2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಗುರಿ; ಅಭ್ಯಾಸವೇ ಮುಖ್ಯವೆಂದು ಸರ್ಕಾರಿ ಉದ್ಯೋಗ ನಿರಾಕರಿಸಿದ ಸರಬ್ಜೋತ್ ಸಿಂಗ್-paris olympics bronze medalist sarabjot singh opts practice over govt job offer from haryana cm los angeles 2028 jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಗುರಿ; ಅಭ್ಯಾಸವೇ ಮುಖ್ಯವೆಂದು ಸರ್ಕಾರಿ ಉದ್ಯೋಗ ನಿರಾಕರಿಸಿದ ಸರಬ್ಜೋತ್ ಸಿಂಗ್

2028ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಗುರಿ; ಅಭ್ಯಾಸವೇ ಮುಖ್ಯವೆಂದು ಸರ್ಕಾರಿ ಉದ್ಯೋಗ ನಿರಾಕರಿಸಿದ ಸರಬ್ಜೋತ್ ಸಿಂಗ್

ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್ ಸರ್ಕಾರಿ ಉದ್ಯೋಗ ಬೇಡ ಎಂದಿದ್ದಾರೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಅವರು ನೀಡಿದ ಆಫರ್‌ ಅನ್ನು ಶೂಟರ್‌ ನಿರಾಕರಿಸಿದ್ದಾರೆ. ತಮಗೆ ಅಭ್ಯಾಸವೇ ಮುಖ್ಯ ಎಂದು ಅವರು ಹೇಳಿದ್ದಾರೆ.

2028ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಸಲುವಾಗಿ ಸರಬ್ಜೋತ್ ಸಿಂಗ್ ಸರ್ಕಾರಿ ಉದ್ಯೋಗ ನಿರಾಕರಿಸಿದ್ದಾರೆ.
2028ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಸಲುವಾಗಿ ಸರಬ್ಜೋತ್ ಸಿಂಗ್ ಸರ್ಕಾರಿ ಉದ್ಯೋಗ ನಿರಾಕರಿಸಿದ್ದಾರೆ. (PTI)

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಲ್ಲಿ ಸರಬ್ಜೋತ್ ಸಿಂಗ್ ಪ್ರಮುಖರು. ಕಂಚಿನ ಪದಕ ವಿಜೇತ ಶೂಟರ್‌ ಸರಬ್ಜೋತ್, ಮನು ಭಾಕರ್ ಅವರೊಂದಿಗೆ ಚಂಡೀಗಢದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮುಖ್ಯಮಂತ್ರಿ ಅವರು ಸರಬ್ಜೋತ್‌ಗೆ ಸರ್ಕಾರಿ ಉದ್ಯೋಗದ ಆಫರ್‌ ನೀಡಿದ್ದಾರೆ. ಆದರೆ, ಗವರ್ನ್‌ಮೆಂಟ್‌ ಜಾಬ್ ಆಫರ್‌ ಅನ್ನು ಸರಬ್ಜೋತ್‌ ನಯವಾಗಿ ನಿರಾಕರಿಸಿದ್ದಾರೆ. ಬದಲಿಗೆ ಶೂಟಿಂಗ್‌ ಅಭ್ಯಾಸವನ್ನು ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

ಕ್ರೀಡಾ ಇಲಾಖೆಯಲ್ಲಿ ಉಪ ನಿರ್ದೇಶಕರ ಹುದ್ದೆಯನ್ನು ನೀಡುವುದಾಗಿ ಸರ್ಕಾರವೇ ಸರಬ್ಜೋತ್ ಅವರಿಗೆ ಪ್ರಸ್ತಾಪ ನೀಡಿತ್ತು. ಉದ್ಯೋಗದ ಪ್ರಸ್ತಾಪವನ್ನು ಶ್ಲಾಘಿಸಿದ ಶೂಟರ್, ಅದನ್ನು ನಯವಾಗಿ ನಿರಾಕರಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಟಗಾರ, “ನಾನು ಮೊದಲು ನನ್ನ ಶೂಟಿಂಗ್‌ನತ್ತ ಗಮನ ಹರಿಸುವ ಕೆಲಸ ಮಾಡುತ್ತೇನೆ. ನನ್ನ ಕುಟುಂಬದವರು ಕೂಡಾ ಯೋಗ್ಯವಾದ ಕೆಲಸವನ್ನು ಮಾಡುವಂತೆ ಹೇಳುತ್ತಿದ್ದಾರೆ. ಆದರೆ ನಾನು ಶೂಟಿಂಗ್ ಮೇಲೆ ಗಮನ ಹರಿಸುವ ನಿರ್ಧಾರ ಮಾಡಿದ್ದೇನೆ” ಎಂದು ಸರಬ್ಜೋತ್ ಹೇಳಿದ್ದಾರೆ.

ಸರ್ಕಾರದ ಉದ್ಯೋಗ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, “ಇದು ಸ್ವೀಕರಿಸುವ ಬಗ್ಗೆಯಾಗಲಿ ಅಥವಾ ನಿರಾಕರಿಸುವ ವಿಷಯವಾಗಲಿ ಅಲ್ಲ. ನಾನು ತೆಗೆದುಕೊಂಡ ಕೆಲವು ನಿರ್ಧಾರಗಳ ವಿರುದ್ಧವಾಗಿ ಹೋಗಲು ನನಗೆ ಇಷ್ಟವಿಲ್ಲ ಅಷ್ಟೇ. ಹೀಗಾಗಿ ನನಗೆ ಈಗ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಸರಬ್ಜೋತ್ ಹೇಳಿಕೊಂಡಿದ್ದಾರೆ.

2028ರ ಒಲಿಂಪಿಕ್ಸ್‌ ಚಿನ್ನಕ್ಕೆ ಶೂಟ್‌ ಮಾಡುವ ಗುರಿ

“ನನ್ನ ಪ್ರಮುಖ ಗುರಿಯನ್ನು ನಾನು ಇನ್ನೂ ಸಾಧಿಸಿಲ್ಲ. 2028ರಲ್ಲಿ ನನ್ನ ಮುಖ್ಯ ಗುರಿಯನ್ನು ಪೂರ್ಣಗೊಳಿಸುವ ಭರವಸೆ ಇದೆ. ನಾನು ನನ್ನ ವೈಯಕ್ತಿಕ ದಿನಚರಿಯಲ್ಲಿ ಪ್ಯಾರಿಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ ಎಂದು ಬರೆಯುತ್ತಿದ್ದೆ. ಆದರೆ, ನಾನು ಇನ್ನೂ ನನ್ನ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. 2028ರಲ್ಲಿ ನಾನು ಚಿನ್ನಕ್ಕಾಗಿ ಶೂಟ್ ಮಾಡಲು ಬಯಸುತ್ತೇನೆ” ಎಂದು ಸರಬ್ಜೋತ್ ಸುದ್ದಿಸಂಸ್ಥೆ ಇಂಡಿಯಾ ಟುಡೇ ಜೊತೆಗೆ ಮಾತನಾಡಿದ್ದಾರೆ.

22 ವರ್ಷ ವಯಸ್ಸಿನ ಸರಬ್ಜೋತ್, 2028ರಲ್ಲಿ ನಡೆಯಲಿರುವ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟಿದ್ದಾರೆ. ಪ್ಯಾರಿಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ಅವರು, ಮುಂದೆ ಚಿನ್ನದ ಪದಕಕ್ಕೆ ಶೂಟ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಡಿಎಸ್ ಪಿ ಹುದ್ದೆ ಕೋರಿದ ಕೋಚ್

ಸರಬ್ಜೋತ್‌ ಅವರ ತರಬೇತುದಾರ ಅಭಿಷೇಕ್ ರಾಣಾ, 22 ವರ್ಷದ ಆಟಗಾರನಿಗೆ ಕೋಚಿಂಗ್ ನೀಡುತ್ತಿದ್ದಾರೆ. ಡಿಎಸ್‌ಪಿ ಹುದ್ದೆ ನೀಡಲು ಸರ್ಕಾರದ ಮುಂದೆ ಪ್ರಸ್ತಾಪವನ್ನು ಇಟ್ಟಿದ್ದೇವೆ ಎಂದು ಹೇಳಿದ್ದಾರೆ “ಅನೇಕ ಪದಕ ವಿಜೇತರು ಇನ್ನೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಏಷ್ಯನ್ ಪದಕ ವಿಜೇತರಿಗೆ ಡಿಎಸ್‌ಪಿ ಹುದ್ದೆ ನೀಡಲಾಗಿದೆ. ಉತ್ತಮ ಉದ್ಯೋಗಗಳನ್ನು ನೀಡಿದಾಗ ಯುವಕರಲ್ಲಿ ಕ್ರೀಡೆಯತ್ತ ಒಲವು ಹೆಚ್ಚಾಗುತ್ತದೆ,” ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.