ಮಕ್ಕಳ ದಿನಾಚರಣೆ ವಿಶೇಷ: ಮಕ್ಕಳಿಗೆ ನಾವು ಕೊಡಬಹುದಾದ ಬೆಸ್ಟ್ ಗಿಫ್ಟ್ ಇದೊಂದೇ; ಅದೇನೆಂದು ತಿಳಿಯಲು ಈ ಬರಹ ಪೂರ್ತಿ ಓದಿ -ರಂಗನೋಟ ಅಂಕಣ
Nov 13, 2024 07:10 AM IST
ಮಕ್ಕಳ ದಿನಾಚರಣೆ ವಿಶೇಷ, ರಂಗಸ್ವಾಮಿ ಮೂಕನಹಳ್ಳಿ ಬರಹ
- ರಂಗಸ್ವಾಮಿ ಮೂಕನಹಳ್ಳಿ ಬರಹ: ಸಮಾಜದ ದೃಷ್ಟಿಯಲ್ಲಿ ದೊಡ್ಡವರು ಎನ್ನಿಸಿಕೊಳ್ಳುವ ಹಪಹಪಿಕೆಯಿಂದ ಯಾವ ಲಾಭವೂ ಇಲ್ಲ. ತಮ್ಮ ಮಕ್ಕಳು ಮಲ್ಟಿ ಟ್ಯಾಲೆಂಟೆಡ್, ಆಲ್‌ರೌಂಡರ್ ಎನ್ನುವುದು ಇನ್ನೊಂದು ಭ್ರಮೆ. ಹೇಗೆ ನಾವು ಮಲ್ಟಿ ಟಾಸ್ಕಿoಗ್ ಮಾಡಲು ಸಾಧ್ಯವಿಲ್ಲ ಎನ್ನುವುದು ನಿಜವೋ, ಹಾಗೆಯೇ ಮಕ್ಕಳು ಆಲ್‌ರೌಂಡರ್ ಆಗಬೇಕು ಎನ್ನುವ ಮಿಥ್ಯೆಯಿಂದ ಪೋಷಕರು ಹೊರಬರಬೇಕು.
Childrens Day 2024: ನಮ್ಮ ಮುಂದೆ ಇನ್ನೊಂದು ಮಕ್ಕಳ ದಿನಾಚರಣೆ ಬಂದು ನಿಂತಿದೆ! ಇದನ್ನು ಆಚರಿಸಲು ನಾವು ಎಷ್ಟರಮಟ್ಟಿಗೆ ಅರ್ಹರು ಎನ್ನುವ ಪ್ರಶ್ನೆ ನನ್ನದು. ಇದಕ್ಕೆ ಕಾರಣವಿಲ್ಲದೆ ಇಲ್ಲ. ಮಕ್ಕಳಿಗೆ ಒಂದು ಸರಿಯಾದ ಮಾರ್ಗದರ್ಶನ ಬೇಕು. ಬಿತ್ತಿದಂತೆ ಬೆಳೆ ಎನ್ನುವುದು ಸುಳ್ಳಲ್ಲ ಎನ್ನುವ ಮಾತಿದೆ. ನಾವು ಬೇವನ್ನು ಬಿತ್ತಿ, ಮಾವಿನ ಫಲವನ್ನು ನಿರೀಕ್ಷಿಸಿದರೆ ಅದು ತಪ್ಪಾಗುತ್ತದೆ. ಥೇಟ್ ಹಾಗೆಯೇ ಮಕ್ಕಳನ್ನು ನಾವು ಸರಿಯಾದ ಮಾರ್ಗದರ್ಶನವಿಲ್ಲದೆ ಬೆಳೆಸಿ ನಂತರ ಅವರನ್ನು ದೂಷಿಸಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಮ್ಮ ಬಾಲ್ಯದಲ್ಲಿ ಗಮನ ನೀಡುತ್ತಿದ್ದ ಪೋಷಕರ ಸಂಖ್ಯೆ ಕಡಿಮೆಯಿತ್ತು. ಹೇಗೋ ಬೆಳೆದುಕೊಳ್ಳುತ್ತಾರೆ ಎನ್ನುವ ಮಾನಸಿಕತೆ ಅಂದಿನ ಸಮಾಜದಲ್ಲಿತ್ತು. ಇಂದು ಕಾಲ ಬದಲಾಗಿದೆ. ಪೋಷಕರು ಸಣ್ಣಪುಟ್ಟ ವಿಷಯದಲ್ಲೂ ಮೂಗು ತೋರಿಸುತ್ತಾರೆ. ಹೀಗಾಗಿ ಮಗು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಅಥವಾ ಮಗುವನ್ನು ಪರಾವಲಂಬಿಯಾಗಿಸುವ ಸಮಾಜ ಇಂದು ಸೃಷ್ಟಿಯಾಗಿದೆ.
ಮಕ್ಕಳು ಮೈಕಲ್ ಜಾನ್ಸನ್ ಅಥವಾ ಪ್ರಭುದೇವನಂತೆ ಡಾನ್ಸ್ ಮಾಡಬೇಕು. ಹುಸೇನ್ ಬೋಲ್ಟ್ ಮೀರಿಸಿದ ಓಟಗಾರನಾಗಬೇಕು. ಪ್ರಜ್ಞಾನಂದನನ್ನು ಮೀರಿಸಿದ ಚೆಸ್ ಆಟಗಾರನಾಗಬೇಕು, ಇವೆಲ್ಲದರ ಜೊತೆಗೆ ಓದಿನಲ್ಲಿ ಕೂಡ ಟಾಪರ್ ಆಗಿರಬೇಕು! ಇದು ಸಾಧ್ಯವಿಲ್ಲದ ಮಾತು ಎನ್ನುವುದನ್ನು ಪೋಷಕರು ತಿಳಿದುಕೊಳ್ಳುವುದು ಯಾವಾಗ? ನೀವೇ ಗಮನಿಸಿ ನೋಡಿ ಮುಕ್ಕಾಲು ಪಾಲು ಮಕ್ಕಳನ್ನು ಓದಿನ ಜೊತೆಗೆ ಸಂಗೀತ, ಡಾನ್ಸ್ ಜೊತೆಗೆ ಇನ್ನೊಂದೆರೆಡು ಕಲಿಕೆಯಲ್ಲಿ ತೊಡಗಿಸುತ್ತಾರೆ. ಹೈಸ್ಕೂಲ್ ನಂತರ ಇದನ್ನು ಮುಂದುವರಿಸುವ ಮಕ್ಕಳ ಸಂಖ್ಯೆ ಎಷ್ಟು? ಒತ್ತಡಕ್ಕೆ ಬಿದ್ದವರಂತೆ ಪೋಷಕರು ತಮ್ಮ ಮಕ್ಕಳನ್ನು ಎಲ್ಲಾ ಕೋರ್ಸ್‌ಗಳಿಗೆ ಸೇರಿಸುತ್ತಾರೆ.
ಹೀಗೆ ಮಾಡುವುದರಿಂದ ಮಗುವಿನ ಮೇಲೆ ಒತ್ತಡ ಉಂಟಾಗುತ್ತದೆ. ಮಗುವಿಗೆ ಸಹಜವಾಗಿ ಒಲವಿರುವ ಕಡೆಗೆ ಆ ಮಗುವನ್ನು ಕಳಿಸಬೇಕು. ಸಮಾಜದ ದೃಷ್ಟಿಯಲ್ಲಿ ದೊಡ್ಡವರು ಎನ್ನಿಸಿಕೊಳ್ಳುವ ಹಪಹಪಿಕೆಯಿಂದ ಯಾವ ಲಾಭವೂ ಇಲ್ಲ. ತಮ್ಮ ಮಕ್ಕಳು ಮಲ್ಟಿ ಟ್ಯಾಲೆಂಟೆಡ್, ಆಲ್‌ರೌಂಡರ್ ಎನ್ನುವುದು ಇನ್ನೊಂದು ಭ್ರಮೆ. ಹೇಗೆ ನಾವು ಮಲ್ಟಿ ಟಾಸ್ಕಿoಗ್ ಮಾಡಲು ಸಾಧ್ಯವಿಲ್ಲ ಎನ್ನುವುದು ನಿಜವೋ, ಹಾಗೆಯೇ ಮಕ್ಕಳು ಆಲ್‌ರೌಂಡರ್ ಆಗಬೇಕು ಎನ್ನುವ ಮಿಥ್ಯೆಯಿಂದ ಪೋಷಕರು ಹೊರಬರಬೇಕು.
ಸಾಮಾನ್ಯ ಶಾಲೆಗೆ ಹೋಗದ ಸಾಧಕರು
ನಿಮಗೆಲ್ಲಾ ಗೊತ್ತಿರಲಿ ಚೆಸ್ ಮಾಸ್ಟರ್ ಪ್ರಜ್ಞಾನಂದ ಶಾಲೆಗೆ ಹೋಗುವುದಿಲ್ಲ. ನಾಲ್ಕನೇ ತರಗತಿಯವರೆಗಷ್ಟೇ ಆತ ಕಲಿತಿರುವುದು. ನಂತರದ ಹೆಚ್ಚಿನ ಓದನ್ನು ಮೇನ್‌ಸ್ಟ್ರೀಮ್ ಶಾಲೆಗೆ ಹೋಗದೆ ಕಲಿಯಲು ಶುರು ಮಾಡುತ್ತಾರೆ. ಇದೆ ರೀತಿ ಬೇರೆ ಎಲ್ಲಾ ರಂಗದಲ್ಲೂ ಯಶಸ್ಸು ಸಾಧಿಸಿದ ವ್ಯಕ್ತಿಗಳು ಮಾಡುತ್ತಾರೆ. ಮಾಸ್ಟರ್ ಬ್ಲಾಸ್ಟರ್ ಹೆಸರಿನ ತಂಡೂಲ್ಕರ್ ಕೂಡ ಮುಖ್ಯವಾಹಿನಿ ಶಾಲೆಯ ಅಭ್ಯಾಸದಿಂದ ಹೊರಬಂದವರು ಎನ್ನುವುದು ನೆನಪಿರಲಿ.
ಮಕ್ಕಳ ಬಳಿ ಸಂವಹನ ಇಟ್ಟುಕೊಳ್ಳಬೇಕು. ಅವರೊಂದಿಗೆ ನೀವು ವಾರಕೊಮ್ಮೆ ಅಥವಾ ಅವರು ಹರೆಯಕ್ಕೆ (ಟೀನ್ ಏಜ್) ಬಂದಾಗ ಮಾತನಾಡಲು ಶುರು ಮಾಡಿದರೆ ಅದರಿಂದ ಪ್ರಯೋಜನವಿಲ್ಲ. ಮಕ್ಕಳು ತೀರಾ ಸಣ್ಣವರಾಗಿದ್ದನಿಂದ ಪ್ರತಿದಿನ ಅವರೊಂದಿಗೆ ಮಾತನಾಡಲು ಶುರು ಮಾಡಿದರೆ ಮಾತ್ರ ಅವರ ಬೇಕುಬೇಡಗಳ ಅರಿವು ನಮ್ಮದಾಗಿರುತ್ತದೆ. ಇಲ್ಲದಿದ್ದರೆ ಅವರಿಗೆ ತಿಳಿದ ದಾರಿಯಲ್ಲಿ ಅವರು ನಡೆಯಲು ಶುರು ಮಾಡುತ್ತಾರೆ.
ಮಕ್ಕಳು ಹೇಳಿದ್ದನ್ನು ಕಲಿಯುವುದಿಲ್ಲ, ಮಾಡಿದ್ದನ್ನು ಅನುಸರಿಸುತ್ತಾರೆ
ಇನ್ನೊಂದು ಪ್ರಮುಖ ವಿಚಾರ; ಮಕ್ಕಳು ನಾವು ಹೇಳಿದ್ದನ್ನು ಎಂದೂ ಕೇಳಿಸಿಕೊಳ್ಳುವುದಿಲ್ಲ. ನಾವು ಮಾಡಿದ್ದನ್ನು ನೋಡಿ ಅವರು ಅನುಕರಿಸುತ್ತಾರೆ. ನೀವು ಎಷ್ಟೇ ಹಣವಂತರಾಗಿರಿ, ಎಷ್ಟೇ ಪ್ರಸಿದ್ಧರಾಗಿರಿ ನಿಮ್ಮ ಮಕ್ಕಳ ಮುಂದೆ ನೀವು ಶ್ರಮವಹಿಸಿ ಕೆಲಸ ಮಾಡದಿದ್ದರೆ , ಯಾವುದೋ ಒಂದು ಗುರಿಯಿಲ್ಲದ ಬೇಕಾಬಿಟ್ಟಿ ಬದುಕನ್ನು ಬದುಕುತಿದ್ದರೆ ಅವರಿಗೂ ಅದು ವರ್ಗಾವಣೆಯಾಗುತ್ತದೆ. ಮಕ್ಕಳಿಗೆ ನಾವು ಶ್ರಮವನ್ನು ಆಯ್ಕೆ ಮಾಡಿಕೊಳ್ಳಲು ಹೇಳಬೇಕು. ಕೇವಲ ಮತ್ತು ಕೇವಲ ಶ್ರಮದಿಂದ ಮತ್ತು ಕೆಲಸ ಮಾಡುವುದರಿಂದ ಮಾತ್ರ ಸಂತೋಷ ದಕ್ಕುತ್ತದೆ ಎನ್ನುವುದನ್ನು ಅವರಿಗೆ ತಿಳಿಸಬೇಕು.
ಎಚ್ಚರವು ಮೊದಲಿಗೆ ನಮ್ಮ ದಾರಿಯಾಗಿರಬೇಕು. ಆಗ ಮಕ್ಕಳು ನಮ್ಮನ್ನು ಅನುಸರಿಸುತ್ತವೆ. ನಾವು ರಿಲ್ಯಾಕ್ಸ್ ಬದುಕನ್ನು ಬದುಕಲು ಶುರು ಮಾಡಿದರೆ ಅವುಗಳು ಕೂಡ ರಿಲ್ಯಾಕ್ಸ್ ಆಗುತ್ತವೆ. ಈ ಹಿಂದೆ ನಾವು ಪಟ್ಟ ಕಷ್ಟ, ಶ್ರಮ ಮಕ್ಕಳಿಗೆ ಅರ್ಥವಾಗುವುದಿಲ್ಲ. ನೀನು ಈಗ ಕಷ್ಟಪಟ್ಟರೆ ಮುಂದೆ ನನ್ನಂತೆ ಸುಖವಾಗಿ, ರಿಲ್ಯಾಕ್ಸ್ ಆಗಿ ಇರಬಹುದು ಎಂದು ಹೇಳಿದರೂ ಅದು ರುಚಿಸುವುದಿಲ್ಲ. ಅವರ ಕಣ್ಣಿಗೆ ಕಂಡದ್ದು ಸತ್ಯವೆಂದು ನಂಬುತ್ತಾರೆ. ಇವತ್ತಿನ ನಮ್ಮ ಮೋಜು ಮಾತ್ರ ಅವರಿಗೆ ಕಾಣುತ್ತದೆ. ಹೀಗಾಗಿ ಮಕ್ಕಳ ಮುಂದೆ ಐಷಾರಾಮದ ಬದುಕು ಬದುಕುವ ಮುನ್ನ ಎಚ್ಚರವಿರಲಿ.
ಮಕ್ಕಳನ್ನು ಬೆಳೆಸುವುದು ಸಹ ಒಂದು ತಪಸ್ಸು
ಎಲ್ಲದಕ್ಕೂ ಯೆಸ್ ಎನ್ನುವುದು, ಎಲ್ಲದಕ್ಕೂ ನೋ ಎನ್ನುವುದು ಕೂಡ ತಪ್ಪು. ಮಕ್ಕಳನ್ನು ಬೆಳೆಸುವುದು 'ಹ್ಯಾಪಿ ಚಿಲ್ಡ್ರನ್ಸ್ ಡೇ' ಎಂದಷ್ಟು ಸುಲಭವಲ್ಲ, ಸರಳವಲ್ಲ. ಅದೊಂದು ತಪಸ್ಸು. ಮಕ್ಕಳ ದಿನಾಚರಣೆ ಎಂದರೆ ಅದು ಮಕ್ಕಳಿಗೆ ಎನ್ನುವ ಭಾವನೆಯಿದೆ. ಆದರೆ ಅದು ತಪ್ಪು. ಮಕ್ಕಳ ದಿನಾಚರಣೆ ಆಚರಣೆ ಮಾಡುವುದು ನಾವು. ಅವರ ನಡವಳಿಕೆ ತಿದ್ದಬೇಕಾಗಿರುವುದು ನಾವು. ಸರಿಯಾದ ಮಾರ್ಗದಲ್ಲಿ ಅವರನ್ನು ನಡೆಸುತ್ತಾ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲರನ್ನಾಗಿಸುವುದು ನಿಜವಾದ ಮಕ್ಕಳ ದಿನಾಚರಣೆ ಉದ್ದೇಶ. ಆ ನಿಟ್ಟಿನಲ್ಲಿ ಪೋಷಕರ ನಡೆಯಿರಲಿ.
ರಂಗಸ್ವಾಮಿ ಮೂಕನಹಳ್ಳಿ ಪರಿಚಯ
ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.