ಬ್ರೈನ್ ಟ್ಯೂಮರ್‌ನ ಆರಂಭಿಕ ರೋಗಲಕ್ಷಣಗಳಿವು; ಈ ಸಂಕೇತಗಳನ್ನು ನಿರ್ಲಕ್ಷ್ಯ ಮಾಡಿದ್ರೆ ಪ್ರಾಣಕ್ಕೆ ಕಂಟಕವಾಗಬಹುದು ಎಚ್ಚರ
ಪ್ರಪಂಚದ ನಾಲ್ಕನೇ ಅತ್ಯಂತ ಅಪಾಯಕಾರಿ ಕಾಯಿಲೆ ಬ್ರೈನ್ ಟ್ಯೂಮರ್. ಬ್ರೈನ್ ಟ್ಯೂಮರ್ ಅಥವಾ ಮೆದುಳು ಗಡ್ಡೆ ಪ್ರಾಣಕ್ಕೆ ಕುತ್ತು ತರಬಹುದು. ಇವು ಎಲ್ಲಾ ಆಕಾರ, ಗಾತ್ರದಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಬ್ರೈನ್ ಟ್ಯೂಮರ್ ಕೆಲವೊಂದು ಆರಂಭಿಕ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆ ರೋಗಲಕ್ಷಣಗಳನ್ನು ನಾವು ಇತರ ಸಮಸ್ಯೆಗಳೆಂದು ನಿರ್ಲಕ್ಷ್ಯ ಮಾಡುವುದೇ ಹೆಚ್ಚು.
ಬ್ರೈನ್ ಟ್ಯೂಮರ್ ಅಥವಾ ಮೆದುಳಿನ ಗಡ್ಡೆ ಪ್ರಾಣಕ್ಕೆ ಕುತ್ತು ತರುತ್ತದೆ. ಯಾಕೆಂದರೆ ಇದರ ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಕಷ್ಟ. ಇದು ಮಾರಣಾಂತಿಕ ಸ್ಥಿತಿಗೆ ತಲುಪುವ ಸಮಸ್ಯೆಯಾದರೂ ಒಂದು ನಿರ್ದಿಷ್ಟ ಹಂತಕ್ಕೆ ತಲುಪುವವರೆಗೂ ಇದರ ರೋಗ ಲಕ್ಷಣಗಳು ಗೋಚರವಾಗುವುದೇ ಇಲ್ಲ. ಒಂದು ವೇಳೆ ಲಕ್ಷಣಗಳು ಗೋಚರಿಸಿದರೂ ಅದನ್ನು ಇತರ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ದೀರ್ಘಕಾಲದ ತಲೆನೋವಿನ ಜೊತೆಗೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುವುದು ಬ್ರೈನ್ ಟ್ಯೂಮರ್‌ನ ಸಾಮಾನ್ಯ ಲಕ್ಷಣವಾಗಿದೆ. ಆದರೆ ಬ್ರೈನ್ ಟ್ಯೂಮರ್ ಅಲ್ಲದೇ ಒತ್ತಡ, ಉದ್ವೇಗ, ನಿರ್ಜಲೀಕರಣದಂತಹ ಸಮಸ್ಯೆಗಳ ಕಾರಣದಿಂದಲೂ ಜನರು ದೀರ್ಘಕಾಲದ ತಲೆನೋವಿನ ಸಮಸ್ಯೆ ಎದುರಿಸಬಹುದು.
ಆದರೆ ಬ್ರೈನ್ ಟ್ಯೂಮರ್ ಸೂಚಿಸುವ ಈ ಆರಂಭಿಕ ಹಂತದ ರೋಗಲಕ್ಷಣಗಳನ್ನು ನಾವು ಎಂದಿಗೂ ನಿರ್ಲಕ್ಷ್ಯ ಮಾಡಬಾರದು, ಇವು ಎಚ್ಚರಿಕೆಯ ಸಂಕೇತಗಳಾಗಿವೆ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಸಲಹೆಗಾರ ಡಾ.ಸಾಥ್ವಿಕ್ ಆರ್.ಶೆಟ್ಟಿ. ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಅವರು ಯಾವೆಲ್ಲಾ ರೋಗಲಕ್ಷಣಗಳನ್ನು ನಾವು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಹೇಳಿದ್ದಾರೆ.
ಬ್ರೈನ್ ಟ್ಯೂಮರ್‌ನ ಆರಂಭಿಕ ರೋಗಲಕ್ಷಣಗಳು
ತಲೆನೋವು
ಡಾ. ಸಾಥ್ವಿಕ್ ಶೆಟ್ಟಿ ಅವರ ಪ್ರಕಾರ ಬ್ರೈನ್ ಟ್ಯೂಮರ್‌ಗೆ ಸಂಬಂಧಿಸಿದ ರೋಗ ಲಕ್ಷಣಗಳಲ್ಲಿ ತಲೆನೋವು ಸಾಮಾನ್ಯವಾಗಿದೆ. ತಲೆನೋವು ತೀವ್ರವಾಗಿರಬಹುದು. ಕೆಲವೊಮ್ಮೆ ಪದೇ ಪದೇ ತಲೆನೋವು ಬರಬಹುದು. ಕೆಲವರಿಗೆ ವಾಂತಿಯೊಂದಿಗೆ ಬೆಳಗಿನ ಹೊತ್ತು ತಲೆನೋವು ಕಾಣಿಸಬಹುದು. ಈ ರೀತಿಯ ತಲೆನೋವು ಬೇರೆ ಕಾರಣದಿಂದಲೂ ಬರಬಹುದು. ಆದರೆ ಇಂತಹ ತಲೆನೋವಿನ ಲಕ್ಷಣಗಳಿದ್ದಾಗ ವೈದ್ಯರ ಬಳಿ ತೋರಿಸುವುದನ್ನು ಮರೆಯಬಾರದು.
ಮೆದುಳಿನಲ್ಲಿ ಸಮಸ್ಯೆ
ಮೆದುಳಿನಲ್ಲಿನ ಉಂಟಾಗುವ ಸಮಸ್ಯೆಗಳು ಬ್ರೈನ್ ಟ್ಯೂಮರ್‌ಗೆ ಕಾರಣವಾಗಬಹುದು. ಅಪಸ್ಮಾರದಂತಹ ಸಮಸ್ಯೆಗಳಿದ್ದಾಗಲೂ ಇಂತಹ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದರೆ ಮೆದುಳಿನ ಗೆಡ್ಡೆ ಮೆದುಳಿನಲ್ಲಿನ ನರಕೋಶಗಳನ್ನು ಕೆರಳಿಸುತ್ತದೆ. ಇದರಿಂದ ಸ್ನಾಯುವಿನ ಸಂಕೋಚನಗಳು, ಸೆಳೆತ, ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ ಮುಂತಾದ ಸಮಸ್ಯೆಗಳು ಎದುರಾಗಬಹುದು. ಈ ಯಾವುದೇ ಲಕ್ಷಣಗಳು ಕಾಣಿಸಿದರೆ ತಡ ಮಾಡದೇ ವೈದ್ಯರ ಬಳಿ ತೋರಿಸಬೇಕು.
ದೃಷ್ಟಿ ದೋಷಗಳು
ಆಪ್ಟಿಕ್ ನರಗಳ ಪರಿಣಾಮ ಬೀರುವುದು ಅಥವಾ ಮೆದುಳಿನ ಯಾವುದೇ ಇತರ ಭಾಗದಲ್ಲಿ ಗಡ್ಡೆ ಉಂಟಾಗುವುದು ದೃಷ್ಟಿದೋಷಕ್ಕೆ ಕಾರಣವಾಗಬಹುದು. ಕೆಲವು ಇತರ ರೋಗಿಗಳು ಡಿಪ್ಲೋಪಿಯಾ ಅಥವಾ ಎರಡೆರಡಾಗಿ ಕಾಣಿಸುವ ದೃಷ್ಟಿದೋಷದ ಸಮಸ್ಯೆಯನ್ನು ಹೊಂದಿರಬಹುದು. ಕೆಲವು ರೋಗಿಗಳಿಗೆ ಬಾಹ್ಯ ದೃಷ್ಟಿಯ ಸಮಸ್ಯೆ ಎದುರಾಗಬಹುದು. ಇದು ವಿಶೇಷವಾಗಿ ಪಿಟ್ಯುಟರಿ ಗೆಡ್ಡೆಗಳಂತಹ ಗೆಡ್ಡೆಗಳೊಂದಿಗೆ ಸಾಮಾನ್ಯವಾಗಿದೆ. ಇದು ಒಂದು ಭಾಗದ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು ಎಂದು ಡಾ. ಸಾಥ್ವಿಕ್ ಶೆಟ್ಟಿ ಹೇಳುತ್ತಾರೆ.
ಯಾವಾಗ ರೋಗಲಕ್ಷಣಗಳನ್ನ ನಿರ್ಲಕ್ಷ್ಯ ಮಾಡಬಾರದು
ಈ ಮೇಲಿನ ಎಲ್ಲಾ ರೋಗ ಲಕ್ಷಣಗಳ ಜೊತೆಗೆ ಕೆಲವರಿಗೆ ಕಿವಿ ಕೇಳಿಸದೇ ಇರುವ ಸಮಸ್ಯೆ ಕೂಡ ಎದುರಾಗಬಹುದು. ವಿಶೇಷವಾಗಿ ಮಕ್ಕಳು, ವಯಸ್ಕರು, ಮಧ್ಯವಯಸ್ಕರಲ್ಲಿ ಇದ್ದಕ್ಕಿದ್ದಂತೆ ಶ್ರವಣದೋಷದ ಸಮಸ್ಯೆಗಳು ಎದುರಾದರೆ ಇದರ ಬಗ್ಗೆ ವೈದ್ಯರಿಂದ ಸಲಹೆ ಪಡೆಯಬೇಕು. ಇನ್ನೂ ಕೆಲವು ರೋಗಿಗಳು ನಡೆಯುವಾಗ ಅಸಮತೋಲನವಿಲ್ಲದೇ ಇರುವುದು, ಚಲನೆಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಚಲನೆಯನ್ನು ನಿಯಂತ್ರಿಸುವ ಅಥವಾ ಸಂಯೋಜಿಸುವ ಮೆದುಳಿನ ಪ್ರದೇಶವಾದ ಸೆರೆಬೆಲ್ಲಮ್‌ನಲ್ಲಿ ಗೆಡ್ಡೆಗಳು ಹುಟ್ಟಿಕೊಂಡಾಗ ಈ ಸಮಸ್ಯೆ ಎದುರಾಗುತ್ತದೆ. ಇದರೊಂದಿಗೆ ಮೆದುಳಿನ ಒಂದು ಭಾಗದಲ್ಲಿ ದೌರ್ಬಲ್ಯ ಅಥವಾ ಮರಗಟ್ಟಿದಂತಹ ಸ್ಥಿತಿ ಎದುರಾಗುವುದು ಕೂಡ ಬ್ರೈನ್ ಟ್ಯೂಮರ್ ಕುರಿತ ಎಚ್ಚರಿಕೆಯ ಸಂಕೇತವಾಗಿದೆ. ಇದು ಮೆದುಳಿನ ಮೋಟಾರು ಅಥವಾ ಸಂವೇದನಾ ಕಾರ್ಟಿಸನ್‌ನಲ್ಲಿ ಗೆಡ್ಡೆ ಉದ್ಭವಿಸಿದಾಗ ಸಂಭವಿಸುತ್ತದೆ. ಇವುಗಳನ್ನು ತಪ್ಪಿಯೂ ನಿರ್ಲಕ್ಷ್ಯ ಮಾಡಬಾರದು.
ಬ್ರೈನ್ ಟ್ಯೂಮರ್ ಕುರಿತಾದ ಸಾಮಾನ್ಯ ತಪ್ಪುಕಲ್ಪನೆಗಳು
ಎಲ್ಲಾ ಮೆದುಳಿನ ಗೆಡ್ಡೆಗಳು ಅರಿವಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತವೆ: ಎಲ್ಲಾ ಬ್ರೈನ್ ಟ್ಯೂಮರ್‌ಗಳು ಅರಿವಿನ ಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ. ಗೆಡ್ಡೆ ಎಲ್ಲಿದೆ ಎಂಬುದನ್ನು ಅವಲಂಬಿಸಿ ಅರಿವಿನ ಮೇಲೆ ಪರಿಣಾಮ ಬೀರಬಹುದು, ಆದರೆ ಮೆದುಳಿನ ನಿರರ್ಗಳವಲ್ಲದ ಪ್ರದೇಶಗಳಲ್ಲಿನ ಗೆಡ್ಡೆಗಳು ಅರಿವಿನ ಕುಸಿತ, ನಡವಳಿಕೆಯ ಬದಲಾವಣೆಗಳು ಅಥವಾ ನೆನಪಿನ ಶಕ್ತಿ ಸಮಸ್ಯೆಗಳನ್ನು ಉಂಟುಮಾಡದೆ ಹಲವು ವರ್ಷಗಳವರೆಗೆ ಯಾವುದೇ ರೋಗಲಕ್ಷಣಗಳ ಗೋಚರಿಸಿದಂತೆ ಇರಬಹುದು.
ಎಲ್ಲಾ ಮೆದುಳಿನ ಗಡ್ಡೆಗಳು ಕ್ಯಾನ್ಸರ್: ಮೆದುಳಿನ ಕಾಣಿಸುವ ಎಲ್ಲಾ ಗಡ್ಡೆಗಳು ಕ್ಯಾನ್ಸರ್ ಆಗಿರುವುದಿಲ್ಲ. ಏಕೆಂದರೆ ಅನೇಕವು ಹಾನಿಕರವಲ್ಲದ ಮತ್ತು ಮಾರಣಾಂತಿಕವಲ್ಲದ್ದು ಇವೆ. ಹಾನಿಕಾರಕವಲ್ಲದ ಗಡ್ಡೆಗಳಿಗೆ ಚಿಕಿತ್ಸೆ ನೀಡಿದಾಗ ರೋಗಿಗಳು ಸಾಮಾನ್ಯರಂತೆ ಜೀವನ ನಡೆಸುತ್ತಾರೆ.
ಬ್ರೈನ್ ಟ್ಯೂಮರ್ ಅನುವಂಶಿಕ ಸಮಸ್ಯೆ: ಮೆದುಳಿನಲ್ಲಿ ಬೆಳೆಯುವ ಈ ಕೆಲವು ಗಡ್ಡೆಗಳು ಅನುವಂಶೀಯವಾಗಿರುತ್ತವೆ. ಹಾಗಂತ ಎಲ್ಲಾ ಗಡ್ಡೆಗಳು ಅನುವಂಶಿಕವಲ್ಲ.
ಬ್ರೈನ್ ಟ್ಯೂಮರ್ ವಯಸ್ಸಾದವರಲ್ಲಿ ಮಾತ್ರ ಕಾಣಿಸುತ್ತದೆ: ಬ್ರೈನ್ ಟ್ಯೂಮರ್ ವಯಸ್ಸಾದವರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಏಕೆಂದರೆ ಮಕ್ಕಳು, ಯುವಜನರು ಮತ್ತು ಮಧ್ಯವಯಸ್ಕ ವಯಸ್ಕರು ಸೇರಿದಂತೆ ಯಾವುದೇ ವಯಸ್ಸಿನಲ್ಲಿ ಇದು ಸಂಭವಿಸಬಹುದು.
ಮೊಬೈಲ್ ಫೋನ್ ಅತಿಯಾದ ಬಳಕೆಯು ಬ್ರೈನ್ ಟ್ಯೂಮರ್‌ಗೆ ಕಾರಣವಾಗುತ್ತದೆ: ಸದ್ಯಕ್ಕೆ, ಸೆಲ್ ಫೋನ್‌ಗಳ ಬಳಕೆಯು ಮೆದುಳಿನ ಗೆಡ್ಡೆಗಳಿಗೆ ಕಾರಣವಾಗಬಹುದು ಎಂದು ಹೇಳಲು ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)