logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಕ್ಕಿ-ಬೇಳೆ ಅಷ್ಟೇ ಅಲ್ಲ, ನಾವೂ ನೆನೆಯಬೇಕು ಜೊತೆಗೆ ನಮ್ಮ ಮನಸ್ಸನ್ನೂ ನೆನೆಸಬೇಕು: ಅನುದಿನ ಅಧ್ಯಾತ್ಮ

ಅಕ್ಕಿ-ಬೇಳೆ ಅಷ್ಟೇ ಅಲ್ಲ, ನಾವೂ ನೆನೆಯಬೇಕು ಜೊತೆಗೆ ನಮ್ಮ ಮನಸ್ಸನ್ನೂ ನೆನೆಸಬೇಕು: ಅನುದಿನ ಅಧ್ಯಾತ್ಮ

D M Ghanashyam HT Kannada

Nov 07, 2023 05:15 AM IST

google News

ಶಿವಲಿಂಗಕ್ಕೆ ಅಭಿಷೇಕ (ಸಂಗ್ರಹ ಚಿತ್ರ)

    • ಸಕ್ಕರೆ ಪಾಕದಲ್ಲಿ ಹದವಾಗಿ ಮಿಂದ ಜಿಲೇಬಿ ಆಸ್ವಾದಿಸುವಾಗ ನಮ್ಮ ಮನಸ್ಸೂ ಸಹ ಪರಮಾತ್ಮನ ಚಿಂತನೆಯಿಂದ ಇದೇ ರೀತಿ ಸಿಹಿಯಾಗಲಿ ಎಂದುಕೊಳ್ಳಿ. ಈ ಥರದ ಯೋಚನೆಗಳು ಬಂದರೆ ಸಾಕು; ನೆನೆಸುವುದು, ನೆನೆಯುವುದೂ ಬದುಕಿನ ಅತ್ಯಂತ ಖುಷಿ ಸಂಗತಿಗಳು ಎನಿಸುತ್ತವೆ.
ಶಿವಲಿಂಗಕ್ಕೆ ಅಭಿಷೇಕ (ಸಂಗ್ರಹ ಚಿತ್ರ)
ಶಿವಲಿಂಗಕ್ಕೆ ಅಭಿಷೇಕ (ಸಂಗ್ರಹ ಚಿತ್ರ) (radhakrishnatemple.net)

ಕನ್ನಡದಲ್ಲಿ 'ನೆನೆ' ಎನ್ನುವ ಒಂದೊಳ್ಳೆ ಪದವಿದೆ. ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನನ್ನು ನೆನೆಯುತ್ತಾಳೆ. ಅದೆಷ್ಟರಮಟ್ಟಿಗೆ ಎಂದರೆ ಅವಳು ಅವನನ್ನೇ ನೆನೆಯುತ್ತಾ, ಅವನ ನೆನಪಿನಲ್ಲಿಯೇ ಮುಳುಗಿ ಹೋಗುತ್ತಾಳೆ. ಅದೇ ಹೊತ್ತಿಗೆ ಅನ್ನ ಮಾಡಬೇಕೆಂಬ ಪ್ರಜ್ಞೆ ಜಾಗೃತವಾಗಿ ಅಕ್ಕಿಯನ್ನೂ ನೆನೆ ಹಾಕುತ್ತಾಳೆ. ಒಲೆ ಮೇಲಿಟ್ಟ ಪಾತ್ರೆಯಲ್ಲಿ ಅಕ್ಕಿಯು ಬೆಂದರೆ, ಇವಳ ಮನಸ್ಸು ಪ್ರಿಯಕರನ ನೆನಪಿನ ಶಾಖಕ್ಕೆ ಬೇಯುತ್ತದೆ. ಹೀಗೆ ನೆನಪು ನಮ್ಮ ಮನಸ್ಸನ್ನು ಹಸಿಯಾಗಿಸುತ್ತದೆ, ಬಿಸಿಯಾಗಿಸುತ್ತದೆ. ಇದೇ ನೆನೆಯುವ ಮತ್ತು ನೆನೆಸುವ ಪ್ರಕ್ರಿಯೆಯನ್ನು ತುಸು ಅಧ್ಯಾತ್ಮದ ಕಡೆಗೆ ತಿರುಗಿಸಿದರೆ ಶಿವನ ಒಲುಮೆ ಸಿಗುತ್ತದೆ.

ತಾಜಾ ಫೋಟೊಗಳು

2025ರ ಹೊಸ ವರ್ಷದ ಮೊದಲ ವಾರದಿಂದಲೇ ಈ ರಾಶಿಯವರಿಗೆ ಬಂಪರ್; ಧನ ಯೋಗ, ಇತರರಿಂದ ಬೆಂಬಲ ಸೇರಿ ಹಲವು ಪ್ರಯೋಜನ

Dec 22, 2024 08:14 AM

ನಾಳಿನ ದಿನ ಭವಿಷ್ಯ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ, ವ್ಯವಹಾರದಲ್ಲಿ ಸುಧಾರಣೆ ಕಂಡುಬರುತ್ತೆ

Dec 21, 2024 04:43 PM

24ನೇ ಜನವರಿ 2025ಕ್ಕೆ ಸೂರ್ಯ-ಬುಧ ಸಂಯೋಗದಿಂದ ಬುಧಾದಿತ್ಯ ರಾಜಯೋಗ: ರಾಶಿಯವರ ಜೀವನ ಆಗ ಪಾವನ, ಅದೃಷ್ಟವೋ ಅದೃಷ್ಟ

Dec 20, 2024 05:22 PM

ನಾಳಿನ ದಿನ ಭವಿಷ್ಯ: ನೀವು ಇಷ್ಟಪಡುವ ಜನರೊಂದಿಗೆ ಸಮಯ ಕಳೆಯುತ್ತೀರಿ, ಕೆಲಸಗಳು ಸುಗಮವಾಗಿ ನಡೆಯುತ್ತವೆ

Dec 20, 2024 03:29 PM

ಮಾಸ ಶಿವರಾತ್ರಿಯಿಂದ ಬದಲಾಗಲಿದೆ 3 ರಾಶಿಯವರ ಜೀವನ: ಮಾರ್ಗಶಿರ ಮಾಸದಲ್ಲಿ ಈ ವ್ರತವನ್ನು ಯಾವ ದಿನ ಆಚರಿಸಲಾಗುತ್ತದೆ?

Dec 19, 2024 06:44 PM

ಅಪರಿಚಿತ ವ್ಯಕ್ತಿಗಳನ್ನು ನಂಬಿ ಮೋಸ ಹೋಗದಿರಿ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ; ನಾಳಿನ ದಿನಭವಿಷ್ಯ

Dec 18, 2024 05:02 PM

ನೆನೆ ಎನ್ನುವ ಪದಕ್ಕೆ ಆವೃತ್ತವಾಗುವುದು, ಹಸಿಯಾಗುವುದು, ಪಕ್ವವಾಗುವುದು, ಹಳೆಯ ಘಟನೆಗಳು ಸ್ಮೃತಿಪಟಲದ ಮೇಲೆ ಮತ್ತೆ ಮೂಡುವುದು, ಸ್ಮರಿಸುವುದು, ನೆನಪಾಗುವುದು... ಹೀಗೆ ಹತ್ತಾರು ಅರ್ಥಗಳಿವೆ. ಕುಮಾರವ್ಯಾಸನು ನಾಮಸ್ಮರಣೆಯ ಮಹಿಮೆಯನ್ನು ಹೇಳುವಾಗ "ಹರಿನಾಮವನು ನೆನೆವರು ಕಾಲಚಕ್ರದ ಜವನ ಬೇಗೆಯ ಜುಣುಗಿ ಜಾರುವರು" (ಹರಿನಾಮವನ್ನು ನೆನೆದರೆ ಆ ಯಮನ ದಾಳಿಯಿಂದ ತಪ್ಪಿಸಿಕೊಂಡು ಬಿಡುತ್ತಾರೆ) ಎನ್ನುತ್ತಾನೆ.

ನೆನೆಯುತ್ತಲೇ ಇರುವ ದೇವರು ಈಶ್ವರ. ತಲೆಯ ಮೇಲೆ ಗಂಗೆಯನ್ನು ಹೊತ್ತ ಅವನು ಸದಾ ನೆಂದು ಮಿದುವಾಗಿಯೇ ಇರುತ್ತಾನೆ. ಪುರಾಣಗಳು ಶಿವನನ್ನು 'ಅಭಿಷೇಕ ಪ್ರಿಯ' ಎಂದು ಕೊಂಡಾಡಿವೆ. ನಮಕ-ಚಮಕಗಳನ್ನು ಪಾರಾಯಣ ಮಾಡುವ ಪದ್ಧತಿಗೆ "ರುದ್ರಾಭಿಷೇಕ" ಎಂಬ ಪದವನ್ನೇ ನಮ್ಮ ಪರಂಪರೆಯು ರೂಢಿಗೆ ತಂದಿದೆ. ಅಭಿಷೇಕ ಎಂದರೆ ಮತ್ತೇನು? ನೀರು, ಹಾಲು, ಜೇನು ಇತ್ಯಾದಿಗಳಿಂದ ಲಿಂಗವನ್ನು (ದೇವರ ಪ್ರತಿಮೆಯನ್ನು) ನೆನೆಸುತ್ತಾ ಅವನ ನಾಮಸ್ಮರಣೆಯನ್ನು ನಾವೂ ನೆನೆಯುವುದು.

ನೆನೆಯುವ ಪ್ರಕ್ರಿಯೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯುತ್ತದೆ ರುದ್ರಾಭಿಷೇಕಕ್ಕೆ ಮೊದಲು ಹೇಳುವ ಧ್ಯಾನ ಶ್ಲೋಕ. ಈ ಸಂಸ್ಕೃತ ಶ್ಲೋಕವು ಹೀಗಿದೆ.

"ಆಪಾತಾಲನಭಃಸ್ಥಲಾಂತಭುವನಬ್ರಹ್ಮಾಂಡಮಾವಿಃಸ್ಫುರತ್

ಜ್ಯೋತಿಃಸ್ಫಾಟಿಕಲಿಂಗಮೌಳಿವಿಲಸದ್ ಪೂರ್ಣೇನ್ದುವಾನ್ತಾಮೃತೈಃ |

ಅಸ್ತೋಕಾಪ್ಲುತಮೇಕಮೀಶಮನಿಶಂ ರುದ್ರಾನುವಾಕಾನ್ ಜಪನ್

ಧ್ಯಾಯೇದೀಪ್ಸಿತಸಿದ್ಧಯೇsದ್ರುತಪದಂ ವಿಪ್ರೋsಭಿಷಿಂಚೇತ್ ಶಿವಮ್ ||"

ದೇವರನ್ನು ಹೇಗೆ ಚಿಂತಿಸಬೇಕೆಂಬ ಪರಿಕಲ್ಪನೆ ಕೊಡುವ ಈ ಶ್ಲೋಕದ ಭಾವವನ್ನು ವಿದ್ವಾಂಸರಾದ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಕನ್ನಡದಲ್ಲಿ ಹೀಗೆ ವಿವರಿಸಿದ್ದಾರೆ. "ಪರಮೇಶ್ವರನು ದೇವತೆಗಳು ಅನುಗ್ರಹಕ್ಕಾಗಿ ಲಿಂಗಾಕಾರವಾಗಿ ಜ್ಯೋತಿಃಸ್ವರೂಪದಿಂದ ತೋರಿಕೊಂಡಾಗ ಪಾತಾಳದಿಂದ ಹೊರಟ ಆ ಪ್ರಭೆಯು ಭೂಮ್ಯಾಕಾಶಗಳನ್ನೂ ವ್ಯಾಪಿಸಿ ದ್ಯುಲೋಕವನ್ನೂ ಮೀರಿ ಹೋಯಿತು. ಬ್ರಹ್ಮಾಂಡವನ್ನೇ ಬೆಳಗಿದ ಇಂಥ ಶುದ್ಧತೇಜೋಮಯವಾದ ಲಿಂಗವು ಪವಿತ್ರಜಲದಿಂದ ತೋಯ್ದು ಅಭಿಷಿಕ್ತವಾಗುತ್ತಿರುವುದು. ಇದೇ ಶಿವಲಿಂಗಾಭಿಷೇಕ. ಇದನ್ನು ಪ್ರತಿನಿಧಿಸುವುದಕ್ಕಾಗಿ ಬಾಹ್ಯವಾಗಿ ಶಿಲಾಮಯವಾದ ಲಿಂಗವನ್ನು ನದೀಜಲದಿಂದ ಧಾರಾಕಾರವಾಗಿ ಅಭಿಷೇಕ ಮಾಡುತ್ತಾರೆ. ನಾವು ಸ್ವತಃ ಅಭಿಷೇಕ ಮಾಡಿದರೂ, ನೋಡಿದರೂ ದಿವ್ಯಲಿಂಗವನ್ನು ಧ್ಯಾನಿಸುತ್ತಾ ತನ್ಮಯರಾಗುವುದು ಮುಖ್ಯ".

ಶಿವನನ್ನು ನೀರಿನಿಂದ ನೆನೆಸುತ್ತಾ, ಶಿವಧ್ಯಾನದಲ್ಲಿಯೇ ಮುಳುಗುವ ಭಕ್ತರಿಗೆ ಅವರು ಬಯಸಿದ್ದೆಲ್ಲವೂ ಸಿಗುತ್ತದೆ ಎಂದು ಈ ಧ್ಯಾನ ಶ್ಲೋಕ ಭರವಸೆ ನೀಡುತ್ತದೆ. ಆದರೆ ದೇವರನ್ನು ನೆನೆಯುವುದು ಮಾತ್ರವಲ್ಲ, ಧ್ಯಾನದಲ್ಲಿ ಸಂಪೂರ್ಣವಾಗಿ ಮುಳುಗಿದವರಿಗೆ ಅವನ 'ದರ್ಶನ" ಹೊರತುಪಡಿಸಿ ಮತ್ತೇನಾದರೂ ಬೇಡುವ ಬುದ್ಧಿ ಬಂದೀತೇ? ಹೀಗಾಗಿ ಎಲ್ಲದರಲ್ಲಿಯೂ ಶಿವನನ್ನು ಕಾಣುವ ಶಕ್ತಿಯನ್ನು ದೇವರು ನಮಗೆ ಕೊಡುವುದೇ ಅಭಿಷೇಕದ ಫಲವೂ ಆಗುತ್ತದೆ.

ಈ ಬರಹ ಓದುತ್ತಿರುವ ನೀವು, ಇನ್ಮುಂದೆ ಅಡುಗೆ ಮಾಡುವ ಅಕ್ಕಿಯನ್ನೋ, ಬೇಳೆಯನ್ನೋ ನೆನೆಸುವಾಗ ದೇವರ ಚಿಂತನೆಯಲ್ಲಿ ನಮ್ಮ ಮನಸ್ಸೂ ಇದೇ ಅಕ್ಕಿ-ಬೇಳೆಯಂತೆ ನೆನೆಯಲಿ ಎಂಬ ಭಾವನೆ ಬರಲಿ. ನೀವು ಎಂದಾದರೂ ಮಳೆಯಲ್ಲಿ ತೋಯ್ದರೆ ದೇವರ ಚಿಂತನೆಯು ನಮ್ಮನ್ನು ಹೀಗೆಯೇ ಇಡಿಯಾಗಿ ಆವರಿಸಬೇಕೆಂಬ ಚಿಂತನೆ ಬರಲಿ. ಸಕ್ಕರೆ ಪಾಕದಲ್ಲಿ ಹದವಾಗಿ ಮಿಂದ ಜಿಲೇಬಿ ಆಸ್ವಾದಿಸುವಾಗ ನಮ್ಮ ಮನಸ್ಸೂ ಸಹ ಪರಮಾತ್ಮನ ಚಿಂತನೆಯಿಂದ ಇದೇ ರೀತಿ ಸಿಹಿಯಾಗಲಿ ಎಂದುಕೊಳ್ಳಿ. ಈ ಥರದ ಯೋಚನೆಗಳು ಬಂದರೆ ಸಾಕು, ನೆನೆಸುವುದು, ನೆನೆಯುವುದೂ ಬದುಕಿನ ಅತ್ಯಂತ ಖುಷಿ ಸಂಗತಿಗಳಲ್ಲಿ ಒಂದು ಆಗಿಬಿಡುತ್ತೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ