ಮನೆಯ ಸುತ್ತಮುತ್ತಲಿನ ಖಾಲಿ ಜಾಗ ಹೇಗಿರಬೇಕು? ಕಾಂಪೌಂಡ್ ಗೇಟ್ ಯಾವ ದಿಕ್ಕಿನಲ್ಲಿದ್ದರೆ ಶುಭಫಲಗಳಿವೆ
Sep 18, 2024 08:39 PM IST
ಮನೆಯ ಸುತ್ತಮುತ್ತಲಿನ ಖಾಲಿ ಜಾಗದ ಹೇಗಿರಬೇಕು ಅನ್ನೋದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಯಿರಿ.
- ಬಹುತೇಕ ಮಂದಿ ಮನೆಯನ್ನು ಕಟ್ಟಬೇಕಾದರೆ ವಾಸ್ತು ನೋಡುತ್ತಾರೆ. ಮನೆಯೊಳಗಿನ ವಾಸ್ತುವಿನ ಜೊತೆಗೆ ಹೊರಗಡೆ ಹೇಗಿರಬೇಕು, ಗೇಟ್ ಯಾವ ದಿನಕ್ಕಿನಲ್ಲಿ ಇದ್ದರೆ ಒಳ್ಳೇಯದಾಗುತ್ತೆ ಎಂಬುದರ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ.
ತೋಟದಲ್ಲಿ ಮನೆ ಕಟ್ಟಿದ್ದರೆ ಅದರ ಸುತ್ತಮುತ್ತ ಸಾಕಷ್ಟು ಜಾಗವನ್ನು ಬಿಟ್ಟಿರುತ್ತಾರೆ. ಇಂತಹ ಸ್ಥಳಗಳಲ್ಲಿ ಸುತ್ತಮುತ್ತಲು ಹಸಿರು ಗಿಡಗಳು ಮತ್ತು ಹೂವಿನ ಗಿಡಗಳಿರುವ ಕಾರಣ ಅಳತೆಯ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆದರೆ ಸಾಮಾನ್ಯವಾದ ಮನೆಗಳ ಸುತ್ತಮುತ್ತ ಜಾಗವನ್ನು ಬಿಡಬೇಕಾಗಿ ಬಂದ ಸಂದರ್ಭದಲ್ಲಿ, ಅಳತೆಯಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ರಸ್ತೆ ಇದ್ದಲ್ಲಿ ಯಾವುದೇ ದೋಷ ಕಂಡು ಬರುವುದಿಲ್ಲ. ಪೂರ್ವದ ದಿಕ್ಕಿನಲ್ಲಿ ಮುಖ್ಯ ಗೇಟ್ ಇದ್ದಲ್ಲಿ, ಮನೆಯ ನಾಲ್ಕು ದಿಕ್ಕುಗಳಲ್ಲಿಯೂ ಖಾಲಿ ಜಾಗವನ್ನು ಬಿಡಬಹುದು. ಆದರೆ ಪೂರ್ವ ದಿಕ್ಕಿನ ಗೇಟ್ ಅಲ್ಲದೆ ಬೇರೆ ಯಾವ ದಿಕ್ಕಿನಲ್ಲಿ ಗೇಟನ್ನು ಇಡಬಾರದು. ಅನಿವಾರ್ಯದ ಪರಿಸ್ಥಿತಿಯಲ್ಲಿ ಉತ್ತರ ದಿಕ್ಕಿನಲ್ಲಿ ಗೇಟನ್ನು ಇಡಬಹುದು. ಆದರೆ ಪೂರ್ವದಲ್ಲಿರುವ ಗೇಟಿನ ಅಳತೆಗಿಂತ ಉತ್ತರದಲ್ಲಿ ಇರುವ ಗೇಟಿನ ಅಳತೆಯು ಕಡಿಮೆ ಇರಬೇಕು.
ತಾಜಾ ಫೋಟೊಗಳು
ಪೂರ್ವ ದಿಕ್ಕಿನಲ್ಲಿರುವ ಗೇಟ್ ಆಗ್ನೇಯ ದಿಕ್ಕಿನ ಹತ್ತಿರ ಇರಬಾರದು. ಹಾಗೆಯೇ ಮನೆಯ ಉತ್ತರದಿಂದ ದಕ್ಷಿಣಕ್ಕೆ ಅಳತೆಯನ್ನು ತೆಗೆದುಕೊಂಡಾಗ ಅದರ ಮಧ್ಯಭಾಗಕ್ಕೆ ಬರುವಂತೆ ಪೂರ್ವದಲ್ಲಿ ಗೇಟ್ ಆರಂಭವಾಗಬಾರದು. ಸಾಧ್ಯವಾದಷ್ಟು ಈಶಾನ್ಯ ದಿಕ್ಕಿನ ಹತ್ತಿರದಲ್ಲಿ ಗೇಟ್ ಅನ್ನು ಇಡುವುದು ಒಳ್ಳೆಯದು. ಉತ್ತರ ದಿಕ್ಕಿನಲ್ಲಿ ಇರುವ ಗೇಟನ್ನು ಸಹ ಸಾಧ್ಯವಾದಷ್ಟು ಈಶಾನ್ಯ ಮೂಲೆಯ ಬಳಿ ನೀಡುವುದು ಒಳ್ಳೆಯದು. ಗೇಟನ್ನು ಉತ್ತರ ದಿಕ್ಕಿನ ಮಧ್ಯಭಾಗದಲ್ಲಿ ಇಡಬಾರದು.
ಈ ಮನೆಯ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಖಾಲಿ ಜಾಗವಿದ್ದರೆ ಅವುಗಳ ಅಳತೆಯು ಪರಸ್ಪರ ಸರಿ ಸಮನಾಗಿರಬೇಕು. ಅನಿವಾರ್ಯವಾದಲ್ಲಿ ಮಾತ್ರ ದಕ್ಷಿಣಕ್ಕಿಂತಲೂ ಉತ್ತರದ ಜಾಗವು ಅಳತೆಯೂ ದೊಡ್ಡದಾಗಿರಬಹುದು. ಪೂರ್ವಾ ಮತ್ತು ಪಶ್ಚಿಮ ದಿಕ್ಕುಗಳ ಅಳತೆಯನ್ನು ಪರಿಗಣಿಸಿದಾಗ ಪಶ್ಚಿಮ ದಿಕ್ಕಿನಲ್ಲಿ ಇರುವ ಖಾಲಿಜಾಗದ ಅಳತೆಯು ಪೂರ್ವದಿಕ್ಕಿನಲ್ಲಿರುವ ಅಳತೆಯ ಅರ್ಧಕ್ಕಿಂತಲೂ ಕಡಿಮೆ ಇರುವುದು ಒಳ್ಳೆಯದು. ಸಾಧ್ಯವಾದಲ್ಲಿ ಪೂರ್ವ ದಿಕ್ಕಿನ ಅಳತೆಯ ಕಾಲು ಭಾಗ ಇರಬೇಕು. ಉತ್ತರ ದಕ್ಷಿಣ ದಿಕ್ಕುಗಳಲ್ಲಿನ ಖಾಲಿ ಜಾಗದ ಅಳತೆಗಿಂತಲೂ ಪಶ್ಚಿಮ ದಿಕ್ಕಿನ ಖಾಲಿ ಜಾಗದ ಅಳತೆಯು ಕಡಿಮೆ ಇರಲೇಬೇಕು.
ಉತ್ತರ ದಿಕ್ಕಿನಲ್ಲಿ ಮುಖ್ಯ ಗೇಟ್ ಇದ್ದಲ್ಲಿ ಆ ಮನೆಯ ನಾಲ್ಕು ಬದಿಗಳಲ್ಲಿಯೂ ಖಾಲಿ ಜಾಗವನ್ನು ಬಿಡಬಹುದು. ಆದರೆ ಉತ್ತರ ದಿಕ್ಕಿನ ಗೇಟ್ ಅಲ್ಲದೆ ಬೇರೆ ದಿಕ್ಕುಗಳಲ್ಲಿ ಗೇಟ್ ಅನ್ನು ಇಡಬಾರದು. ಅನಿವಾರ್ಯದ ಪರಿಸ್ಥಿತಿಯಲ್ಲಿ ಮಾತ್ರ ಪೂರ್ವದ ದಿಕ್ಕಿನಲ್ಲಿ ಗೇಟ್ ಅನ್ನು ಇಡಬಹುದು. ಆದರೆ ಉತ್ತರದಲ್ಲಿರುವ ಗೇಟಿನ ಅಳತೆಗಿಂತ ಪೂರ್ವದಲ್ಲಿ ಇರುವ ಗೇಟ್ ನ ಅಳತೆಯು ಕಡಿಮೆ ಇರಬೇಕು.
ಉತ್ತರ ದಿಕ್ಕಿನಲ್ಲಿ ಇರುವ ಗೇಟ್ ವಾಯುವ್ಯ ದಿಕ್ಕಿನ ಸಮೀಪ ಇರಬಾರದು ಹಾಗೆಯೇ ಮನೆಯ ಪೂರ್ವದಿಂದ ಪಶ್ಚಿಮಕ್ಕೆ ಅಳತೆಯನ್ನು ತೆಗೆದುಕೊಂಡಾಗ ಅದರ ಮಧ್ಯಭಾಗದಿಂದ ಗೇಟ್ ಆರಂಭವಾಗಬಾರದು. ಸಾಧ್ಯವಾದಷ್ಟು ಈಶಾನ್ಯ ದಿಕ್ಕಿನ ಹತ್ತಿರದಲ್ಲಿ ಗೇಟನ್ನು ಇಡುವುದು ಒಳ್ಳೆಯದು. ಉತ್ತರದಲ್ಲಿ ಇರುವ ಗೇಟ್ ಸಹ ಸಾಧ್ಯವಾದಷ್ಟು ಈಶಾನ್ಯ ಮೂಲೆಯ ಬಳಿ ಇರುವುದು ಒಳ್ಳೆಯದು. ಗೇಟನ್ನು ಉತ್ತರ ದಿಕ್ಕನ ಮಧ್ಯಭಾಗದಲ್ಲಿ ಇಡಬಾರದು.
ಈ ಮನೆಯ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಖಾಲಿ ಜಾಗವಿದ್ದರೆ ಅವುಗಳ ಅಳತೆಯು ಪರಸ್ಪರ ಸಮನಾಗಿರಬೇಕು. ಅನಿವಾರ್ಯವಾದ ಪಕ್ಷದಲ್ಲಿ ಪಶ್ಚಿಮದ ಜಾಗದ ಅಳತೆಗಿಂತಲೂ ಪೂರ್ವದ ಜಾಗದ ಅಳತೆಯು ದೊಡ್ಡದಾಗಿರಬಹುದು. ಉತ್ತರ ಮತ್ತು ದಕ್ಷಿಣ ದಿಕ್ಕುಗಳ ಖಾಲಿಜಾಗದ ಅಳತೆಯನ್ನು ಪರಿಗಣಿಸಿದಾಗ ದಕ್ಷಿಣ ದಿಕ್ಕಿನಲ್ಲಿ ಇರುವ ಖಾಲಿ ಜಾಗದ ಅಳತೆಯು ಉತ್ತರ ದಿಕ್ಕಿನಲ್ಲಿ ಇರುವ ಖಾಲಿ ಜಾಗದ ಅಳತೆಯ ಅರ್ಧಕ್ಕಿಂತಲೂ ಕಡಿಮೆ ಇರುವುದು ಒಳ್ಳೆಯದು. ಸಾಧ್ಯವಾದಷ್ಟು ದಕ್ಷಿಣ ದಿಕ್ಕಿನ ಜಾಗದ ಅಳತೆಯು ಉತ್ತರ ದಿಕ್ಕಿನ ಜಾಗದ ಅಳತೆಯ ಕಾಲು ಭಾಗ ಇರಬೇಕು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳ ಕಾಲಿ ಜಾಗಗಳ ಅಳತೆಗಿಂತಲೂ ದಕ್ಷಿಣ ದಿಕ್ಕಿನ ಖಾಲಿ ಜಾಗದ ಅಳತೆಯು ಕಡಿಮೆ ಇರಬೇಕು.