ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್, ಆರ್ಚರಿಯಲ್ಲಿ ದೀಪಿಕಾ ಕುಮಾರಿಗೆ ಗೆಲುವು; ಮಣಿಕಾ ಬಾತ್ರಾಗೆ ನಿರಾಶೆ
Paris Olympics 2024: ಲೊವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. ಇದೇ ವೇಳೆ ಆರ್ಚರಿಯಲ್ಲಿ ದೀಪಿಕಾ ಕುಮಾರಿ ಗೆಲುವಿನೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐದನೇ ದಿನವಾದ ಬುಧವಾರ ಭಾರತೀಯ ಅಥ್ಲೀಟ್‌ಗಳಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಹಿಳೆಯರ ಬಾಕ್ಸಿಂಗ್ 75 ಕೆಜಿ ವಿಭಾಗದಲ್ಲಿ 16 ಸುತ್ತಿನ ಪಂದ್ಯ ಗೆದ್ದ ಲೊವ್ಲಿನಾ ಬೊರ್ಗೊಹೈನ್, ಎರಡು ಒಲಿಂಪಿಕ್ ಪದಕಗಳನ್ನು ಗೆಲ್ಲುವ ಸನಿಹ ಬಂದಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ ಶ್ರೀಜಾ ಅಕುಲಾ ಗೆದ್ದು ಬೀಗಿದ್ದಾರೆ. ಆ ಮೂಲಕ 16ರ ಸುತ್ತು ತಲುಪಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಸಿಂಗಲ್ಸ್‌ನಲ್ಲಿ 16ರ ಸುತ್ತಿಗೆ ಅರ್ಹತೆ ಪಡೆದರು. ಇದೇ ವೇಳೆ ದೀಪಿಕಾ ಕುಮಾರಿ ಆರ್ಚರಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದಾರೆ.
ಎರಡನೇ ಒಲಿಂಪಿಕ್ಸ್ ಪದಕಕ್ಕೆ ಒಂದೇ ಹೆಜ್ಜೆ ಬಾಕಿ
ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ 16ರ ಸುತ್ತಿನಲ್ಲಿ ಭಾಋತದ ಲೊವ್ಲಿನಾ ಬೊರ್ಗೊಹೈನ್ ಎಸ್ಟೋನಿಯಾದ ಸುನ್ನಿವಾ ಹಾಫ್‌ಸ್ಟಾಡ್ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಟೋಕಿಯೋ ಓಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ, ಇದೀಗ ತಮ್ಮ ಎರಡನೇ ಒಲಿಂಪಿಕ್ ಪದಕ ಗೆಲ್ಲಲು ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ. ಇದು ಸಾಧ್ಯವಾಗಬೇಕಿದ್ದರೆ, ಅವರು ತಮಗಿಂತ ಅಗ್ರ ಶ್ರೇಯಾಂಕದ ಲಿ ಕಿಯಾನ್ ಅವರನ್ನು ಸೋಲಿಸಬೇಕಾಗಿದೆ. ಇವರ ವಿರುದ್ಧ 2023ರ ಏಷ್ಯನ್ ಗೇಮ್ಸ್‌ನ ಫೈನಲ್‌ನಲ್ಲಿ ಲೊವ್ಲಿನಾ ಸೋತಿದ್ದರು. ಆದರೆ, 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಹಾದಿಯಲ್ಲಿ ಕಿಯಾನ್ ಅವರನ್ನು ಲೊವ್ಲಿನಾ ಸೋಲಿಸಿದ್ದರು.
16ರ ಸುತ್ತಿಗೆ ದೀಪಿಕಾ ಕುಮಾರಿ
ಭಾರತದ ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಪ್ಯಾರಿಸ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಟೀಮ್ ಈವೆಂಟ್‌ನಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದ ದೀಪಿಕಾ, 64ರ ಸುತ್ತಿನಲ್ಲಿ ಎಸ್ಟೋನಿಯಾದ ರೀನಾ ಪರ್ನಾಟ್ ಅವರನ್ನು 6-5 ಅಂತರದಿಂದ ಸೋಲಿಸಿದರು. ಆ ಬಳಿಕ ನೆದರ್ಲೆಂಡ್ಸ್‌ನ ಕ್ವಿಂಟಿ ರೋಫೆನ್ ಅವರನ್ನು 6-2 ಅಂತರದಿಂದ ಸೋಲಿಸುವ ಮೂಲಕ 16ರ ಸುತ್ತು ಪ್ರವೇಶಿಸಿದರು. ಶನಿವಾರ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಜರ್ಮನಿಯ ಮಿಚೆಲ್ ಕ್ರೊಪ್ಪೆನ್ ಅವರನ್ನು ಎದುರಿಸಲಿದ್ದಾರೆ. ಅಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್ ಪಂದ್ಯ ಆಡಲಿದ್ದಾರೆ.
ಮಣಿಕಾ ಬಾತ್ರಾಗೆ ನಿರಾಶೆ
ಟೇಬಲ್ ಟೆನಿಸ್ ರೌಂಡ್ ಆಫ್ 16 ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರಾ ಅವರು ಜಪಾನ್‌ನ ಮಿಯು ಹಿರಾನೊ ವಿರುದ್ಧ ಸೋಲು ಕಂಡಿದ್ದಾರೆ. ಸತತ ಎರಡು ಗೇಮ್‌ಗಳಲ್ಲಿ ಸೋತು ಮೂರನೇ ಸೆಟ್‌ನಲ್ಲಿ ಕಂಬ್ಯಾಕ್ ಮಾಡಿದ್ದ ಭಾರತದ ಆಟಗಾರ್ತಿ, ಆ ಬಳಿಕ ಸತತ ಎರಡು ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಎರಡು ದಿನಗಳ ಹಿಂದಷ್ಟೇ ಮಣಿಕಾ ದಾಖಲೆ ನಿರ್ಮಿಸಿದ್ದರು. ಒಲಿಂಪಿಕ್ಸ್‌ನಲ್ಲಿ 16ರ ಸುತ್ತು ಪ್ರವೇಶಿಸಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡಿದ್ದರು.
ಟೇಬಲ್ ಟೆನಿಸ್‌ನಲ್ಲಿ ಭಾರತದ ಯುವತಾರೆ ಶ್ರೀಜಾ ಅಕುಲಾ ದಾಖಲೆಯ ಗೆಲುವು ಸಾಧಿಸಿದ್ದಾರೆ. ಸಿಂಗಾಪುರದ ಜೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸುವ ಮೂಲಕ ಶ್ರೀಜಾ ಅಕುಲಾ 16ರ ಸುತ್ತಿಗೆ ಪ್ರವೇಶಿಸಿದ್ದಾರೆ.
ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್: ಇತಿಹಾಸ ನಿರ್ಮಿಸಿದ ಶ್ರೀಜಾ ಅಕುಲಾ; ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು-ಲಕ್ಷ್ಯ ಸೇನ್ ಗೆಲುವು