Asian Games: ಟೆನಿಸ್‌ನಲ್ಲಿ ಬೆಳ್ಳಿ ಗೆದ್ದ ರಾಮ್‌ಕುಮಾರ್-ಮೈನೇನಿ ಜೋಡಿ; ವನಿತೆಯರ ಸ್ಕ್ವಾಷ್ ತಂಡಕ್ಕೆ ಕಂಚು
ಕನ್ನಡ ಸುದ್ದಿ  /  ಕ್ರೀಡೆ  /  Asian Games: ಟೆನಿಸ್‌ನಲ್ಲಿ ಬೆಳ್ಳಿ ಗೆದ್ದ ರಾಮ್‌ಕುಮಾರ್-ಮೈನೇನಿ ಜೋಡಿ; ವನಿತೆಯರ ಸ್ಕ್ವಾಷ್ ತಂಡಕ್ಕೆ ಕಂಚು

Asian Games: ಟೆನಿಸ್‌ನಲ್ಲಿ ಬೆಳ್ಳಿ ಗೆದ್ದ ರಾಮ್‌ಕುಮಾರ್-ಮೈನೇನಿ ಜೋಡಿ; ವನಿತೆಯರ ಸ್ಕ್ವಾಷ್ ತಂಡಕ್ಕೆ ಕಂಚು

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಶೂಟಿಂಗ್‌ ಮತ್ರವಲ್ಲದೆ ಟೆನಿಸ್‌ ಹಾಗೂ ಸ್ಕ್ವಾಷ್‌ನಲ್ಲೂ ಪದಕ ಬೇಟೆ ಮುಂದುವರೆದಿದೆ.

ಬೆಳ್ಳಿ ಗೆದ್ದ ಟೆನಿಸ್‌ ಜೋಡಿ ಮತ್ತು ಸ್ಕ್ವಾಷ್‌ ಕಂಚು ಗೆದ್ದ ವನಿತೆಯರ ತಂಡ
ಬೆಳ್ಳಿ ಗೆದ್ದ ಟೆನಿಸ್‌ ಜೋಡಿ ಮತ್ತು ಸ್ಕ್ವಾಷ್‌ ಕಂಚು ಗೆದ್ದ ವನಿತೆಯರ ತಂಡ

ಏಷ್ಯನ್ ಗೇಮ್ಸ್‌ನ (Asian Games) ಪುರುಷರ ಟೆನಿಸ್‌ ಡಬಲ್ಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ (Ramkumar Ramanathan) ಮತ್ತು ಸಾಕೇತ್ ಮೈನೇನಿ (Saketh Myneni) ಜೋಡಿ ರಜತ ಪದಕ ಗೆದ್ದಿದ್ದಾರೆ. ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಹ್ಸು ಯು-ಹ್ಸಿಯು ಮತ್ತು ಜೇಸನ್ ಜಂಗ್ ಜೋಡಿ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಮತ್ತೊಂದೆಡೆ, ಟೆನಿಸ್‌ ಆದರೆ ಮಿಶ್ರ ಡಬಲ್ಸ್‌ನಲ್ಲಿ ಭಾರತವೂ ಇನ್ನೂ ಚಿನ್ನ ಗೆಲ್ಲುವ ಕನಸಿನಲ್ಲಿದೆ.

ತೈಪೆಯ ಹ್ಸು ಮತ್ತು ಜಂಗ್, ಇಬ್ಬರೂ ಉತ್ತಮ ಶ್ರೇಯಾಂಕದ ಸಿಂಗಲ್ಸ್ ಆಟಗಾರರು. ಅವರ ವಿರುದ್ಧ ಪ್ರಬಲ ಪ್ರದರ್ಶನ ನೀಡಿದ ಭಾರತೀಯರು, ಕೊನೆಗೆ 6-4, 6-4 ಅಂತರದಿಂದ ಸೋಲೊಪ್ಪಿದರು. ಆದರೂ, ಬೆಳ್ಳಿ ಪದಕ ಭಾರತಕ್ಕೆ ಖಚಿತವಾಯ್ತು.

ಇದು ರಾಮ್‌ಕುಮಾರ್ ಅವರ ಮೊದಲ ಏಷ್ಯನ್ ಗೇಮ್ಸ್ ಪದಕ. ಅತ್ತ ಮೈನೇನಿಗೆ ಇದು ಮೂರನೇ ಪದಕ. ಈ ಹಿಂದೆ ಅವರು 2014ರ ಆವೃತ್ತಿಯ ಮಿಶ್ರ ಡಬಲ್ಸ್‌ನಲ್ಲಿ ಸನಮ್ ಸಿಂಗ್ ಅವರೊಂದಿಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಮತ್ತು ಸಾನಿಯಾ ಮಿರ್ಜಾ ಅವರೊಂದಿಗೆ ಚಿನ್ನ ಗೆದ್ದಿದ್ದರು.

ಕಂಚು ಗೆದ್ದ ಸ್ಕ್ವಾಷ್ ತಂಡ

ಅತ್ತ ಭಾರತದ ಮಹಿಳಾ ಸ್ಕ್ವಾಷ್ ತಂಡ ಕಂಚಿನ ಪದಕ ಗೆದ್ದುಕೊಂಡಿತು. ಶುಕ್ರವಾರ ನಡೆದ ಏಷ್ಯನ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ಹಾಂಕಾಂಗ್ ವಿರುದ್ಧ 1-2 ಅಂತರದಿಂದ ಸೋತ ಜೋಶನಾ ಚಿನಪ್ಪ, ತನ್ವಿ ಖನ್ನಾ ಮತ್ತು ಅನಾಹತ್ ಸಿಂಗ್ ಅವರನ್ನೊಳಗೊಂಡ ತಂಡ ಕಂಚಿಗೆ ತೃಪ್ತಿಪಟ್ಟಿತು. ತನ್ವಿ ಮತ್ತು 15 ವರ್ಷದ ಅನಾಹತ್ ಇಬ್ಬರೂ ತಮ್ಮ ತಮ್ಮ ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲರಾದರು. ಆದರೆ ಅನುಭವಿ ಜೋಶನಾ ಚಿನಪ್ಪ ತಮ್ಮ ಎದುರಾಳಿಯನ್ನು 3-2 ಅಂತರದಿಂದ ಸೋಲಿಸಿದರು.

ಭಾರತದ ಇಂದಿನ ಪ್ರಮುಖ ಫಲಿತಾಂಶಗಳು

ಅಥ್ಲೆಟಿಕ್ಸ್

  • ಪುರುಷರ 20 ಕಿ.ಮೀ ಓಟದ ನಡಿಗೆಯಲ್ಲಿ ವಿಕಾಶ್ ಸಿಂಗ್ ಐದನೇ ಸ್ಥಾನ ಪಡೆದರು
  • ಮಹಿಳೆಯರ 20 ಕಿ.ಮೀ ಓಟದ ನಡಿಗೆಯಲ್ಲಿ ಪ್ರಿಯಾಂಕಾ 5ನೇ ಸ್ಥಾನ

ಶೂಟಿಂಗ್

  • 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ
  • ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಪಾಲಕ್‌ಗೆ ಚಿನ್ನದ ಪದಕ
  • ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಇಶಾ ಸಿಂಗ್ ಬೆಳ್ಳಿ
  • 50 ಮೀಟರ್ ರೈಫಲ್ 3ಪಿ ಪುರುಷರ ತಂಡದಲ್ಲಿ ಚಿನ್ನ
  • ಪುರುಷರ 50 ಮೀಟರ್ ರೈಫಲ್ 3ಪಿ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಪದಕ

ಟೆನಿಸ್

  • ಪುರುಷರ ಡಬಲ್ಸ್‌ನಲ್ಲಿ ಸಾಕೇತ್ ಮೈನೇನಿ, ರಾಮ್‌ಕುಮಾರ್ ರಾಮನಾಥನ್ -ಬೆಳ್ಳಿ ಪದಕ

ಸ್ಕ್ವಾಷ್

  • ಮಹಿಳೆಯರ ಟೀಮ್ ಇವೆಂಟ್‌ನಲ್ಲಿ ಭಾರತಕ್ಕೆ ಕಂಚಿನ ಪದಕ

ಬಾಕ್ಸಿಂಗ್

  • ಮಹಿಳೆಯರ 57 ಕೆಜಿ ವಿಭಾಗದ 16ರ ಸುತ್ತಿನಲ್ಲಿ ಭಾರತದ ಪರ್ವೀನ್ ಹೂಡಾ ಚೀನಾದ ಕ್ಸು ಜಿಚುನ್ ಅವರನ್ನು ಸೋಲಿಸಿದರು.
  • ಪುರುಷರ 80 ಕೆಜಿ ವಿಭಾಗದ ಎರಡನೇ ಸುತ್ತಿನಲ್ಲಿ ಭಾರತದ ಲಕ್ಷ್ಯ ಚಹಾರ್‌ಗೆ ಸೋಲು

ಟೇಬಲ್ ಟೆನಿಸ್

  • ಮಹಿಳೆಯರ ಡಬಲ್ಸ್ 16ರ ಸುತ್ತಿನಲ್ಲಿ ಶ್ರೀಜಾ ಅಕುಲಾ-ದಿಯಾ ಪರಾಗ್ ಚಿತಾಲೆ ಸೋತು ಪರಾಭವಗೊಂಡರು
  • ಭಾರತದ ಸುತೀರ್ಥ ಮುಖರ್ಜಿ ಮತ್ತು ಅಹಿಕಾ ಮುಖರ್ಜಿ ಜೋಡಿ ಥಾಯ್ಲೆಂಡ್‌ ತಂಡವನ್ನು ಸೋಲಿಸಿ ಮಹಿಳೆಯರ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಈಜು

  • ಮಹಿಳೆಯರ 50 ಮೀಟರ್ ಬಟರ್‌ಫ್ಲೈ ಹಿಯರ್ಸ್‌ನಲ್ಲಿ ನೀನಾ ವೆಂಕಟೇಶ್ 14ನೇ ಸ್ಥಾನ

ಶುಕ್ರವಾರ ಮಧ್ಯಾಹ್ನದವರೆಗೆ ಭಾರತ ಗೆದ್ದಿರುವ ಪದಕಗಳು

ಚಿನ್ನ: 8, ಬೆಳ್ಳಿ: 12, ಕಂಚು: 12

ಒಟ್ಟು 32 ಪದಕದೊಂದಿಗೆ ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.