ಚಳಿಗಾಲದಲ್ಲಿ ಹೊಳೆಯುವ ತ್ವಚೆಗಾಗಿ ಪ್ರತಿದಿನ ಸೇವಿಸಿ ದಾಳಿಂಬೆ ರಸ; ನಿಮ್ಮ ಮುಖ ಕಾಂತಿಯುತವಾಗಲು ಸಹಕಾರಿ
ಚಳಿಗಾಲದಲ್ಲಿ ಬಹುತೇಕರು ಒಣ ಚರ್ಮದ ಸಮಸ್ಯೆ ಎದುರಿಸುತ್ತಾರೆ. ಮುಖವನ್ನು ಕಾಂತಿಯುತವಾಗಿಸಲು ಹಾಗೂ ದೇಹದ ಆರೋಗ್ಯಕ್ಕೆ ದಾಳಿಂಬೆ ರಸವನ್ನು ಪ್ರತಿದಿನ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆಯನ್ನು ಬಹುತೇಕರು ಎದುರಿಸುತ್ತಾರೆ. ಇಂಥವರಿಗೆ ದಾಳಿಂಬೆ ರಸ (ಜ್ಯೂಸ್) ಪರಿಣಾಮಕಾರಿಯಾಗಿದೆ. ಪ್ರತಿದಿನ ಇದರ ಜ್ಯೂಸ್ ಕುಡಿಯುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ದಾಳಿಂಬೆ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಕಬ್ಬಿಣದ ಹೊರತಾಗಿ, ದಾಳಿಂಬೆ ಇತರ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ದಾಳಿಂಬೆಯ ಸೀಸನ್ ಚಳಿಗಾಲವಾಗಿದ್ದರೂ, ಇದು ವರ್ಷವಿಡೀ ಲಭ್ಯವಿದೆ. ದೇಹದ ಆರೋಗ್ಯಕ್ಕಾಗಿ 1 ದಾಳಿಂಬೆ ಹಣ್ಣು ಅಥವಾ ಅದರ ರಸ (ಜ್ಯೂಸ್) ಕುಡಿಯಬೇಕು. ದಾಳಿಂಬೆ ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಪ್ರಯೋಜನಕಾರಿಯಾಗಿದೆ. ಕೆಲವೊಮ್ಮೆ ಮಾರುಕಟ್ಟೆಯಿಂದ 2 ರಿಂದ 3 ಕೆ.ಜಿ ದಾಳಿಂಬೆ ತರುತ್ತೇವೆ. ಆದರೆ, ಸಿಪ್ಪೆ ಸುಲಿಯುವುದೆಂದರೆ ಕೆಲವರಿಗೆ ಕಷ್ಟ. ಸಿಪ್ಪೆ ಸುಲಿದು ಅದನ್ನು ತಿನ್ನುವುದೆಂದರೆ ಕೆಲವರು ಆಲಸ್ಯ ಮಾಡುತ್ತಾರೆ. ಇನ್ನು ವಯಸ್ಸಾದವರು ಹಲ್ಲುಗಳಿಲ್ಲದ ಕಾರಣ ದಾಳಿಂಬೆ ತಿನ್ನುವುದು ಕಷ್ಟವೆನಿಸಿದರೆ, ಮಕ್ಕಳು ಕೂಡ ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ದಾಳಿಂಬೆ ರಸ ಅಥವಾ ಜ್ಯೂಸ್ ಮಾಡಿ ಕುಡಿಯಬಹುದು. ಮಾರುಕಟ್ಟೆಯಲ್ಲಿ ಜ್ಯೂಸ್ ಖರೀದಿಸುವ ಬದಲು ಮನೆಯಲ್ಲೇ ಮಾಡಿ ಕುಡಿಯಬಹುದು. ಹೊಳೆಯುವ ತ್ವಚೆಗಾಗಿ ಈ ರಸವನ್ನು ಪ್ರತಿದಿನ ಸೇವಿಸಿದರೆ ಪ್ರಯೋಜನ ಪಡೆಯಬಹುದು. ಇದನ್ನು ತಯಾರಿಸುವುದು ಕೂಡ ತುಂಬಾನೇ ಸುಲಭ. ಇಲ್ಲಿದೆ ಮಾಡುವ ವಿಧಾನ.
ದಾಳಿಂಬೆ ರಸವನ್ನು ಮನೆಯಲ್ಲಿಯೇ ತಯಾರಿಸುವ ಸುಲಭ ವಿಧಾನ
- ದಾಳಿಂಬೆ ರಸವನ್ನು ತಯಾರಿಸಲು, ಮೊದಲಿಗೆ ದಾಳಿಂಬೆಯನ್ನು ಸಿಪ್ಪೆ ತೆಗೆದು ಮಿಕ್ಸರ್‌ನಲ್ಲಿ ಹಾಕಿ. ಮಿಕ್ಸರ್ ಸೆಟ್ಟಿಂಗ್‌ಗೆ ಅನುಗುಣವಾಗಿ ಗರಿಷ್ಠ ವೇಗದಲ್ಲಿ 5 ನಿಮಿಷಗಳ ಕಾಲ ಮಿಕ್ಸರ್ ಅನ್ನು ರನ್ ಮಾಡಿ.
- ಇಷ್ಟು ಮಾಡಿದರೆ ದಾಳಿಂಬೆ ಪ್ಯೂರಿ ಸಿದ್ಧವಾಗಲಿದೆ. ಅದಕ್ಕೆ ಅರ್ಧ ಅಥವಾ ಒಂದು ಕಪ್ (ದಾಳಿಂಬೆಯ ಪ್ರಮಾಣವನ್ನು ಅವಲಂಬಿಸಿ) ನೀರನ್ನು ಸೇರಿಸಿ. ದೊಡ್ಡ ದಾಳಿಂಬೆ ಇದ್ದರೆ ಅರ್ಧ ಕಪ್ ನೀರು ಸಾಕು. 2 ದಾಳಿಂಬೆಗೆ 1 ಕಪ್ ನೀರು ಸೇರಿಸಿ.
- ನಂತರ ಮಿಕ್ಸರ್ ಅನ್ನು ಸುಮಾರು 1 ನಿಮಿಷ ರುಬ್ಬಿ. ಇದನ್ನು ಒಂದು ಪಾತ್ರೆಯ ಮೇಲೆ ಬಟ್ಟೆಯನ್ನು ಇರಿಸಿ. ಅದರಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ ಅದನ್ನು ಚೆನ್ನಾಗಿ ಒತ್ತಿ ಶೋಧಿಸಿ.
- ಇಷ್ಟು ಮಾಡಿದರೆ ಯಾವುದೇ ಕಲಬೆರಕೆ ಇಲ್ಲದ ತಾಜಾ ಮತ್ತು ಆರೋಗ್ಯಕರ ದಾಳಿಂಬೆ ಜ್ಯೂಸ್ ಸಿದ್ಧವಾಗಿದೆ.
- ಈ ರೀತಿ ಜ್ಯೂಸ್ ಮಾಡುವುದರಿಂದ ದಾಳಿಂಬೆ ಬೀಜ ವ್ಯರ್ಥವಾಗುವುದಿಲ್ಲ. ಕೇವಲ 5 ನಿಮಿಷದಲ್ಲಿ ಆರೋಗ್ಯಕರ ಜ್ಯೂಸ್ ಸಿದ್ಧವಾಗುತ್ತದೆ. ಇದಕ್ಕೆ ಕ್ಯಾರೆಟ್ ಮತ್ತು ಬೀಟ್ರೂಟ್ ಅನ್ನು ಕೂಡ ಮಿಶ್ರಣ ಮಾಡಬಹುದು.
ಚಳಿಗಾಲದಲ್ಲಿ ಹೊಳೆಯುವ ಚರ್ಮಕ್ಕೆ ದಾಳಿಂಬೆ ರಸದ ಪ್ರಯೋಜನಗಳು
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ: ದಾಳಿಂಬೆ ರಸವು ಉತ್ಕರ್ಷಣ ನಿರೋಧಕಗಳಲ್ಲಿ ಹೇರಳವಾಗಿದೆ. ಇದು ಮಾಲಿನ್ಯ, ಒತ್ತಡ ಮತ್ತು ಯುವಿ ಕಿರಣಗಳ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ವಯಸ್ಸಾಗುವಿಕೆ, ಚರ್ಮ ಸುಕ್ಕುಗಟ್ಟುವಿಕೆ, ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ.
ತೇವಾಂಶಭರಿತ: ದಾಳಿಂಬೆ ರಸದಲ್ಲಿ ನೀರಿನಂಶ ಹೆಚ್ಚಿದ್ದು, ಇದು ತ್ವಚೆಯನ್ನು ತೇವಾಂಶಭರಿತವಾಗಿ ಇಡಲು ಸಹಾಯ ಮಾಡುತ್ತದೆ. ಚಳಿಗಾಲದ ತಿಂಗಳುಗಳಲ್ಲಿ, ಗಾಳಿಯು ಶುಷ್ಕವಾಗಿರುವುದರಿಂದ ನಯವಾದ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.
ಯೌವನದಿಂದ ಇಡಲು ಸಹಕಾರಿ: ಕಾಲಜನ್ ಉತ್ಪಾದನೆಗೆ ವಿಟಮಿನ್ ಸಿ ಅತ್ಯಗತ್ಯ. ಇದು ಚರ್ಮವನ್ನು ಯೌವನದಿಂದ ಕಾಣುವಂತೆ ಮಾಡುತ್ತದೆ. ಇದು ಕಪ್ಪು ಕಲೆಗಳನ್ನು ಹೋಗಲಾಡಿಸಲು ಹಾಗೂ ತ್ವಚೆಗೆ ಹೊಳಪು ನೀಡುತ್ತದೆ. ಚರ್ಮ ಹೊಳೆಯಲು ಇದರಲ್ಲಿ ಅಗತ್ಯವಾದ ಪೋಷಕಾಂಶಗಳು ಲಭ್ಯವಿದೆ.
ರಕ್ತ ಪರಿಚಲನೆ ಸುಧಾರಿಸಲು ಸಹಕಾರಿ: ದಾಳಿಂಬೆ ರಸವು ರಕ್ತ ಪರಿಚಲನೆ ಸುಧಾರಿಸಲು ಸಹಕಾರಿಯಾಗಿದೆ. ಚರ್ಮದ ಜೀವಕೋಶಗಳಿಗೆ ಆಮ್ಲಜನಕ ಮತ್ತು ಅಗತ್ಯ ಪೋಷಕಾಂಶಗಳನ್ನು ಒದಗಿಸಲು ಕೂಡ ಇದು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯಕರ, ಹೊಳೆಯುವ ಮೈಬಣ್ಣ ಪಡೆಯಲು ಇದು ಸಹಕಾರಿ.
ದಾಳಿಂಬೆ ರಸ ಅಥವಾ ಜ್ಯೂಸ್‍ನ ಇತರೆ ಪ್ರಯೋಜನಗಳು
ದಾಳಿಂಬೆ ಹಣ್ಣು ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ಇದನ್ನು ಎಲ್ಲಾ ರೋಗಗಳಿಗೆ ಔಷಧಿಯಾಗಿ ಸೇವಿಸಲಾಗುತ್ತದೆ. ಇದು ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಕಡಿಮೆ ಹಿಮೋಗ್ಲೋಬಿನ್ ಅಥವಾ ಕಬ್ಬಿಣದ ಕೊರತೆ ಇರುವವರಿಗೆ ದಾಳಿಂಬೆ ಅದ್ಭುತ ಹಣ್ಣು. ಇದು ಕರುಳಿನ ಆರೋಗ್ಯ, ಯುಟಿಐ, ಅಜೀರ್ಣ ಮತ್ತು ಮಲಬದ್ಧತೆಯನ್ನು ಸುಧಾರಿಸುತ್ತದೆ. ದಾಳಿಂಬೆ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹವು ಆರೋಗ್ಯವಾಗಿರುತ್ತದೆ.