ಪ್ಯಾರಿಸ್ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ನಿಶಾಂತ್ ದೇವ್ ಸೋಲಿನ ಬೆನ್ನಲ್ಲೇ ನೆಟ್ಟಿಗರ ಆಕ್ರೋಶ; ಭಾರತೀಯನಿಗೆ ಅನ್ಯಾಯದ ಆರೋಪ
ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತೀಯ ನಿಶಾಂತ್ ದೇವ್ 1-4 ಅಂತರದಿಂದ ಸೋತರು. ಭಾರತ ಗೆಲ್ಲಬೇಕಿದ್ದ ಪಂದ್ಯದಲ್ಲಿ ತೀರ್ಪುಗಾರರ ತಪ್ಪು ತೀರ್ಮಾನದಿಂದಾಗ ನಿಶಾಂತ್ ಸೋಲಬೇಕಾಯ್ತು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶನಿವಾರ ಭಾರತ ಭಾರಿ ನಿರಾಶೆ ಅನುಭವಿಸಿತು. ಆರ್ಚರಿಯಲ್ಲಿ ದೀಪಿಕಾ ಕುಮಾರಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದರು. ಕಠಿಣ ಪೈಪೋಟಿ ನೀಡಿದ ಅವರು, ಕೊನೆಯ ಸೆಟ್‌ನಲ್ಲಿ ಗುರಿಯತ್ತ ಬಾಣ ಹೂಡುವಲ್ಲಿ ವಿಫಲರಾದರು. ಅತ್ತ ಶೂಟಿಂಗ್‌ನಲ್ಲಿ ಐತಿಹಾಸಿಕ ಮೂರನೇ ಪದಕದತ್ತ ಗುರಿ ಇಟ್ಟಿದ್ದ ಮನು ಭಾಕರ್, ಕೊನೆಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯ್ತು. ಮತ್ತೊಂದೆಡೆ ಭಾರತಕ್ಕೆ ಭಾರಿ ನಿರಾಶೆಯಾಗಿದ್ದು ನಿಶಾಂತ್ ದೇವ್ ಅವರ ಸೋಲು. ಭಾರತಕ್ಕೆ ಪದಕವನ್ನು ಖಚಿತಪಡಿಸಿಕೊಳ್ಳಲು ಕೇವಲ ಒಂದು ಗೆಲುವಿನಿಂದ ದೂರದಲ್ಲಿದ್ದ ನಿಶಾಂತ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಚ್ಚರಿಯ ಸೋಲು ಕಂಡರು. ಸೋಲಿನ ಬಳಿಕ ತೀರ್ಪುಗಾರರ ವಿರುದ್ಧ ಅನ್ಯಾಯದ ಆರೋಪ ಕೇಳಿಬಂದಿದೆ.
ಭಾರತದ ಸ್ಟಾರ್ ಬಾಕ್ಸರ್ ನಿಶಾಂತ್ ದೇವ್ ಅವರು ಶನಿವಾರ ಗೆಲ್ಲುವ ಫೇವರೆಟ್ ಆಗಿದ್ದರು. ಆದರೆ, ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಹೃದಯ ವಿದ್ರಾವಕ ಸೋಲು ಕಂಡರು. ಮೆಕ್ಸಿಕೊದ ಮಾರ್ಕೊ ವರ್ಡೆ ಅಲ್ವಾರೆಜ್ ವಿರುದ್ಧ ನಿಶಾಂತ್ ವಿವಾದಾತ್ಮಕ ಸೋಲುಂಡರು. 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಲ್ವಾರೆಜ್ ಅವರನ್ನು ಸೋಲಿಸಿದ್ದ 23 ವರ್ಷದ ನಿಶಾಂತ್, ಆರಂಭಿಕ ಸುತ್ತನ್ನು ಸುಲಭವಾಗಿ ಗೆದ್ದರು. ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಎರಡನೇ ಸುತ್ತಿನಲ್ಲಿಯೂ ಸಂಪೂರ್ಣ ನಿಯಂತ್ರಣ ಕಂಡರು. ಮೆಕ್ಸಿಕನ್ ಎದುರಾಳಿ ಮೇಲೆ ಸರಣಿ ಪಂಚ್‌ಗಳ ಮೂಲಕ ಗೆಲ್ಲುವ ಭರವಸೆ ಮೂಡಿಸಿದರು. ಆದರೂ ತೀರ್ಪುಗಾರರು ಅಚ್ಚರಿಯ ರೀತಿಯಲ್ಲಿ ಅಲ್ವಾರೆಜ್ ಪರ ನಿಂತರು.
ಅಂತಿಮ ಸುತ್ತನ್ನು ಆಕ್ರಮಣಕಾರಿಯಾಗಿ ಪ್ರಾರಂಭಿಸಲು ಅಲ್ವಾರೆಜ್, ಭಾರತೀಯನನ್ನು ಸೋಲಿಸುವ ಪ್ರಯತ್ನಕ್ಕಿಳಿದರು. ಆದರೆ ಅದರಿಂದ ತಪ್ಪಿಸಿಕೊಳ್ಳಲು ನಿಶಾಂತ್ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದನು. ಪಂದ್ಯ ಮುಂದುವರೆದಂತೆ ಲಯ ಕಳೆದುಕೊಂಡ ಭಾರತೀಯ, ಎದುರಾಳಿಯ ಹೊಡೆತಗಳನ್ನು ಎದುರಿಸುವಲ್ಲಿ ನಿಧಾನವಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮೆಕ್ಸಿಕೋ ಆಟಗಾರ ಗೆಲುವು ತಮ್ಮದಾಗಿಸಿಕೊಂಡರು. ಕೊನೆಗೆ ಕ್ವಾರ್ಟರ್ ಫೈನಲ್‌ಲ್ಲಿ ಎರಡನೇ ಶ್ರೇಯಾಂಕದ ಮೆಕ್ಸಿಕನ್ ಎದುರಾಳಿಯ ವಿರುದ್ಧ ನಿಶಾಂತ್ 1-4 ಅಂತರದಿಂದ ಸೋತರು.
ಪಂದ್ಯದ ಬಳಿ, ಜಡ್ಜಸ್ ನೀಡಿದ ತೀರ್ಪಿನ ವಿರುದ್ಧ ವ್ಯಾಪಕ ಅಸಮಾಧಾನ ಕೇಳಿ ಬಂದಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಖಚಿತವಾಗಿ ಬರಬೇಕಿದ್ದ ಪದಕವನ್ನು ತೀರ್ಪುಗಾರರು ತಮ್ಮ ತೀರ್ಮಾನದ ಮೂಲಕ ನಿರಾಕರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ಹಾಗೂ ಆಕ್ರೋಶ ವ್ಯಕ್ತವಾಗಿದೆ.
ವ್ಯಾಪಕ ಆಕ್ರೋಶ
ಅಚ್ಚರಿಯೆಂದರೆ, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಕೂಡ ಪಂದ್ಯದ ಸ್ಕೋರಿಂಗ್ ವ್ಯವಸ್ಥೆಯಿಂದ ಆಘಾತಕ್ಕೊಳಗಾಗಿದ್ದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಸ್ಕೋರಿಂಗ್ ವ್ಯವಸ್ಥೆ ಹೇಗೆ ಎಂಬುದೇ ನನಗೆ ತಿಳಿದಿಲ್ಲ. ಆದರೆ ಇದು ತುಂಬಾ ಕಠಿಣ ಪೈಪೋಟಿ ಎಂದು ನಾನು ಭಾವಿಸುತ್ತೇನೆ . ನಿಶಾಂತ್ ತುಂಬಾ ಚೆನ್ನಾಗಿ ಆಡಿದರು.” ಎಂದು ವಿಜೇಂದರ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಎಕ್ಸ್‌ನಲ್ಲಿ ನೆಟ್ಟಿಗರ ಆಕ್ರೋಶ ಹೀಗಿತ್ತು
ಸದ್ಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಬಾಕ್ಸರ್‌ಗಳ ಅಭಿಯಾನ ಅಂತ್ಯವಾಗುತ್ತಿದೆ. ನಿಶಾಂತ್ ಕ್ರೀಡಾಕೂಟದಿಂದ ನಿರ್ಗಮಿಸಿದ ಐದನೇ ಭಾರತೀಯ ಬಾಕ್ಸರ್. ಲವ್ಲಿನಾ ಬೊರ್ಗೊಹೈನ್ ಮಾತ್ರ ಇನ್ನೂ ಸ್ಪರ್ಧೆಯಲ್ಲಿರುವ ಏಕೈಕ ಆಟಗಾರ್ತಿ. ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಗುರಿ ಹೊಂದಿರುವ ಲವ್ಲಿನಾ, ಭಾನುವಾರ ನಡೆಯಲಿರುವ ಮಹಿಳೆಯರ 75 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಲಿ ಕಿಯಾಂಗ್ ವಿರುದ್ಧ ಸೆಣಸಲಿದ್ದಾರೆ.