ಗೆ ಹಿಮಾ ದಾಸ್ ಅಲಭ್ಯ
ಈ ವರ್ಷ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಹಿಮಾ ದಾಸ್ ಪಾಲ್ಗೊಳ್ಳುತ್ತಿಲ್ಲ ಎಂದು ಭಾರತದ ಅಥ್ಲೆಟಿಕ್ಸ್ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಬುಧವಾರ ಹೇಳಿದ್ದಾರೆ.
ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಿರಾಶೆ ಅನುಭವಿಸಿದ್ದ ಭಾರತದ ಸ್ಟಾರ್ ಅಥ್ಲೀಟ್ ಹಿಮಾ ದಾಸ್ (Hima Das), ಮತ್ತೊಮ್ಮೆ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಅವರು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾಗಿಯಾಗದೇ ಇರುವುದೇ ಇದಕ್ಕೆ ಕಾರಣ.
ಪ್ರಸಕ್ತ ಋತುವಿನಲ್ಲಿ ಕೇವಲ ಎರಡು ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸಿರುವ ಹಿಮಾ ದಾಸ್, ಮಂಡಿರಜ್ಜು ಗಾಯದಿಂದ ಗುಣಮುಖರಾಗಿಲ್ಲ. ಹೀಗಾಗಿ ಈ ವರ್ಷ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ ಎಂದು ಭಾರತದ ಅಥ್ಲೆಟಿಕ್ಸ್ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಬುಧವಾರ ಹೇಳಿದ್ದಾರೆ.
ಈ ಹಿಂದೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ನಡೆದ 2018ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಹಿಮಾ, ಕಳೆದ ಏಪ್ರಿಲ್ 15ರಂದು ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ -4 ವೇಳೆ ಗಾಯಗೊಂಡರು. ಆ ನಂತರ ಅವರು ಯಾವುದೇ ಕ್ರೀಡಾಕೂಟದಲ್ಲಿ ಪಾಲ್ಗೊಂಡಿಲ್ಲ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೂ ಮುನ್ನ ನಡೆಯಲಿರುವ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿಯೂ ಹಿಮಾ ಭಾಗವಹಿಸುತ್ತಿಲ್ಲ.
“ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ -4ಗೆ ಒಂದು ದಿನ ಮುಂಚೆ ಅವರು ಗಾಯಗೊಂಡರು. ಮಂಡಿರಜ್ಜು ಗಾಯ ಮತ್ತು ಬೆನ್ನು ನೋವಿನಿಂದಾಗಿ ಅವರು ಆಟದಿಂದ ಹಿಂದೆ ಸರಿಯಬೇಕಾಯಿತು. ಈ ಬಗ್ಗೆ ಎಎಫ್‌ಐ ವೈದ್ಯಕೀಯ ತಂಡ ಪರೀಕ್ಷೆ ನಡೆಸಿ ಚಿಕಿತ್ಸೆಯ ಬಗ್ಗೆ ಯೋಜಿಸುತ್ತಿದೆ. ಎಎಫ್‌ಐ ನೀತಿಯ ಪ್ರಕಾರ, ಆಕೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ" ಎಂದು ನಾಯರ್ ಹೇಳಿದ್ದಾರೆ.
ಅಸ್ಸಾಂನ ವೇಗದ ಓಟಗಾರ್ತಿ 2018ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೇಲಿಂದ ಮೇಲೆ ಸಿಹಿಸುದ್ದಿ ಕೊಟ್ಟರು. ಮೂರು ಪದಕಗಳನ್ನು ಗೆದ್ದು ಭಾರತದ ಪದಕ ಬೇಟೆಯನ್ನು ಹೆಚ್ಚಿಸಿದರು. 400 ಮೀಟರ್ ಓಟದಲ್ಲಿ ವೈಯಕ್ತಿಕ ಬೆಳ್ಳಿ ಪದಕದ ಜೊತೆಗೆ, ಮಹಿಳೆಯರ 4x400 ಮೀಟರ್ ರಿಲೆಯಲ್ಲಿ ಚಿನ್ನ ಮತ್ತು ಮಿಶ್ರತಂಡದ 4x400 ಮೀ ರಿಲೆಯಲ್ಲಿಯೂ ಬೆಳ್ಳಿ ಗೆದ್ದ ತಂಡದ ಭಾಗವಾಗಿದ್ದರು.
ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಭಾರತಕ್ಕೆ ಚಿನ್ನದ ಪದಕ ಬಹುತೇಕ ಖಚಿತವಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ರಿಲೆಯಲ್ಲಿ ಭಾರತವೇ ಬಲಿಷ್ಠವಿದೆ. ಆದರೆ ಈ ಬಾರಿ ಕಳೆದ ಬಾರಿಯ ಸಾಧನೆಯನ್ನು ಪುನರಾವರ್ತಿಸುವುದು ಕಠಿಣ ಎಂದು ತೋರುತ್ತದೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಕಳೆದ ವರ್ಷದ 2022ರಲ್ಲಿಯೇ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಅದನ್ನು 2023ರ ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ. ಚೀನಾದ ನಗರವಾದ ಹ್ಯಾಂಗ್‌ಝೌ, ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ. ಚತುರ್ವಾರ್ಷಿಕ ಕ್ರೀಡಾಕೂಟವು ಈ ಹಿಂದೆ 2018ರಲ್ಲಿ ನಡೆಯಬೇಕಿತ್ತು. ಅದರ ಬಳಿಕ 2022ರ ಸೆಪ್ಟೆಂಬರ್ 10 ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಒಂದು ವರ್ಷ ಮುಂದೂಡಲಾಗಿದೆ. 2023ರಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಕ್ರೀಡಾಕೂಡ ನಡೆಯಲಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ತಿಳಿಸಿದೆ.