Skin Care: ಮೊಡವೆ ಕಡಿಮೆ ಆಗಬೇಕಂದ್ರೆ ಹೈಡ್ರೇಟ್ ಆಗಿರಬೇಕು; ತ್ವಚೆಯಲ್ಲಿ ತೇವಾಂಶ ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ
Jun 19, 2024 04:29 PM IST
ಮೊಡವೆ ಕಡಿಮೆ ಆಗಬೇಕಂದ್ರೆ ಹೈಡ್ರೇಟ್ ಆಗಿರಬೇಕು; ತ್ವಚೆಯಲ್ಲಿ ತೇವಾಂಶ ಕಾಪಾಡಲು ಹೀಗೆ ಮಾಡಿ
- ತ್ವಚೆಯ ಅಂದ ಅರಳಿರಬೇಕು ಅಂತ ಎಲ್ಲಾ ಹೆಣ್ಣುಮಕ್ಕಳು ಕನಸು ಕಾಣುತ್ತಾರೆ. ಆದರೆ ಮೊಡವೆ ಅವರ ಅಂದವನ್ನು ಹಾಳು ಮಾಡುತ್ತದೆ. ಮುಖದಲ್ಲಿ ಮೊಡವೆ ಕಡಿಮೆ ಆಗಬೇಕು ಅಂದ್ರೆ ಹೈಡ್ರೇಟ್ ಆಗಿರಬೇಕು. ಹಾಗಾದರೆ ತ್ವಚೆಯಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಹೇಗೆ, ಇಲ್ಲದೆ ಸಿಂಪಲ್ ಟಿಪ್ಸ್. (ಬರಹ: ಮೇಘನಾ ಬಿ.)
ನಮಗೆ ತುಂಬಾ ಕಿರಿಕಿರಿ ನೀಡುವ ಸಮಸ್ಯೆಗಳಲ್ಲಿ ಮೊಡವೆ ಕೂಡ ಒಂದು. ಮೊಡವೆಗಳ ಬಗ್ಗೆಯೇ ತಲೆಕೆಡಿಸಿಕೊಂಡರೆ ನಮ್ಮ ಆತ್ಮಸ್ಥೈರ್ಯ ಕುಗ್ಗುತ್ತದೆ, ಮಾನಸಿಕ ನೆಮ್ಮದಿಯೂ ಕೆಡುತ್ತದೆ. ಮೊಡವೆಗಳನ್ನು ತೊಡೆದುಹಾಕಲು ನಾವು ಮಾಡದೆ ಇರುವ ಪ್ರಯತ್ನಗಳಿರುವುದಿಲ್ಲ. ಅವರಿವರು ಹೇಳಿದ ಎಲ್ಲಾ ಮನೆಮದ್ದುಗಳನ್ನು ಟ್ರೈ ಮಾಡಿರುತ್ತೇವೆ. ಚರ್ಮರೋಗ ತಜ್ಞರ ಬಳಿ ಹೋಗಿ ಮೆಡಿಸಿನ್‌ಗಳನ್ನು ತೆಗೆದುಕೊಂಡಿರುತ್ತೀವಿ. ಆದರೆ ಮೊಡವೆಗಳು ಕಮ್ಮಿ ಆಗಿರುವುದಿಲ್ಲ. ಮುಖದ ಮೇಲೆ ಮೊಡವೆಗಳು ಏಳಲು ಡಿಹೈಡ್ರೇಶನ್ ಕೂಡ ಕಾರಣ ಎಂಬುದನ್ನು ನಾವು ಅರಿತುಕೊಳ್ಳಬೇಕು. ಹೀಗಾಗಿ ಹೈಡ್ರೇಟ್ ಆಗಿರಬೇಕು.
ಮೊಡವೆಗಳೊಂದಿಗೆ ಹೋರಾಡುತ್ತಿರುವವರು ಕುಡಿಯುವ ನೀರಿಗೂ, ನಿಮ್ಮ ಮುಖದಲ್ಲಾಗುವ ಮೊಡವೆಗೂ ಏನು ಸಂಬಂಧ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ತುಂಬಾನೇ ಅಗತ್ಯ. ನಮ್ಮ ಚರ್ಮದಲ್ಲಿ ಎಣ್ಣೆ ಅಂಶ ಹೆಚ್ಚಾದಾಗ ಹಾಗೂ ಸತ್ತ ಜೀವಕೋಶಗಳು ಇದ್ದಾಗ ಮೊಡವೆಗಳು ಹೆಚ್ಚಾಗುತ್ತದೆ. ನಾವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದಾಗ ನಮ್ಮ ಚರ್ಮವು ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುತ್ತದೆ. ಇದು ಮೊಡವೆ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ನೀರು ಕುಡಿಯುವುದರಿಂದ ಮಾತ್ರವೇ ನಮ್ಮ ಚರ್ಮ ಹೈಡ್ರೇಟ್ ಆಗಿರುತ್ತದೆ ಎಂದಲ್ಲ. ಹೈಡ್ರೇಟ್ ಆಗಿರಲು ಈ ಕೆಳಗಿನ ಸಲಹೆಗಳನ್ನು ನೀವು ಪಾಲಿಸಿ ನೋಡಿ, ಫಲಿತಾಂಶ ಸಿಗುತ್ತದೆ.
1. ಚರ್ಮವನ್ನು ಆಂತರಿಕವಾಗಿ ಹೈಡ್ರೇಟ್ ಮಾಡುವುದು
ಮೊಡವೆ ಕಡಿಮೆ ಆಗಬೇಕೆಂದು ನಾವು ಚರ್ಮದ ಮೇಲೆ ಸಿಕ್ಕ ಸಿಕ್ಕ ಕ್ರೀಮ್‌ಗಳನ್ನು, ಫೇಸ್‌ಪ್ಯಾಕ್‌ಗಳನ್ನು ಹಚ್ಚಿದರೆ ಪ್ರಯೋಜನವಾಗುವುದಿಲ್ಲ. ಇದಕ್ಕಾಗಿ ನಾವು ಚರ್ಮವನ್ನು ಆಂತರಿಕವಾಗಿ ಹೈಡ್ರೇಟ್ ಮಾಡಬೇಕು. ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಬೇಕು. ಸೌತೆಕಾಯಿ, ಕಲ್ಲಂಗಡಿ ಹಣ್ಣು, ಪಾಲಕ್ ಸೊಪ್ಪು, ಟೊಮೆಟೊ ಮತ್ತು ಕಿತ್ತಳೆಯಂತಹ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು.
2. ವರ್ಕೌಟ್ ಮಾಡುವುದು
ನಿಮ್ಮ ದೇಹ ಡಿಹೈಡ್ರೇಶನ್‌ಗೆ ಒಳಗಾದಾಗ ಒತ್ತಡವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಒತ್ತಡಗಳು ಕೂಡ ಮೊಡವೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಚೆನ್ನಾಗಿ ನೀರು ಕುಡಿಯುವ ಜೊತೆಗೆ ಪ್ರತಿದಿನ ನೀವು ಯೋಗ, ವಾಕಿಂಗ್, ವ್ಯಾಯಾಮಗಳಂತಹ ದೈಹಿಕ ಚಟುವಟಿಕೆ ಮಾಡಬೇಕು. ಹೀಗೆ ಮಾಡುವುದರಿಂದ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಒತ್ತಡದ ಹಾರ್ಮೋನು ನಿಯಂತ್ರಣಕ್ಕೆ ಬರುತ್ತದೆ. ವ್ಯಾಯಾಮದ ವೇಳೆ ಬರುವ ಬೆವರಿನ ಮೂಲಕ ನಮ್ಮ ದೇಹದಲ್ಲಿನ ವಿಷವನ್ನು ಹೊರಹಾಕಿದಂತಾಗುತ್ತದೆ. ಮೊಡವೆಗಳು ಕಡಿಮೆ ಆಗುತ್ತವೆ.
3. ಹೈಡ್ರೇಟಿಂಗ್ ಸ್ಕಿನ್‌ಕೇರ್ ಪ್ರಾಡಕ್ಟ್‌ಗಳು
ತ್ವಚೆಯ ಕಾಳಜಿಗಾಗಿ ನೀವು ಬಳಸುವ ಸ್ಕಿನ್ ಕೇರ್ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡುವಾಗ ಹುಷಾರಾಗಿರಿ. ಹೈಡ್ರೇಟಿಂಗ್ ಕ್ಲೆನ್ಸರ್‌ಗಳು ಮತ್ತು ಹೈಡ್ರೇಟಿಂಗ್ ಮಾಯಿಶ್ಚರೈಸರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ನೀವು ಖರೀದಿಸುವ ಉತ್ಪನ್ನಗಳಲ್ಲಿ ಹೈಲುರಾನಿಕ್ ಆಮ್ಲ, ಗ್ಲಿಸರಿನ್, ವಿಟಮಿನ್ ಸಿ ಮತ್ತು ಸೆರಾಮಿಡ್ ಅಂಶವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇವು ಬಾಹ್ಯವಾಗಿ ಚರ್ಮವು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
4. ಹೈಡ್ರೇಟಿಂಗ್ ಫೇಸ್‌ಮಾಸ್ಕ್
ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹೈಡ್ರೇಟಿಂಗ್ ಫೇಸ್ ಪ್ಯಾಕ್ ಬಳಸಿ. ಲೋಳೆಸರ, ಜೇನುತುಪ್ಪ, ಓಟ್‌ಮೀಲ್ ಮತ್ತು ಸೌತೆಕಾಯಿಯನ್ನು ಫೇಸ್‌ಪ್ಯಾಕ್ ಅಥವಾ ಫೇಸ್ ಮಾಸ್ಕ್ ತಯಾರಿಸಲು ಬಳಸಿ.
5. ಎಕ್ಸ್‌ಫೋಲಿಯೇಶನ್
ತುಂಬಾ ರಫ್ ಆದ ಪದಾರ್ಥಗಳಿಂದ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಬೇಡಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡಿದರೆ ಸಾಕು. ವಾರಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಎಕ್ಸ್‌ಫೋಲಿಯೇಟ್ ಮಾಡಿದರೆ ಚರ್ಮವು ಡಿಹೈಡ್ರೇಟ್ ಆಗುತ್ತದೆ. ಇದರಿಂದ ಮೊಡವೆಗಳು ಹೆಚ್ಚಾಗುವ ಸಾಧ್ಯತೆಯಿದೆ.
ವಿಭಾಗ