Wrestlers Protest: ಪದಕಗಳನ್ನು ಗಂಗಾನದಿಗೆ ಎಸೆಯುವುದನ್ನು ತಡೆದ ರೈತ ಮುಖಂಡ; ಹರಿದ್ವಾರದಿಂದ ಹಿಂದಿರುಗಿದ ಕುಸ್ತಿಪಟುಗಳು
Protesting wrestlers medals: ಗಂಗಾನದಿಗೆ ಮೆಡಲ್ಗಳನ್ನು ಎಸೆಯಲು ಉತ್ತರಾಖಂಡದ ಹರಿದ್ವಾರಕ್ಕೆ ಬಂದಿದ್ದ ಕುಸ್ತಿಪಟುಗಳನ್ನು ಭೇಟಿ ಮಾಡಿದ ನರೇಶ್ ಟಿಕಾಯತ್, ಕುಸ್ತಿಪಟುಗಳಿಂದ ಪದಕಗಳನ್ನು ಪಡೆದು, ನ್ಯಾಯ ಒದಗಿಸಲು ಐದು ದಿನಗಳ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ಹರಿದ್ವಾರದಿಂದ ಹಿಂದಿರುಗಿದ್ದಾರೆ.
ಹರಿದ್ವಾರ (ಉತ್ತರಾಖಂಡ): ತಾವು ಗೆದ್ದ ಪದಕಗಳನ್ನು ಗಂಗಾನದಿಗೆ ಎಸೆಯಲು ಮುಂದಾಗಿದ್ದ ಪ್ರತಿಭಟನಾನಿರತ ಕುಸ್ತಿಪಟುಗಳು ರೈತ ಮುಖಂಡ ನರೇಶ್ ಟಿಕಾಯತ್ ಮಧ್ಯಪ್ರವೇಶದಿಂದಾಗಿ ಸ್ವಲ್ಪ ಶಾಂತರಾಗಿದ್ದಾರೆ.
ಲೈಂಗಿಕ ಕಿರುಕುಳ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು, ತಮಗೆ ನ್ಯಾಯ ಸಿಗದ ಹಿನ್ನೆಲೆ ತಾವು ವಿವಿಧ ಸ್ಪರ್ಧೆಗಳಲ್ಲಿ ಗೆದ್ದಿರುವ ಪದಕಗಳನ್ನು ಇಂದು (ಮೇ 30) ಸಂಜೆ ಗಂಗಾನದಿಗೆ ಎಸೆಯುವುದಾಗಿ ಹೇಳಿದ್ದರು.
ಗಂಗಾನದಿಗೆ ಮೆಡಲ್ಗಳನ್ನು ಎಸೆಯಲು ಉತ್ತರಾಖಂಡದ ಹರಿದ್ವಾರಕ್ಕೆ ಬಂದಿದ್ದ ಕುಸ್ತಿಪಟುಗಳನ್ನು ಭೇಟಿ ಮಾಡಿದ ನರೇಶ್ ಟಿಕಾಯತ್, ಕುಸ್ತಿಪಟುಗಳಿಂದ ಪದಕಗಳನ್ನು ಪಡೆದು, ನ್ಯಾಯ ಒದಗಿಸಲು ಐದು ದಿನಗಳ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ಹರಿದ್ವಾರದಿಂದ ಹಿಂದಿರುಗಿದ್ದಾರೆ.
“ಈ ಪದಕಗಳು ನಮ್ಮ ಜೀವನ, ನಮ್ಮ ಆತ್ಮ. ಇವುಗಳನ್ನು ನಾವು ಗಂಗಾನದಿಯಲ್ಲಿ ಎಸೆಯಲು ತೀರ್ಮಾನ ಮಾಡಿದ್ದೇವೆ. ಗಂಗಾ ನದಿಯಲ್ಲಿ ಎಸೆದ ಮೇಲೆ ಅವುಗಳಿಗೆ ಜೀವ ಇರುವುದಿಲ್ಲ. ಅದನ್ನು ಎಸೆದು ನಂತರ ನಾನು ಇಂಡಿಯಾ ಗೇಟ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ” ಎಂದು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಜಂಟಿ ಹೇಳಿಕೆಯನ್ನು ನೀಡಿದ್ದರು.
ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನೂತನವಾಗಿ ನಿರ್ಮಿಸಲಾದ ಸಂಸತ್ ಭವನದ ಉದ್ಘಾಟನೆಯ ದಿನದಂದು ಪಾರ್ಲಿಮೆಂಟ್ ಕಡೆಗೆ ಮೆರವಣಿಗೆಗೆ ಯತ್ನಿಸಿದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದರು. ಒಲಿಂಪಿಯನ್ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರನ್ನು ಬಂಧಿಸಿದ ನಂತರ ದೆಹಲಿ ಪೊಲೀಸರು ನಗರದ ಮೂರು ವಿಭಿನ್ನ ಸ್ಥಳಗಳಿಗೆ ಕರೆದೊಯದ್ದು, ಬಳಿಕ ಬಿಡುಗಡೆ ಮಾಡಿದ್ದರು.
ನಮಗೆ ಏನಾಯಿತು ಎಂದು ಇಡೀ ಭಾರತವೇ ನೋಡಿದೆ. ಯಾರೂ ಎಂದಿಗೂ ಮರೆಯುವುದಿಲ್ಲ. ದೆಹಲಿಯಲ್ಲಿ ನಾವು ಹುಡುಗಿಯರು ರಸ್ತೆಯಲ್ಲಿ ಥಳಿತಕ್ಕೆ ಒಳಗಾಗುತ್ತಿದ್ದರೆ ನಮ್ಮ ಪ್ರಧಾನಿ ಫೋಟೋಗಳಿಗೆ ಪೋಸ್ ನೀಡುವುದರಲ್ಲಿ ನಿರತರಾಗಿದ್ದರು ಎಂದು ಸಾಕ್ಷಿ ಮಲಿಕ್ ಕಿಡಿಕಾರಿದ್ದರು.