ಶೂಟಿಂಗ್ ಕಂಚಿನ ಪದಕ ಸುತ್ತು ಪ್ರವೇಶಿಸಿದ ಮನು-ಸರಬ್ಜೋತ್ ಜೋಡಿ; ಸಾತ್ವಿಕ್-ಚಿರಾಗ್ ಪಂದ್ಯ ರದ್ದು; ಟೆನಿಸ್‌ನಲ್ಲಿ ಭಾರತಕ್ಕೆ ನಿರಾಶೆ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕಂಚಿನ ಪದಕ ಗೆದ್ದ ಶೂಟರ್ ಮನು ಭಾಕರ್, ಮತ್ತೊಂದು ಕಂಚಿನ ಪದಕ ಗೆಲ್ಲಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅತ್ತ ಬ್ಯಾಡ್ಮಿಂಟನ್ ವನಿತೆಯರ ಜೋಡಿ ಸೋಲು ಕಂಡಿದ್ದು, ಪುರುಷರ ಜೋಡಿಯ ಪಂದ್ಯ ರದ್ದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಮೂರನೇ ದಿನದಾಟದಲ್ಲಿ ಭಾರತ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ವನಿತೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಪದಕದ ಭರವಸೆಯಲ್ಲಿದ್ದ ರಮಿತಾ ಜಿಂದಾಲ್‌ಗೆ ನಿರಾಶೆಯಾಗಿದೆ. ಅತ್ತ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಅರ್ಹತಾ ಸುತ್ತಿನಲ್ಲಿ ಭಾರತದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿಯು ಕಂಚಿನ ಪದಕ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ನಡುವೆ ಪುರುಷರ ಟೆನಿಸ್ ಅಭಿಯಾನ ಅಂತ್ಯವಾಗಿದ್ದು, ವನಿತೆಯರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲೂ ಭಾರತಕ್ಕೆ ನಿರಾಶೆ ಎದುರಾಗಿದೆ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಅರ್ಹತಾ ಸುತ್ತಿನಲ್ಲಿ ಭಾರತದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿಯು ಮೂರನೇ ಸ್ಥಾನ ಪಡೆಯುವ ಮೂಲಕ ಪದಕದ ನಿರೀಕ್ಷೆಯಲ್ಲಿದ್ದಾರೆ. ಇವರಿಬ್ಬರೂ ಮುಂದೆ ಕಂಚಿನ ಪದಕದ ಪಂದ್ಯದಲ್ಲಿ ಆಡಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಒಟ್ಟು 580-20x ಪಾಯಿಂಟ್‌ಗಳನ್ನು ಗಳಿಸಿದ ಮನು-ಸರಬ್ಜೋತ್ ಜೋಡಿಯು ಮೂರನೇ ಸ್ಥಾನ ಪಡೆದರು. ಮುಂದೆ ಇವರು 579-18x ಪಾಯಿಂಟ್ ಗಳಿಸಿ ನಾಲ್ಕನೇ ಸ್ಥಾನ ಪಡೆದ ದಕ್ಷಿಣ ಕೊರಿಯಾವನ್ನು ಕಂಚಿನ ಪದಕ ಸ್ಪರ್ಧೆಯಲ್ಲಿ ಎದುರಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮೊದಲ ಎರಡು ಸ್ಥಾನ ಪಡೆದ ಟರ್ಕಿ (582-18x) ಮತ್ತು ಸರ್ಬಿಯಾ (581-24x) ನಡುವೆ ಚಿನ್ನದ ಪದಕದ ಪಂದ್ಯ ನಡೆಯಲಿದೆ.
ಮಿಶ್ರ ತಂಡದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ, ತಂಡದ ಪ್ರತಿಯೊಬ್ಬ ಸದಸ್ಯರು 30 ನಿಮಿಷಗಳ ಅವಧಿಯಲ್ಲಿ ಒಟ್ಟು 30 ಹೊಡೆತಗಳನ್ನು ಹೊಡೆದರು. ಪ್ರತಿ ಸರಣಿಯ ಹೊಡೆತಗಳಲ್ಲಿ ಪ್ರತಿ ಆಟಗಾರನಿಗೆ 10 ಹೊಡೆತಗಳು ಹಾಗೂ ಇಬ್ಬರ ತಂಡಕ್ಕೆ ಒಟ್ಟು 20 ಶೂಟ್ ಅವಕಾಶವಿರುತ್ತದೆ. ಅಗ್ರ ನಾಲ್ಕು ತಂಡಗಳು ಪದಕ ಸುತ್ತಿಗೆ ಅರ್ಹತೆ ಪಡೆದಿವೆ. ಅಗ್ರ ಎರಡು ತಂಡಗಳು ಚಿನ್ನಕ್ಕಾಗಿ ಆಡಿದರೆ, ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಕಂಚಿನ ಪದಕಕ್ಕಾಗಿ ಮತ್ತೊಮ್ಮೆ ಶೂಟ್ ಮಾಡಬೇಕಾಗುತ್ತದೆ. ಮಂಗಳವಾರ ಮಧ್ಯಾಹ್ನ 1:00 ಗಂಟೆಗೆ ಕಂಚಿನ ಪದಕದ ಪಂದ್ಯ ನಡೆಯಲಿದೆ.
ಪುರಷರ ಟೆನಿಸ್ ಅಭಿಯಾನ ಅಂತ್ಯ
ಟೆನಿಸ್‌ನಲ್ಲಿ ಮೊದಲ ದಿನದಾಟದಲ್ಲೇ ಭಾರತದ ಪುರುಷರ ಅಭಿಯಾನ ಅಂತ್ಯವಾಗಿದೆ. ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಹಾಗೂ ಪುರುಷರ ಡಬಲ್ಸ್ ಜೋಡಿಯಾದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರು ತಮ್ಮ ಆರಂಭಿಕ ಪಂದ್ಯಗಳಲ್ಲಿ ಫ್ರಾನ್ಸ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಆ ಮೂಲಕ ಪುರುಷರ ಟೆನಿಸ್ ಅಭಿಯಾನವು ಒಂದೇ ದಿನದಲ್ಲಿ ಅಂತ್ಯವಾಗಿದೆ.
ಇಂಧು ಮಧ್ಯಾಹ್ನ ಪುರುಷರ ಡಬಲ್ಸ್‌ನಲ್ಲಿ ಭಾರತ ಹಾಗೂ ಜರ್ಮನಿ ಮುಖಾಮುಖಿಯಾಗಬೇಕಿತ್ತು. ಭಾರತದ ಸ್ಟಾರ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರಿಸುವ ಭರವಸೆಯಲ್ಲಿದ್ದರು. ಆದರೆ, ಎದುರಾಳಿ ಜರ್ಮಿನಿ ತಂಡದ ಆಟಗಾರ ಮಾರ್ಕ್ ಲ್ಯಾಮ್ಸ್‌ಫಸ್ ಅವರಿಗೆ ಮೊಣಕಾಲು ನೋವಿನಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯ್ತು. ಇದರಿಂದಾಗಿ ತಮ್ಮ ಗುಂಪಿನ ಮೂರನೇ ಪಂದ್ಯದಲ್ಲಿ ಭಾರತದ ಜೋಡಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಹೇಳಿಕೆಯ ಪ್ರಕಾರ, ಮಾರ್ಕ್ ಲ್ಯಾಮ್ಸ್‌ಫಸ್ ಅವರು ಮೊಣಕಾಲಿನ ಗಾಯದಿಂದಾಗಿ ಪ್ಯಾರಿಸ್ ಗೇಮ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಮಾಡು ಇಲ್ಲವೇ ಮಡಿ ಪಂದ್ಯ
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಜೋಡಿಯು ಮುಂದೆ ಮಂಗಳವಾರದ ಪಂದ್ಯದಲ್ಲಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರ ವಿರುದ್ಧ ಸೆಣಸಲಿದ್ದಾರೆ. ಕ್ವಾರ್ಟರ್‌ಫೈನಲ್‌ಗೂ ಮುನ್ನ ಭಾರತದ ಜೋಡಿಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಗೆ ಸೋಲು
ಅತ್ತ ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್‌ಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಜೋಡಿಯು ಗುಂಪು ಹಂತದಲ್ಲಿ ಸತತ ಎರಡನೇ ಸೋಲು ಅನುಭವಿಸಿದ್ದಾರೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಆರಂಭಿಕ ನಿರ್ಗಮನದ ಭೀತಿಯಲ್ಲಿದ್ದಾರೆ. ಸಿ ಗುಂಪಿನ ಪಂದ್ಯದಲ್ಲಿ ಭಾರತೀಯ ಜೋಡಿಯು ವಿಶ್ವದ ನಾಲ್ಕನೇ ಶ್ರೇಯಾಂಕದ ಜಪಾನಿನ ಜೋಡಿಯಾದ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ವಿರುದ್ಧ ಸೋತರು. 48 ನಿಮಿಷಗಳ ಕಾಲ ನಡೆದ ಪಂದ್ಯವು 11-21 12-21ರ ನೇರ ಸೆಟ್‌ಗಳೊಂದಿಗೆ ಜಪಾನ್ ಪಾಲಾಯಿತು. ಮೊದಲ ಪಂದ್ಯದಲ್ಲಿ ಭಾರತೀಯರು ದಕ್ಷಿಣ ಕೊರಿಯಾದ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ ಯೋಂಗ್ ವಿರುದ್ಧ ಮುಗ್ಗರಿಸಿದ್ದರು.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಶೂಟಿಂಗ್ನಲ್ಲಿಂದು 2 ಫೈನಲ್ ಪಂದ್ಯಗಳು; ಒಲಿಂಪಿಕ್ಸ್‌ನಲ್ಲಿ ಜುಲೈ 29ರ ಭಾರತದ ಸ್ಪರ್ಧೆಗಳ ವಿವರ