1900ರ ಒಲಿಂಪಿಕ್ಸ್​ನಲ್ಲೇ ಭಾರತಕ್ಕೆ 2 ಪದಕ ಗೆದ್ದಿದ್ದ ನಾರ್ಮನ್ ಪ್ರಿಚರ್ಡ್​ ಯಾರು; ಇವರು ಭಾರತೀಯರೇ?
ಕನ್ನಡ ಸುದ್ದಿ  /  ಕ್ರೀಡೆ  /  1900ರ ಒಲಿಂಪಿಕ್ಸ್​ನಲ್ಲೇ ಭಾರತಕ್ಕೆ 2 ಪದಕ ಗೆದ್ದಿದ್ದ ನಾರ್ಮನ್ ಪ್ರಿಚರ್ಡ್​ ಯಾರು; ಇವರು ಭಾರತೀಯರೇ?

1900ರ ಒಲಿಂಪಿಕ್ಸ್​ನಲ್ಲೇ ಭಾರತಕ್ಕೆ 2 ಪದಕ ಗೆದ್ದಿದ್ದ ನಾರ್ಮನ್ ಪ್ರಿಚರ್ಡ್​ ಯಾರು; ಇವರು ಭಾರತೀಯರೇ?

Who is Norman Pritchard: ನಾರ್ಮನ್ ಪ್ರಿಚರ್ಡ್ 1900ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದರು. ಆದರೆ ಅವರು ಬ್ರಿಟಿಷ್ ಅಥವಾ ಭಾರತೀಯರೇ?

1900ರ ಒಲಿಂಪಿಕ್ಸ್​ನಲ್ಲೇ ಭಾರತಕ್ಕೆ ಎರಡು ಪದಕ ಗೆದ್ದಿದ್ದ ನಾರ್ಮನ್ ಪ್ರಿಚರ್ಡ್​ ಯಾರು; ಇವರು ಭಾರತೀಯರೇ?
1900ರ ಒಲಿಂಪಿಕ್ಸ್​ನಲ್ಲೇ ಭಾರತಕ್ಕೆ ಎರಡು ಪದಕ ಗೆದ್ದಿದ್ದ ನಾರ್ಮನ್ ಪ್ರಿಚರ್ಡ್​ ಯಾರು; ಇವರು ಭಾರತೀಯರೇ?

ಶಾರ್ಪ್​ ಶೂಟರ್​ ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್​​ನಲ್ಲಿ 2 ಪದಕಗಳನ್ನು ಗೆದ್ದ ದಾಖಲೆ ಬರೆದಿದ್ದು, ಈ ವಿಶೇಷ ಸಾಧನೆ ಮಾಡಿದ ಸ್ವತಂತ್ರ ಭಾರತದ ಮೊದಲ ಹಾಗೂ ಒಟ್ಟಾರೆ ಎರಡನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ, ಮನು ಭಾಕರ್ ಈ ದಾಖಲೆ ಬರೆದ ಏಕೈಕ ಭಾರತೀಯರು ಎಂದರೂ ತಪ್ಪಾಗಲ್ಲ. ಮನುಗೂ ಮೊದಲು ಒಂದೇ ಕ್ರೀಡಾಕೂಟದಲ್ಲಿ ನಾರ್ಮನ್ ಪ್ರಿಚರ್ಡ್ 2 ಪದಕ ಗೆದ್ದಿದ್ದರು. ಆದರೆ ಅವರು ಬ್ರಿಟಿಷ್-ಭಾರತೀಯ ಪ್ರಜೆ.

'ಕಲ್ಕತ್ತಾ ಬಾಯ್' ಎಂದೇ ಖ್ಯಾತಿ ಪಡೆದಿರುವ ನಾರ್ಮನ್ ಪ್ರಿಚರ್ಡ್, 1900ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಕ್ರೀಡಾಕೂಟದಲ್ಲಿ 2 ಬೆಳ್ಳಿ ಪದಕ ಗೆದ್ದಿದ್ದರು. ಸ್ವತಂತ್ರ ಪೂರ್ವದಲ್ಲಿ ನಡೆದಿದ್ದ ಈ ಒಲಿಂಪಿಕ್ಸ್​ನಲ್ಲಿ ನಾರ್ಮನ್​ ಎರಡು ಬೆಳ್ಳಿ ಪದಕ (200 ಮೀಟರ್ ಹರ್ಡಲ್ಸ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ) ಗೆದ್ದಿದ್ದರು. ಭಾರತದ ಪರ ಒಲಿಂಪಿಕ್ಸ್​ನ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದಿದ್ದ ಮೊದಲ ಕ್ರೀಡಾಪಟು ಎಂಬ ದಾಖಲೆ ಅವರ ಹೆಸರಿನಲ್ಲಿದೆ.

ಪ್ರಿಚರ್ಡ್ ಭಾರತೀಯನೇ?

ನಾರ್ಮನ್ ಗಿಲ್ಬರ್ಟ್ ಪ್ರಿಚರ್ಡ್ ಅವರು 23 ಜನವರಿ 1875 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ನಗರದ ಸೇಂಟ್ ಕ್ಸೇವಿಯರ್ಸ್ ಕಾಲೇಜಿಗೆ ಸೇರಿದರು. 1894ರಿಂದ 1900 ರವರೆಗೆ ಸತತ 7 ವರ್ಷಗಳ ಕಾಲ ಬಂಗಾಳ ಪ್ರಾಂತ್ಯದ 100-ಯಾರ್ಡ್ ಸ್ಪ್ರಿಂಟ್ ಪ್ರಶಸ್ತಿಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. 1898-99ರಲ್ಲಿ ಕೂಟದಲ್ಲಿ ದಾಖಲೆ ನಿರ್ಮಿಸಿದ್ದರು. 440 ಯಾರ್ಡ್ (1/4 ಮೈಲಿ) ಓಟ ಮತ್ತು 120 ಯಾರ್ಡ್ ಹರ್ಡಲ್ಸ್​​ನಲ್ಲೂ ಗೆದ್ದು ಬೀಗಿದ್ದರು. ಪ್ರಿಚರ್ಡ್ 1900ರ ಎಎಎ ಚಾಂಪಿಯನ್ ಶಿಪ್​ನಲ್ಲಿ 120-ಯಾರ್ಡ್ ಹರ್ಡಲ್ಸ್ ನಲ್ಲಿ 2ನೇ ಸ್ಥಾನ ಪಡೆದಿದ್ದರು.

ಇದರ ನಂತರ ಅವರು ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತದ ಪರ ಸ್ಪರ್ಧಿಸಿದರು. ಆ ಮೂಲಕ ಒಲಿಂಪಿಕ್ಸ್​​ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಕ್ರೀಡಾಪಟು, ಒಂದೇ ಆವೃತ್ತಿಯಲ್ಲಿ ಒಲಿಂಪಿಕ್ ಪದಕ ಮತ್ತು 2 ಪದಕ ಗೆದ್ದ ಮೊದಲಿಗ ಎನಿಸಿದರು. ಅವರ ಟ್ರ್ಯಾಕ್ ಸಾಧನೆಗಳನ್ನು ಮೀರಿ, ಪ್ರಿಚರ್ಡ್ 1900 ರಿಂದ 1902 ರವರೆಗೆ ಭಾರತೀಯ ಫುಟ್ಬಾಲ್ ಅಸೋಸಿಯೇಷನ್​ ಕಾರ್ಯದರ್ಶಿಯಾಗಿ ಭಾರತೀಯ ಕ್ರೀಡಾ ಆಡಳಿತಕ್ಕೆ ಕೊಡುಗೆ ನೀಡಿದರು. 1905ರಲ್ಲಿ ಅವರು ಶಾಶ್ವತವಾಗಿ ಬ್ರಿಟನ್​ಗೆ ಸ್ಥಳಾಂತರಗೊಂಡರು.

ನಾರ್ಮನ್ ತಂದೆ ಜಾರ್ಜ್ ಪೀಟರ್ಸನ್ ಪ್ರಿಚರ್ಡ್. ಅವರು ಬ್ರಿಟಿಷ್ ಪ್ರಜೆಯಾಗಿದ್ದರು. ಅಲಿಪುರದಲ್ಲಿ ಅಕೌಂಟೆಂಟ್ ಆಗಿದ್ದರು. ತಾಯಿ ಹೆಲೆನ್ ಮೇನಾರ್ಡ್ ಪ್ರಿಚರ್ಡ್. ನಾರ್ಮನ್ ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಅವರ ಜಾರ್ಜ್ ಪೀಟರ್ಸನ್ ಬ್ರಿಟಿಷ್ ಪ್ರಜೆಯಾಗಿದ್ದರು. ಹೀಗಾಗಿ ನಾರ್ಮನ್​ ಅವರು ಬ್ರಿಟಿಷ್-ಭಾರತೀಯ ಕ್ರೀಡಾಪಟುವಾಗಿ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ನಾರ್ಮನ್​ ನಟ ಕೂಡಾ ಆಗಿದ್ದರು ಎಂಬುದು ವಿಶೇಷ.

ಪ್ರಿಚರ್ಡ್ ರಾಷ್ಟ್ರೀಯತೆಯ ವಿವಾದ

ಆದಾಗ್ಯೂ, ಪ್ರಿಚರ್ಡ್​ರ ಭಾರತೀಯ ಪರಂಪರೆಯ ಈ ಸ್ಪಷ್ಟ ಸೂಚಕಗಳ ಹೊರತಾಗಿಯೂ ಅವರ ರಾಷ್ಟ್ರೀಯತೆಯ ಕುರಿತು ವಿವಾದ ಸೃಷ್ಟಿಯಾಗಿದೆ. ಬ್ರಿಟಿಷ್ ಇತಿಹಾಸಕಾರರು ಪ್ರಿಚರ್ಡ್ ಬ್ರಿಟಿಷ್, ಭಾರತೀಯನಲ್ಲ ಎಂದು ವಾದಿಸಿದ್ದಾರೆ. ಬ್ರಿಟಿಷ್ ಒಲಿಂಪಿಕ್ ಇತಿಹಾಸಕಾರ ಇಯಾನ್ ಬುಕಾನನ್ ಅವರು ಪ್ರಿಚರ್ಡ್ ಅವರ ಜನ್ಮಸ್ಥಳ ಭಾರತವಾಗಿದ್ದರೂ ನಿಸ್ಸಂದೇಹವಾಗಿ ಬ್ರಿಟಿಷ್ ಎಂದು ಹೇಳಿದ್ದರು. ಹಾಗಾಗಿ ಅವರು ಯಾವ ದೇಶಕ್ಕೆ ಸೇರಿದ ಪ್ರಜೆ ಎಂಬುದರ ವಿವಾದ ಇನ್ನೂ ಮುಂದುವರೆದಿದೆ.

ಬುಕಾನನ್ ಪ್ರಕಾರ, ನ್ಯೂಯಾರ್ಕ್ ಟೈಮ್ಸ್ ಪ್ರಿಚರ್ಡ್ ಅವರನ್ನು ‘ಇಂಗ್ಲಿಷ್ ವ್ಯಕ್ತಿ’ ಎಂದು ಕರೆದಿದೆ. ದಿ ಟೆಲಿಗ್ರಾಫ್​ನ ಲೇಖನವೊಂದರಲ್ಲಿ ದಿ ಫೀಲ್ಡ್ ನಿಯತಕಾಲಿಕವು ಕ್ರೀಡಾಪಟುವನ್ನು ‘ಭಾರತೀಯ ಚಾಂಪಿಯನ್’ ಎಂದು ಉಲ್ಲೇಖಿಸಿದೆ. ಅಂದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ರಾಷ್ಟ್ರಗಳಲ್ಲಿ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ತಮ್ಮ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳನ್ನು ನೋಂದಾಯಿಸಿದ್ದವು. ಈ ಪೈಕಿ ಭಾರತ ಅಥವಾ ಗ್ರೇಟ್ ಬ್ರಿಟನ್ ಎರಡೂ ಸೇರಿರಲಿಲ್ಲ.

ಅವರು ಭಾರತ ಅಥವಾ ಬ್ರಿಟನ್ ಪ್ರಜೆಯೇ ಎಂಬ ಎರಡೂ ಕಡೆಯ ವಾದಗಳು ಪ್ರಿಚರ್ಡ್ ರಾಷ್ಟ್ರೀಯತೆಯನ್ನು ವಿಭಜಿಸಿದ್ದರೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ, ಪ್ರಿಚರ್ಡ್ ಭಾರತದ ಕ್ರೀಡಾಪಟು ಎಂದು ಮುದ್ರೆಯೊತ್ತಿದೆ. ಸ್ವತಂತ್ರ ಪೂರ್ವದಲ್ಲಿ ಒಂದೇ ಆವೃತ್ತಿಯಲ್ಲಿ ಭಾರತದ ಪರ ಎರಡು ಪದಕ ಗೆದ್ದಿದ್ದರು. ಇದೀಗ ಸ್ವತಂತ್ರದ ನಂತರ ಮನು ಭಾಕರ್ ಈ ಸಾಧನೆ ಮಾಡಿದ್ದಾರೆ. ಮನು ಭಾಕರ್ ಇದೇ ಆವೃತ್ತಿಯಲ್ಲಿ ಮತ್ತೊಂದು ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದು, ಪದಕ ಗೆದ್ದರೆ ಒಂದೇ ಆವೃತ್ತಿಯಲ್ಲಿ 3 ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆ ಬರೆಯಲಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.