MS Dhoni: ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಮಾಹಿ; ವಿಡಿಯೋ ನೋಡಿ 'ಮತ್ತೆ ಮೈದಾನಕ್ಕೆ ಬನ್ನಿ' ಎಂದ ಅಭಿಮಾನಿಗಳು
ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವ ದೃಶ್ಯಕ್ಕೆ ಕ್ಯಾಪ್ಶನ್ ನೀಡಿರುವ ಧೋನಿ, “ಹೊಸದನ್ನು ಕಲಿಯಲು ಸಂತೋಷವಾಗಿದೆ. ಆದರೆ ಕೆಲಸವನ್ನು ಮುಗಿಸಲು ತುಂಬಾ ಸಮಯ ತೆಗೆದುಕೊಂಡಿತು,” ಎಂದು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂ ಎಸ್ ಧೋನಿ, ಸದ್ಯ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕ್ರಿಕೆಟ್‌ನಲ್ಲೇ ಕೂಲ್ ಕ್ಯಾಪ್ಟನ್ ಎಂದು ಕರೆಸಿಕೊಳ್ಳುವ ಮಾಹಿ, ಹೆಚ್ಚು ಕಾಲ ತಮ್ಮ ತೋಟದ ಮನೆಯಲ್ಲಿ ಸಮಯ ಕಳೆಯುತ್ತಾರೆ. ಇದಕ್ಕೆ ಸರಿಯಾಗಿ ಮಾಹಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹರಿಬಿಟ್ಟಿರುವ ವಿಡಿಯೋವೊಂದನ್ನು ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ.
ಭಾರತದ ಮಾಜಿ ನಾಯಕ, ತಮ್ಮ ತವರು ರಾಂಚಿಯ ಹೊರವಲಯದಲ್ಲಿರುವ ತನ್ನ ಜಮೀನನ್ನು ಉಳುಮೆ ಮಾಡಿರುವ ದೃಶ್ಯ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಧೋನಿ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಧೋನಿ ಬುಧವಾರ ಸಂಜೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವ ದೃಶ್ಯಕ್ಕೆ ಕ್ಯಾಪ್ಶನ್ ನೀಡಿರುವ ಧೋನಿ, “ಹೊಸದನ್ನು ಕಲಿಯಲು ಸಂತೋಷವಾಗಿದೆ. ಆದರೆ ಕೆಲಸವನ್ನು ಮುಗಿಸಲು ತುಂಬಾ ಸಮಯ ತೆಗೆದುಕೊಂಡಿತು,” ಎಂದು ಬರೆದುಕೊಂಡಿದ್ದಾರೆ. ಎರಡು ವರ್ಷಗಳ ಸುದೀರ್ಘ ವಿರಾಮದ ನಂತರ ಧೋನಿಯ ಇತ್ತೀಚಿನ ಇನ್‌ಸ್ಟಾಗ್ರಾಮ್ ಅಪ್‌ಡೇಟ್ ಬಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದ ನಂತರ, ಧೋನಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ತೋಟದಲ್ಲಿ ಅವರು ಸಾವಯವ ವಿಧಾನದಿಂದ ಹಣ್ಣು ಹಾಗೂ ತರಕಾರಿಗಳನ್ನು ಬೆಳೆಯುತ್ತಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಹಿಂದೆ ಹಂಚಿಕೊಂಡ ಪೋಸ್ಟ್‌ನಲ್ಲಿ, ತಮ್ಮ ಜಮೀನಿನಿಂದ ಸ್ಟ್ರಾಬೆರಿಗಳನ್ನು ಕಿತ್ತು ತಿನ್ನುತ್ತಿರುವುದನ್ನು ಕಾಣಬಹುದು.
ಧೋನಿ ಟ್ರಾಕ್ಟರ್ ಅನ್ನು ಓಡಿಸುತ್ತಿರುವ ದೃಶ್ಯಗಳು, ಬಲು ಬೇಗನೆ ಅವರ ಅಭಿಮಾನಿಗಳನ್ನು ತಲುಪಿದೆ. ಈ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಈ ನಡುವ ಅನೇಕ ಅಭಿಮಾನಿಗಳು ಕಾಮೆಂಟ್ ಮೂಲಕ, ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವಂತೆ ಮನವಿ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಧೋನಿ, ಈ ಬಾರಿಯ ಆವೃತ್ತಿಯ ಬಳಿಕ ಐಪಿಎಲ್ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. 41 ವರ್ಷ ವಯಸ್ಸಿನ ಮಾಹಿ, ತಮ್ಮ ತಂಡಕ್ಕೆ ಕಪ್ ಗೆದ್ದುಕೊಟ್ಟು ವಿದಾಯ ಹೇಳುವ ಸಾಧ್ಯತೆ ಇದೆ.
2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಸಿಎಸ್‌ಕೆ ತಂಡವನ್ನು ಧೋನಿ ಮುನ್ನಡೆಸಿದ್ದಾರೆ. 2022ರ ಆರಂಭದಲ್ಲಿ ತಮ್ಮ ನಾಯಕತ್ವವನ್ನು ತ್ಯಜಿಸಿದ ಅವರು, ಆ ಜವಾಬ್ದಾರಿಯನ್ನು ರವೀಂದ್ರ ಜಡೇಜಾಗೆ ವರ್ಗಾಯಿಸಿದ್ದರು. ಆದರೆ, ಅದು ಹೆಚ್ಚು ದಿನ ಉಳಿಯಲಿಲ್ಲ. ಸತತ ಸೋಲಿನ ಬಳಿಕ ಮತ್ತೊಮ್ಮೆ ನಾಯಕತ್ವವನ್ನು ಧೋನಿಗೆ ಹಸ್ತಾಂತರಿಸಲಾಯಿತು. ಬಳಿಕ ಪಕ್ಕೆಲುಬಿನ ಗಾಯದಿಂದಾಗಿ ಪಂದ್ಯಾವಳಿಯ ಮಧ್ಯದಲ್ಲೇ ಜಡೇಜಾ ಹೊರಬಿದ್ದರು.
ಕಳೆದ ಬಾರಿಯ ಡಿಸೆಂಬರ್ 2022ರಲ್ಲಿ ನಡೆದ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಟೆಸ್ಟ್ ನಾಯಕ ಮತ್ತು ಪ್ರೀಮಿಯರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ 16.25 ಕೋಟಿ ರೂಪಾಯಿಗೆ ಸಿಎಸ್‌ಕೆ ಸೇರಿಕೊಂಡಿದ್ದಾರೆ. ಸದ್ಯ ಧೋನಿ ಬಳಗವು ಮತ್ತಷ್ಟು ಬಲಿಷ್ಠವಾಗಿದೆ. ಧೋನಿ ನಿವೃತ್ತಿ ಬಳಿಕ ಸ್ಟೋಕ್ಸ್‌ಗೆ ನಾಯಕನ ಪಟ್ಟ ನೀಡುವ ಸಾಧ್ಯತೆ ಇದೆ.