ಮೇಕಪ್‌ಗೆ ಬಳಸುವ ಬ್ಯೂಟಿ ಬ್ಲೆಂಡರ್ ಹೇಗೆ ಶುಚಿಗೊಳಿಸಬೇಕು, ಎಷ್ಟು ದಿನಗಳೊಮ್ಮೆ ಬದಲಿಸಬೇಕು?
Dec 23, 2024 05:41 PM IST
ಮೇಕಪ್‌ಗೆ ಬಳಸುವ ಬ್ಯೂಟಿ ಬ್ಲೆಂಡರನ್ನು ಶುಚಿಗೊಳಿಸುವ ವಿಧಾನ
Beauty Tips: ಮುಖ ಹಾಗೂ ಕುತ್ತಿಗೆಗೆ ಸರಿ ಸಮಾನವಾಗಿ ಮೇಕಪ್ ಹಚ್ಚಲು ಬಹಳಷ್ಟು ಜನರು ಬ್ಯೂಟಿ ಬ್ಲೆಂಡರ್ ಬಳಸುತ್ತಾರೆ. ಇದನ್ನು ಬಳಸಿ ಮೇಕಪ್ ಹಚ್ಚಿದರೆ ನೈಸರ್ಗಿಕವಾಗಿ ಕಾಣತ್ತದೆ. ಪ್ರತಿ ಬಾರಿ ಮೇಕಪ್ ಹಾಕುವ ಬ್ಯೂಟಿ ಬ್ಲೆಂಡರನ್ನು ಹೇಗೆ ಕ್ಲೀನ್ ಮಾಡಬೇಕು ಮತ್ತು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ಇಲ್ಲಿದೆ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಮೇಕಪ್ ಮಾಡಲು ಇಷ್ಟಪಡುತ್ತಾರೆ. ಹಬ್ಬ-ಹರಿದಿನ, ಮದುವೆ, ಪಾರ್ಟಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮೇಕಪ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಮೇಕಪ್ ಮಾಡಲು ಅನೇಕ ಉತ್ಪನ್ನಗಳನ್ನು ಬಳಸಲಾಗುತ್ತದೆ. ಜೊತೆಗೆ, ಕೆಲವು ಮೇಕಪ್ ಉಪಕರಣಗಳನ್ನು ಸಹ ಬಳಸಲಾಗುತ್ತದೆ. ಅದರಲ್ಲಿ ಪ್ರಮುಖವಾದವು ಮೇಕಪ್ ಬ್ರಷ್, ಸ್ಪಾಂಜ್, ಬ್ಯೂಟಿ ಬ್ಲೆಂಡರ್. ಈ ಮೂರು ಸಾಧನಗಳಲ್ಲಿ, ಬ್ಯೂಟಿ ಬ್ಲೆಂಡರ್ ಪ್ರತಿಯೊಬ್ಬರ ಮೇಕಪ್ ಕಿಟ್‌ನಲ್ಲಿ ಕಡ್ಡಾಯವಾಗಿ ಹೊಂದಿರಬೇಕು.
ಬ್ಯೂಟಿ ಬ್ಲೆಂಡರ್‌ನ ಉಪಯೋಗಗಳು
ಬ್ಯೂಟಿ ಬ್ಲೆಂಡರ್ ಎನ್ನುವುದು ಮೇಕಪ್ ಅನ್ನು ಹೆಚ್ಚು ಸರಾಗವಾಗಿ ಮತ್ತು ಅಂದವಾಗಿ ಹಚ್ಚಲು ಬಳಸುವ ಸಾಧನವಾಗಿದೆ. ಮೇಕಪ್ ಉತ್ಪನ್ನಗಳಿಗೆ ನಯವಾದ, ನೈಸರ್ಗಿಕ ಟಚ್ ಅಪ್ ನೀಡಲು ಇದು ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತದೆ. ವಿಶೇಷವಾಗಿ ಇದು ಫೌಂಡೇಶನ್, ಕನ್ಸೀಲರ್, ಕ್ರೀಮ್ ಉತ್ಪನ್ನಗಳನ್ನು ಮುಖ, ಕುತ್ತಿಗೆ ಸುತ್ತಲೂ ಸಮನಾಗಿ ಸ್ಪ್ರೆಡ್ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸವನ್ನು ಸುಲಭವಾಗಿ ಮಾಡಲು ಇದು ಸಹಾಯ ಮಾಡುತ್ತದೆ. ಆದರೆ ಈ ಬ್ಯೂಟಿ ಬ್ಲೆಂಡರ್ ಬಳಸುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು. ಅದರಲ್ಲೂ ಶುಚಿಗೊಳಿಸದೆ ಬಳಸುವ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ತ್ವಚೆಯ ಸಮಸ್ಯೆಗಳು ಎದುರಾಗಬಹುದು.
ಬ್ಯೂಟಿ ಬ್ಲೆಂಡರನ್ನು ಹೇಗೆ ಸ್ವಚ್ಛಗೊಳಿಸುವುದು?
ಒಂದೊಂದು ವಸ್ತುವನ್ನು ಶುಚಿಗೊಳಿಸಲು ಒಂದೊಂದು ವಿಧಾನವಿರುತ್ತೆ. ಹಾಗೇ ಬ್ಯೂಟಿ ಬ್ಲೆಂಡರನ್ನು ಕ್ಲೀನ್ ಮಾಡುವುದು ಹೇಗೆ ಎಂದು ಅನೇಕ ಮಹಿಳೆಯರು ಗೊಂದಲಕ್ಕೆ ಒಳಗಾಗುತ್ತಾರೆ. ಜೊತೆಗೆ ಒಮ್ಮೆ ಖರೀದಿಸಿದ ಬ್ಲೆಂಡರನ್ನು ಎಷ್ಟು ದಿನಗಳವರೆಗೂ ಬಳಸಬೇಕು ಎಂಬುದರ ಬಗ್ಗೆ ಕೆಲವರಿಗೆ ಗೊಂದಲವಿದೆ. ಕಾಲಕಾಲಕ್ಕೆ ಬ್ಯೂಟಿ ಬ್ಲೆಂಡರ್ ಅನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಏಕೆಂದರೆ ಇದು ನಿಯಮಿತ ಬಳಕೆಯ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ಮೇಕಪ್ ಶೇಷವನ್ನು ಸಂಗ್ರಹಿಸಬಹುದು. ಇದನ್ನು ಸ್ವಚ್ಛಗೊಳಿಸದಿದ್ದರೆ ನಿಮ್ಮ ಚರ್ಮದ ಆರೋಗ್ಯಕ್ಕೆ ಹಾನಿಯಾಗುತ್ತದೆ.
ನೀರಿನಿಂದ ತೊಳೆಯುವುದು
ನೀವು ಬ್ಯೂಟಿ ಬ್ಲೆಂಡರ್ ಅನ್ನು ನೀರಿನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿಟ್ಟು ನಂತರ ಮೃದುವಾಗಿ ಉಜ್ಜಿ ಸ್ವಚ್ಛಗೊಳಿಸಬಹುದು.ಅಥವಾ ಶ್ಯಾಂಪೂ ನೀರಿನಲ್ಲೂ ನೆನೆಸಿಡಬಹುದು. ಸ್ವಲ್ಪ ಸಮಯದ ನಂತರ ಸಿಲಿಕಾನ್ ಸ್ಕ್ರಬ್‌ನಿಂದ ಸ್ವಚ್ಛಗೊಳಿಸಿ ಶುಚಿಗೊಳಿಸಬಹುದು. ನಂತರ ಶುದ್ಧ ನೀರಿನಿಂದ ಮತ್ತೊಮ್ಮೆ ತೊಳೆಯಿರಿ.
ಸೋಪ್ ಅಥವಾ ಮೇಕಪ್ ಬ್ರಷ್ ಕ್ಲೀನರ್‌ನಿಂದ ಕ್ಲೀನ್ ಮಾಡಿ
ನೀವು ಬ್ಯೂಟಿ ಬ್ಲೆಂಡರ್‌ಗೆ ಸೋಪು ಹಚ್ಚಿ ಮೇಕಪ್ ಬ್ರಷ್ ಕ್ಲೀನರ್ ಬಳಸಿ ಸ್ವಚ್ಛಗೊಳಿಸಬಹುದು. ಆದರೆ ಬಹಳ ಗಟ್ಟಿಯಾಗಿ ಉಜ್ಜಬೇಡಿ. ಹಾಗೇ ಪ್ರತಿ ಬಾರಿ ನೀವು ಮೇಕಪ್ ಹಚ್ಚಿದ ನಂತರ ಬ್ಲೆಂಡನ್ನು ಶುಚಿಗೊಳಿಸಿಯೇ ಮುಂದಿನ ಬಳಕೆಗೆ ಸುರಕ್ಷಿತವಾಗಿ ತೆಗೆದಿಟ್ಟುಕೊಳ್ಳಿ. ಮೇಕಪ್ ಮಾಡುವ ಸಮಯದಲ್ಲಿ ಕ್ಲೀನ್ ಮಾಡುತ್ತಾ ಕೂರಬೇಡಿ.
ನೀರನ್ನು ಸ್ಕ್ವೀಜ್ ಮಾಡಿ
ಮೇಕಪ್ ಬ್ಲೆಂಡರನ್ನು ಕ್ಲೀನ್ ಮಾಡಿ ಅದರಲ್ಲಿ ಹೆಚ್ಚುವರಿ ನೀರು ತೆಗೆಯಲು ಮೃದುವಾಗಿ ಹಿಂಡಿ, ನಂತರ ಶುಭ್ರವಾದ ಬಟ್ಟೆಯಿಂದ ಮೃದುವಾಗಿ ಒರೆಸಿ, ಅಥವಾ ಟಿಶ್ಯೂ ಪೇಪರನ್ನು ಒತ್ತಿ ಹೆಚ್ಚುವರಿ ನೀರನ್ನು ತೆಗೆಯಿರಿ.
ಇದನ್ನೂ ಓದಿ: ತ್ವಚೆಯ ಹೊಳಪಿಗೆ ಕಾಫಿ, ಬಾಳೆಹಣ್ಣು ಫೇಸ್ಮಾಸ್ಕ್
ಗಾಳಿಯಲ್ಲಿ ಒಣಗಿಸಿ
ಬ್ಯೂಟಿ ಬ್ಲೆಂಡರನ್ನು ಸ್ವಚ್ಛಗೊಳಿಸಿದ ನಂತರ ಗಾಳಿ, ಬೆಳಕು ಇರುವ ಸ್ಥಳದಲ್ಲಿ ಒಣಗಿಸಿ. ಅದು ಸಂಪೂರ್ಣವಾಗಿ ಒಣಗದಿದ್ದರೆ, ಬ್ಲೆಂಡರ್ ಕೆಟ್ಟ ವಾಸನೆ ಬರುತ್ತದೆ, ಅದರ ಮೇಲೆ ಬ್ಯಾಕ್ಟೀರಿಯಾ, ಫಂಗಸ್ ಕೂಡಾ ಶೇಖರಣೆ ಅಗಬಹುದು. ಹಾಗಾಗಿ ಸಂಪೂರ್ಣವಾಗಿ ಆರಿದ ನಂತರವೇ ಮೇಕಪ್ ಬ್ಯಾಗ್‌ನಲ್ಲಿ ಹಾಕಿ.
ಬ್ಯೂಟಿ ಬ್ಲೆಂಡರನ್ನು ಯಾವಾಗ ಬದಲಾಯಿಸಬೇಕು?
ಬ್ಯೂಟಿ ಬ್ಲೆಂಡರನ್ನು ದೀರ್ಘಕಾಲದವರೆಗೆ ಬಳಸುವುದು ಚರ್ಮಕ್ಕೆ ಒಳ್ಳೆಯದಲ್ಲ. ಎಷ್ಟೇ ಶುಚಿಗೊಳಿಸಿದರೂ ಮೇಕಪ್ ಅವಶೇಷ ಉಳಿಯುತ್ತದೆ. ಆದ್ದರಿಂದ ನೀವು ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ಬದಲಾಯಿಸಬೇಕು ಮತ್ತು ಹೊಸದನ್ನು ಖರೀದಿಸಬೇಕು.
ಬ್ಯೂಟಿ ಬ್ಲೆಂಡರ್ ಸ್ಪಾಂಜ್ ಹಾಳಾಗಿದ್ದಲ್ಲಿ,ಬಣ್ಣ ಸಂಪೂರ್ಣವಾಗಿ ಬದಲಾದಾಗ ಬದಲಾಯಿಸಬೇಕು.
ಒಂದು ವೇಳೆ ಮೇಕಪ್ ಬ್ಯೂಟಿ ಬ್ಲೆಂಡರ್ ಕೆಟ್ಟ ವಾಸನೆಯಿಂದ ಕೂಡಿದ್ದರೆ ಆಗಲೂ ಅದನ್ನು ಬದಲಿಸಬಹುದು.
ಇದನ್ನೂ ಓದಿ: ಈ ಕಾರಣಗಳಿಂದ ಪುರುಷರು ಕೂಡಾ ತ್ವಚೆಯ ಕಾಳಜಿ ಮಾಡಬೇಕು
ವಿಭಾಗ