ಸಿಂಹ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಹೊಗಳುವವರಿಂದ ದೂರ ಇರಿ, ಇಂಥವರಿಗೆ ಹಣ ಕೊಟ್ಟರೆ ಮರಳಿ ಬಾರದು
Mar 29, 2024 09:12 PM IST
ಸಿಂಹ ರಾಶಿಯ ಯುಗಾದಿ ವರ್ಷ ಭವಿಷ್ಯ
ಯುಗಾದಿ ರಾಶಿ ಭವಿಷ್ಯ: ದೃಢ ಸಂಕಲ್ಪ ಮತ್ತು ಹಟಮಾರಿತನದಿಂದ ಹಿಡಿದ ಕೆಲಸ ಸಾಧಿಸುವುದರಲ್ಲಿ ಸಿಂಹ ರಾಶಿಗೆ ಸೇರಿದವರನ್ನು ಬಿಟ್ಟರೆ ಇಲ್ಲ. ಸಿಂಹ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದರಲ್ಲಿ ಬೆಲ್ಲ; ಜ್ಯೋತಿಷಿ ಎಚ್.ಸತೀಶ್ ಈ ಬರಹದಲ್ಲಿ ವಿವರ ನೀಡಿದ್ದಾರೆ.
ಸಿಂಹ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಮಖ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಪುಬ್ಬ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಉತ್ತರ ನಕ್ಷತ್ರದ 1ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಸಿಂಹ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಮ, ಮಿ, ಮು ಮತ್ತು ಮೆ ಆದಲ್ಲಿ ಮಖ ನಕ್ಷತ್ರ. ಮೊ, ಟ, ಟಿ ಮತ್ತು ಟು ಆದಲ್ಲಿ ಪುಬ್ಬ ನಕ್ಷತ್ರ ಮತ್ತು ಟೆ ಆದಲ್ಲಿ ಉತ್ತರ ನಕ್ಷತ್ರದೊಂದಿಗೆ ಸಿಂಹ ರಾಶಿ ಆಗುತ್ತದೆ.
ತಾಜಾ ಫೋಟೊಗಳು
ಹೆಸರೇ ಸೂಚಿಸುವಂತೆ 'ಸಿಂಹ' ಈ ರಾಶಿಯ ಚಿಹ್ನೆ. ಸೂರ್ಯ ಈ ರಾಶಿಯ ಅಧಿಪತಿ ಗ್ರಹ. ಹೊರಗಿನಿಂದ ಕಠಿಣವಾಗಿರುವಂತೆ ಕಾಣಿಸಿಕೊಂಡರೂ ಆಂತರ್ಯದಲ್ಲಿ ಇವರ ಮನಸ್ಸು ಮೃದು. ಯಾವುದೇ ಬಗೆಯ ಕೆಲಸವಿದ್ದರೂ ಸರಿ, ಪರಿಪೂರ್ಣವಾಗಿರಬೇಕು ಎಂದು ಬಯಸುತ್ತಾರೆ. ಹತ್ತಿರದವರಿಂದ ಮೋಸ ಹೋದರೆ ಸುಲಭವಾಗಿ ಮರೆಯುವುದಿಲ್ಲ, ಸಂಬಂಧ ಸರಿಪಡಿಸಿಕೊಳ್ಳಲು ಹೆಚ್ಚು ಅವಕಾಶಗಳನ್ನೂ ಕೊಡುವುದಿಲ್ಲ. ಆದರೆ ಒಲಿದರೆ, ಇವರೊಂದಿಗೆ ಆಪ್ತ ವಲಯಕ್ಕೆ ಸೇರಿದರೆ ತಮ್ಮವರು ಎನಿಸಿಕೊಂಡವರನ್ನು ಎಂದಿಗೂ ಕೈಬಿಡುವುದಿಲ್ಲ.
ಸಿಂಹ ರಾಶಿಯ ಗುಣಲಕ್ಷಣಗಳು (leo characteristics in Kannada)
ಸಿಂಹ ರಾಶಿಯಲ್ಲಿ ಹುಟ್ಟಿರುವ ಮಹಿಳೆಯರು ಸಾಮಾನ್ಯವಾಗಿ ಶೃಂಗಾರ ಪ್ರಿಯರಾಗಿರುತ್ತಾರೆ. ಸಭೆ ಸಮಾರಂಭಗಳಲ್ಲಿ ಬಹು ಮುಖ್ಯ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ. ತಾನಾಗಿಯೇ ಜನಪ್ರಿಯತೆ ದೊರೆಯುತ್ತದೆ. ಅತಿ ಶೀಘ್ರವೇ ಕೋಪಗೊಳ್ಳುತ್ತಾರೆ. ನಾನು ಮಾಡುವುದೆಲ್ಲ ಸರಿ ಎಂಬ ಭಾವನೆ ಸದಾ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ. ದೊಡ್ಡವರೊಂದಿಗೆ ದೊಡ್ಡವರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದೇ ಇವರ ವಿಶೇಷ.
ಪುರುಷರಿಗೆ ಸ್ವಾಭಿಮಾನವು ಅತಿಯಾಗಿರುತ್ತದೆ. ಜೀವನದಲ್ಲಿ ಯಾವುದಾದರೂ ಒಂದು ವಿಚಾರದಲ್ಲಿ ಹೆಚ್ಚಿನ ಸಾಧನೆ ಮಾಡುವ ಬಯಕೆ ಇರುತ್ತದೆ. ಅನಾವಶ್ಯಕವಾಗಿ ವೇಳೆಯನ್ನು ವ್ಯರ್ಥ ಮಾಡದೆ ಕೈಹಿಡಿದ ಕೆಲಸಗಳನ್ನು ವೇಗವಾಗಿ ಮುಗಿಸುತ್ತಾರೆ. ಒಳ್ಳೆಯ ಸ್ವಭಾವವಿರುವ ಕಾರಣ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಆದರೆ ಅತಿಯಾದ ಕೋಪ ಕೆಲವರನ್ನು ದೂರ ಸರಿಯುವಂತೆ ಮಾಡುತ್ತದೆ. ಈ ರಾಶಿಗೆ ಸೇರಿದವರು ಸ್ವಭಾವತಃ ಪ್ರಾಮಾಣಿಕರು. ಪತ್ನಿಯನ್ನು ಪ್ರೀತಿಯಿಂದ ಸಲಹುತ್ತಾರೆ.
ಸ್ತ್ರೀಯರಾಗಲಿ, ಪುರುಷರಾಗಲಿ ಈ ರಾಶಿಯಲ್ಲಿ ಜನಿಸಿದವರು ಸುಲಭವಾಗಿ ಯಾರ ಮಾತನ್ನೂ ಕೇಳುವುದಿಲ್ಲ. ಎಷ್ಟೇ ಕಷ್ಟವೆನಿಸಿದರು ಆಡಳಿತದ ಚುಕ್ಕಾಣಿ ತಮ್ಮ ಬಳಿಯೇ ಇರಬೇಕು ಎಂದುಕೊಳ್ಳುತ್ತಾರೆ. ಸಮಾಜದ ಗಣ್ಯವ್ಯಕ್ತಿಗಳ ಸ್ನೇಹ ಸಹವಾಸ ಇರುತ್ತದೆ.
ಸಿಂಹ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ
ಸಿಂಹ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು ಇವು. ಶುಭ ದಿನಾಂಕಗಳು: 1, 4, 5, 6, 9, 15, 24. ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಕಿತ್ತಳೆ, ಕೆಂಪು ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಬಿಳಿ. ಶುಭ ದಿಕ್ಕು: ಪೂರ್ವ ಮತ್ತು ದಕ್ಷಿಣ. ಶುಭ ತಿಂಗಳು: ಡಿಸೆಂಬರ್ 15ರಿಂದ ಜುಲೈ 14. ಶುಭ ಹರಳು: ಹವಳ, ಕನಕ, ಪುಷ್ಯರಾಗ ಮತ್ತು ಮಾಣಿಕ್ಯ. ಶುಭ ರಾಶಿ: ವೃಶ್ಚಿಕ, ಧನಸ್ಸು ಮತ್ತು ಮೇಷ. ಅಶುಭ ರಾಶಿ: ತುಲಾ, ಮಕರ, ಕುಂಭ ಮತ್ತು ವೃಷಭ.
ಶ್ರೀ ಕ್ರೋಧಿನಾಮ ಸಂವತ್ಸರದ ಸಿಂಹ ರಾಶಿಯ ಗೋಚಾರ ಫಲ
ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಸಿಂಹ ರಾಶಿಯವರು ಉತ್ತಮ ಫಲಗಳನ್ನು ಪಡೆಯುತ್ತಾರೆ. ಆದರೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಉದ್ಯೋಗದಲ್ಲಿ ಜೂನ್ ತಿಂಗಳವರೆಗೂ ಸಾಧಾರಣ ಫಲಿತಾಂಶಗಳು ಕಂಡುಬರುತ್ತವೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಜೂನ್ ತಿಂಗಳ ನಂತರ ಯಾವುದೇ ಕೆಲಸ ಕಾರ್ಯಗಳಾದರೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇರುತ್ತದೆ. ಬೇರೆಯವರೊಂದಿಗೆ ಮಾತನಾಡುವ ವೇಳೆ ಎಚ್ಚರಿಕೆಯಿಂದ ವರ್ತಿಸಬೇಕು. ಇಲ್ಲದೆ ಹೋದಲ್ಲಿ ಅಶುಭ ಫಲಗಳು ದೊರೆಯಲಿವೆ. ಈ ಸಂವತ್ಸರದಲ್ಲಿ ಸಿಂಹ ರಾಶಿಯವರು ಯಾವುದೇ ಯೋಚನೆ ಇಲ್ಲದೆ ಶಾಂತಿ ನೆಮ್ಮದಿಯ ಜೀವನ ನಡೆಸಲಿದ್ದಾರೆ.
ಸಿಂಹ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ
ಸಿಂಹ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದ ಆರಂಭದಲ್ಲಿ ದಾಂಪತ್ಯ ಕಲಹವಿದ್ದರೂ ಕ್ರಮೇಣ ಅದು ಮರೆಯಾಗುತ್ತದೆ. ಸದಾಕಾಲ ಕುಟುಂಬದ ಮೇಲ್ವಿಚಾರಣೆ ಮಾಡುವ ಮನಸ್ಸಿನಲ್ಲಿ ಇರುತ್ತಾರೆ. ಕ್ರಮೇಣವಾಗಿ ಕುಟುಂಬದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಶಾಂತಿಯಿಂದ ವರ್ತಿಸಿದರೆ ಜೀವನದಲ್ಲಿ ನೆಮ್ಮದಿಯು ಸಹಜವಾಗಿ ಮೂಡುತ್ತದೆ. ಯಾವುದೇ ವಿವಾದವಿದ್ದರೂ ಮಾತುಕತೆಯಿಂದ ಸರಿಪಡಿಸಿ ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವಿರಿ. ಸತಿ ಮತ್ತು ಪತ್ನಿಯರ ನಡುವೆ ಏನಾದರೂ ಚರ್ಚೆ ನಡೆಯುತ್ತಲೇ ಇರುತ್ತದೆ. ಮನದಲ್ಲಿರುವ ಭಾವನೆಗಳನ್ನು ಹಂಚಿಕೊಂಡಲ್ಲಿ ಜೀವನದಲ್ಲಿ ಸುಖ ಸಂತೋಷ ನಡೆಸುತ್ತದೆ. ಒಟ್ಟಾರೆ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಲು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು.
ಉದ್ಯೋಗ: ಆತ್ಮೀಯರಿಂದ ಸಹಕಾರ, ಪೂರ್ಣತೆಯತ್ತ ಪಯಣ
ಸಿಂಹ ರಾಶಿಯವರು ಉದ್ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸುವಿರಿ. ಆದರೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ನಿಮ್ಮ ಆತ್ಮೀಯರಿಂದ ತಡವಾಗಿ ಉತ್ತಮ ಸಹಾಯ ಸಹಕಾರ ದೊರೆಯಲಿದೆ. ಇದರಿಂದಾಗಿ ನಿಮ್ಮ ಸ್ಥಾನಮಾನವು ಬಲಗೊಳ್ಳುತ್ತದೆ. ಎದುರಾಗುವ ವಾದವಿವಾದಗಳನ್ನು ಮಾತುಕತೆಯಿಂದ ಪರಿಹರಿಸಿಕೊಳ್ಳುವಿರಿ. ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳ ಬಗ್ಗೆ ಕನಿಕರ ತೋರುವಿರಿ. ತಾನಾಗಿಯೇ ದೊರೆಯುವ ಆಡಳಿತವನ್ನು ಒಪ್ಪಿಕೊಳ್ಳುವಿರಿ. ಉದ್ಯೋಗ ಬದಲಾವಣೆ ಆಗದೆ ಹೋದರೂ, ಆಂತರಿಕವಾಗಿ ಬದಲಾವಣೆಯಾಗುವ ಸಾಧ್ಯತೆ ಇದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮೆಲ್ಲ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಅಥವಾ ದೂರದ ಪ್ರದೇಶಕ್ಕೆ ಪ್ರವಾಸ ಮಾಡುವ ಅವಕಾಶ ಲಭಿಸುತ್ತದೆ. ಒಟ್ಟಾರೆ ಈ ಸಂವತ್ಸರದಲ್ಲಿ ನಿಮ್ಮ ಸಾಮರ್ಥ್ಯವನ್ನು ಒರೆಹಚ್ಚುವ, ನಿರೂಪಿಸುವ ಕೆಲಸ ನಡೆಯುತ್ತದೆ.
ವಿದ್ಯಾಭ್ಯಾಸ: ಅಧ್ಯಯನದ ಕಡೆಗೆ ಗಮನ ಕೊಡಿ
ಸಿಂಹ ರಾಶಿಯವ ವಿದ್ಯಾರ್ಥಿಗಳು ಎದುರಾಗುವ ಸವಾಲುಗಳಲ್ಲಿ ಸುಲಭವಾಗಿ ಯಶಸ್ಸು ಗಳಿಸುತ್ತಾರೆ. ಅಧ್ಯಯನದ ಮೇಲೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸ್ನೇಹಿತರಿಂದ ದೂರ ಉಳಿದು ಏಕಾಂಗಿಯಲ್ಲಿ ಕಲಿಕೆಯಲ್ಲಿ ತೊಡಗುತ್ತಾರೆ. ಮನೆಯಲ್ಲಿ ಸದಾ ಕಾಲ ಉತ್ತಮ ಚಿಂತನೆಗಳು ತುಂಬಿರುತ್ತವೆ. ವಿದ್ಯಾಭ್ಯಾಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಆದರೆ ರುಚಿಯಾದ ಊಟ ಮತ್ತು ಹಿತಕರ ನಿದ್ದೆ ಇವರನ್ನು ಕಾಡುತ್ತದೆ. ಎದುರಾಗುವ ಸವಾಲುಗಳನ್ನು ಉತ್ತಮ ಪ್ರಯತ್ನದಿಂದ ಗೆಲ್ಲುತ್ತಾರೆ. ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶಗಳು ದೊರೆಯಲಿವೆ. ಹಿರಿಯ ಅಧಿಕಾರಿಗಳ ಅಥವಾ ಸರಕಾರದ ಸಹಾಯದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಒಟ್ಟಾರೆ ಸದಾಕಾಲ ಸ್ವಂತ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೇವೆ ಎಂದು ಹಟ ಹಿಡಿಯದೇ, ಇತರರ ಸಲಹೆಗಳನ್ನೂ ಸ್ವೀಕರಿಸುವುದು ಒಳ್ಳೆಯದು.
ಹಣಕಾಸು: ಉತ್ತಮ ಆದಾಯವಿದ್ದರೂ ಹಣದ ಕೊರತೆ
ಸಿಂಹ ರಾಶಿಯವರಿಗೆ ಈ ವರ್ಷ ಉತ್ತಮ ಆದಾಯವಿರುತ್ತದೆ. ಆದರೆ ಕೆಲವೊಮ್ಮೆ ಆದಾಯದ ಕೊರತೆಯೂ ಇರುತ್ತದೆ. ಪ್ರತಿ ಬಾರಿಯೂ ನಿರ್ದಿಷ್ಟ ರೀತಿಯಲ್ಲಿ ಹಣಕಾಸಿನ ವ್ಯವಹಾರದಲ್ಲಿ ತೊಡಗುವಿರಿ. ಹೆಚ್ಚಿನ ಹಣವಿದ್ದಾಗ ತುಸು ಉಳಿಸುವಿರಿ. ಈ ಸಂವತ್ಸರದಲ್ಲಿ ನಿಮಗೆ ಹಣದ ತೊಂದರೆ ಕಂಡುಬರುವುದಿಲ್ಲ .ನಿಮ್ಮ ಹಿರಿಯ ಸೋದರನಿಗೆ ಹಣದ ಸಹಾಯ ಮಾಡಬೇಕಾಗಿ ಬರುತ್ತದೆ. ಕೆಲವರಿಗೆ ನಿಮ್ಮನ್ನು ಹೊಗಳಿ ನಿಮ್ಮಿಂದ ಹಣವನ್ನು ಪಡೆಯುವ ಯೋಚನೆ ಇರುತ್ತದೆ. ಇಂಥವರನ್ನು ದೂರ ಇಡಿ, ಅಂಥವರ ಬಗ್ಗೆ ಎಚ್ಚರಿಕೆ ಇರಲಿ. ನಿಮಗೆ ಬೇರೆಯವರಿಂದ ಬರಬೇಕಾಗಿದ್ದ ದೊಡ್ಡ ಮೊತ್ತದ ಹಣ ಕೈ ಸೇರುತ್ತದೆ. ಒಟ್ಟಾರೆ ಆದಾಯ ಮತ್ತು ಖರ್ಚು ವೆಚ್ಚಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಿರಿ.
ಕೌಟುಂಬಿಕ ಜೀವನ: ಚಾಡಿ ಮಾತು ಕೇಳಿದರೆ ನೆಮ್ಮದಿ ಹಾಳು
ಸಿಂಹ ರಾಶಿಯವರಿಗೆ ತನ್ನ ಕುಟುಂಬವೇ ಸರ್ವಸ್ವ ಎನ್ನುವ ಮನೋಭಾವ ಸಾಮಾನ್ಯವಾಗಿ ಇರುತ್ತದೆ. ಹೊರಗಿನ ಅನುಭವಗಳನ್ನು ಆಧರಿಸಿ ಕುಟುಂಬವನ್ನು ಸುಖಮಯವಾಗಿಸುವ ನಿಮ್ಮ ಪ್ರಯತ್ನಗಳು ಫಲ ಕೊಡುತ್ತವೆ. ಆದರೆ ಮೊದಲು ಚಾಡಿ ಮಾತು ಕೇಳುವುದನ್ನು ಬಿಡಬೇಕು. ಕೌಟುಂಬಿಕ ಸಮಸ್ಯೆಗಳನ್ನು ಬರಿ ಮಾತಿನಿಂದಲೇ ಸರಿಪಡಿಸುವಿರಿ. ವಾದ ವಿವಾದಗಳು ಇಲ್ಲದ ಕಾರಣ ಕುಟುಂಬದಲ್ಲಿ ಸುಖ ಸಂತೃಪ್ತಿ ನೆಲೆಸಿರುತ್ತದೆ. ದಂಪತಿಗಳ ನಡುವೆ ಉತ್ತಮ ಸಹಕಾರ ಸದಾ ಕಾಲ ಇರಲಿದೆ. ಮಕ್ಕಳ ಅಭಿವೃದ್ಧಿಗಾಗಿ ಯಾವುದೇ ತ್ಯಾಗ ಮಾಡಬಲ್ಲಿರಿ. ಒಡಹುಟ್ಟಿದವರೊಂದಿಗೆ ಸಾಮರಸ್ಯ ಮತ್ತು ಸಕಾರಾತ್ಮಕ ಸಂಬಂಧಗಳನ್ನು ಕಾಣಬಹುದು. ಸ್ತ್ರೀಯರಾಗಲಿ ಪುರುಷರಾಗಲಿ ತಂದೆ ತಾಯಿಗೆ ನೀಡುವ ಗೌರವವನ್ನು ಅತ್ತೆ ಮಾವನಿಗೂ ನೀಡುವ ಕಾರಣ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಮಕ್ಕಳ ವಿಚಾರ: ಮಕ್ಕಳು ಮನಸ್ಸು ಅರ್ಥೈಸಿಕೊಂಡು ಸ್ಪಂದಿಸಿ
ವಯಸ್ಸಿನ ಅಂತರವನ್ನು ನೋಡದೆ ಮಕ್ಕಳೊಂದಿಗೆ ಪ್ರತಿಯೊಂದು ವಿಚಾರವನ್ನು ಚರ್ಚಿಸುವಿರಿ. ಇದರಿಂದ ಮಕ್ಕಳ ಜೊತೆಗಿನ ಸಂಬಂಧ ಉತ್ತಮಗೊಳ್ಳುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ವಿನಿಯೋಗಿಸುವಿರಿ. ಇದರಿಂದಾಗಿ ನಿಮ್ಮ ಮೇಲಿನ ಗೌರವ ಅವರಿಗೆ ಹೆಚ್ಚಾಗಲಿದೆ. ಮಕ್ಕಳಿಗೆ ಕೊಂಚ ಮೊಂಡುತನ ಇರುತ್ತದೆ. ಇದರಿಂದಾಗಿ ಕೆಲವೊಮ್ಮೆ ಅತಿಯಾದ ಸಿಡುಕುತನದಿಂದ ವರ್ತಿಸುವಿರಿ. ಮಕ್ಕಳು ನಿಮ್ಮ ಮನದಾಸೆಯನ್ನು ಪೂರೈಸಲು ಸದಾ ಪ್ರಯತ್ನಿಸುತ್ತಾರೆ. ಗೌರವ ತರಬಲ್ಲ ಕೆಲಸಗಳನ್ನು ಮಕ್ಕಳು ಮಾಡಲಿದ್ದಾರೆ. ಸಂತಾನ ದೋಷವಿರುವವರಿಗೆ ಉತ್ತಮ ಚಿಕಿತ್ಸೆ ದೊರೆತು ಸಂತಾನ ಪ್ರಾಪ್ತಿ ಆಗುತ್ತದೆ. ಪುಟ್ಟಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ದಿಢೀರನೆ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು.
ವಿವಾಹ ಮತ್ತು ದಾಂಪತ್ಯ: ಈ ವರ್ಷ ವಿವಾಹ ಯೋಗವಿದೆ
ಸಿಂಹ ರಾಶಿಯವರಿಗೆ ಈ ವರ್ಷ ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅವಿವಾಹಿತರಿಗೆ ಜೂನ್ ತಿಂಗಳ ಒಳಗೆ ಸುಲಭವಾಗಿ ವಿವಾಹವಾಗುತ್ತದೆ. ಈ ಪ್ರಯತ್ನದಲ್ಲಿ ಹಲವರು ನೆರವಿಗೆ ಬರುತ್ತಾರೆ. ನಿಮ್ಮ ಮನಸ್ಸಿಗೆ ಒಪ್ಪುವ ಕನ್ಯೆ ಅಥವಾ ವರ ದೊರಕುತ್ತಾರೆ. ಮನೆಯವರ ಬಲವಂತಕ್ಕಾಗಿ ವಿವಾಹವಾಗುವ ಅವಶ್ಯಕತೆ ಕಂಡು ಬರುವುದಿಲ್ಲ. ಯಾರೋ ನೀಡಿದ ತಪ್ಪು ಮಾಹಿತಿಗಳನ್ನು ಒಪ್ಪಿ ಸಂಗಾತಿಯ ಬಗ್ಗೆ ಅನುಮಾನ ಪಡದಿರಿ. ನಿಮ್ಮ ಸುತ್ತಮುತ್ತ ಸುಳ್ಳು ಹೇಳುವ ಜನ ಇರುತ್ತಾರೆ. ಸಂಗಾತಿಯ ಆರೋಗ್ಯದಲ್ಲಿ ಅಲ್ಪ ಪ್ರಮಾಣದ ತೊಂದರೆ ಕಾಣಬಹುದು. ನೂತನ ದಂಪತಿಗಳ ನಡುವೆ ವೈಮನಸ್ಯ ಮರೆಯಾಗುತ್ತದೆ. ಪತ್ನಿಗಾಗಿ ಸಣ್ಣ ಪ್ರಮಾಣದ ಉಧ್ಯಮವನ್ನು ಆರಂಭಿಸುವಿರಿ. ಒಟ್ಟಾರೆ ಒಬ್ಬರನ್ನೊಬ್ಬರು ಒಪ್ಪಿ, ಪರಸ್ಪರ ಕ್ಷಮಿಸಿ ನಡೆಯಬೇಕು.
ವ್ಯಾಪಾರ ಮತ್ತು ವ್ಯವಹಾರ: ನಿಧಾನಗತಿಯ ಅಭಿವೃದ್ಧಿ
ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುವಿರಿ. ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವರು ನಿಮಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಪಾಲುಗಾರಿಕೆ ವ್ಯಾಪಾರಗಳು ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ. ಹಿರಿಯ ಸೋದರನ ವ್ಯಾಪಾರ ವ್ಯವಹಾರಕ್ಕೆ ಬೆಂಗಾಲಾಗುವಿರಿ. ಸಾಲವಾಗಿ ನೀಡಿದ ಹಣ ಮರಳಿ ಕೈ ಸೇರುವುದು ಕಷ್ಟ ಸಾಧ್ಯ. ಸರಿಯಾದ ಕಾನೂನು ಪ್ರಕ್ರಿಯೆ ಇಲ್ಲದೆ ಯಾರಿಗೂ ಹಣವನ್ನು ನೀಡದಿರಿ. ನೀವು ಕೆಲಸ ನಿರ್ವಹಿಸುವ ಸಂಸ್ಥೆಯಲ್ಲಿ ನಿಮಗೆ ಪಾಲುಗಾರಿಕೆ ದೊರೆಯಲಿದೆ. ಅವಶ್ಯಕತೆ ಇದ್ದರೆ ನಿಮ್ಮ ಸಂಗಾತಿಯಿಂದ ಹಣದ ಸಹಾಯ ದೊರೆಯಲಿದೆ. ಹಟದಿಂದ ಮುಂದುವರೆಯುವ ಬದಲು ಆತ್ಮೀಯರ ಸಲಹೆಯನ್ನು ಪಾಲಿಸಿ. ಈ ಸಂವತ್ಸರದಲ್ಲಿ ಅನಿರೀಕ್ಷಿತ ಧನಾತ್ಮಕ ಬದಲಾವಣೆಗಳು ಕಂಡು ಬರಲಿವೆ.
ವಾಹನ ವಿಚಾರ: ದೊಡ್ಡ ವಾಹನ ಕೊಳ್ಳುವಿರಿ
ಉದ್ಯೋಗ ನೀಡಿದ ಸಂಸ್ಥೆಯಿಂದ ದಿನಬಳಕೆಗಾಗಿ ವಾಹನ ದೊರೆಯುತ್ತದೆ. ಉಡುಗೊರೆಯಾಗಿ ಕುಟುಂಬದ ಹಿರಿಯರೊಬ್ಬರು ವಾಹನವನ್ನು ನೀಡಬಹುದು. 8ನೇ ಮನೆಯಲ್ಲಿ ರಾಹು ಇರುವ ಕಾರಣ ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಕುಟುಂಬದ ಎಲ್ಲರೊಂದಿಗೆ ಪ್ರಯಾಣಿಸಲು ದೊಡ್ಡ ವಾಹನ ಕೊಳ್ಳುವಿರಿ. ಯಾವುದೇ ಕಾರಣಕ್ಕೂ ನೀಲಿ, ಹಸಿರು ಮತ್ತು ಕಪ್ಪು ಬಣ್ಣದ ವಾಹನಗಳನ್ನು ಕೊಳ್ಳಬೇಡಿರಿ. ಹೊಸ ವಾಹನ ಕೊಂಡಲ್ಲಿ ವಾಹನದ ಮುಂಭಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಸಿ.
ಆರೋಗ್ಯದ ವಿಚಾರ: ಮಾನಸಿಕ ಒತ್ತಡಕ್ಕೆ ಬೇಕು ಕಡಿವಾಣ
ಸಾಮಾನ್ಯವಾಗಿ ಸಿಂಹ ರಾಶಿಯವರಿಗೆ ಉತ್ತಮ ಆರೋಗ್ಯವಿರುತ್ತದೆ. ಆದರೆ ಸಪ್ತಮದಲ್ಲಿ ಶನಿ ಇರುವ ಕಾರಣ ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಆದ್ದರಿಂದ ನಿಮಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ರಾಹು 8ನೇ ಮನೆಯಲ್ಲಿ ಇರುವ ಕಾರಣ ಕಲುಷಿತ ನೀರು ಅಥವಾ ಸರಿಯಾದ ರೀತಿಯಲ್ಲಿ ತಯಾರು ಮಾಡಿದ ದ್ರವ ರೂಪದ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಗಂಟಲು ಅಥವಾ ಶ್ವಾಸಕೋಶದ ದೋಷ ಪದೇಪದೆ ಕಾಡುತ್ತದೆ. ಉತ್ತಮ ಹವ್ಯಾಸದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇರಲಿ.
ಸಿಂಹ ರಾಶಿಗೆ ಪರಿಹಾರಗಳು: ಆದಿತ್ಯ ಹೃದಯ ಕೇಳಿ, ಪಠಿಸಿ
1) ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
2) ಹಸಿರು ಬಣ್ಣದ ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ಶ್ರೀ ಗಣಪತಿ ದೇಗುಲಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ನೆಲಹಾಸು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ. ಬಾಯಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ.
4) ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
5) ನಿಮ್ಮ ಬಳಿ ಸದಾ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಕರವಸ್ತ್ರ ಇರಿಸಿಕೊಳ್ಳಿ. ನಿರೀಕ್ಷಿತ ಫಲಗಳು ದೊರೆಯಲು ಇದು ಸಹಕಾರಿ.
ಯುಗಾದಿಗೆ ಸಂಬಂಧಿಸಿದ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.