ಅಜ್ಜನ ಜಾತ್ರೆ: ಜನವರಿ 15ಕ್ಕೆ ಕೊಪ್ಪಳ ಗವಿಸಿದ್ದೇಶ್ವರ ಮಹಾರಥೋತ್ಸವ; ಬಸ್, ವಸತಿ, ಊಟದ ವ್ಯವಸ್ಥೆ ಎಲ್ಲಿ ಹೇಗೆ
Dec 22, 2024 01:23 PM IST
2025ರ ಜನವರಿ 15 ರಂದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ (ಸಂಗ್ರಹ ಚಿತ್ರ)
- ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. 2025 ರ ಜನವರಿಯಲ್ಲಿ ನಡೆಯುವ ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ. ಬೆಂಗಳೂರಿನಿಂದ ಈ ಜಾತ್ರೆಗೆ ಹೋಗುವುದು ಹೇಗೆ, ಊಟ-ವಸತಿ ವ್ಯವಸ್ಥೆ, ಸಮೀಪದ ಪ್ರವಾಸಿ ತಾಣಗಳು ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.
ದಕ್ಷಿಣ ಭಾರತದ ಕುಂಭಮೇಳ ಅಂತಲೇ ಖ್ಯಾತಿ ಪಡೆದಿರುವ ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ದಿನಗಣನೆ ಆರಂಭವಾಗಿದೆ. 2025ರ ಜನವರಿ 15 ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾಮಹಿಮೆ ಗವಿಸಿದ್ದೇಶ್ವರ ಮಹಾ ರಥೋತ್ಸವ ನಡೆಯಲಿದೆ. 7 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಜನವರಿ 11ರ ಶನಿವಾರ ಆರಂಭವಾಗಿ ಜನವರಿ 17ರ ಶುಕ್ರವಾರ ಸಮಾರೋಪಗೊಳ್ಳಲಿದೆ.
ತಾಜಾ ಫೋಟೊಗಳು
ಪ್ರತಿ ವರ್ಷ ಅಜ್ಜನ ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಜಾತ್ರೆ ಮಹಾದಾಸೋಹವಾಗಿ ಮಾರ್ಪಟ್ಟಿದೆ. ಕೊಪ್ಪಳ ಹಾಗೂ ನೆರೆಹೊರೆಯ ಜಿಲ್ಲೆಗಳಿಂದ ಮಾತ್ರವಲ್ಲದೆ, ದೇಶ, ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಅಜ್ಜನ ಜಾತ್ರೆ, ರೊಟ್ಟಿಯ ಜಾತ್ರೆ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಗವಿಸಿದ್ದೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಇಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ರೊಟ್ಟಿ ಊಟ ವಿಶೇಷವಾಗಿರುತ್ತದೆ. ಬೆಂಗಳೂರಿನಿಂದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಹೋಗುವುದು ಹೇಗೆ, ಉಳಿದುಕೊಳ್ಳಲು ವ್ಯವಸ್ಥೆ, ಊಟ, ಸಮೀಪದ ಪ್ರವಾಸಿ ತಾಣಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗವಿಮಠದಿಂದ ನಡೆಯುವ 7 ದಿನಗಳ ಜಾತ್ರಾ ಮಹೋತ್ಸವದ ವಿವರ
1. 2025ರ ಜನವರಿ 11 ರಂದು ಸಂಜೆ 5 ಗಂಟೆಗೆ ಬಸವಪಟ ಕಾರ್ಯಕ್ರಮ
2. 2025ರ ಜನವರಿ 12 ರಂದು ಸಂಜೆ 5 ಗಂಟೆಗೆ ತೆಪೋತ್ಸವ
3. 2025ರ ಜನವರಿ 13 ರಂದು ಸಂಜೆ 5 ಗಂಟೆಗೆ ಗವಿಸಿದ್ದೇಶ್ವರ ಮೂರ್ತಿ ಪಲ್ಲಕ್ಕಿ ಉತ್ಸವ
4. 2025ರ ಜನವರಿ 14 ರಂದು ಸಂಜೆ 5 ಗಂಟೆಗೆ ಉಚ್ಛಾಯಿ (ಲಘು ರಥೋತ್ಸವ) ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮ
5. 2025ರ ಜನವರಿ 15 ರಂದು ಸಂಜೆ 5 ಗಂಟೆಗೆ ಗವಿಸಿದ್ದೇಶ್ವರ ಮಹಾರಥೋತ್ಸವ ಹಾಗೂ ಧಾರ್ಮಿಕ ಗೋಷ್ಠಿ
6. 2025ರ ಜನವರಿ 16 ರಂದು ಸಂಜೆ 5 ಗಂಟೆಗೆ ಬಳಗನೂರು ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಹಾಗೂ ಧಾರ್ಮಿಕ ಗೋಷ್ಠಿ
7. 2025ರ ಜನವರಿ 17 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ
ಬೆಂಗಳೂರಿನಿಂದ ಕೊಪ್ಪಳಕ್ಕೆ ಹೋಗುವುದು ಹೇಗೆ
ಬೆಂಗಳೂರಿನಿಂದ ಕೊಪ್ಪಳಕ್ಕೆ 351 ಕಿಲೋ ಮೀಟರ್ ಇದ್ದು, ಕಾರು, ಬಸ್, ರೈಲು ಹಾಗೂ ವಿಮಾನ ಮೂಲಕ ತಲುಪಬಹುದು. ಕೊಪ್ಪಳದ ಬಸ್ ನಿಲ್ದಾಣದಿಂದ ಗವಿಸಿದ್ದೇಶ್ವರ ಮಠಕ್ಕೆ 3 ಕಿಲೋ ಮೀಟರ್ ಅಂತರವಿದ್ದು, 9 ನಿಮಿಷಗಳಲ್ಲಿ ಮಠಕ್ಕೆ ತಲುಪಬಹುದು. ಇನ್ನು ಬೆಂಗಳೂರುನಿಂದ ಕೊಪ್ಪಳಗೆ ಸಾಕಷ್ಟು ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳು ಸಂಚರಿಸುತ್ತವೆ. ಕೆಎಸ್ಆರ್ ಟಿಸಿ ಬಸ್ ಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಟರೆ, ಖಾಸಗಿ ಬಸ್ ಗಳು ಆನಂದ್ ರಾವ್ ಸರ್ಕಲ್ ನಿಂದ ಹೊರಡುತ್ತವೆ. ಸ್ಲೀಪರ್, ಸೆಮಿ ಸ್ಲೀಪರ್ ಹಾಗೂ ಸಾಮಾನ್ಯ ಸೀಟಿನ ಬಸ್ ಗಳು ಸಂಚರಿಸುತ್ತವೆ. 5 ರಿಂದ 6 ಗಂಟೆಗಳ ಪ್ರಯಾಣ ಮಾಡಿದರೆ ಕೊಪ್ಪಳ ತಲುಪಬಹುದು. ಕೆಎಸ್ಆರ್ ಟಿಸಿ ಬಸ್ ನಲ್ಲಿ ಟಿಕೆಟ್ ದರ 950 ರೂಪಾಯಿ ಇದೆ. ಬಸ್ ಗಳ ಶ್ರೇಣಿಯ ಆಧಾರದಲ್ಲಿ ಬೆಲೆಗಳು ಬದಲಾಗುತ್ತವೆ. ಖಾಸಗಿ ಬಸ್ ಗಳಲ್ಲಿ 800 ರೂಪಾಯಿಂದ 1100 ರೂಪಾಯಿ ವರೆಗೆ ಇದೆ.
ಬೆಂಗಳೂರಿನಿಂದ ಕೊಪ್ಪಳಕ್ಕೆ ರೈಲು ವ್ಯವಸ್ಥೆ
ಬೆಂಗಳೂರಿನಿಂದ ಕೊಪ್ಪಳಕ್ಕೆ ರೈಲು ವ್ಯವಸ್ಥೆ ಇದೆ. ವಾರದಲ್ಲಿ ಒಮ್ಮೆ ಸಂಚರಿಸುವ ಸಾಯಿನಗರ್ ಶಿರಡಿ ವೀಕ್ಲಿ ಎಕ್ಸ್ ಪ್ರೆಸ್ (ಸೋಮವಾರ ಮಾತ್ರ), ಕರ್ನಾಕಟ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ (ವಾರದಲ್ಲಿ 5 ದಿನ), ವಿಜಯಪುರ ಸ್ಪೆಷಲ್ ಎಕ್ಸ್ ಪ್ರೆಸ್ (ವಾರದ ಎಲ್ಲಾ ದಿನ) ಹಾಗೂ ಹಂಪಿ ಎಕ್ಸ್ ಪ್ರೆಸ್ (ವಾರದ ಎಲ್ಲ ದಿನ) ರೈಲುಗಳ ವ್ಯವಸ್ಥೆ ಇದೆ. ಈ ಎಲ್ಲಾ ರೈಲುಗಳು ಬೆಂಗಳೂರಿನ ಯಶವಂಪುರ ಜಂಕ್ಷನ್ ನಿಂದ ಹೊರಟು ಕೊಪ್ಪಳ ತಲುಪಲಿವೆ. ಎಸ್ ಎಲ್ ಗೆ 256 ರೂಪಾಯಿ ಟಿಕೆಟ್ ದರವಿದ್ದು, 3ಎಗೆ 705 ರೂಪಾಯಿ, 2ಎಗೆ 1000 ರೂಪಾಯಿ ಹಾಗೂ 1ಎ ಟಿಕೆಗ್ 1,675 ರೂಪಾಯಿ ದರಗಳಿವೆ.
ಬೆಂಗಳೂರಿನಿಂದ ಕೊಪ್ಪಳಕ್ಕೆ ವಿಮಾನ ಮೂಲಕ ತೆರಳುವುದು ಹೇಗೆ
ಕೊಪ್ಪಳಕ್ಕೆ ನೇರ ವಿಮಾನ ವ್ಯವಸ್ಥೆ ಇಲ್ಲ. ಆದರೆ ಸಮೀಪದಲ್ಲಿ ವಿದ್ಯಾನಗರ ವಿಮಾನ ನಿಲ್ದಾಣವಿದೆ. ಬೆಂಗಳೂರಿನಿಂದ ವಿದ್ಯಾನಗರ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕೊಪ್ಪಳ್ಳಕ್ಕೆ ತೆರಳಬಹುದು. ವಿದ್ಯಾನಗರ ವಿಮಾನ ನಿಲ್ದಾಣದಿಂದ ಕೊಪ್ಪಳಕ್ಕೆ 68 ಕಿಲೋ ಮೀಟರ್ ಅಂತರವಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಬಸ್ ಮೂಲಕ ಕೊಪ್ಪಳ ತಲುಪಬಹುದು. ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ 119 ಕಿಲೋ ಮೀಟರ್ ಅಂತರವಿದೆ. ಬೆಂಗಳೂರಿನಿಂದ ಹುಬ್ಬಳಿಗೆ ನಿತ್ಯ ವಿಮಾನ ಸೇವೆ ಲಭ್ಯವಿದೆ.
ಗವಿಸಿದ್ದೇಶ್ವರ ಜಾತ್ರೆ ಸಮಯದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ
ಗವಿಸಿದ್ದೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಊಚಿತ ಊಟದ ವ್ಯವಸ್ಥೆ ಇರುತ್ತದೆ. ಆದರೆ ಲಕ್ಷಾಂತರ ಮಂದಿ ಬರುವ ಕಾರಣ ದೊಡ್ಡ ದೊಡ್ಡ ಸರತಿ ಸಾಲಿನಲ್ಲಿ ನಿಂತು ಊಟವನ್ನು ಪಡೆಯಬೇಕಾಗುತ್ತದೆ. ವಸತಿ ವಿಚಾರವಾಗಿ ಮಾತನಾಡುವುದಾದರೆ ಗವಿಸಿದ್ದೇಶ್ವರ ಮಠಕ್ಕೆ ಸಂಬಂಧಿಸಿದ ನಾಲ್ಕೈದು ಶಾಲೆಗಳಿವೆ. ಜಾತ್ರೆಯ ಸಂದರ್ಭದಲ್ಲಿ ಈ ಶಾಲೆಗಳಲ್ಲಿ ಭಕ್ತರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಕೊಪ್ಪಳದಲ್ಲಿ ಹೋಟೆಲ್ ಗಳು ಇವೆ. ಜೊತೆಗೆ ಕೊಪ್ಪಳದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಹೊಸಪೇಟೆಯಲ್ಲಿ ದೊಡ್ಡ ದೊಡ್ಡ ಹೋಟೆಲ್ ಗಳ ವ್ಯವಸ್ಥೆ ಇದೆ. ಇಲ್ಲಿನ ಲಾಡ್ಜ್ ಅಥವಾ ಹೋಟೆಲ್ ಗಳಲ್ಲಿ ಉಳಿದುಕೊಳ್ಳಬಹುದು.
ಕೊಪ್ಪಳ ಸಮೀಪದಲ್ಲಿ ಏನೆಲ್ಲಾ ಪ್ರವಾಸಿ ತಾಣಗಳಿವೆ
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಹೋಗುವ ಭಕ್ತರು ಸಮೀಪದ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಂಡು ಬರಬಹುದು. ಹಂಪಿ, ಅಂಜನಾದ್ರಿ ಬೆಟ್ಟ, ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಪಾರ್ಕ್, ಆನೆಗುಂದಿ ಹಾಗೂ ತುಂಗಭದ್ರಾ ನದಿಯನ್ನು ವೀಕ್ಷಿಸಬಹುದು. ಈ ಎಲ್ಲಾ ಪ್ರವಾಸಿ ತಾಣಗಳು ಕೊಪ್ಪಳದಿಂದ 50 ರಿಂದ 60 ಕಿಲೋ ಮೀಟರ್ ಅಂತರದಲ್ಲಿವೆ. ಸ್ವಂತ ವಾಹನದಲ್ಲಿ ಹೋದರೆ ಕಡಿಮೆ ಸಮಯದಲ್ಲಿ ಈ ಎಲ್ಲಾ ತಾಣಗಳನ್ನು ಸುತ್ತಬಹುದು.