ಖೇಲ್ ರತ್ನ ನಾಮನಿರ್ದೇಶನ ಪಟ್ಟಿಯಲ್ಲಿಲ್ಲ ಮನು ಭಾಕರ್; ಶೂಟರ್ ಅರ್ಜಿ ಸಲ್ಲಿಸಿಲ್ಲ ಎಂದ ಅಧಿಕಾರಿಗಳು; ಅಲ್ಲಗಳೆದ ಕುಟುಂಬ
Manu Bhaker: ಶೂಟರ್ ಮನು ಭಾಕರ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಭಿನ್ನ ವರದಿಗಳಿದ್ದು, ಶೂಟರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಹೇಳಿದರೆ, ಅದನ್ನು ಕುಟುಂಬಸ್ಥರು ತಳ್ಳಿ ಹಾಕಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದವರು ಮನು ಭಾಕರ್ (Manu Bhaker). ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಅವರು, ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದರ ಬೆನ್ನಲ್ಲೇ ಸಹ ಆಟಗಾರ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಕಂಚಿನ ಪದಕ ಕೊರಳಿಗೇರಿಸಿದರು. ಭಾರತದ ಸ್ವಾತಂತ್ರ್ಯದ ನಂತರ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡೆರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಭಾಕರ್, ತಾನು 'ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಸ್ವೀಕರಿಸಲು ಅರ್ಹರೇ ಎಂದು ಅಭಿಮಾನಿಗಳಲ್ಲಿ ಕೇಳಿದ್ದರು. ಆ ನಂತರ ಪೋಸ್ಟ್ ಡಿಲೀಟ್ ಮಾಡಿದ್ದರು. ಆದರೆ ಇದು ಅಭಿಮಾನಿಗಳಿಂದ ನಕಾರಾತ್ಮಕ ಪ್ರತಿಕ್ರಿಯೆ ಪಡೆದಿತ್ತು. ಈ ರೀತಿಯ ಪೋಸ್ಟ್ ಮಾಡಿದ್ದಕ್ಕೆ ಅಭಿಮಾನಿಗಳು ಅವರನ್ನು ಟೀಕಿಸಿದ್ದರು.
ಇದೀಗ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕ್ರೀಡಾಪಟುಗಳ ಪಟ್ಟಿಯಲ್ಲಿ 22 ವರ್ಷದ ಭಾಕರ್ ಹೆಸರು ಇಲ್ಲ ಎಂದು ವರದಿಗಳು ತಿಳಿಸಿವೆ. ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕ್ರೀಡಾ ಸಚಿವಾಲಯದ ಅಧಿಕಾರಿಗಳು ಇದಕ್ಕೆ ವಿವರಣೆ ನೀಡಿದ್ದಾರೆ. ಪ್ರಶಸ್ತಿಗೆ ಶೂಟರ್ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ಭಾಕರ್ ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಅರ್ಜಿ ಕಳುಹಿಸಿದ್ದಾರೆ ಎಂದು ಅವರ ಕುಟುಂಬಕ್ಕೆ ಹತ್ತಿರದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಮನು ಭಾಕರ್ ಪದಕ ಸಾಧನೆ
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಕರ್ ಪದಕ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ಪ್ಯಾರಿಸ್‌ನಲ್ಲಿ ಪದಕ ಗೆದ್ದೇ ಬಿಟ್ಟರು. ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಸ್ವರ್ಣ ಪದಕಗಳನ್ನು ಗೆದ್ದಿರುವ ಅವರು 2022ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 25 ಮೀಟರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ಮಾಡಿದ್ದರು. 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದೊಂದಿಗೆ ಕ್ರೀಡಾಕೂಟದ ದಾಖಲೆ ನಿರ್ಮಿಸಿದ್ದರು. 16 ವರ್ಷದವರಿದ್ದಾಗಲೇ 2018ರ ವಿಶ್ವಕಪ್‌ನಲ್ಲಿ ಸ್ವರ್ಣ ಗೆದ್ದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಮನು ಭಾಕರ್.
ಅರ್ಜಿ ಸಲ್ಲಿಸದಿದ್ದರೂ ಪ್ರಶಸ್ತಿ ನೀಡುವ ಸಾಧ್ಯತೆ ಇದೆಯೇ?
ಒಂದು ವೇಳೆ ಯಾವುದೇ ಅಥ್ಲೀಟ್ ಪ್ರಶಸ್ತಿಗಾಗಿ ಹೆಸರು ನೋಂದಾಯಿಸಿಕೊಳ್ಳದಿದ್ದರೆ, ಆಯ್ಕೆ ಸಮಿತಿಯು ಕ್ರೀಡಾಪಟುವಿನ ಸಾಧನೆಗಳ ಆಧಾರದ ಮೇಲೆ ಸುಯೋ ಮೋಟೋ ಅರಿವನ್ನು ದಾಖಲಿಸಿಕೊಳ್ಳಬಹುದು. ಈ ಹಿಂದೆ ಭಾರತದ ವೇಗಿ ಮೊಹಮ್ಮದ್ ಶಮಿ ಕೂಡ ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಬಿಸಿಸಿಐ ಕೋರಿಕೆಯ ಮೇರೆಗೆ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು.
2024ರ ಕ್ಯಾಲೆಂಡರ್ ವರ್ಷವು ಭಾರತೀಯ ಕ್ರೀಡಾ ಕ್ಷೇತ್ರದ ಪಾಲಿಗೆ ಸ್ಮರಣೀಯ ವರ್ಷ. ಹಲವು ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಸುದ್ದಿಯಾದರು. ಪ್ರತಿ ವರ್ಷದಂತೆ, ಈ ವರ್ಷವೂ ಕ್ರೀಡಾಪಟುಗಳ ಸಾಧನೆಯನನ್ನು ಗೌರವಿಸಲು ಭಾರತ ಸರ್ಕಾರವು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಿದೆ. ಅದಕ್ಕಾಗಿ ಕೆಲವು ನಾಮನಿರ್ದೇಶಿತರನ್ನು ಬಹಿರಂಗಪಡಿಸಲಾಗಿದೆ. ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಭಾರತದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಶಿಫಾರಸು ಮಾಡಲಾಗಿದೆ. ಇದೇ ವೇಳೆ ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಕೂಡ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.