Roger Binny: ಧೋನಿ ಹಾದಿಯಲ್ಲಿ ಬಿನ್ನಿ; ಚಾಮರಾಜನಗರದಲ್ಲಿ ಟ್ರ್ಯಾಕ್ಟರ್ ಖರೀದಿಸಿ ಕೃಷಿ ಆಸಕ್ತಿ ತೋರಿದ ಬಿಸಿಸಿಐ ಅಧ್ಯಕ್ಷ
Chamarajanagar News: ಜಮೀನಿನ ವ್ಯವಸಾಯಕ್ಕೆ ಟ್ರ್ಯಾಕ್ಟರ್ ಖರೀದಿ ಮಾಡಿದ್ದೇನೆ. ಕಳೆದ 25 ವರ್ಷದಿಂದ ಕೃಷಿ ಮಾಡ್ತಿದ್ದೇನೆ. ನನಗೆ ಕೃಷಿ ಮಾಡುವ ಅಭಿರುಚಿ ಇದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.
ಚಾಮರಾಜನಗರ: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರು ಶುಕ್ರವಾರ ಟ್ರ್ಯಾಕ್ಟರ್ ಖರೀದಿಸಿ ಸುದ್ದಿಯಾಗಿದ್ದಾರೆ. ಬಂಡೀಪುರ ಅರಣ್ಯದಂಚಿನಲ್ಲಿ ಜಮೀನು ಹೊಂದಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಬಿನ್ನಿ, ನಗರದ ಈಶ್ವರಿ ಟ್ರ್ಯಾಕ್ಟರ್ ಶೋ ರೂಮ್‌ನಲ್ಲಿ ಮಹೀಂದ್ರ ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ.
ಬಂಡೀಪುರದ ಬಳಿ ಇರುವ 36 ಎಕರೆ ಫಾರಂ ಬಿನ್ನಿಯವರದ್ದು
ಟ್ರ್ಯಾಕ್ಟರ್ ಖರೀದಿ ಬಳಿಕ ಮಾತನಾಡಿದ ಬಿನ್ನಿ, ನಮ್ಮದು ಬಂಡೀಪುರದ ಬಳಿ 36 ಎಕರೆ ಫಾರಂ ಇದೆ. ಜಮೀನಿನ ವ್ಯವಸಾಯಕ್ಕೆ ಟ್ರ್ಯಾಕ್ಟರ್ ಖರೀದಿ ಮಾಡಿದ್ದೇನೆ. ನಮ್ಮ ಪೂರ್ವಿಕರೇನೂ ಕೃಷಿಕರಲ್ಲ. ಆದರೆ ನಾನು ಕಳೆದ 25 ವರ್ಷದಿಂದ ಕೃಷಿ ಮಾಡ್ತಿದ್ದೇನೆ. ನನಗೆ ಕೃಷಿ ಮಾಡುವ ಅಭಿರುಚಿ ಇದೆ ಎಂದರು.
ಭಾರತದ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿದ್ದು ಕೃಷಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದವರಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮೊದಲಿಗರು. ಅವರನ್ನು ಹೊರತುಪಡಿಸಿ ಬಿನ್ನಿ ಕೂಡಾ ರೈತ ಜೀವನದ ಬಗ್ಗೆ ಆಸಕ್ತಿ ಹೊಂದಿರುವ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಈ ಹಿಂದೆ ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತದ ಮಾಜಿ ನಾಯಕ ಮಾಹಿ, ತಮ್ಮ ತವರು ರಾಂಚಿಯ ಹೊರವಲಯದಲ್ಲಿರುವ ತನ್ನ ಜಮೀನನ್ನು ಉಳುಮೆ ಮಾಡಿರುವ ದೃಶ್ಯ ವೈರಲ್ ಆಗಿತ್ತು. ಧೋನಿ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಖುದ್ದು ಧೋನಿಯವರೇ ಹಂಚಿಕೊಂಡಿದ್ದರು. ಇದೀಗ ಬಿನ್ನಿ ಕೂಡಾ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಲುವಾಗಿ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದಾರೆ.
ಐಪಿಎಲ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ತೊಂದರೆ ಆಗಲ್ಲ
ಐಪಿಎಲ್ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆ ಆಗಲ್ಲ. ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟ್ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಟೆಸ್ಟ್ ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೆಯುತ್ತಿದೆ ಎಂದರು.
ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತಕ್ಕೆ ಸೋತಿರುವ ಕುರಿತು ಪ್ರತಿಕ್ರಿಯೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಸೋತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆಸೀಸ್ ವಿರುದ್ಧದ ಟೆಸ್ಟ್ ಪೈನಲ್ ವೇಳೆ ಮೊದಲ ದಿನ ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಟೀಮ್ ಆಯ್ಕೆಯ ವೇಳೆ ಒಂದು ಸಣ್ಣ ತಪ್ಪು ಕೂಡಾ ಆಗಿದೆ. ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ದೆವು ಎಂದರು.
ಇಡೀ ವರ್ಷ ಕ್ರಿಕೆಟ್ ಆಡುವುದರಿಂದ ಅಭ್ಯಾಸ ಅಗತ್ಯವಿಲ್ಲ. ಟಿಟ್ವೆಂಟಿ ಇರಲಿ, ಏಕದಿನವಾಗಲಿ, ಟೆಸ್ಟ್ ಪಂದ್ಯವೇ ಆಗಿರಲಿ. ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ ಎಂದರು.
ಅತ್ತ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದ ನಂತರ ಧೋನಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ತೋಟದಲ್ಲಿ ಅವರು ಸಾವಯವ ವಿಧಾನದಿಂದ ಹಣ್ಣು ಹಾಗೂ ತರಕಾರಿಗಳನ್ನು ಬೆಳೆಯುತ್ತಾರೆ.