ಸೆಮಿಫೈನಲ್ ಪಂದ್ಯದ ವೇಳೆ ಗಂಭೀರ ಗಾಯ; ಕೋರ್ಟ್‌ನಲ್ಲೇ ಗಳಗಳನೆ ಅತ್ತು ಆಟದಿಂದ ಹಿಂದೆ ಸರಿದ ಕ್ಯಾರೊಲಿನಾ ಮರಿನ್
Carolina Marin: ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಆಟಗಾರ್ತಿ ಪಂದ್ಯದಲ್ಲಿ ಆಡಲಾಗದೆ ಗಳಗಳನೆ ಅತ್ತಿದ್ದಾರೆ.
ಪ್ರತಿಭೆಯಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೇಳುತ್ತೇವೆ. ಆದರೆ, ಕೆಲವೊಮ್ಮೆ ಎಷ್ಟೇ ಪ್ರತಿಭೆಯಿದ್ದರೂ, ಗೆಲ್ಲುವ ಅರ್ಹತೆಯಿದ್ದರೂ ಅದೃಷ್ಟ ಕೈಕೊಡುತ್ತದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಗಿದ್ದು ಕೂಡಾ ಇದೇ. ವನಿತೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಟಗಾರ್ತಿ ಹಾಗೂ ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಸ್ಪೇನ್ ದೇಶದ ಕ್ಯಾರೊಲಿನಾ ಮರಿನ್ (Carolina Marin) ಅವರಿಗೂ ಅದೃಷ್ಟ ಕೈಕೊಟ್ಟಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದ ಕ್ಯಾರೊಲಿನಾ, ಪಂದ್ಯದ ನಡುವೆ ಆದ ಗಂಭಿರ ಗಾಯದಿಂದಾಗಿ ಪದಕದ ಆಸೆಯನ್ನೇ ಕಳೆದುಕೊಳ್ಳಬೇಕಾಯ್ತು. ಇನ್ನೇನು ಗೆಲ್ಲಲು ಕೆಲವೇ ಅಂಕಗಳು ಬೇಕು ಎನ್ನುವಷ್ಟರಲ್ಲಿ ಗಾಯದಿಂದಾಗ ಮೈದಾನದಲ್ಲಿಯೇ ಆಟಗಾರ್ತಿ ಬಿಕ್ಕಿ ಬಿಕ್ಕಿ ಅತ್ತರು.
ಇಂದು ನಡೆದ ವನಿತೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ, ಕ್ಯಾರೊಲಿನಾ ಅವರು ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ಆಡುತ್ತಿದ್ದರು. ಮೊದಲ ಸೆಟ್ ಅನ್ನು ನಿರಾಯಾಸವಾಗಿ ಗೆದ್ದದ್ದ ಸ್ಪೇನ್ ಆಟಗಾರ್ತಿ, ಎರಡನೇ ಸೆಟ್‌ನಲ್ಲಿಯೂ ಮುನ್ನಡೆಯಲ್ಲಿ ಸಾಗುತ್ತಿದ್ದರು. ಇಲ್ಲಿ ಗೆದ್ದರೆ ಕೆರೊಲಿನಾ ಫೈನಲ್‌ಗೆ ಲಗ್ಗೆ ಇಟ್ಟು ಕನಿಷ್ಠ ಬೆಳ್ಳಿ ಪದಕ ಗೆಲ್ಲುವುದು ಖಚಿತವಾಗಿತ್ತು. ಆದರೆ ಮರಿನ್ 21-14, 10-6 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾಗ, ಬಲ ಮೊಣಕಾಲು ಟ್ವಿಸ್ಟ್ ಆದಂತಾಗಿ ಗಂಭಿರ ಗಾಯ ಮಾಡಿಕೊಂಡರು. ಕೆಲಕಾಲ ಚೇತರಿಸಿಕೊಂಡು ಮತ್ತೆ ಆಟಕ್ಕಿಳಿದ ಆಟಗಾರ್ತಿ, ತನ್ನಿಂದ ಆಡಲು ಸಾಧ್ಯವೇ ಇಲ್ಲ ಎಂದು ಪಂದ್ಯದಿಂದ ಹಿಂದೆ ಸರಿದರು.
ಸೆಮಿಫೈನಲ್ ಪಂದ್ಯದ ಎರಡನೇ ಸೆಟ್ ವೇಳೆ ಈ ಘಟನೆ ನಡೆದಿದೆ. ಬ್ಯಾಕ್ ಹ್ಯಾಂಡ್ ಬದಿಯಲ್ಲಿ ರಿಟರ್ನ್ ಶಾಟ್ ಹೊಡೆಯಲು ಜಿಗಿದಾಗ, ಅವರ ಬಲಗಾಲು ವಿಚಿತ್ರ ರೀತಿಯಲ್ಲಿ ಟ್ವಿಸ್ಟ್ ಆದಂತಾಯಿತು. ಮೊಣಕಾಲು ನೋವಿನಿಂದಾಗಿ ಆಗಲೇ ಕೋರ್ಟ್ ಮೇಲೆ ಅಸಹನೀಯ ನೋವಿನಿಂದ ಬಿದ್ದು ಕಣ್ಣೀರು ಹಾಕಿದರು. ಈ ವೇಳೆ ವೈದ್ಯಕೀಯ ಸಿಬ್ಬಂದಿ ತ್ವರಿತವಾಗಿ ಅವರಿಗೆ ಚಿಕಿತ್ಸೆ ನೀಡಿದರು. ಬಳಿಕ ಮೊಣಕಾಲು ಬ್ರೇಸ್ ಧರಿಸಿದ ಆಟಗಾರ್ತಿ ಧೈರ್ಯದಿಂದ ಮತ್ತೆ ಆಟಕ್ಕಿಳಿದರು.
ಮತ್ತೆ ಮೈದಾನಕ್ಕಿಳಿದ ಆಟಗಾರ್ತಿ ಸತತ ಎರಡು ಅಂಕಗಳನ್ನು ಕಳೆದುಕೊಂಡರು. ಈ ವೇಳೆ ಅಂಗಣದ ಒಂದು ಬದಿಗೆ ಕುಂಟುತ್ತಾ ಸಾಗಿದ ಅವರು, ಅಲ್ಲೇ ಕುಸಿದು ಬಿದ್ದು ಅಸಹನೀಯವಾಗಿ ಅತ್ತರು.
ಸಿಂಧು ಸೋಲಿಸಿ ಬಂಗಾರ ಗೆದ್ದಿದ್ದ ಮರಿನ್
ನಿಮಗೆಲ್ಲಾ ನೆನಪಿರಬಹುದು. 2016ರ ರಿಯೋ ಒಲಿಂಪಿಕ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಅವರನ್ನು ಸೋಲಿಸಿದ್ದ ಮರಿನ್ ಚಿನ್ನದ ಪದಕ ಗೆದ್ದಿದ್ದರು. ಆ ಬಳಿಕ ಮೊಣಕಾಲು ಗಾಯದಿಂದಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು. ಹೀಗಾಗಿ ಪ್ಯಾರಿಸ್ ಕ್ರೀಡಾಕೂಟದಲ್ಲಿ ಮತ್ತೆ ಬಂಗಾರದ ಸಾಧನೆ ಮಾಡುವ ಕನಸು ಅವರದ್ದಾಗಿತ್ತು. ಈಗ ಗಾಯ ಮತ್ತೆ ಅವರನ್ನು ಕಾಡಿದೆ. ಅವರ ಮುಂದೆ ಕಂಚಿನ ಪದಕ ಗೆಲ್ಲುವ ಆಯ್ಕೆ ಇದೆ. ಆದರೆ, ಆ ಪಂದ್ಯದಲ್ಲಿ ಆವರು ಆಡುತ್ತಾರೋ ಇಲ್ಲವೋ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.
ಸದ್ಯ ಮರಿನ್ ಹಿಂದೆ ಸರಿದ ಕಾರಣದಿಂದಾಗಿ ಚೀನಾದ ಶಟ್ಲರ್ ಫೈನಲ್ ಪ್ರವೇಶಿಸಿದ್ದಾರೆ. ಅವರು ಫೈನಲ್‌ನಲ್ಲಿ ಕೊರಿಯಾ ರಿಪಬ್ಲಿಕ್‌ನ ಆನ್ ಸೆ ಯಂಗ್ ಅವರನ್ನು ಎದುರಿಸಲಿದ್ದಾರೆ.
ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಒಲಿಂಪಿಕ್ಸ್: ಸೆಮೀಸ್ನಲ್ಲಿ ಲಕ್ಷ್ಯ ಸೇನ್ಗೆ ಸೋಲು, ಕಂಚಿನ ಪದಕದ ಆಸೆ ಜೀವಂತ; ಲವ್ಲಿನಾ ಬೊರ್ಗೊಹೈನ್ಗೆ ನಿರಾಶೆ