Wrestlers Protest: ಇನ್ಮುಂದೆ ನಾವು ರಸ್ತೆಗಿಳಿಯಲ್ಲ, ಏನಿದ್ದರೂ ನ್ಯಾಯಾಲಯದಲ್ಲೇ ಹೋರಾಟ; ಪ್ರತಿಭಟನೆ ನಿಲ್ಲಿಸಿದ ಕುಸ್ತಿಪಟುಗಳು
ನಮಗೆ ನ್ಯಾಯ ಸಿಗುವವರೆಗೂ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ. ಆದರೆ ಈ ಹೋರಾಟ ನ್ಯಾಯಾಲಯದಲ್ಲಿ ಮಾತ್ರ. ರಸ್ತೆಗಳಿಗೆ ಇಳಿಯುವುದಿಲ್ಲ ಎಂದು ಕುಸ್ತಿಪಟುಗಳು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಕುಸ್ತಿಪಟುಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು (Wrestlers Protest) ಕೈಬಿಟ್ಟಿರುವುದಾಗಿ ಹೇಳಿದ್ದಾರೆ. ಆದರೆ ರಸ್ತೆಯಲ್ಲಿ ಪ್ರತಿಭಟನೆ ಹೋರಾಟ ನಡೆಸುವುದಿಲ್ಲ. ಆದರೆ ಇನ್ನಮುಂದೆ ಕಾನೂನು ಮೂಲಕ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.
ಸುಮಾರು ಎರಡು ತಿಂಗಳಿಂದ ಜಂತರ್ ಮಂತರ್ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಬ್ರೇಕ್ ಹಾಕಿದ್ದೇವೆ. ದೆಹಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ, ಸದ್ಯ ಜೂನ್ 15ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹಾಗಾಗಿ ದೆಹಲಿಯ ಜಂತರ್ ಮಂತರ್ ಅಥವಾ ಬೇರೆಲ್ಲೂ ರಸ್ತೆಗಿಳಿಯದೆ ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತೇವೆ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ನಮಗೆ ನ್ಯಾಯ ಸಿಗುವವರೆಗೂ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ. ಆದರೆ ಈ ಹೋರಾಟ ನ್ಯಾಯಾಲಯದಲ್ಲಿ ಮಾತ್ರ. ಭಾರತ ಕುಸ್ತಿ ಫೆಡರೇಷನ್ಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಜೂನ್ 11ರಂದು ನಡೆಯುವ ಚುನಾವಣೆಗೆ ಸಂಬಂಧಿಸಿ ಸರ್ಕಾರದ ಭರವಸೆಗಳಿಗೆ ಕಾಯುತ್ತೇವೆ ಎಂದು ಕುಸ್ತಿಪಟುಗಳಾದ ವಿನೇಶ್ ಫೋಗಾಟ್, ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ತಮ್ಮ ಟ್ವಿಟರ್ಗಳ ಮೂಲಕ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನೀಡಿದ ಭರವಸೆಯಂತೆ, ಪ್ರತಿಭಟನೆಯನ್ನು ಕುಸ್ತಿಪಟುಗಳು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು. ಅಪ್ರಾಪ್ತೆ ಸೇರಿದಂತೆ 7 ಮಹಿಳಾ ಕುಸ್ತಿಪಟುಗಳು ಬ್ರಿಜ್ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ದಾಖಲಿಸಿದ್ದರು. ಇದರಲ್ಲಿ ಫೋಕ್ಸೋ ಪ್ರಕರಣವೂ ಇದೆ. ದೂರಿನಲ್ಲಿ ದಾಖಲಾದ ಗಂಭೀರ ಆರೋಪಗಳನ್ನು ಬಹಿರಂಗವಾಗಿತ್ತು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಗೃಹ ಸಚಿವ ಅಮಿತ್ ಶಾ ಕೂಡ ಅವರನ್ನು ಕರೆಸಿ ಮಾತನಾಡಿದ್ದರು.
ಅಮಿತ್ ಶಾ ಅವರೊಂದಿಗೆ ಮಾತುಕತೆಯ ಬಳಿಕ ದೆಹಲಿ ಪೊಲೀಸರು, ತನಿಖೆಯನ್ನು ವೇಗಗೊಳಿಸಿದ್ದರು. ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಉಳಿದ ಕುಸ್ತಿಪಟುಗಳು, ರೆಫ್ರಿಗಳು, ಕೋಚ್ಗಳು ಸೇರಿದಂತೆ 200ಕ್ಕೂ ಅಧಿಕ ಮಂದಿಯಿಂದ ಹೇಳಿಕೆ ಪಡೆದಿರುವ ಪೊಲೀಸರು, ದೆಹಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಗುವಾಹಟಿ ಹೈಕೋರ್ಟ್ ತಡೆ!
ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆ ಜುಲೈ 11ರಂದು ನಡೆಯಬೇಕಿತ್ತು. ಆದರೆ ಗುವಾಹಟಿ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಫೆಡರೇಷನ್ನ ಅಂಗಸಂಸ್ಥೆಯ ಸದಸ್ಯತ್ವಕ್ಕೆ ಅರ್ಹತೆ ಇದ್ದರೂ ಅವಕಾಶ ನೀಡುತ್ತಿಲ್ಲ ಎಂದು ಅಸ್ಸಾಂ ಕುಸ್ತಿ ಒಕ್ಕೂಟವು ತಾತ್ಕಾಲಿ ಸಮಿತಿ ಹಾಗೂ ಕ್ರೀಡಾ ಸಚಿವಾಯಲಯದ ವಿರುದ್ಧ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಚುನಾವಣೆಗೆ ತಡೆ ನೀಡಿತು. ಜೊತೆಗೆ ಜುಲೈ 17ಕ್ಕೆ ಚುನಾವಣೆ ಮುಂದೂಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಂತೆ ಬ್ರಿಜ್ ಭೂಷಣ್?
ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ)ದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್, ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಕೈಸರ್‌ಗಂಜ್ ಕ್ಷೇತ್ರದಿಂದಲೇ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಜೂನ್ 11) ಕೈಸರ್‌ಗಂಜ್ ಕ್ಷೇತ್ರದಲ್ಲಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.