ಒಲಿಂಪಿಕ್ಸ್‌: 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಸಜ್ಜು, ದೀಪಿಕಾ ಕುಮಾರಿ-ನಿಶಾಂತ್ ದೇವ್ ಪಂದ್ಯ ಇಂದು; ಆಗಸ್ಟ್‌ 3ರ ವೇಳಾಪಟ್ಟಿ
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್‌: 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಸಜ್ಜು, ದೀಪಿಕಾ ಕುಮಾರಿ-ನಿಶಾಂತ್ ದೇವ್ ಪಂದ್ಯ ಇಂದು; ಆಗಸ್ಟ್‌ 3ರ ವೇಳಾಪಟ್ಟಿ

ಒಲಿಂಪಿಕ್ಸ್‌: 3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಸಜ್ಜು, ದೀಪಿಕಾ ಕುಮಾರಿ-ನಿಶಾಂತ್ ದೇವ್ ಪಂದ್ಯ ಇಂದು; ಆಗಸ್ಟ್‌ 3ರ ವೇಳಾಪಟ್ಟಿ

ಮನು ಭಾಕರ್‌ ಮೂರನೇ ಪದಕಕ್ಕೆ ಶೂಟ್‌ ಮಾಡಲು ಸಜ್ಜಾದರೆ, ಆರ್ಚರಿಯಲ್ಲಿ ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಸಿಂಗಲ್ಸ್ ಸುತ್ತಿನಲ್ಲಿ ಆಡಲಿದ್ದಾರೆ. ಬಾಕ್ಸರ್ ನಿಶಾಂತ್ ದೇವ್ ಕೂಡಾ ಪದಕ ಖಚಿತಪಡಿಸುವ ಅವಕಾಶ ಪಡೆಯಲಿದ್ದಾರೆ. ‌ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಗಸ್ಟ್ 3ರ ಭಾನುವಾರ ಭಾರತದ ವೇಳಾಪಟ್ಟಿ ಹೀಗಿದೆ.

3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಸಜ್ಜು, ದೀಪಿಕಾ ಕುಮಾರಿ-ನಿಶಾಂತ್ ದೇವ್ ಪಂದ್ಯ ಇಂದು
3ನೇ ಪದಕಕ್ಕೆ ಶೂಟ್‌ ಮಾಡಲು ಮನು ಭಾಕರ್‌ ಸಜ್ಜು, ದೀಪಿಕಾ ಕುಮಾರಿ-ನಿಶಾಂತ್ ದೇವ್ ಪಂದ್ಯ ಇಂದು

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics 2024) ಆಗಸ್ಟ್‌ 2ರ ಶುಕ್ರವಾರ ಭಾರತದ ಬಿಲ್ಲುಗಾರರು ಐತಿಹಾಸಿಕ ಪದಕ ಗೆಲ್ಲುವಲ್ಲಿ ಎಡವಿದರು. ಧೀರಜ್‌ ಬೊಮ್ಮದೇವರ ಹಾಗೂ ಅಂಕಿತಾ ಭಕತ್‌, ಮಿಶ್ರ ತಂಡ ಆರ್ಚರಿಯಲ್ಲಿ ಯುಎಸ್‌ಎ ವಿರುದ್ಧ ಸೋತು ಕಂಚಿನ ಪದಕ ಕಳೆದುಕೊಂಡರು. ಆ ಮೂಲಕ ಏಳನೇ ದಿನದಾಟದಲ್ಲಿ ಭಾರತ ಪದಕವಿಲ್ಲದೆ ಆಟ ಮುಗಿಸಿತು. ಇದೀಗ ಪ್ಯಾರಿಸ್‌ನಲ್ಲಿ ಎಂಟನೇ ದಿನದಾಟ ನಡೆಯಲಿರುವ ಆಗಸ್ಟ್‌ 3ರ ಶನಿವಾರ, ಭಾರತ ಮತ್ತೆ ಪದಕ ಗೆಲ್ಲುವ ಅವಕಾಶ ಹೊಂದಿದೆ. ಈಗಾಗಲೇ ಎರಡು ಕಂಚಿನ ಪದಕ ಗೆದ್ದಿರುವ ಮನು ಭಾಕರ್, ತಮ್ಮ ಮೂರನೇ ಪದಕವನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಗಳಿಸಿದ ಅವರು, 25 ಮೀಟರ್‌ ಪಿಸ್ತೂಲ್ ಈವೆಂಟ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಂದು ಅದೇ ಜೋಶ್‌ ಕಾಯ್ದುಕೊಂಡರೆ ಭಾರತಕ್ಕೆ ಮತ್ತೆ ಪದಕ ಬರಲಿದೆ. ಈ ಬಾರಿ ಬೆಳ್ಳಿ ಅಥವಾ ಚಿನ್ನದ ನಿರೀಕ್ಷೆ ಮನು ಹಾಗೂ ಭಾರತದ್ದು.

ಇಂದು ಬಾಕ್ಸರ್ ನಿಶಾಂತ್ ದೇವ್ ಅವರಿಗೂ ಪದಕ ಖಚಿತಪಡಿಸುವ ಅವಕಾಶವಿದೆ. ಪ್ರಬಲ ಎದುರಾಳಿ ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಅವರು ಸೆಮಿಫೈನಲ್‌ ಪ್ರವೇಶಿಸಲಿದ್ದಾರೆ. ಇದೇ ವೇಳೆ ಆರ್ಚರಿಯಲ್ಲಿ ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಸಿಂಗಲ್ಸ್ ಸುತ್ತಿನಲ್ಲಿ ಆಡಲಿದ್ದಾರೆ.

ಆಗಸ್ಟ್ 3ರ ಶನಿವಾರದ ಭಾರತದ ವೇಳಾಪಟ್ಟಿ

ಮಧ್ಯಾಹ್ನ 12:30 ಗಂಟೆ: ಶೂಟಿಂಗ್ - ಮಹಿಳೆಯರ ಸ್ಕೀಟ್ ಅರ್ಹತಾ ಸುತ್ತು ದಿನ 1ರಲ್ಲಿ ರೈಜಾ ಧಿಲ್ಲೋನ್ ಮತ್ತು ಮಹೇಶ್ವರಿ ಚೌಹಾಣ್.

ಮಧ್ಯಾಹ್ನ 1 ಗಂಟೆ: ಶೂಟಿಂಗ್ - ಮಹಿಳೆಯರ 25 ಮೀಟರ್‌ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕರ್ (ಮೆಡಲ್ ಈವೆಂಟ್).

ಮಧ್ಯಾಹ್ನ 1:52 : ಆರ್ಚರಿ - ಮಹಿಳೆಯರ ವೈಯಕ್ತಿಕ ವಿಭಾಗದ 16ರ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ vs ಜರ್ಮನಿಯ ಮಿಚೆಲ್ ಕ್ರೊಪ್ಪೆನ್.

ಮಧ್ಯಾಹ್ನ 2:05 : ಆರ್ಚರಿ - ಮಹಿಳೆಯರ ಸುತ್ತಿನ ವೈಯಕ್ತಿಕ ವಿಭಗದ 16ರ ಸುತ್ತಿನ ಪಂದ್ಯದಲ್ಲಿ ದಯಾನಂದ ಚೋರುನಿಸಾ ವಿರುದ್ಧ ಭಜನ್ ಕೌರ್.

ಮಧ್ಯಾಹ್ನ 3:45: ಸೈಲಿಂಗ್ - ಪುರುಷರ ಡಿಂಗಿ ಓಟ 5 ಮತ್ತು 6 ರಲ್ಲಿ ವಿಷ್ಣು ಸರವಣನ್.

ಸಂಜೆ 5:55: ಸೈಲಿಂಗ್ - ನೇತ್ರಾ ಕುಮನನ್ ಮಹಿಳೆಯರ ಡಿಂಗಿ ಓಟ 5 ಮತ್ತು 6 ರಲ್ಲಿ.

ರಾತ್ರಿ 11:05: ಶಾಟ್‌ಪುಟ್ ಫೈನಲ್ - ತಜಿಂದರ್‌ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).

ತಡರಾತ್ರಿ 12:02 : ಬಾಕ್ಸಿಂಗ್ - ಪುರುಷರ 71 ಕೆಜಿ ಕ್ವಾರ್ಟರ್‌ ಫೈನಲ್‌ನಲ್ಲಿ ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧ ನಿಶಾಂತ್ ದೇವ್.

ಶುಕ್ರವಾರ ನಡೆದ ಕ್ರೀಡೆಗಳಲ್ಲಿ ಭಾರತ ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿತು. ಬರೋಬ್ಬರಿ 52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಆಸೀಸ್‌ ತಂಡವನ್ನು ಮಣಿಸಿದ ಸಾಧನೆ ಮಾಡಿತು. ಇದೇ ವೇಳೆ ಜೂಡೋ ಮತ್ತು ರೋವಿಂಗ್‌ನಲ್ಲಿ ಭಾರತೀಯರು ಸೋಲು ಅನುಭವಿಸಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.