ಪ್ಯಾರಿಸ್ ಒಲಿಂಪಿಕ್ಸ್: ಇತಿಹಾಸ ನಿರ್ಮಿಸಿದ ಶ್ರೀಜಾ ಅಕುಲಾ; ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು-ಲಕ್ಷ್ಯ ಸೇನ್ ಗೆಲುವು
Paris Olympics 2024: ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಶ್ರೀಜಾ ಅಕುಲಾ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದೇ ವೇಳೆ ಸ್ಟಾರ್ ಶಟ್ಲರ್‌ಗಳಾದ ಪಿವಿ ಸಿಂಧು ಹಾಗೂ ಲಕ್ಷ್ಯ ಸೇನ್ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ (Paris Olympics 2024) ಐದನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದಾರೆ. 26 ವರ್ಷದ ಶ್ರೀಜಾ ಅಕುಲಾ, ಟೇಬಲ್ ಟೆನ್ನಿಸ್‌ನಲ್ಲಿ 16ರ ಸುತ್ತು ಪ್ರವೇಶಿಸಿ ದಾಖಲೆ ನಿರ್ಮಿಸಿದ್ದಾರೆ. ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಸಾಲೆ ಫೈನಲ್ ಪ್ರವೇಶ ಮಾಡಿದ್ದಾರೆ. ಮತ್ತೊಂದೆಡೆ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಹಾಗೂ ಲಕ್ಷ್ಯ ಸೇನ್ ಗೆಲ್ಲುವ ಮೂಲಕ ಮುಂದಿನ ಹಂತಕ್ಕೆ ಬಡ್ತಿ ಪಡೆದಿದ್ದಾರೆ.
ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ, 50 ಮೀಟರ್ ರೈಫಲ್ ಫೈನಲ್‌ಗೆ ಅರ್ಹತೆ ಪಡೆದರು. 3 ಪೊಸಿಷನ್‌ಗಳಲ್ಲಿ ನಡೆಯುವ 50 ಮೀಟರ್ ರೈಫಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಅವರು, ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಇದೇ ವೇಳೆ ಐಶ್ವರಿ ತೋಮರ್ 11ನೇ ಸ್ಥಾನದೊಂದಿಗೆ ಹೊರಬಿದ್ದಿದ್ದಾರೆ.
50 ಮೀಟರ್ ರೈಫಲ್ ಶೂಟಿಂಗ್‌ಅನ್ನು ಮೂರು ಸ್ಥಾನಗಳಲ್ಲಿ ಇದ್ದು ಗುರಿಯತ್ತ ಶೂಟ್ ಮಾಡಬೇಕಾಗುತ್ತದೆ. ಇದರಲ್ಲಿ ಕುಸಾಲೆ ಅವರು ಮಂಡಿಯೂರಿ 198 (99, 99), ಪ್ರೋನ್ ಅಥವಾ ಮಲಗಿದ ಭಂಗಿಯಲ್ಲಿ 197 (98, 99) ಹಾಗೂ ನಿಂತಿರುವ ಭಂಗಿಯಲ್ಲಿ 195 (98, 97) ಅಂಕ ಕಲೆ ಹಾಕಿದರು. 44 ಶೂಟರ್‌ಗಳ ಪೈಕಿ ಅಗ್ರ ಎಂಟು ಶೂಟರ್‌ಗಳಲ್ಲಿ ಒಬ್ಬರಾಗಿ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಕುಸಾಲೆ ಒಟ್ಟಾರೆ 590 (38x) ಸ್ಕೋರ್ ಗಳಿಸಿದರು.
ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಎಸ್ಟೋನಿಯಾ ಎದುರಾಳಿ ಕ್ರಿಸ್ಟಿನ್ ಕುಬಾ ವಿರುದ್ಧ ಸುಲಭ ಜಯ ಸಾಧಿಸಿದ್ದಾರೆ. ಎಸ್ಟೋನಿಯಾ ಎದುರಾಳಿಯ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಅವರು, 21-5, 21-10ರ ನೇರ ಸೆಟ್‌ಗಳಿಂದ ಗೆದ್ದರು. ಕೇವಲ 32 ನಿಮಿಷಗಳಲ್ಲಿ ಪಂದ್ಯ ಮುಗಿಸಿ, ಪ್ರೀ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರು. ಪ್ರೀ ಕ್ವಾರ್ಟರ್‌ನಲ್ಲಿ ಪಿವಿ ಸಿಂಧು ಮುಂದೆ ಚೀನಾದ ಹೆ ಬಿಂಗ್ ಜಿಯಾವೊ ಅವರನ್ನು ಎದುರಿಸಲಿದ್ದಾರೆ. ಸಿಂಧು ವಿರುದ್ಧ ಚೀನಾ ಆಟಗಾರ್ತಿ 11-9ರ ಮುಖಾಮುಖಿ ದಾಖಲೆ ಹೊಂದಿದ್ದಾರೆ.
ಲಕ್ಷ್ಯ ಸೇನ್ ಗೆಲುವು
ಅತ್ತ ಬ್ಯಾಡ್ಮಿಂಟನ್ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಕೂಡಾ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು 21-18, 21-12 ಅಂತರದಿಂದ ಸೋಲಿಸಿ ಕೊನೆಯ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಪಂದ್ಯದ ಆರಂಭಿಕ ಹಂತದಲ್ಲಿ ಭಾರಿ ಹಿನ್ನಡೆಯಲ್ಲಿದ್ದ ಲಕ್ಷ್ಯ, ಸತತ ಅಂಕಗಳನ್ನು ಗಳಿಸುವ ಮೂಲಕ ಮೇಲುಗೈ ಸಾಧಿಸಿದರು. ಕೊನೆಗೆ ನೇರ ಗೇಮ್‌ಗಳ ಗೆಲುವಿನೊಂದಿಗೆ ಪ್ರಾಬಲ್ಯ ಸಾಧಿಸಿದರು.
ಶ್ರೀಜಾ ಅಕುಲಾ ದಾಖಲೆಯ ಗೆಲುವು
ಟೇಬಲ್ ಟೆನಿಸ್‌ನಲ್ಲಿ ಭಾರತದ ಯುವತಾರೆ ಶ್ರೀಜಾ ಅಕುಲಾ ದಾಖಲೆಯ ಗೆಲುವು ಸಾಧಿಸಿದ್ದಾರೆ. ಸಿಂಗಾಪುರದ ಜೆಂಗ್ ಜಿಯಾನ್ ಅವರನ್ನು 4-2 ಅಂತರದಿಂದ ಸೋಲಿಸುವ ಮೂಲಕ ಶ್ರೀಜಾ ಅಕುಲಾ 16ರ ಸುತ್ತಿಗೆ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ ಮಣಿಕಾ ಬಾತ್ರಾ ಒಲಿಂಪಿಕ್ಸ್‌ನಲ್ಲಿ 16ರ ಸುತ್ತು ತಲುಪಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿಕೊಂಡರು. ಇದೀಗ ಶ್ರೀಜಾ ಅಕುಲಾ ಕೂಡಾ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.