ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ; ಇದು ಕೋಚ್ ಜಸ್ಪಾಲ್ ರಾಣಾ ಮತ್ತು ಮನು ಭಾಕರ್ ಕಥೆ
ಕನ್ನಡ ಸುದ್ದಿ  /  ಕ್ರೀಡೆ  /  ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ; ಇದು ಕೋಚ್ ಜಸ್ಪಾಲ್ ರಾಣಾ ಮತ್ತು ಮನು ಭಾಕರ್ ಕಥೆ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ; ಇದು ಕೋಚ್ ಜಸ್ಪಾಲ್ ರಾಣಾ ಮತ್ತು ಮನು ಭಾಕರ್ ಕಥೆ

Manu Bhaker: 2021ರಲ್ಲಿ ಕೋಚ್​ ಆಗಿದ್ದ ಜಸ್ಪಾಲ್ ರಾಣಾ ಅವರೊಂದಿಗೆ ವಾಗ್ವಾದ ಮಾಡಿಕೊಂಡಿದ್ದ ಮನು ಭಾಕರ್​, ಆ ಬಳಿಕ ನಾಲ್ವರು ಕೋಚ್​​ಗಳನ್ನು ಬದಲಿಸಿದರು. ಇದೀಗ ಅವರನ್ನೇ ನೇಮಿಸಿಕೊಂಡು ಯಶಸ್ಸು ಕಂಡಿದ್ದೇಗೆ? ಇಷ್ಟಕ್ಕೂ ಜಸ್ಪಾಲ್ ರಾಣಾ ಯಾರು? ಇಲ್ಲಿದೆ ವಿವರ.

ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ; ಇದು ಕೋಚ್ ಜಸ್ಪಾಲ್ ರಾಣಾ ಮತ್ತು ಮನು ಭಾಕರ್ ಕಥೆ
ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ; ಇದು ಕೋಚ್ ಜಸ್ಪಾಲ್ ರಾಣಾ ಮತ್ತು ಮನು ಭಾಕರ್ ಕಥೆ

2024ರ ಒಲಂಪಿಕ್ ಸ್ಪರ್ಧೆಯ ಕೇಂದ್ರ ಸ್ಥಳವಾದ ಪ್ಯಾರಿಸ್ ನಗರದಿಂದ ಸುಮಾರು 280 ಕಿಲೋ ಮೀಟರ್ ದೂರದ ಶಾತೋಹು ಶೂಟಿಂಗ್ ರೇಂಜ್​​ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ವಿಯೇಟ್ನಾಮ್ ದೇಶದ ಸ್ಪರ್ಧಿ ಎಲಿಮಿನೇಟ್ ಆಗುತ್ತಿದ್ದಂತೆ ಅದಕ್ಕಾಗೇ ಕಾದುಕುಳಿತಿದ್ದ ಕೋಟ್ಯಾಂತರ ಜನರು ಸಂಭ್ರಮಿಸಿದರು. ಇದು ಭಾರತದ ಮನು ಭಾಕರ್​​ಗೆ ಪದಕ ಖಚಿತ ಪಡಿಸಿತ್ತು. ಜನರ ಸಂಭ್ರಮ ಅದ್ಯಾವ ಮಟ್ಟದಲ್ಲಿತ್ತೋ ಗೊತ್ತಿಲ್ಲ, ಆದರೆ ಅಲ್ಲೇ ಹತ್ತಿರದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ 48 ವರ್ಷದ ವ್ಯಕ್ತಿಯೊಬ್ಬನ ಮುಖದಲ್ಲಿ ಏನೋ ಸಾಧಿಸಿದ ಕಳೆ ಮೂಡಿಬಂದು ಮಾಯವಾಯ್ತು. ಆತ ಹೆಚ್ಚೇನೂ ಸಂಭ್ರಮಿಸಲು ಹೋಗಲಿಲ್ಲ. ಆದರೆ ಆತನ ಸಂಭ್ರಮವನ್ನು ಪ್ರಪಂಚ ಆನಂದಿಸಿತು. ಆತ ಭಾರತದ ಪಾಲಿಗೆ ಹೀರೋ ಎನಿಸಿದ.

ಆತನ ಹೆಸರು ಜಸ್ಪಾಲ್ ರಾಣಾ. ಮನು ಭಾಕರ್ ಅವರ ವೈಯಕ್ತಿಕ ಕೋಚ್. ಸುದ್ದಿ ವಾಹಿನಿಗಳು, ಸಮೂಹ ಮಾಧ್ಯಮಗಳು ಆತನನ್ನು ಮನು ಭಾಕರ್ ಕೋಚ್ ಅಂತಲೇ ಬಿಂಬಿಸಿವೆ. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ವಿಷಯ. ಸುಮಾರು 25-30 ವರ್ಷಕ್ಕೂ ಮೊದಲೇ ಈತ ಭಾರತದ ಪಾಲಿಗೆ ಹೀರೋ ಆಗಿ ಮೆರೆದಾಡಿದ್ದವನು. ತನ್ನ ಕಠೋರ ಪರಿಶ್ರಮಕ್ಕೆ ಹೆಸರಾಗಿದ್ದವನು. ತನ್ನ 18ನೇ ವಯಸ್ಸಿನಲ್ಲೇ ಕ್ರೀಡಾಲೋಕದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ 'ಅರ್ಜುನ ಪ್ರಶಸ್ತಿ' ಗೌರವ ಪಡೆದವನು. 21ನೇ ವಯಸ್ಸಿನಲ್ಲಿ ಭಾರತದ 4ನೇ ಶ್ರೇಷ್ಠ ನಾಗರಿಕ ಗೌರವ 'ಪದ್ಮಶ್ರೀ ಪ್ರಶಸ್ತಿ'ಯನ್ನೂ ಒಲಿಸಿಕೊಂಡವನು. ಮೇಲಾಗಿ ಸುಮಾರು 15 ವರ್ಷ ತಾನು ಸ್ಪರ್ಧಿಸುತ್ತಿದ್ದ ಶೂಟಿಂಗ್​ನ 2 ವಿಭಾಗ (25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್, 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್)ಗಳಲ್ಲೂ ಪಾರಮ್ಯ ಸಾಧಿಸಿದ್ದವನು.

ಸಮರೇಶ್ ಜಂಗ್, ಗಗನ್ ನಾರಂಗ್ ಅಂತಹ ದಿಗ್ಗಜರ ಹೊಳಪಿನ ನಡುವೆಯೂ ಶೂಟಿಂಗ್ ಲೋಕದ ಮಿನುಗುತಾರೆಯಾಗಿ ಹೊಳೆದವನು. ಹೌದು ಇದೇ ಜಸ್ಪಾಲ್ ರಾಣಾ ಕಾಮನ್​ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲೂ ಭಾರತದ ಪಾಲಿಗೆ ರಾಜನಾಗಿ ಮೆರೆದದ್ದು. 3 ಏಷ್ಯನ್ ಗೇಮ್ಸ್, 4 ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿ ಈತ ಗೆದ್ದದ್ದು ಒಟ್ಟು 23 ಪದಕ. ಅದರಲ್ಲಿ 13 ಚಿನ್ನ, 6 ಬೆಳ್ಳಿ, 4 ಕಂಚು. ಒಟ್ಟಾರೆ ಕಾಮನ್​ವೆಲ್ತ್ ಇತಿಹಾಸದಲ್ಲಿ ವೈಯಕ್ತಿಕವಾಗಿ ಹೆಚ್ಚು ಪದಕ ಗೆದ್ದ ಭಾರತದ ಕ್ರೀಡಾಪಟು, ಏಷ್ಯನ್​ ಗೇಮ್ಸ್​ನಲ್ಲಿ ಅತೀ ಹೆಚ್ಚು ಪದಕ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹಿರಿಮೆ ಜಸ್ಪಾಲಿನದ್ದು.

2002ರ ಕಾಮನ್​ವೆಲ್ತ್ ಕ್ರೀಡೆಯಲ್ಲಿ 4 ಚಿನ್ನ, 1 ಬೆಳ್ಳಿ, 1 ಕಂಚು ಜಯಿಸಿದ್ದು, ವಿಪರೀತ ಜ್ವರದ ನಡುವೆಯೂ 2006ರ ಏಷ್ಯನ್ ಗೇಮ್ಸ್​​ನಲ್ಲಿ 3 ಚಿನ್ನ, 1 ಬೆಳ್ಳಿ ಗೆದ್ದದ್ದು (ಒಂದು ವಿಶ್ವ ದಾಖಲೆಯ ಜೊತೆಗೆ) ಅವಿಸ್ಮರಣೀಯ ಹಾಗೂ ಆದರ್ಶದಾಯಕ. ಈತ ಭಾಗವಹಿಸುವ ವಿಭಾಗಗಳು ಒಲಂಪಿಕ್ ಕ್ರೀಡೆಯಲ್ಲಿ ಒಂದು ವೇಳೆ ಇದ್ದಿದ್ದರೆ ಭಾರತಕ್ಕೆ ಬರಬಹುದಾಗಿದ್ದ ಪದಕಗಳ ಸಂಖ್ಯೆ ನೀವೇ ಊಹಿಸಿ! ಇದೇ ಜಸ್ಪಾಲ್ 2021ರ ಒಲಂಪಿಕ್ಸ್​ ಸಮಯದಲ್ಲೂ ಮನು ಭಾಕರ್ ಕೋಚ್ ಆಗಿದ್ದಿದ್ದು. ಒಲಂಪಿಕ್ ವೈಫಲ್ಯದ ನಂತರ ಮನು ಮತ್ತು ಜಸ್ಪಾಲ್ ನಡುವೆ ಬಹಳಷ್ಟು ವಾಗ್ವಾದಗಳು ಆದವು. ಈಗೋ ಪ್ರಶ್ನೆಯೂ ಉದ್ಭವವಾಯ್ತು. ತದನಂತರ ಭಾಕರ್ ನಾಲ್ವರು 4 ಕೋಚ್​​ಗಳನ್ನು ಬದಲಿಸಿದರು. ಆದರೆ ಆಕೆಯ ಆಟದ ಗುಣಮಟ್ಟ ಕಡಿಮೆಯಾಗುತ್ತಲೇ ಹೋಯ್ತು.

ಒಲಂಪಿಕ್​​ಗೆ ಇನ್ನು 7 ತಿಂಗಳು ಇದೆ ಎನ್ನುವಾಗ ಮನು ಭಾಕರ್ ತಗೆದುಕೊಂಡ ನಿರ್ಧಾರ ಟರ್ನಿಂಗ್ ಪಾಯಿಂಟ್. ಮತ್ತದೇ ಜಸ್ಪಾಲ್ ರಾಣಾರನ್ನೇ ಕೋಚ್ ಆಗಿಸಿಕೊಳ್ಳುವುದು. ಈಗಿನ ಟ್ರೈನಿಂಗ್ ಸುಲಭದ್ದೇನೂ ಇರಲಿಲ್ಲ. ಪ್ರತಿನಿತ್ಯ ಜಸ್ಪಾನ್​​ನಿಂದ ಮನುಗೆ ಒಂದು ನಿರ್ದಿಷ್ಟ ಗುರಿ ಇರುತ್ತಿತ್ತು. ಆಕೆ ಎಷ್ಟು ಅಂಕದಿಂದ ಮಿಸ್ ಆಗುತ್ತಾಳೋ ಅದಕ್ಕೆ ತಕ್ಕದಾಗಿ ಫೈನ್ ಕಟ್ಟಬೇಕಿತ್ತು. ಉದಾಹರಣೆಗೆ ಜಸ್ಪಾಲ್ 580ರ ಟಾರ್ಗೆಟ್ ನೀಡಿ ಮನು ಕೇವಲ 576 ರೀಚ್ ಆದರೆ ಉಳಿದ 4 ಪಾಯಿಂಟುಗಳಿಗೆ ಫೈನ್ ಕಟ್ಟಬೇಕಿತ್ತು. ಅದು ಕೆಲವೊಮ್ಮೆ 40 ಯುರೋ ಆದರೆ ಇನ್ನೂ ಕೆಲವೊಮ್ಮೆ 400 ಯುರೋ ಆಗುತಿತ್ತು. ಆ ಫೈನ್​ನ ಮೊತ್ತ ಅಗತ್ಯವಿರುವ ಬಡವರ ಪಾಲಾಗುತಿತ್ತು.

ಹೀಗೆಯೇ ನಿರಂತರ ಪರಿಶ್ರಮ, ಗುರು ದ್ರೋಣಾಚಾರ್ಯನಂತಹ ಗುರುವಿನ ಬಲವೇ ಇಂದು ಮನು ಭಾಕರ್​ ಸಾಧನೆಗೆ ಕಾರಣವಾಗಿ ಮನುವನ್ನು ಭಾರತದ ಮಗಳನ್ನಾಗಿಸಿದೆ. ಫೈನಲ್ ಹಾಲ್​ಗೆ ಪ್ರವೇಶಿಸಿದ ನಂತರ ಮನು ಮೊದಲು ನೋಡಿದ್ದೇ ತನ್ನ ಕೋಚ್ ಎಲ್ಲಿ ಎಂದು. ಆಕೆಯ ಎಡಭಾಗದ 3ನೇ ಸಾಲಿನಲ್ಲಿ ಕುಳಿತಿದ್ದ ಜಸ್ಪಾಲ್ ರಾಣಾನ ಕಡೆಗೆ ಪ್ರತಿ ಮುಖ್ಯ ಘಟ್ಟದಲ್ಲಿ ನೋಡುತ್ತಲೇ ಇದ್ದಳು ಮನು. ಫೈನಲ್ ನಂತರ ಸಂದರ್ಶನದಲ್ಲಿ ಮನು ಭಾಕರ್, ಜಸ್ಪಾಲ್ ರಾಣಾರ ಒಂದು ನೋಟದಿಂದ ನನಗೆ ಅಪಾರ ಧೈರ್ಯ ಬಂತು ಎಂದರೆ, ಜಸ್ಪಾಲ್ ಹೇಳಿದ್ದು ನಮಗೆ ಮಾತನಾಡಲು ಪದಗಳು ಬೇಕಿರಲಿಲ್ಲ. ಕಣ್ಣಿನ ನೋಟವೇ ಸಾಕಿತ್ತು ಎಂದು. ವಾವ್... ಎಂತಹ ಅದ್ಭುತ ಗುರು ಶಿಷ್ಯೆಯರ ಜೋಡಿ. ಪುರಂದರ ದಾಸರೇ ಹೇಳಿಲ್ಲವೇ, ‘ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ’ ಎಂದು.

ಫೇಸ್​​ಬುಕ್​ ಪೋಸ್ಟ್​

 

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.