ಕನ್ನಡ ಸುದ್ದಿ  /  Sports  /  Cricket News Sachin Tendulkar Gate Unveiled At Sydney Cricket Ground To Mark 50th Birthday Scg Australia Jra

Sachin Tendulkar Birthday: ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಚಿನ್ ಹೆಸರಿನಲ್ಲಿ ವಿಶೇಷ ಗೇಟ್ ಅನಾವರಣ

“ಭಾರತದಿಂದ ಹೊರಗೆ ಸಿಡ್ನಿ ಕ್ರಿಕೆಟ್ ಮೈದಾನವು ನನ್ನ ನೆಚ್ಚಿನ ಕ್ರೀಡಾಂಗಣವಾಗಿದೆ. 1991-92ರಲ್ಲಿ ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಿನಿಂದ ಈ ಮೈದಾನಲ್ಲಿ ಹಲವು ಮಾಸದ ನೆನಪುಗಳಿವೆ” ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ (AP)

ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ಗೆ ಇಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಅಂಗವಾಗಿ ಆಸ್ಟ್ರೇಲಿಯಾದ ಐತಿಹಾಸಿಕ ಸಿಡ್ನಿ ಕ್ರಿಕೆಟ್ ಮೈದಾನ (Sydney Cricket Ground)ದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಿನ ಗೇಟ್ ಅನ್ನು ಇಂದು (ಸೋಮವಾರ, ಏಪ್ರಿಲ್‌ 24) ಅನಾವರಣಗೊಳಿಸಲಾಗಿದೆ.

ಸೋಮವಾರ ಕ್ರಿಕೆಟ್‌ ದೇವರು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್‌ನಲ್ಲಿ ನೂರು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿರುವ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿರುವ ಲಿಟಲ್‌ ಮಾಸ್ಟರ್‌, ಎಸ್‌ಸಿಜಿ (SCG)ಯಲ್ಲಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಮೂರು ಆಕರ್ಷಕ ಶತಕಗಳು ಸೇರಿದಂತೆ ಒಟ್ಟು 785 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 2004ರಲ್ಲಿ ಸಿಡಿಸಿದ ಅಜೇಯ 241 ರನ್‌, ಆ ಮೈದಾನದಲ್ಲಿ ಸಿಡಿಸಿದ ಅತ್ಯಧಿಕ ರನ್‌. ಹೀಗಾಗಿ ಭಾರತದ ಹೊರಗೆ ಸಚಿನ್‌ ಅವರ ನೆಚ್ಚಿನ ಕ್ರಿಕೆಟ್ ಮೈದಾನ ಎಂದೇ ಎಸ್‌ಸಿಜಿಗೆ ಹೇಳಲಾಗುತ್ತದೆ. ಇಲ್ಲಿ ಸಚಿನ್‌ ಸರಾಸರಿ ಬರೋಬ್ಬರಿ 157 ಎಂಬುದು ವಿಶೇಷ. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾವು ಈ ವಿಶೇಷ ದಿನದಂದು ಅವರಿಗೆ ವಿಶೇಷ ಗೌರವ ನೀಡಿದೆ.

“ಭಾರತದಿಂದ ಹೊರಗೆ ಸಿಡ್ನಿ ಕ್ರಿಕೆಟ್ ಮೈದಾನವು ನನ್ನ ನೆಚ್ಚಿನ ಕ್ರೀಡಾಂಗಣವಾಗಿದೆ. 1991-92ರಲ್ಲಿ ನನ್ನ ಮೊದಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಿನಿಂದ ಈ ಮೈದಾನಲ್ಲಿ ಹಲವು ಮಾಸದ ನೆನಪುಗಳಿವೆ” ಎಂದು ಎಸ್‌ಸಿಜಿ ಹೊರಡಿಸಿದ ಪ್ರಕಟಣೆಯಲ್ಲಿ ತೆಂಡೂಲ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಸಚಿನ್‌ ಅವರೊಂದಿಗೆ ಎಸ್‌ಸಿಜಿ ಮೈದಾನದಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ (Brian Lara) ಅವರ ಹೆಸರಿನಲ್ಲಿ ಮತ್ತೊಂದು ಗೇಟ್ ಅನ್ನು ಅನಾವರಣಗೊಳಿಸಲಾಯಿತು. ಇಲ್ಲಿ ಅವರು ಬರೋಬ್ಬರಿ 277 ರನ್ ಸಿಡಿಸಿದ್ದರು. ಆ ಇನ್ನಿಂಗ್ಸ್‌ಗೆ 30 ವರ್ಷಗಳು ತುಂಬಿದ ನೆನಪಿಗಾಗಿ ಲಾರಾ ಅವರನ್ನು ನೆನಪಿಸಿಕೊಳ್ಳಲಾಗಿದೆ. ಈ ಎರಡೂ ಗೇಟ್‌ಗಳನ್ನು ಎಸ್‌ಸಿಜಿ ಅಧ್ಯಕ್ಷ ರಾಡ್ ಮೆಕ್‌ಜಿಯೊಚ್ ಮತ್ತು ಸಿಇಒ ಕೆರ್ರಿ ಮಾಥರ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಸಿಇಒ ನಿಕ್ ಹಾಕ್ಲೆ ಅನಾವರಣಗೊಳಿಸಿದರು.

ಮೈದಾನಕ್ಕೆ ಭೇಟಿ ನೀಡುವ ಕ್ರಿಕೆಟ್ ಆಟಗಾರರು ಲಾರಾ-ತೆಂಡೂಲ್ಕರ್ ಗೇಟ್‌ಗಳ ಮೂಲಕ ಮೈದಾನಕ್ಕೆ ಇಳಿಯುತ್ತಾರೆ. ಈ ಗೇಟ್‌ ಜೊತೆಗೆ ಲಾರಾ ಮತ್ತು ತೆಂಡೂಲ್ಕರ್ ಅವರ ಸಾಧನೆಗಳು ಮತ್ತು ಎಸ್‌ಸಿಜಿಯಲ್ಲಿ ಅವರ ಅಂಕಿ--ಅಂಶಗಳನ್ನು ವಿವರಿಸುವ ಫಲಕವನ್ನು ಕೂಡಾ ಅಳವಡಿಸಲಾಗಿದೆ.

“ನನ್ನ ಮತ್ತು ನನ್ನ ಉತ್ತಮ ಸ್ನೇಹಿತ ಬ್ರಿಯಾನ್ ಅವರ ಹೆಸರಿನಲ್ಲಿ ಎಸ್‌ಸಿಜಿ ಮೈದಾನಕ್ಕೆ ಭೇಟಿ ನೀಡುವ ಕ್ರಿಕೆಟಿಗರ ಪ್ರವೇಶಕ್ಕೆ ಗೇಟ್‌ಗಳನ್ನು ಸ್ಥಾಪಿಸಿರುವುದು ಒಂದು ದೊಡ್ಡ ಗೌರವವಾಗಿದೆ. ಇದಕ್ಕಾಗಿ ನಾನು SCG ಮತ್ತು ಕ್ರಿಕೆಟ್ ಆಸ್ಟ್ರೇಲಿಯಾಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂತಹ ಒಂದು ಗೌರವ ನೀಡಿರುವುದಕ್ಕಾಗಿ ನಾನು ಶೀಘ್ರದಲ್ಲೇ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ಗೆ ಭೇಟಿ ನೀಡಲು ಕಾಯುತ್ತಿದ್ದೇನೆ,” ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಇದನ್ನೂ ಓದಿ : Sachin Tendulkar 50th birthday: ದಾಖಲೆಗಳ ಮಹಾರಾಜ ಸಚಿನ್​ ತೆಂಡೂಲ್ಕರ್​​ಗೆ 50ನೇ ಜನ್ಮದಿನದ ಸಂಭ್ರಮ; ಸಾಧನೆಗಳ ಕಿರು ಪರಿಚಯ ಇಲ್ಲಿದೆ!

ಬ್ಯಾಟಿಂಗ್​ ದಿಗ್ಗಜ, ಲಿಟಲ್​ ಮಾಸ್ಟರ್​​​​, ಕ್ರಿಕೆಟ್ ಕ್ಷೇತ್ರದಲ್ಲಿ ದೇವರು ಎಂದೇ ಪರಿಗಣಿತವಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು 50ನೇ ಜನ್ಮದಿನದ ಸಂಭ್ರಮ. 1973ರ ಏಪ್ರಿಲ್ 24 ರಂದು ಜನಿಸಿದ ಮಹಾರಾಷ್ಟ್ರದ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದು 16ನೇ ವಯಸ್ಸಿನಲ್ಲಿ. 24 ವರ್ಷಗಳ ಕಾಲ ಕ್ರಿಕೆಟ್​​ ಜಗತನ್ನು ಆಳಿದ ಕಿರೀಟವಿಲ್ಲದ ಮಹಾರಾಜರಾದರು ಸಚಿನ್​​. ಅವರ ಜನ್ಮದಿನಕ್ಕೆ ಹಾಲಿ-ಮಾಜಿ ಕ್ರಿಕೆಟರ್ಸ್​, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಚಿನ್​​ ಅರ್ಧಶತಕದ ಹುಟ್ಟುಹಬ್ಬ ಪ್ರಯುಕ್ತದ ಹಿನ್ನೆಲೆ ಎಂದಿಗೂ ಮುರಿಯದ ಅವರ ಅಮೋಘ ಸಾಧನೆ, ದಾಖಲೆಗಳ ಕಿರು ಪರಿಚಯ ಇಲ್ಲಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ