ಒಬ್ಬರಿಗೊಬ್ಬರು ಪ್ರಾಣಕೊಡಲು ಸಿದ್ಧ; ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ತಂಡದ ಒಡನಾಟ ಹಾಡಿಹೊಗಳಿದ ನಾಯಕ ಹರ್ಮನ್‌ಪ್ರೀತ್
ಕನ್ನಡ ಸುದ್ದಿ  /  ಕ್ರೀಡೆ  /  ಒಬ್ಬರಿಗೊಬ್ಬರು ಪ್ರಾಣಕೊಡಲು ಸಿದ್ಧ; ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ತಂಡದ ಒಡನಾಟ ಹಾಡಿಹೊಗಳಿದ ನಾಯಕ ಹರ್ಮನ್‌ಪ್ರೀತ್

ಒಬ್ಬರಿಗೊಬ್ಬರು ಪ್ರಾಣಕೊಡಲು ಸಿದ್ಧ; ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ತಂಡದ ಒಡನಾಟ ಹಾಡಿಹೊಗಳಿದ ನಾಯಕ ಹರ್ಮನ್‌ಪ್ರೀತ್

Harmanpreet Singh: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತ ಹಾಕಿ ತಂಡದ ಆಟಗಾರರ ಒಡನಾಟವನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್‌ ಹಾಡಿಹೊಗಳಿದ್ದಾರೆ. ಆಟಗಾರರು ಒಬ್ಬರಿಗೊಬ್ಬರು ಪ್ರಾಣಕೊಡಲು ಸಿದ್ಧರಿದ್ದೇವೆ. ನಮ್ಮಲ್ಲಿ ಅಂತಹ ಬಾಂಡಿಂಗ್‌ ಬೆಳೆದಿದೆ ಎಂದಿದ್ದಾರೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ತಂಡದ ಒಡನಾಟ ಹಾಡಿಹೊಗಳಿದ ನಾಯಕ ಹರ್ಮನ್‌ಪ್ರೀತ್
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ತಂಡದ ಒಡನಾಟ ಹಾಡಿಹೊಗಳಿದ ನಾಯಕ ಹರ್ಮನ್‌ಪ್ರೀತ್ (AP)

ಭಾರತ ಹಾಕಿ ತಂಡವು ಒಲಿಂಪಿಕ್ಸ್‌ ಕಂಚಿನ ಪದಕ ಗೆದ್ದ ಬೆನ್ನಲ್ಲೇ 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ. ಫೈನಲ್‌ ಪಂದ್ಯದಲ್ಲಿ ಚೀನಾವನ್ನು 1-0 ಅಂತರದಿಂದ ಮಣಿಸಿದ ಭಾರತ, ಸತತ ಎರಡನೇ ಆವೃತ್ತಿಯ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ವಶಪಡಿಸಿಕೊಂಡಿತು. ಆ ಮೂಲಕ ದಾಖಲೆಯ ಐದನೇ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿತು. ಗೆಲುವಿನ ಬಳಿಕ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ತಂಡದ ಆಟಗಾರರನ್ನು ಕೊಂಡಾಡಿದ್ದಾರೆ. ಅಲ್ಲದೆ, ತಂಡವು ಇತ್ತೀಚೆಗೆ ಮೇಲಿಂದ ಮೇಲೆ ಯಶಸ್ಸು ಸಾಧಿಸುತ್ತಿರುವುದಕ್ಕೆ ಆಟಗಾರರ ನಡುವಿನ ಒಡನಾಟ ಹಾಗೂ ಸಾಂಘಿಕ ಹೋರಾಟವೇ ಕಾರಣ ಎಂದಿದ್ದಾರೆ.

ತಂಡದ ಇತ್ತೀಚಿನ ಯಶಸ್ಸಿನ ಗೌರವ ಆಟಗಾರರ ನಡುವಿನ ಒಡನಾಟಕ್ಕೆ ಸಲ್ಲುತ್ತದೆ. ಎಲ್ಲಾ ಆಟಗಾರರ ನಡುವೆ ಆಳವಾದ ಬಂಧವಿದೆ. ಒಬ್ಬರು ಇನ್ನೊಬ್ಬರಿಗಾಗಿ ಪ್ರಾಣ ಕೊಡಲು ಸಿದ್ಧರಿದ್ದಾರೆ ಎಂದು ನಾಯಕ ಹೇಳಿದ್ದಾರೆ. ಆ ಆತ್ಮೀಯತೆಯೇ ಚೀನಾವನ್ನು ಸೋಲಿಸುವ ಮೂಲಕ ಐದನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಗೆಲ್ಲಲು ಸಹಾಯ ಮಾಡಿದೆ ಎಂದು ಒತ್ತಿ ಹೇಳಿದ್ದಾರೆ.

ಮಂಗಳವಾರ ಚೀನಾದ ಹುಲುನ್‌ಬುಯರ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತವು 1-0 ಗೋಲುಗಳಿಂದ ಚೀನಾವನ್ನು ಬಗ್ಗುಬಡಿಯಿತು. ಕೊನೆಯ ಹಂತದಲ್ಲಿ ಜುಗರಾಜ್ ಸಿಂಗ್ ಅವರ ಗೋಲು ತಂಡಕ್ಕೆ ಚಾಂಪಿಯನ್‌ ಪಟ್ಟ ಕೊಟ್ಟಿತು. ಈ ಕುರಿತು ಮಾತನಾಡಿದ ನಾಯಕ, “ಫೈನಲ್ ಪಂದ್ಯದಲ್ಲಿ ನಿಜವಾಗಿಯೂ ತೀವ್ರ ಪೈಪೋಟಿ ಇತ್ತು. ಚೀನಿಯರು ಆಟದ ಉದ್ದಕ್ಕೂ ನಮ್ಮನ್ನು ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದರು. ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಸಲು ನಮಗೆ ಭಾರಿ ಕಷ್ಟವಾಯ್ತು,” ಎಂದು ಹರ್ಮನ್‌ಪ್ರೀತ್ ಹೇಳಿದರು.

ನಮ್ಮ ಒಗ್ಗಟ್ಟು ಗೆಲ್ಲುವ ಭರವಸೆ ಹೆಚ್ಚಿಸಿದೆ

“ಕಳೆದ ಕೆಲವು ವರ್ಷಗಳಿಂದ ತಂಡದಲ್ಲಿ ಒಬ್ಬರಿಗೊಬ್ಬರ ನಡುವೆ ಅಪಾರ ನಂಬಿಕೆ ಬೆಳೆದಿದೆ. ನಾವು ಒಬ್ಬರಿಗೊಬ್ಬರು ಪ್ರಾಣ ಕೊಡಲು ಸಿದ್ಧರಿದ್ದೇವೆ. ನಮ್ಮ ಈ ಏಕತೆಯ ಭಾವನೆಯು ನಾವು ಒಟ್ಟಾಗಿ ಪಂದ್ಯವನ್ನು ಗೆಲ್ಲುವ ಮಾರ್ಗವನ್ನು ಕಂಡುಕೊಳ್ಳುವ ಭರವಸೆ ನೀಡಿದೆ,” ಎಂದು ಹರ್ಮನ್‌ಪ್ರೀತ್ ಹೇಳಿದರು.

“ಕಳೆದ ವರ್ಷ ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನದ ಪದಕ, ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿನ ಚಿನ್ನದ ಪದಕ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನ ಕಂಚಿನ ಪದಕವು ತಂಡದೊಳಗೆ ಆಳವಾದ ಸೌಹಾರ್ದತೆಯನ್ನು ಹುಟ್ಟುಹಾಕಿದೆ,” ಎಂದು ನಾಯಕ ಹೆಮ್ಮೆಪಟ್ಟಿದ್ದಾರೆ.

"ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಂಡಿರುವುದು ನಮಗೆ ಹೆಮ್ಮೆ ತಂದಿದೆ. ಹಾಗಂತಾ ನಮ್ಮ ಕೆಲಸವು ಇಲ್ಲಿಗೆ ನಿಲ್ಲುವುದಿಲ್ಲ. ನಾವು ಇನ್ನೂ ಸುಧಾರಿಸಬೇಕಾದ ಹಲವ ಕ್ಷೇತ್ರಗಳಿವೆ. ನಾವು ನಮ್ಮ ಹಾಕಿ ತಂಡದಲ್ಲಿ ಇನ್ನೊಂದಷ್ಟು ಆಳವಾದ ಅಂಶಗಳನ್ನು ನಿರ್ಮಿಸಬೇಕಾಗಿದೆ. ಸ್ವಲ್ಪ ವಿರಾಮದ ನಂತರ ಮತ್ತೆ ನಾವು ಒಟ್ಟು ಸೇರುತ್ತೇವೆ. ಮುಂಬರುವ ಪಂದ್ಯಾವಳಿಗಳಿಗೆ ತಂಡ ತಯಾರಿ ಆರಂಭಿಸುತ್ತದೆ,” ಎಂದು ಅವರು ಹೇಳಿದರು.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.