ಚೊಚ್ಚಲ ವಿಂಬಲ್ಡನ್ ಟ್ರೋಫಿ ಗೆದ್ದ ಬಾರ್ಬೋರಾ ಕ್ರೇಜಿಕೋವಾ; ಪುರುಷ-ಮಹಿಳೆಯರ ಡಬಲ್ಸ್‌ನಲ್ಲಿ ಗೆದ್ದವರು ಯಾರು?
Barbora Krejcikova: 2024ರ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಜೆಕ್ ರಿಪಬ್ಲಿಕ್ನ ಬಾರ್ಬೋರಾ ಕ್ರೇಜಿಕೋವಾ ಅವರು ಇಟಲಿಯ ಜಾಸ್ಮೀನ್ ಪೊಲಿನಿ ಅವರನ್ನು ಮಣಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದರು.
ಜೆಕ್ ರಿಪಬ್ಲಿಕ್ ಸ್ಟಾರ್ ಆಟಗಾರ್ತಿ ಬಾರ್ಬೋರಾ ಕ್ರೇಜಿಕೋವಾ 2024ರ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಟೆನಿಸ್ನ ವುಮೆನ್ಸ್ ಸಿಂಗಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಇಟಲಿಯ ಜಾಸ್ಮೀನ್ ಪೊಲಿನಿ ಕನಸು ಭಗ್ನಗೊಂಡಿದೆ. ಜುಲೈ 13ರಂದು 120 ನಿಮಿಷಗಳಿಗೂ ಹೆಚ್ಚು ಕಾಲ ನಡೆದ ರೋಚಕ ಹೋರಾಟದಲ್ಲಿ 31ನೇ ರ್ಯಾಂಕಿಂಗ್ನ ಕ್ರೇಜಿಕೋವಾ ಅವರು 6-2, 2-6, 6-4 ಸೆಟ್ಗಳ ಅಂತರದಿಂದ ಗೆದ್ದು ಬೀಗಿದರು.
ಆದರೆ, 7ನೇ ರ್ಯಾಂಕ್ನ ಪೌಲಿನಿ ಮೊದಲ ಸೆಟ್ ಸೋತು 2ನೇ ಸೆಟ್ನಲ್ಲಿ ತಿರುಗೇಟು ನೀಡಿದರು. ಆದರೆ, ಕೊನೆಯ ಸೆಟ್ನಲ್ಲಿ ಪ್ರತಿರೋಧ ನೀಡಲು ವಿಫಲರಾದರು. ಕೊನೆಯ ಸೆಟ್ನಲ್ಲಿ ಯಾವುದೇ ಪ್ರಮಾದ ಎಸೆಗದಂತೆ ನೋಡಿಕೊಂಡ ಬಾರ್ಬೋರಾ ಚಾಂಪಿಯನ್ ಪಟ್ಟಕ್ಕೇರಿ ಸಂಭ್ರಮಿಸಿದರು. ಇದು ಅವರ 2ನೇ ಗ್ರ್ಯಾಂಡ್ಸ್ಲಾಂ ಟ್ರೋಫಿ ಆಗಿದೆ. ಈ ಹಿಂದೆ 2021ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. ಜಾಸ್ಮೀನ್ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
ಇತ್ತೀಚೆಗೆ ನಡೆದ ಫ್ರೆಂಚ್ ಓಪನ್ ಫೈನಲ್ನಲ್ಲೂ ಜಾಸ್ಮೀನ್ ಫೈನಲ್ ಪ್ರವೇಶಿಸಿದ್ದರು. ಆದರೆ ನಂಬರ್ 1 ಇಗಾ ಸ್ವಿಯಾಟೆಕ್ ಎದುರಿನ ರೋಚಕ ಪಂದ್ಯದಲ್ಲಿ ಸೋತು ರನ್ನರ್ಅಪ್ ಆಗಿದ್ದರು. ಇದೀಗ ಮತ್ತೊಮ್ಮೆ ಟ್ರೋಫಿಯನ್ನು ತಪ್ಪಿಸಿಕೊಂಡರು. ಮತ್ತೊಂದೆಡೆ ಚಾಂಪಿಯನ್ ಕ್ರೇಜಿಕೋವಾ ಅವರು 2018 ಮತ್ತು 2022ರಲ್ಲಿ ವಿಂಬಲ್ಡನ್ ಮಹಿಳಾ ಡಬಲ್ಸ್‌ನಲ್ಲಿ ಗೆದ್ದಿದ್ದರು. ಇದೀಗ ವಿಂಬಲ್ಡನ್ ಸಿಂಗಲ್ಸ್ನಲ್ಲಿ ಟ್ರೋಫಿ ಬರ ನೀಗಿಸಿದ್ದಾರೆ.
ವಿಜೇತ ಮತ್ತು ರನ್ನರ್ಅಪ್ಗೆ ಬಹುಮಾನ ಎಷ್ಟು?
ವಿಂಬಲ್ಡನ್ ಗೆದ್ದ ಕ್ರೇಜಿಕೋವಾ ಅವರಿಗೆ 27,00,000 ಪೌಂಡ್ ಅಂದರೆ 28.6 ಕೋಟಿ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ. ರನ್ನರ್ಅಪ್ ಪೌಲಿನಿ ಅವರಿಗೆ 14,00,000 ಪೌಂಡ್ ಅಂದರೆ 14.8 ಕೋಟಿ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಪುರುಷರ ಡಬಲ್ಸ್‌ನಲ್ಲಿ ಗೆದ್ದಿದ್ಯಾರು?
ವಿಂಬಲ್ಡನ್ ಪುರುಷರ ಡಬಲ್ಸ್‌ನಲ್ಲಿ ಬ್ರಿಟಿಷ್ ಆಟಗಾರ ಹೆನ್ರಿ ಪ್ಯಾಟನ್ ಮತ್ತು ಫಿನ್ಲ್ಯಾಂಡ್ನ ಹ್ಯಾರಿ ಹೆಲಿಯೊವಾರಾ ಜೋಡಿ ಗೆದ್ದು ಬೀಗಿತು. ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸಿಲ್ ಹಾಗೂ ಆಸ್ಟ್ರೇಲಿಯಾದ ಜೋರ್ಡನ್ ತಾಮ್ಸನ್ ಜೋಡಿ ರನ್ನರ್ಅಪ್ಗೆ ತೃಪ್ತಿಯಾಯಿತು. 6 (7)-7(9), 6(8)-7(10), 6(9)-7(11) ಸೆಟ್ಗಳ ಅಂತರದಿಂದ ಬ್ರಿಟನ್ ಮತ್ತು ಫಿನ್ಲ್ಯಾಂಡ್ ಜೋಡಿ ಗೆದ್ದು ಬೀಗಿತು.
ಮಹಿಳೆಯರ ಡಬಲ್ಸ್‌ನಲ್ಲಿ ಗೆದ್ದಿದ್ಯಾರು?
ಅಮೆರಿಕದ ಟೇಲರ್ ಟೌನ್ಸೆಂಡ್ ಮತ್ತು ಜೆಕ್ ಗಣರಾಜ್ಯದ ಕಟೆರಿನಾ ಸಿನಿಯಾಕೋವಾ ಜೋಡಿ ವಿಂಬಲ್ಡನ್ ಡಬಲ್ಸ್‌ನಲ್ಲಿ ನ್ಯೂಜಿಲೆಂಡ್ನ ಎರಿನ್ ರೌಟ್ಲಿಫ್ ಮತ್ತು ಕೆನಡಾದ ಗೇಬ್ರಿಯೆಲಾ ಡಬ್ರೋವ್ಸ್ಕಿ ಅವರ ವಿರುದ್ಧ ಗೆದ್ದು ಚಾಂಪಿಯನ್ ಆಗಿದೆ. 7(7)-6(5), 7(7)-6(1) ನೇರ ಸೆಟ್ಗಳ ಅಂತರದಿಂದ ಟೇಲರ್ ಮತ್ತು ಕಟೆರಿನಾ ವಿಂಬಲ್ಡನ್ ಡಬಲ್ಸ್ ಗೆದ್ದು ಸಂಭ್ರಮಿಸಿದ್ದಾರೆ.