SAFF Championship: ಭಾರತದ ಎದುರು ಸೋಲಿಗೆ ವೀಸಾ ತಡವಾಗಿದ್ದೇ ಕಾರಣ; ಪಾಕಿಸ್ತಾನ ಫುಟ್ಬಾಲ್ ಕೋಚ್ ತೋರ್ಬೆನ್ ವಿಟಜೆವಸ್ಕಿ ಹೇಳಿಕೆ
SAFF Championship: ಜೂನ್ 21ರಂದು ನಡೆದ ಸ್ಯಾಪ್ ಚಾಂಪಿಯನ್ಶಿಪ್ ಟೂರ್ನಿಯ ಉದ್ಘಾಟನಾ ದಿನದ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಫುಟ್ಬಾಲ್ ತಂಡದ ವಿರುದ್ಧ ಭಾರತ ಫುಟ್ಬಾಲ್ ತಂಡವು ಭರ್ಜರಿ ಜಯ ಸಾಧಿಸಿದೆ. ಆದರೆ ತಮ್ಮ ತಂಡದ ಸೋಲಿಗೆ ವೀಸಾ ಕಾರಣ ಎಂದು ಪಾಕಿಸ್ತಾನ ತಂಡದ ಕೋಚ್ ತೋರ್ಬೆನ್ ವಿಟಜೆವಸ್ಕಿ ಹೇಳಿದ್ದಾರೆ.
ಸ್ಯಾಪ್ ಫುಟ್ಬಾಲ್ ಚಾಂಪಿಯನ್ಶಿಪ್ನ (SAFF Championship) ಮೊದಲ ಪಂದ್ಯದಲ್ಲಿ ಭಾರತ ತಂಡದ (Team India) ಎದುರು ಸೋಲಿಗೆ, ವೀಸಾ ಸಮಸ್ಯೆ ಕಾರಣ ಎಂದು ಪಾಕಿಸ್ತಾನ ಫುಟ್ಬಾಲ್ ತಂಡದ ಕೋಚ್ ತೋರ್ಬೆನ್ ವಿಟಜೆವಸ್ಕಿ (Pakistan coach Torben Witajewski) ಕುಂಟು ನೆಪ ಹೇಳಿದ್ದಾರೆ. ಪಂದ್ಯ ಮುಗಿದು ಎರಡು ದಿನಗಳ ಬಳಿಕ ಈ ಬಗ್ಗೆ ಮಾತನಾಡಿರುವ ತೋರ್ಬೆನ್ ವಿಟಜೆವಸ್ಕಿ, ನಮಗೆ ಭಾರತದ ಸಮಸ್ಯೆ ಕಾಡಿದ್ದರ ಹಿನ್ನೆಲೆಯಲ್ಲಿ ಪಂದ್ಯವನ್ನು ಕಳೆದುಕೊಂಡೆವು ಎಂದು ಹೇಳಿದ್ದಾರೆ.
ಜೂನ್ 21 ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (Kanteerava Stadium) ನಡೆದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಸುನಿಲ್ ಛೆಟ್ರಿ ನಾಯಕತ್ವದ ಭಾರತ ತಂಡವು ಪಾಕಿಸ್ತಾನವನ್ನು 4-0 ಅಂತರದ ಗೋಲುಗಳಿಂದ ಸೋಲಿಸಿತು. ಸುನಿಲ್ ಛೆಟ್ರಿ ಹ್ಯಾಟ್ರಿಕ್ (Sunil Chhetri) ಗೋಲು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರಹಿಸಿದರು. ಆ ಮೂಲಕ ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು. ಮಳೆಯ ನಡುವೆಯೂ ಆರ್ಭಟಿಸಿದ ಭಾರತೀಯ ಆಟಗಾರರು 90 ನಿಮಿಷಗಳ ಆಟದಲ್ಲಿ ಸಂಪೂರ್ಣ ಪಾರಮ್ಯ ಮೆರೆಯುವಲ್ಲಿ ಯಶಸ್ವಿಯಾದರು. ಸ್ಯಾಪ್ ಚಾಂಪಿಯನ್ಶಿಪ್ನಲ್ಲಿ ಆಡಲು ಭಾರತಕ್ಕೆ ಬರಲು ವೀಸಾ ಸಮಸ್ಯೆ ಎದುರಾಗಿತ್ತು.
ಭಾರತಕ್ಕೆ ಬರಲು ಸಾಕಷ್ಟು ಕಷ್ಟವಾಯಿತು
ಭಾರತದ ಪ್ರವಾಸಕ್ಕೆ ನಮಗೆ ಸಾಕಷ್ಟು ಕಷ್ಟವನ್ನು ಎದುರಿಸಿದೆವು. ನಮಗೆ ತಡವಾಗಿ ವೀಸಾ ಲಭ್ಯವಾಯಿತು. ಮುಂಬೈ ವಿಮಾನ ನಿಲ್ದಾಣದಲ್ಲೂ ಇಮಿಗ್ರೇಷನ್ ವಿಷಯಕ್ಕೆ ಸಂಬಂಧಿಸಿ ಸಮಸ್ಯೆ ಉಂಟಾಯಿತು. ತಂಡದ ಆಟಗಾರರು ನಿದ್ದೆ ಇಲ್ಲದೆ ತುಂಬಾ ಕಷ್ಟ ಪಟ್ಟರು. ಸುಮಾರು 16 ಗಂಟೆಗಳ ಕಾಲ ಪ್ರಯಾಣ ಬೆಳೆಸಿತು. ಅಷ್ಟರಲ್ಲಾಗಲೇ ಸಮಯ ಕಳೆದುಹೋಗಿತ್ತು. ಪಂದ್ಯಕ್ಕೆ ಕೇವಲ 6 ಗಂಟೆಗಳ ಕಾಲ ಸಮಯ ಇದ್ದಾಗ ಹೋಟೆಲ್ಗೆ ಬಂದೆವು ಎಂದು ಘಟನೆಯನ್ನು ಕೋಚ್ ವಿವರಿಸಿದ್ದಾರೆ.
ವಿಶ್ರಾಂತಿ ಇರಲಿಲ್ಲ
ಸರಿಯಾಗಿ ನಿದ್ದೆ, ವಿಶ್ರಾಂತಿ ಇಲ್ಲದೆ, ಆಡುವುದು ಅಷ್ಟು ಸುಲಭವಲ್ಲದ ಮಾತು. ಅಲ್ಲದೆ, ಬರುತ್ತಿದ್ದರೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಕೆಲವೇ ಗಂಟೆಗಳಲ್ಲಿ ಇದೆಲ್ಲವೂ ಅಸಾಧ್ಯ ಎಂದು ತೋರ್ಬೆನ್ ವಿಟಜೆವಸ್ಕಿ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಬಂದಾಗ ನಮಗೆ ಸಮಸ್ಯೆ ಎದುರಾಗಲಿಲ್ಲ. ಮಾರಿಷಸ್ನಲ್ಲೂ ತುಂಬಾ ತೊಂದರೆ ಅನುಭವಿಸಿದೆವು ಎಂದು ಹೇಳಿದ್ದಾರೆ.
ಸಿದ್ಧತೆಗೂ ಸಮಯ ಸಿಗಲಿಲ್ಲ
ಒಂದು ವೇಳೆ ನೇರವಾಗಿ ಭಾರತಕ್ಕೇ ಪ್ರಯಾಣಿಸಿದ್ದರೆ, ನಮಗೂ ಸಾಕಷ್ಟು ಸಮಯ ಸಿಗುತ್ತಿತ್ತು. ವಿಶ್ರಾಂತಿ ಪಡೆಯುತ್ತಿದ್ದೆವು. ಉತ್ತಮ ಅಭ್ಯಾಸದೊಂದಿಗೆ ಕಣಕ್ಕಿಳಿಯುತ್ತಿದ್ದೆವು. ಇದರೊಂದಿಗೆ ನಾವು ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದೆವು. ಆದರೆ, ರಾತ್ರಿಯಿಡೀ ಪ್ರಯಾಣಿಸಿದ ಮತ್ತು ಮಾರಿಷಸ್ನಲ್ಲಿದ್ದ ಕಾರಣಕ್ಕಾಗಿ ಸಿದ್ಧತೆಗೆ ಯಾವುದೇ ಅವಕಾಶ ಸಿಗಲಿಲ್ಲ. ರಾತ್ರಿ ಪೂರ್ತಿ ಪ್ರಯಾಣಿಸಿದ ಆಟಗಾರರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ
ಆಟಗಾರರು, ಕೋಚ್, ಸಿಬ್ಬಂದಿ ಸೇರಿ ಒಟ್ಟು 32 ಸದಸ್ಯರು ಪಾಕಿಸ್ತಾನ ತಂಡದಲ್ಲಿದ್ದರು. ಆದರೆ ಒಂದೇ ವಿಮಾನದಲ್ಲಿ ಎಲ್ಲರಿಗೂ ಟಿಕೆಟ್ಗಳು ಲಭ್ಯವಿಲ್ಲದ ಕಾರಣ, ಎರಡು ಬ್ಯಾಚ್ಗಳಾಗಿ ಮಾರಿಷಸ್ನಿಂದ ಬೆಂಗಳೂರಿಗೆ ಬರಬೇಕಾಯಿತು. ಜೂನ್ 21ರಂದು ಬುಧವಾರ ಒಂದು ಬ್ಯಾಚ್ ಬೆಳಗ್ಗೆ 4 ಗಂಟೆಗೆ ಬೆಂಗಳೂರಿಗೆ ಹಾರಿದರೆ, ಮತ್ತೊಂದು ಬ್ಯಾಚ್ ಬೆಳಿಗ್ಗೆ 9.15ಕ್ಕೆ ಪ್ರಯಾಣ ಬೆಳೆಸಿತು. ಈ ಬ್ಯಾಚ್ ಬೆಂಗಳೂರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ 1 ಗಂಟೆಯಾಗಿತ್ತು. ಪಂದ್ಯ ಆರಂಭಕ್ಕೂ 6 ಗಂಟೆಗಳ ಮುಂಚೆ ಬೆಂಗಳೂರು ತಲುಪಿದರು.
ವಿಭಾಗ