Bindu Rani: ನೀನು ದೊಡ್ಡ ಕಳ್ಳಿ, ಫ್ರಾಡ್; ಅಥ್ಲೀಟ್‌ ಬಿಂದು ರಾಣಿಗೆ ಚಪ್ಪಲಿ ತೋರಿಸಿ ಹಲ್ಲೆಗೆ ಯತ್ನಿಸಿದ ಕೋಚ್‌ ಪತ್ನಿ
ಕನ್ನಡ ಸುದ್ದಿ  /  ಕ್ರೀಡೆ  /  Bindu Rani: ನೀನು ದೊಡ್ಡ ಕಳ್ಳಿ, ಫ್ರಾಡ್; ಅಥ್ಲೀಟ್‌ ಬಿಂದು ರಾಣಿಗೆ ಚಪ್ಪಲಿ ತೋರಿಸಿ ಹಲ್ಲೆಗೆ ಯತ್ನಿಸಿದ ಕೋಚ್‌ ಪತ್ನಿ

Bindu Rani: ನೀನು ದೊಡ್ಡ ಕಳ್ಳಿ, ಫ್ರಾಡ್; ಅಥ್ಲೀಟ್‌ ಬಿಂದು ರಾಣಿಗೆ ಚಪ್ಪಲಿ ತೋರಿಸಿ ಹಲ್ಲೆಗೆ ಯತ್ನಿಸಿದ ಕೋಚ್‌ ಪತ್ನಿ

Viral Video: ಅಥ್ಲೀಟ್‌ ಬಿಂದು ರಾಣಿ ಸುಳ್ಳು ಮಾಹಿತಿ ನೀಡಿರುವುದಾಗಿ ಯತೀಶ್ ಅವರ ಪತ್ನಿ ಶ್ವೇತಾ ಆರೋಪಿಸಿದ್ದಾರೆ. ಅಲ್ಲದೆ ಕ್ರೀಡಾ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಹೊರಿಸಿದ್ದಾರೆ.

ಅಥ್ಲೀಟ್‌ ಬಿಂದು ರಾಣಿ ಮೇಲೆ ವಾಗ್ದಾಳಿ ನಡೆಸಿರುವ ಶ್ವೇತಾ (ವಿಡಿಯೋ ಸ್ನಾಪ್‌ಶಾಟ್)
ಅಥ್ಲೀಟ್‌ ಬಿಂದು ರಾಣಿ ಮೇಲೆ ವಾಗ್ದಾಳಿ ನಡೆಸಿರುವ ಶ್ವೇತಾ (ವಿಡಿಯೋ ಸ್ನಾಪ್‌ಶಾಟ್)

ಕರ್ನಾಟಕದ ಅಥ್ಲೀಟ್‌ ಬಿಂದುರಾಣಿ (Bindu Rani) ಮೇಲೆ ಸೀನಿಯರ್ ಕೋಚ್ ಯತೀಶ್ ಎಂಬವರ ಪತ್ನಿ ಶ್ವೇತಾ ನಿಂದಿಸಿರುವ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಂದುರಾಣಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶ್ವೇತಾ, ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಘಟನೆ ನಡೆದಿದ್ದು, ಈ ಕುರಿತು ಹೋರಾಟ ಮಾಡುವುದಾಗಿ ಬಿಂದುರಾಣಿ ತಿಳಿಸಿದ್ದಾರೆ.

ಕರ್ನಾಟಕದ ಅಥ್ಲೀಟ್‌ ಬಿಂದು ರಾಣಿ ಸುಳ್ಳು ಮಾಹಿತಿ ನೀಡಿರುವುದಾಗಿ ಯತೀಶ್ ಅವರ ಪತ್ನಿ ಶ್ವೇತಾ ಆರೋಪಿಸಿದ್ದಾರೆ. ಅಲ್ಲದೆ ಕ್ರೀಡಾ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಹೊರಿಸಿದ್ದಾರೆ. ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಏಕವಚನದಲ್ಲಿ ನಿಂದಿಸಿ ವಾಗ್ದಾಳಿ ನಡೆಸಿದ್ದಾರೆ. ಏನ್ ಮಾಡ್ತೀಯಾ? ಫೋನ್ ಮಾಡಿಸ್ತೀಯಾ? ರೌಡಿಸಂ ಮಾಡ್ತೀಯಾ? ಬೆದರಿಸ್ತೀಯಾ? ಏನ್ ಮಾಡ್ತೀಯಾ ಹೇಳಲೇ? ಎಂದು ಶ್ವೇತಾ ಅವಾಜ್ ಹಾಕಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಏಯ್, ನಿಂದು ಫಾರ್ಪಾಮೆನ್ಸ್ ಏನೆಂದು ಹೇಳೇ. ಯಾಕೆ ಸುಳ್ಳು ಹೇಳ್ತಿದಿಯಾ. ಮಾತಾಡು. ಬಾಯಿ ಇಲ್ವಾ? ಕರ್ನಾಟಕಕ್ಕೆ ಕೆಟ್ಟ ಹೆಸರು ತರ್ತಿದ್ದೀಯಾ? ನೀನ್ಯಾಕೆ ರಾತ್ರಿ 10 ಗಂಟೆಗೆ ಫೋನ್ ಮಾಡಿದೆ. ಕೇಳಿದ್ದಕ್ಕೆ ಉತ್ತರ ಕೊಡಬೇಕು. ಬಾಯಿ ಯಾಕೆ ಬಿಡ್ತಿಲ್ಲ. ವಂಚಕಿ ಈಕೆ. ಪ್ರಶ್ನೆ ಕೇಳಿದ್ದವರಿಗೆ ಉತ್ತರ ಕೊಡಬೇಕು. ನಿಮಗೆ ಗಂಡ ಹೆಂಡತಿಗೆ ವಾಯ್ಸ್ ಇಲ್ಲವಾ? ಫೋನ್ ಮಾಡಿ ಯಾಕೆ ಕೇಳ್ತೀರಾ ಎಂದು ಶ್ವೇತಾ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ನೀನು ಖೇಲ್‌ ರತ್ನಾ ಗೆದ್ದಿದ್ದೀಯಾ? ಸ್ಟೇಡಿಯಂಗೆ ಬಂದಿದ್ದೀನಿ. ಇಲ್ಲಿ ಮಾತನಾಡು. ದೊಡ್ಡೋರತ್ರ ಫೋನ್‌ ಮಾಡಿಸ್ತೀಯಾ? ನಿಜ ಹೇಳು. ನಿಂದು ಅಷ್ಟೆಲ್ಲಾ ಪರ್ಫಾರ್ಮೆನ್ಸ್‌ ಇದ್ರೆ ಮಾತನಾಡು. ಎಲ್ಲೇ ನಿನ್‌ ಗಂಡ ಎಂದ ಆವಾಜ್‌ ಹಾಕಿದ್ದಾರೆ.

ಇದೇ ವೇಳೆ ಬಿಂದು ರಾಣಿ ಗಂಡನಿಗೂ ರೋಪ್‌ ಹಾಕಿದ ಅವರು, ರಾತ್ರಿ ಹತ್ತು ಗಂಟೆಗೆ ಯಾಕೋ ಫೋನ್‌ ಮಾಡ್ತೀಯಾ? ನೀನೇನು ಕೋಚಾ? ಪ್ರಶ್ನೆ ಕೇಳಿದಲ್ಲೇ ಉತ್ತರ ಕೊಡ್ಬೇಕು. ಫೋನ್‌ ಅಲ್ಲಿ ಅಲ್ಲ ಎಂದು ಆವಾಜ್‌ ಹಾಕಿದ್ದಾರೆ.

2017ರಲ್ಲಿ ಬಾಕ್ಸ್‌ ಕಳ್ಳತನ ಮಾಡಿದೆ. ಒಂದು ಲಕ್ಷದ ಐಟಂ ಕದ್ದು ಬೇರೆಯವರ ಮೇಲೆ ಆರೋಪ ಹೊರಿಸ್ತೀಯಾ? ನೀನು ಯಾರೇ? ನೀನು ದೊಡ್ಡ ಅವಾರ್ಡೀನಾ? ಮೂರೂ ಬಿಟ್ಟೋಳು. ನೀನು ರಿಯಲ್‌ ಪರ್ಫಾರ್ಮರ್‌ ಆಗಿದ್ರೆ ಗ್ರೂಪಲ್ಲೇ ಮೆಸೇಜ್‌ ಹಾಕ್ತಿದ್ದೆ. ನೀನು ದೊಡ್ಡ ಫ್ರಾಡ್. ನಿನಗೆ ಅವಾರ್ಡ್‌ ಅಲ್ಲ. ನಿನಗೆ ಚಪ್ಪಲಿಯೇ ನಿಜವಾದ ಅವಾರ್ಡ್‌ ಎಂದು ಚಪ್ಪಲಿ ತೋರಿಸಿದ್ದಾರೆ. ಅಲ್ಲದೆ ತಳ್ಳಿ ಮತ್ತಷ್ಟು ಏರು ಧ್ವನಿಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಅಥ್ಲೆಟ್ ಬಿಂದು ರಾಣಿ, ಟೆಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದೆ. ಆ ಪೋಸ್ಟ್‌​ನಲ್ಲಿ ಹಾಕಿರುವ ಮಾಹಿತಿ ಸುಳ್ಳು ಎಂದು ಶ್ವೇತಾ ಆರೋಪಿಸಿದ್ದಾರೆ. ನನಗೆ ಖೇಲ್ ರತ್ನ ಅವಾರ್ಡ್ ಸಿಕ್ಕಿದೆ ಎಂದು ಸುಳ್ಳು ಮಾಹಿತಿ ಹಾಕಿರುವೆ ಎಂದು ಶ್ವೇತಾ ಅವರು ಆರೋಪಿಸುತ್ತಿದ್ದಾರೆ. ಅಲ್ಲದೆ ಖೇಲ್ ರತ್ನ ಅವಾರ್ಡ್ ಹೆಸರಲ್ಲಿ 1 ಲಕ್ಷ ರೂಪಾಯಿ ತೆಗೆದುಕೊಂಡಿರುವುದಾಗಿ ಆರೋಪ ಮಾಡಿದ್ದಾರೆ. ನಾನು ಯಾವುದೇ ದುಡ್ಡು ತಗೆದುಕೊಂಡಿಲ್ಲ. ಇಂದು ಬೆಳಗ್ಗೆ ಸ್ಟೇಡಿಯಂಗೆ ಬಂದ ಶ್ವೇತಾ ಗಲಾಟೆ ಮಾಡಿದ್ದಾರೆ ಎಂದು ಬಿಂದು ರಾಣಿ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.