ಐದನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ; ಚೀನಾದ ಚೊಚ್ಚಲ ಪ್ರಶಸ್ತಿ ಕನಸು ಭಗ್ನ, ಪಾಕಿಸ್ತಾನಕ್ಕೆ 3ನೇ ಸ್ಥಾನ
2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆತಿಥೇಯ ಚೀನಾ ತಂಡವನ್ನು 1-0 ಅಂತರದಿಂದ ಸೋಲಿಸಿದ ಭಾರತ ತಂಡ ಸತತ 2ನೇ ಹಾಗೂ ದಾಖಲೆಯ 5ನೇ ಟ್ರೋಫಿ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.
ಆತಿಥೇಯ ಚೀನಾ ತಂಡವನ್ನು ಫೈನಲ್ನಲ್ಲಿ 1-0 ಅಂತರದಿಂದ ಮಣಿಸಿದ ಭಾರತ ತಂಡ 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಸೆಪ್ಟೆಂಬರ್ 17ರ ಮಂಗಳವಾರ ಚೀನಾದ ಹುಲುನ್ಬುಯರ್ನ ಮೊಕಿ ತರಬೇತಿ ನೆಲೆಯಲ್ಲಿ ಜರುಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಚೀನಿಯರನ್ನು ಬಗ್ಗುಬಡಿದ ಭಾರತ, ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ ದಾಖಲೆಯ ಐದನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ, ಮತ್ತೊಂದು ಮಹೋನ್ನತ ಸಾಧನೆ ಮಾಡಿದೆ.
ಮೊದಲ 3 ಕ್ವಾರ್ಟರ್‌ಗಳಲ್ಲಿ ಭಾರತ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆದರೆ, ಎದುರಾಳಿ ಚೀನಾದ ಗೋಲ್ಕೀಪರ್ ವಾಂಗ್ ಅದ್ಭುತ ಪ್ರದರ್ಶನ ನೀಡಿದರು. ಪೆನಾಲ್ಟಿ ಕಾರ್ನರ್ ಸೇರಿದಂತೆ ಕೆಲವು ಅದ್ಭುತ ಶಾಟ್ಗಳನ್ನು ಸೇವ್ ಮಾಡಿ ಗೋಲು ನೀಡದಂತೆ ತಡೆದರು. ಇತ್ತ ಚೀನಾ ಕೂಡ ಈ ಅವಧಿಯಲ್ಲಿ ಗೋಲು ಗಳಿಸಲು ಸಾಧ್ಯವಾಗಿಲ್ಲ. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಭಾರತೀಯರು ಅದ್ಭುತ ಕಂಬ್ಯಾಕ್ ಮಾಡಿದರು. ಗೋಲು ಸಿಡಿಸಿ ಗೆಲುವನ್ನು ಖಚಿತಪಡಿಸಿಕೊಂಡರು.
ಅಂತಿಮ ಕ್ವಾರ್ಟರ್‌ನಲ್ಲಿ ಭರ್ಜರಿ ಪ್ರದರ್ಶನ
ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ತಳ್ಳಿದ ಚೆಂಡನ್ನು ಮತ್ತೊಬ್ಬ ಡಿಫೆಂಡರ್ ಜುಗ್‌ರಾಜ್, ಚೀನಾದ ಗೋಲ್ ಕೀಪರ್ನನ್ನು ಯಾಮಾರಿಸಿ ಸ್ಟ್ರೈಕ್ ಹೊಡೆದರು. ಆ ಮೂಲಕ ಗೋಲಿನ ಖಾತೆ ತೆರೆದರು. ಗೋಲು ತಡೆಗೆ ಚೀನಿಯರ ಆಟಗಾರರೆಲ್ಲರೂ ಯತ್ನಿಸಿದರು. ಆದರೆ, ಅದೃಷ್ಟ ಭಾರತದ ಪರವಾಗಿತ್ತು. ಭಾರತೀಯರ ಸಕಾರಾತ್ಮಕ ಆಟಕ್ಕೆ ಪ್ರತಿಫಲ ಸಿಕ್ಕಿತು. ಜುಗ್ರಾಜ್ ಗೋಲು ಗಳಿಸುತ್ತಿದ್ದಂತೆ, ಭಾರತೀಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಮತ್ತೊಂದೆಡೆ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದ್ದ ಚೀನಾ ರನ್ನರ್ಅಪ್ ಆಯಿತು.
ಚೀನಾ ಮೊದಲ ಬಾರಿಗೆ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪಿತ್ತು. ಈ ಹಿಂದೆ ಚೀನಾ2012 ಮತ್ತು 2013 ರಲ್ಲಿ 4ನೇ ಸ್ಥಾನ ಪಡೆದಿದ್ದೇ ಉತ್ತಮ ಸಾಧನೆಯಾಗಿತ್ತು. ಭಾರತಕ್ಕೆ, ಇದು ಐದನೇ ಪ್ರಶಸ್ತಿಯಾಗಿದೆ. ಈ ಹಿಂದೆ 2011, 2016, 2018 (ಪಾಕಿಸ್ತಾನದೊಂದಿಗೆ ಜಂಟಿ ವಿಜೇತರು) ಮತ್ತು 2023ರಲ್ಲಿ ನಾಲ್ಕು ಬಾರಿ ಗೆದ್ದಿದೆ. ಪ್ರಸಕ್ತ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೇ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಟೂರ್ನಿಯ ಅತ್ಯಂತ ಯಶಸ್ವಿ ತಂಡ ಭಾರತವಾದರೆ, 2ನೇ ಅತ್ಯುತ್ತಮ ತಂಡ ಪಾಕಿಸ್ತಾನವಾಗಿದೆ. ಅದು ಮೂರು ಪ್ರಶಸ್ತಿ ಗೆದ್ದಿದೆ.
ಪಾಕಿಸ್ತಾನಕ್ಕೆ ಕಂಚು
ಏತನ್ಮಧ್ಯೆ, ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿದ ಪಾಕಿಸ್ತಾನವು ಈ ಆವೃತ್ತಿಯ ಪಂದ್ಯಾವಳಿಯಲ್ಲಿ 3ನೇ ಸ್ಥಾನ ಪಡೆದಿದೆ. ಒಂದು ಹಂತದಲ್ಲಿ 0-1 ರಿಂದ ಹಿನ್ನಡೆಯಲ್ಲಿದ್ದ ಪಾಕಿಸ್ತಾನ, ಅಂತಿಮವಾಗಿ ಪಂದ್ಯವನ್ನು 5-2 ಅಂತರದಿಂದ ವಶಪಡಿಸಿಕೊಂಡು ಗೆಲುವನ್ನು ದಾಖಲಿಸಿತು. ಪಾಕಿಸ್ತಾನ ತಂಡವು ಲೀಗ್ನಲ್ಲಿ ಆಡಿದ 5ರಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿತ್ತು. ಆದರೆ ಭಾರತದ ವಿರುದ್ಧ ಮಾತ್ರ ಸೋತಿತ್ತು. ಬಳಿಕ ಸೆಮಿಫೈನಲ್ನಲ್ಲಿ ಚೀನಾ ಎದುರು ಪರಾಭವಗೊಂಡು ಫೈನಲ್ಗೇರಲು ವಿಫಲವಾಗಿತ್ತು.
ವರ್ಷ | ವಿಜೇತ | ಸ್ಕೋರ್ | ರನ್ನರ್ ಅಪ್ | 3ನೇ ಸ್ಥಾನ | 4ನೇ ಸ್ಥಾನ |
---|---|---|---|---|---|
2011 | ಭಾರತ | 0–0 (4–2 SO) | ಪಾಕಿಸ್ತಾನ | ಮಲೇಷ್ಯಾ | ಜಪಾನ್ |
2012 | ಪಾಕಿಸ್ತಾನ | 5–4 | ಭಾರತ | ಮಲೇಷ್ಯಾ | ಚೀನಾ |
2013 | ಪಾಕಿಸ್ತಾನ | 3–1 | ಜಪಾನ್ | ಮಲೇಷ್ಯಾ | ಚೀನಾ |
2016 | ಭಾರತ | 3-2 | ಪಾಕಿಸ್ತಾನ | ಮಲೇಷ್ಯಾ | ಚೀನಾ |
2018 | ಭಾರತ ಮತ್ತು ಪಾಕಿಸ್ತಾನ | 1–1 (ಜಂಟಿ) | – | ಮಲೇಷ್ಯಾ | ದಕ್ಷಿಣ ಕೊರಿಯಾ |
2021 | ದಕ್ಷಿಣ ಕೊರಿಯಾ | 3–3 (4–2 SO) | ಜಪಾನ್ | ಭಾರತ | ಪಾಕಿಸ್ತಾನ |
2023 | ಭಾರತ | 4–3 | ಮಲೇಷ್ಯಾ | ಜಪಾನ್ | ದಕ್ಷಿಣ ಕೊರಿಯಾ |
2024 | ಭಾರತ | 1–0 | ಚೀನಾ | ಪಾಕಿಸ್ತಾನ | ದಕ್ಷಿಣ ಕೊರಿಯಾ |