ನಾಲ್ಕನೇ ಸ್ಥಾನದೊಂದಿಗೆ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ-javelin throw star neeraj chopra qualifies for diamond league final in brussels with 4th place finish jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ನಾಲ್ಕನೇ ಸ್ಥಾನದೊಂದಿಗೆ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ

ನಾಲ್ಕನೇ ಸ್ಥಾನದೊಂದಿಗೆ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್ ಚೋಪ್ರಾ

Neeraj Chopra: ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ಎರಡು ದಿನಗಳ ಕಾಲ ಈ ಬಾರಿಯ ಡೈಮಂಡ್ ಲೀಗ್‌ ಫೈನಲ್‌ ನಡೆಯಲಿದೆ. ಭಾರತ ಜಾವೆಲಿನ್‌ ಥ್ರೋ ಸ್ಟಾರ್ ನೀರಜ್ ಚೋಪ್ರಾ ನಾಲ್ಕನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದಾರೆ.

ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ (AFP)

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra), ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ವಿಶ್ವದಾದ್ಯಂತ ನಡೆದ 14 ಸರಣಿ ಈವೆಂಟ್‌ಗಳ ಬಳಿಕ ಒಟ್ಟಾರೆ ಅಂಕಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಬಾರಿಯ ಡೈಮಂಡ್‌ ಲೀಗ್‌ ಸೀಸನ್ ಫೈನಲ್‌ ಸುತ್ತು ಬ್ರಸೆಲ್ಸ್‌ಲ್ಲಿ ನಡೆಯಲಿದೆ. ಸೆಪ್ಟೆಂಬರ್ 13 ಮತ್ತು 14ರಂದು ಎರಡು ದಿನಗಳ ಕಾಲ ಈವೆಂಟ್‌ ನಡೆಯಲಿದೆ. ದೋಹಾ ಮತ್ತು ಲೌಸಾನ್‌ನಲ್ಲಿ ನಡೆದ ಕೂಟಗಳಲ್ಲಿ ಚೋಪ್ರಾ ಎರಡನೇ ಸ್ಥಾನ ಪಡೆದು 14 ಅಂಕಗಳನ್ನು ಗಳಿಸಿದರು.

ಜ್ಯೂರಿಚ್‌ನಲ್ಲಿ ನಡೆದ ಕೊನೆಯ ಸರಣಿ ಮೀಟ್‌ನಿಂದ ಹೊರಗುಳಿದಿದ್ದ ಬಂಗಾರದ ಹುಡುಗ, ಈ ಬಾರಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸದ್ಯ 26ರ ಹರೆಯದ ನೀರಜ್‌, ಜೆಕಿಯಾದ ಜಾಕುಬ್ ವಡ್ಲೆಚ್ ಅವರಿಗಿಂತ ಎರಡು ಅಂಕ ಹಿಂದೆ ಬಿದ್ದಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಕ್ರಮವಾಗಿ 29 ಮತ್ತು 21 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್‌, ಕಳೆದ ತಿಂಗಳು ಪ್ಯಾರಿಸ್‌ನಲ್ಲಿ ನಡೆದ ಈ ಬಾರಿಯ ಆವೃತ್ತಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ಸದ್ಯ ಫಿಟ್ನೆಸ್‌ ಸಮಸ್ಯೆ ಕೂಡಾ ನೀರಜ್‌ ಅವರನ್ನು ಕಾಡುತ್ತಿದೆ. ಒಲಿಂಪಿಕ್ ಕ್ರೀಡಾಕೂಟದ ಆರಂಭದಿಂದಲೂ ಸೊಂಟದ ಗಾಯದ ಬಗ್ಗೆ ನೀರಜ್‌ ಹೇಳುತ್ತಿದ್ದಾರೆ.

ಲೌಸಾನ್ ಡೈಮಂಡ್ ಲೆಗ್‌ನಲ್ಲಿ ಚಿನ್ನದ ಹುಡುಗ ನೀರಜ್‌ ಚೋಪ್ರಾ 90.61 ಮೀಟರ್ ಎಸೆದು ಎರಡನೇ ಸ್ಥಾನ ಪಡೆದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಎಸೆದು ಚಿನ್ನ ಗೆದ್ದಿದ್ದರು. ಹೀಗಾಗಿ ನೀರಜ್‌ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಚೋಪ್ರಾ 2022 ಮತ್ತು 2023ರಲ್ಲಿ ಲೌಸಾನ್ ಲೆಗ್ ಗೆದ್ದಿದ್ದರು. ಕಳೆದ ವರ್ಷ ಅಮೆರಿಕದ ಯುಜೀನ್‌ನಲ್ಲಿ ನಡೆದ ವಿನ್ನರ್-ಟೇಕ್-ಆಲ್ ಫೈನಲ್‌ಲ್ಲಿ ವಡ್ಲೆಜ್ಚ್ ನಂತರ ಎರಡನೇ ಸ್ಥಾನ ಪಡೆದಿದ್ದರು.

ಭರ್ಜರಿ ಬಹುಮಾನ

ಪ್ರತಿ ಡೈಮಂಡ್ ಲೀಗ್ ಸೀಸನ್ ಫೈನಲ್‌ನಲ್ಲಿ ಚಾಂಪಿಯನ್‌ ಆಗುವವರಿಗೆ ಪ್ರತಿಷ್ಠಿತ 'ಡೈಮಂಡ್ ಟ್ರೋಫಿ' ಜೊತೆಗೆ 30,000 ಯುಎಸ್‌ ಡಾಲರ್‌ ಬಹುಮಾನ ಮೊತ್ತ ನೀಡಲಾಗುತ್ತದೆ. ಇದೇ ವೇಳೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ವೈಲ್ಡ್ ಕಾರ್ಡ್ ನೀಡಲಾಗುತ್ತದೆ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.