ಚಿನ್ನ ಗೆದ್ದ ಚೀನಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಡೈಮಂಡ್ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ ಸಹ ಆಟಗಾರ, ಆಕೆ ರಿಯಾಕ್ಷನ್ ನೋಡಿ
ಕನ್ನಡ ಸುದ್ದಿ  /  ಕ್ರೀಡೆ  /  ಚಿನ್ನ ಗೆದ್ದ ಚೀನಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಡೈಮಂಡ್ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ ಸಹ ಆಟಗಾರ, ಆಕೆ ರಿಯಾಕ್ಷನ್ ನೋಡಿ

ಚಿನ್ನ ಗೆದ್ದ ಚೀನಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಡೈಮಂಡ್ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ ಸಹ ಆಟಗಾರ, ಆಕೆ ರಿಯಾಕ್ಷನ್ ನೋಡಿ

Paris Olympics 2024: ಚಿನ್ನ ಗೆದ್ದ ಚೀನಾದ ಬ್ಯಾಡ್ಮಿಂಟನ್ ಆಟಗಾರ್ತಿಗೆ ಸಹ ಆಟಗಾರ ವಜ್ರದುಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದಾರೆ. ಹೀಗಿತ್ತು ನೋಡಿ ಆಕೆಯ ರಿಯಾಕ್ಷನ್‌.

ಚಿನ್ನ ಗೆದ್ದ ಚೀನಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಡೈಮಂಡ್ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ ಸಹ ಆಟಗಾರ
ಚಿನ್ನ ಗೆದ್ದ ಚೀನಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಡೈಮಂಡ್ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ ಸಹ ಆಟಗಾರ

ಪ್ರತಿ ಆವೃತ್ತಿಯ ಒಲಿಂಪಿಕ್ಸ್​ ಕ್ರೀಡಾಕೂಟವೂ ಆಟಗಳ ಜೊತೆಗೆ ವಿಶೇಷ ಮತ್ತು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗುತ್ತಿವೆ. ಅದರಂತೆ 2024ರ ಪ್ಯಾರಿಸ್ ಒಲಿಂಪಿಕ್ಸ್​​ ಸಹ​​​ ಅಂತಹದ್ದೇ ಘಟನೆಗೆ ಸಾಕ್ಷಿಯಾಗಿದೆ. ಚೀನಾದ ಬ್ಯಾಡ್ಮಿಂಟನ್ ಆಟಗಾರನೊಬ್ಬ, ತಮ್ಮ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಹುವಾಂಗ್ ಯಾ ಕಿಯಾಂಗ್ ಚಿನ್ನ​ ಗೆಲ್ಲುವುದರ ಜೊತೆಗೆ ಅದೇ ಅಂಕಣದಲ್ಲಿ ಪ್ರೀತಿಯ ವಿಜಯೋತ್ಸವ ಆಚರಿಸಿದ್ದಾರೆ.

ಒಲಿಂಪಿಕ್ಸ್​​ನ ಮಿಶ್ರ ಡಬಲ್ಸ್‌ನಲ್ಲಿ ಚೀನಾ ಪರ ಹುವಾಂಗ್ ಮತ್ತು ಝೆಂಗ್ ಸಿವೆಯ್ ಜೋಡಿ ಚಿನ್ನದ ಪದಕ ಗೆದ್ದಿತು. ಇದಾದ ಕೆಲವೇ ನಿಮಿಷಗಳಲ್ಲಿ ಗೆಳೆಯ ಮತ್ತು ಚೀನಾದ ಪುರುಷರ ಡಬಲ್ಸ್ ಪ್ಲೇಯರ್​ ಲಿ ಯುಚೆನ್ ಅವರು ಮೊಣಕಾಲೂರಿ ಗೋಲ್ಡ್​ ಮೆಡಲ್ ಗೆದ್ದ ಹುವಾಂಗ್ ಅವರಿ​ಗೆ ಡೈಮಂಡ್ ಉಂಗುರದೊಂದಿಗೆ ಪ್ರೇಮ ನಿವೇದನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮದುವೆಯ ಪ್ರಸ್ತಾಪಕ್ಕೆ​ ಒಪ್ಪಿಗೆ ಸೂಚಿಸಿದ ಹುವಾಂಗ್ ತನ್ನ ಪದಕ ಸಂಭ್ರಮವನ್ನು ಅವಿಸ್ಮರಣೀಯವಾಗಿರಿಸಿಕೊಂಡಿದ್ದಾರೆ.

ಹುವಾಂಗ್ ಮತ್ತು ಪಾಲುದಾರ ಝೆಂಗ್ ಸಿವೀ ಜೋಡಿ ಅಜೇಯ ಓಟದ ಮೂಲಕ ಮಿಶ್ರ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ವೊನ್-ಹೊ ಮತ್ತು ಜಿಯೊಂಗ್ ನಾ-ಯುನ್​ ಅವರನ್ನು 21-8, 21-11 ಅಂತರದಿಂದ ನೇರ ಸೆಟ್​ಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು. ಪದಕ ಸ್ವೀಕರಿಸಿ ವೇದಿಕೆಯಿಳಿದು ಬರುತ್ತಿದ್ದ ಹುವಾಂಗ್ ಅವರಿ​ಗೆ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಲಿ ಯುಚೆನ್ ಅವರು ವಜ್ರದುಂಗುರದೊಂದಿಗೆ ಪ್ರಪೋಸ್ ಮಾಡಿದರು. ಆ ಕ್ಷಣ ಕಂಡು ಹುವಾಂಗ್​ ಅಚ್ಚರಿಗೊಳಗಾದರು.

ಲಿ ಯುಚೆನ್: ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ, ನನ್ನನ್ನು ಮದುವೆಯಾಗುತ್ತೀಯಾ?

ಹುವಾಂಗ್: ಹೌದು, ನಿನ್ನನ್ನು ಮದುವೆಯಾಗುತ್ತೇನೆ. (ಖುಷಿಯಿಂದ)

ಯುಚೆನ್ ಅವರ ಪ್ರಫೋಸ್​ಗೆ ಆನಂದಭಾಷ್ಪ ಸುರಿಸಿದ ಹುವಾಂಗ್​ ತಕ್ಷಣವೇ ಒಪ್ಪಿಗೆ ಸೂಚಿಸಿ ಅಪ್ಪುಗೆ ನೀಡಿದರು. ನಂತರ ಯುಚೆನ್ ಹೂಗುಚ್ಛ ನೀಡಿದರು. ಅಲ್ಲಿದ್ದ ಚೀನೀ ಅಭಿಮಾನಿಗಳು ಪ್ರೇಮ ನಿವೇದನೆಯ ವೇಳೆ ಚಿಯರ್​ ಅಪ್ ಮಾಡಿ ಸಂಭ್ರಮಿಸಿದರು. ಈ ಬಗ್ಗೆ ಮಾತನಾಡಿದ ಹುವಾಂಗ್, ಪ್ರಪೋಸ್ ಮಾಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಇಂದು ನಾನು ಒಲಿಂಪಿಕ್ ಚಾಂಪಿಯನ್ ಜೊತೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡೆ. ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ಒಲಿಂಪಿಕ್ಸ್​ನಲ್ಲಿ 2ನೇ ಪ್ರಪೋಸ್ ಇದು

ಪ್ಯಾರಿಸ್ ಒಲಿಂಪಿಕ್ಸ್​​​​ನಲ್ಲಿ ಪ್ರೇಮ ನಿವೇದನೆ ಮಾಡಿದ 2ನೇ ಜೋಡಿ ಎಂಬ ಹೆಗ್ಗಳಿಕೆಗೆ ಚೀನಾದ ಜೋಡಿ ಪಾತ್ರವಾಗಿದೆ. ಇದಕ್ಕೂ ಮೊದಲು ಅರ್ಜೆಂಟೀನಾದ ಹ್ಯಾಂಡ್​ಬಾಲ್ ಆಟಗಾರ ಪ್ಯಾಬ್ಲೊ ಸಿಮೊನೆಟ್ ಅವರು ಹಾಕಿ ಆಟಗಾರ್ತಿ ಪಿಲಾರ್ ಕ್ಯಾಂಪೊಯ್ ಅವರಿಗೆ ಪ್ರಪೋಸ್ ಮಾಡಿದ್ದರು. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕ್ರೀಡಾ ಗ್ರಾಮದಲ್ಲಿ ವಿಶೇಷ ಕ್ಷಣ ನಡೆದಿತ್ತು. ತಂಡಗಳ ಗ್ರೂಪ್ ಫೋಟೋಶೂಟ್ ವೇಳೆ ಸಿಮೊನೆಟ್ ಮಂಡಿಯೂರಿ ಕ್ಯಾಂಪೊಯ್‌ಗೆ ರಿಂಗ್ ನೀಡಿ ನಿಶ್ಚಿತಾರ್ಥ ಮಾಡಿಕೊಂಡರು.

ಹುವಾಂಗ್ ಯಾ ಕಿಯಾಂಗ್ ಮತ್ತು ಝೆಂಗ್ ಸಿವೆಯ್ ಒಲಿಂಪಿಕ್ಸ್​​​ನಲ್ಲಿ ಮೊದಲ ಚಿನ್ನದ ಪದಕ ಗೆದ್ದರು. ಶುಕ್ರವಾರ ನಡೆದ ಗೋಲ್ಡ್ ಮೆಡಲ್ ಪಂದ್ಯದಲ್ಲಿ ಆರಂಭದಿಂದ ಕೊನೆಯ ತನಕ ಅವರು ಪ್ರಾಬಲ್ಯ ಮೆರೆದರು. ಆಕ್ರಮಣಕಾರಿ ಆಟವಾಡಿದ ಚೀನಾದ ಜೋಡಿ ಕೊರಿಯಾ ಜೋಡಿಯನ್ನು 21-8, 21-11 ಅಂತರದಿಂದ ಸೋಲಿಸಿತು. ಸ್ವರ್ಣಕ್ಕೆ ಮುತ್ತಿಕ್ಕಲು ಕೇವಲ 41 ನಿಮಿಷಗಳಲ್ಲಿ ತೆಗೆದುಕೊಂಡರು. ಪ್ರಸ್ತುತ ಪದಕ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನ ಪಡೆದಿದೆ. ಆಗಸ್ಟ್​ 2ರ ಅಂತ್ಯಕ್ಕೆ 13 ಚಿನ್ನ, 9 ಬೆಳ್ಳಿ, 9 ಕಂಚು ಸೇರಿ 31 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.