ಗಳಿಸಿದ್ದೆಲ್ಲ ಆಟಕ್ಕೆ ಖರ್ಚು; ಭಾರತದ ನಂಬರ್ 1 ಟೆನಿಸ್ ಆಟಗಾರನ ಬ್ಯಾಂಕ್ ಬ್ಯಾಲೆನ್ಸ್ 80 ಸಾವಿರ ರೂ ಮಾತ್ರ
Sumit Nagal: ಎಟಿಪಿ ಟೂರ್‌ನಲ್ಲಿ ಉಳಿಯಲು ದೇಶದ ನಂಬರ್ ವನ್ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ತಮ್ಮ ಬಹುಮಾನದ ಹಣ, ಸಂಬಳ ಸೇರಿ ಎಲ್ಲಾ ಹಣವನ್ನು ಹೂಡಿಕೆ ಮಾಡಿದ್ದಾರೆ. ಅವರ ಬ್ಯಾಂಕ್ ಬ್ಯಾಲೆನ್ಸ್ 1 ಲಕ್ಷದ ಗಡಿಯೂ ದಾಟಿಲ್ಲ ಎನ್ನುವುದು ಖೇದಕರ.
ಭಾರತದ ನಂಬರ್ ವನ್ ಟೆನಿಸ್ ಆಟಗಾರನಾಗಿರುವ ಸುಮಿತ್ ನಗಾಲ್ (Sumit Nagal), ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗನ್ನು ಹೇಳಿಕೊಂಡಿದ್ದಾರೆ. ದೇಶದ ನಂಬರ್ ವನ್ ಟೆನಿಸ್ ಆಟಗಾರನಾದರೂ, ತಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿ ಮೊತ್ತ ಉಳಿಸಲಾಗುತ್ತಿಲ್ಲ ಎಂಬ ನೋವು ಅವರದ್ದು.
ಎಟಿಪಿ ಟೂರ್‌ನಲ್ಲಿ ಮುಂದುವರೆಯಲು ಬರೋಬ್ಬರಿ ಒಂದು ಕೋಟಿ ರೂಪಾಯಿ ವ್ಯವಸ್ಥೆ ಮಾಡಿದ ಬಳಿಕ, ನಗಾಲ್ ಅವರ ಬ್ಯಾಂಕ್ ಖಾತೆಯಲ್ಲಿ ಸದ್ಯ ಉಳಿದಿರುವುದು 80 ಸಾವಿರ ರೂಪಾಯಿ ಮಾತ್ರವಂತೆ. ಇದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ. ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಡಿದ್ದರೂ, ಸಂಪಾದಿಸಿದ್ದೆಲ್ಲಾ ಆಟಕ್ಕಾಗಿ ಖರ್ಚಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸ್ನೇಹಿತರ ನೆರವು
ಜರ್ಮನಿಯ ನ್ಯಾನ್ಸೆಲ್ ಟೆನಿಸ್ ಅಕಾಡೆಮಿಯಲ್ಲಿ ಕೆಲವು ವರ್ಷಗಳಿಂದ ನಗಾಲ್ ತರಬೇತಿ ಪಡೆಯುತ್ತಿದ್ದರು. ಆದರೆ ಹಣಕಾಸಿನ ಕೊರತೆಯಿಂದಾಗಿ 2023ರ ಋತುವಿನ ಮೊದಲ ಮೂರು ತಿಂಗಳಲ್ಲಿ ತಮ್ಮ ನೆಚ್ಚಿನ ಸ್ಥಳದಲ್ಲಿ ತರಬೇತಿ ಪಡೆಯಲು ಸಾಧ್ಯವಾಗಿಲ್ಲ. ಆ ಸಮಯದಲ್ಲಿ ಸ್ನೇಹಿತರಾದ ಸೋಮ್‌ದೇವ್ ದೇವವರ್ಮನ್ ಮತ್ತು ಕ್ರಿಸ್ಟೋಫರ್ ಮಾರ್ಕುಯಿಸ್, ಕಳೆದ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಗಾಲ್ ಅವರಿಗೆ ಹಣಕಾಸಿನ ನೆರವು ನೀಡಿದ್ದರಂತೆ.
ದೇಶದ ನಂಬರ್ ವನ್ ಸಿಂಗಲ್ಸ್ ಆಟಗಾರನಾದರೂ ಸೂಕ್ತ ಸ್ಪಾನ್ಸರ್ ಹಾಗೂ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದು ಖೇದಕರ. ಅಲ್ಲದೆ ತನ್ನ ಕುಟುಂಬಕ್ಕಾಗಿ ಸಾಕಷ್ಟು ಹಣವನ್ನು ಉಳಿಸಲಾಗದ ಪರಿಸ್ಥಿತಿಯಲ್ಲಿರುವುದು ಭಾರತ ಕ್ರೀಡಾಕ್ಷೇತ್ರಕ್ಕೆ ಮುಜುಗರ ತರಿಸುವಂತಿದೆ.
ಎಲ್ಲಾ ಹಣವು ಆಟಕ್ಕಾಗಿ ಖರ್ಚು
ಅದ್ಧೂರಿ ATP ಟೂರ್‌ನಲ್ಲಿ ಉಳಿಯಲು ಮತ್ತು ಆಡಲು, ನಗಾಲ್ ಅವರು ತಮ್ಮಲ್ಲಿರುವ ಎಲ್ಲಾ ಹಣವನ್ನು ವಿನಿಯೋಗಿಸಿದಾದರೆ. ಈವರೆಗೆ ಗೆದ್ದ ಬಹುಮಾನದ ಹಣ, IOCL ನಿಂದ ಪಡೆಯುವ ಸಂಬಳ ಮತ್ತು ಮಹಾ ಟೆನಿಸ್ ಫೌಂಡೇಶನ್‌ನಿಂದ ಪಡೆಯುವ ನೆರವನ್ನು ಕೂಡಾ ಎಟಿಪಿ ಟೂರ್‌ಗಾಗಿ ಖರ್ಚು ಮಾಡಿದ್ದಾರೆ. ಈ ಮೊತ್ತದಲ್ಲಿ ಅವರು ತಮ್ಮ ತರಬೇತಿ ಕೇಂದ್ರದಲ್ಲಿ ಉಳಿದುಕೊಳ್ಳಲು ಮತ್ತು ತರಬೇತುದಾರ ಅಥವಾ ಫಿಸಿಯೋ ಯಾರಾದರೂ ಒಬ್ಬರೊಂದಿಗೆ ಪಂದ್ಯಾವಳಿ ಸ್ಥಳಕ್ಕೆ ಪ್ರಯಾಣಕ್ಕೆ ವಿನಿಯೋಗಿಸುತ್ತಾರೆ.
ದೊಡ್ಡ ಮಟ್ಟದ ಪ್ರಾಯೋಜಕರಿಲ್ಲ
“ನನ್ನ ಬ್ಯಾಂಕ್ ಬ್ಯಾಲೆನ್ಸ್ ನೋಡಿದರೆ, ವರ್ಷದ ಆರಂಭದಲ್ಲಿ ನನ್ನ ಬಳಿ ಇದ್ದದ್ದು 900 ಯುರೋಗಳು (ಅಂದಾಜು 80,000 ರೂಪಾಯಿ) ಮಾತ್ರ. ನನಗೆ ಸ್ವಲ್ಪ ಮಟ್ಟಿನ ಸಹಾಯ ಸಿಕ್ಕಿತು. ಪ್ರಶಾಂತ್ ಸುತಾರ್ ಮತ್ತು MAHA ಟೆನಿಸ್ ಫೌಂಡೇಶನ್ ನನಗೆ ಸಹಾಯ ಮಾಡುತ್ತಿದೆ. ನಾನು IOCL ನಿಂದ ಮಾಸಿಕ ಸಂಬಳ ಪಡೆಯುತ್ತೇನೆ. ಆದರೆ ನನಗೆ ಯಾವುದೇ ದೊಡ್ಡ ಮಟ್ಟದ ಪ್ರಾಯೋಜಕರಿಲ್ಲ” ಎಂದು ದೇಶದ ನಂಬರ್ ವನ್ ಟೆನ್ನಿಸ್ ಆಟಗಾರ ನಗಾಲ್ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಂಪಾದಿಸಿದ್ದೆಲ್ಲವನ್ನೂ ಆಟಕ್ಕಾಗಿ ಹೂಡುತ್ತಿದ್ದೇನೆ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಗಾಲ್ ಬಳಸುವ ತಮ್ಮ ಟೆನ್ನಿಸ್ ರಾಕೆಟ್, ಬೂಟುಗಳು ಮತ್ತು ಉಡುಪುಗಳ ಪ್ರಾಯೋಜಕತ್ವವನ್ನು ಕ್ರಮವಾಗಿ ಯೋನೆಕ್ಸ್ ಮತ್ತು ಎಎಸ್ಐಸಿಎಸ್ ನೋಡಿಕೊಳ್ಳುತ್ತಿದೆ. ಈ ವರ್ಷ ಆಡಿದ 24 ಪಂದ್ಯಾವಳಿಗಳಲ್ಲಿ, ನಗಾಲ್ ಅವರು ಸುಮಾರು 65 ಲಕ್ಷ ರೂಪಾಯಿಗಳಷ್ಟು ಗಳಿಸಿದ್ದಾರೆ. ಇದರಲ್ಲಿ US ಓಪನ್‌ನಿಂದ ದೊಡ್ಡ ಮೊತ್ತದ ವೇತನ ಸಿಕ್ಕಿದೆ. ಅಲ್ಲಿ 22,000 ಯುಎಸ್ ಡಾಲರ್ (ಅಂದಾಜು 18 ಲಕ್ಷ ರೂ) ಗಳಿಸಿದ್ದಾರೆ. ಅಲ್ಲಿ ಅವರು ಅರ್ಹತಾ ಪಂದ್ಯಗಳ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದರು.
“ನಾನು ಸಂಪಾದಿಸುತ್ತಿರುವ ಎಲ್ಲವನ್ನೂ ನನ್ನ ಆಟಕ್ಕಾಗಿ ಹೂಡಿಕೆ ಮಾಡುತ್ತಿದ್ದೇನೆ. ಒಬ್ಬರು ಕೋಚ್‌ನೊಂದಿಗೆ ಪ್ರಯಾಣಿಸಲು ನನಗೆ ವಾರ್ಷಿಕವಾಗಿ ಸುಮಾರು 80 ಲಕ್ಷದಿಂದ 1 ಕೋಟಿ ರೂಪಾಯಿ ಖರ್ಚಾಗುತ್ತದೆ. ಅದು ಕೂಡಾ ಕೇವಲ ಒಬ್ಬರು ಟ್ರಾವಲಿಂಗ್ ಕೋಚ್ ಮಾತ್ರ. ಫಿಸಿಯೋ ಇಲ್ಲ. ನಾನು ಈವರೆಗೆ ಎಷ್ಟೇ ಸಂಪಾದಿಸಿದ್ದರೂ ಅದನ್ನೆಲ್ಲಾ ನಾನು ಈಗಾಗಲೇ ಹೂಡಿಕೆ ಮಾಡಿದ್ದೇನೆ” ಎಂದು ನಂಬರ್ ವನ್ ಆಟಗಾರ ಹೇಳಿದ್ದಾರೆ.
ನನಗೆ ನೆರವಿನ ಕೊರತೆಯಿದೆ
“ಕಳೆದ ಕೆಲವು ವರ್ಷಗಳಿಂದ ನಾನು ಭಾರತದ ನಂಬರ್ ವನ್ ಆಟಗಾರನಾಗಿದ್ದರೂ ನನಗೆ ನೆರವಿನ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಗ್ರ್ಯಾಂಡ್ ಸ್ಲ್ಯಾಮ್‌ಗಳಿಗೆ ಅರ್ಹತೆ ಪಡೆದ ಭಾರತದ ಏಕೈಕ ಆಟಗಾರ ನಾನು. ಕಳೆದ ಕೆಲವು ವರ್ಷಗಳ ಒಳಗೆ ಒಲಿಂಪಿಕ್ಸ್‌ನಲ್ಲಿ (ಟೋಕಿಯೊ) ಪಂದ್ಯವನ್ನು ಗೆದ್ದ ಏಕೈಕ ಆಟಗಾರ ನಾನು. ಆದರೂ ಸರ್ಕಾರ ಇನ್ನೂ ನನ್ನ ಹೆಸರನ್ನು ಟಾಪ್ಸ್‌ಗೆ (TOPS, Target Olympic Podium Scheme) ಸೇರಿಸಿಲ್ಲ” ಎಂದು ನಗಾಲ್ ನೋವಿನಿಂದ ಹೇಳುತ್ತಾರೆ. ಸರ್ಕಾರ ಮತ್ತು ಕ್ರೀಡಾ ಇಲಾಖೆ ನಗಾಲ್ ಸಾಧನೆಯನ್ನು ಗುರುತಿಸಿ ನೆರವಾಗಬೇಕಿದೆ.