ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ! ಸಣ್ಣಪುಟ್ಟ ಬದಲಾವಣೆಗಳಿಗೆ ಒಗ್ಗಿಕೊಳ್ಳಿ; ರಂಗನೋಟ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ! ಸಣ್ಣಪುಟ್ಟ ಬದಲಾವಣೆಗಳಿಗೆ ಒಗ್ಗಿಕೊಳ್ಳಿ; ರಂಗನೋಟ ಅಂಕಣ

ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ! ಸಣ್ಣಪುಟ್ಟ ಬದಲಾವಣೆಗಳಿಗೆ ಒಗ್ಗಿಕೊಳ್ಳಿ; ರಂಗನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ: ಬದಲಾವಣೆಯನ್ನು ಗಮನಿಸಬೇಕು. ಸಮಾಜವನ್ನು ಹಾಗೂ ಜಗತ್ತನ್ನು ಗಮನಿಸಿಸುತ್ತಿದ್ದರೆ ಆಗಬಹುದಾದ ಬದಲಾವಣೆಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಅಂತಹ ಬದಲಾವಣೆಗೆ ಸಿದ್ಧವಾಗಿರಬೇಕು . ಬದಲಾವಣೆಯನ್ನು ಒಪ್ಪಿಕೊಂಡು ಅದಕ್ಕೆ ಹೊಂದಿಕೊಳ್ಳಬೇಕು.

ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ; ರಂಗಸ್ವಾಮಿ ಮೂಕನಹಳ್ಳಿ ರಂಗನೋಟ ಅಂಕಣ
ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ; ರಂಗಸ್ವಾಮಿ ಮೂಕನಹಳ್ಳಿ ರಂಗನೋಟ ಅಂಕಣ

ರಂಗನೋಟ ಅಂಕಣ: ನನ್ನ ಬದುಕು ಹೀಗಿರಬೇಕು, ಹಾಗಿರಬೇಕು ಎಂದು ಕನಸು ಕಾಣುವವರು ಬದಲಾವಣೆಗೆ ಸಿದ್ಧರಾಗಿರಬೇಕು. ಉಳಿದವರು ಸಿದ್ಧರಾಗಬೇಕಾದ ಅವಶ್ಯಕತೆ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಾಗುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಸಲು ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ. ರಾಮ ಮತ್ತು ಭೀಮ ಇಬ್ಬರೂ ಒಳ್ಳೆಯ ಸ್ನೇಹಿತರು. ರಾಮನಿಗೆ ಜಗತ್ತನ್ನೆಲ್ಲಾ ಗೆಲ್ಲುವ ಆಸೆ, ಭೀಮನಿಗೆ ಊರೇ ಪ್ರಪಂಚ ಅವನಿಗೆ ಏನೂ ಬೇಡ. ಎರಡು ಹೊತ್ತು ಊಟ, ಸ್ನೇಹಿತರ ಜೊತೆ ಮಾತು, ಒಡನಾಟ ಸಾಕು. ಜಗತ್ತನ್ನು ಗೆಲ್ಲುವವನಿಗೆ ಜಗತ್ತಿನ ಅಸ್ಥಿರತೆಯನ್ನು ಅರಗಿಸಿಕೊಳ್ಳುವ ಶಕ್ತಿ ಇರಬೇಕು. ರಾಮ ದೊಡ್ಡ ದೊಡ್ಡ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಭೀಮ ಕೂಡ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಬದುಕಿಗೆ ಬೇಕಾಗುವ ಬದಲಾವಣೆಗಳಿಗೆ ಒಗ್ಗಿಕೊಳ್ಳಲೇಬೇಕು. ಒಟ್ಟಿನಲ್ಲಿ ನಾವೆಲ್ಲರೂ ಬದಲಾವಣೆಗಳಿಗೆ ಒಗ್ಗಿಕೊಳ್ಳದೆ ಬೇರೆ ದಾರಿಯಿಲ್ಲ.

ಬದಲಾವಣೆಯೊಂದೇ ಜಗತ್ತಿನಲ್ಲಿ ಶಾಶ್ವತ. ನಾವಿರುವ ಪರಿಸ್ಥಿತಿ ಎಷ್ಟೇ ಚಂದವಿರಲಿ ಅದು ಬದಲಾಗುತ್ತದೆ. ಬದಲಾಗಬೇಕು, ಇಲ್ಲದಿದ್ದರೆ ನಾವೇ ಬದಲಾಯಿಸುತ್ತೇವೆ. ನಾವು ಓದುತ್ತಿರುವ ಪುಸ್ತಕದ ಒಂದು ಅಧ್ಯಾಯದಲ್ಲಿನ ಪುಟದಲ್ಲಿ ಒಳ್ಳೆಯ ಮಾಹಿತಿ ಇದ್ದು ಅದನ್ನು ಓದಿ ಬಹಳ ಮುದಗೊಂಡಿರುತ್ತೀರಿ. ಆದರೆ ಎಷ್ಟು ಸಮಯ ಅದೇ ಹಾಳೆಯಲ್ಲಿ ಉಳಿಯಬಹುದು? ಮುಂದಿನ ಪುಟಕ್ಕೆ ಹೋಗಲೇಬೇಕು. ಪುಟ ತಿರುಗಿಸದೆ ವಿಧಿಯಿಲ್ಲ. ಬದುಕು ಹಾಗೆ ಬದಲಾಗಬೇಕು , ಬದಲಾವಣೆಗೆ ಒಗ್ಗಿಕೊಳ್ಳಬೇಕು.

ನಾವು ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ ಏನಾಗುತ್ತದೆ? ಎನ್ನುವುದಕ್ಕೆ ಚರಿತ್ರೆಯಲ್ಲಿ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ನೋಕಿಯಾ ಮೊಬೈಲ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿತ್ತು . ಬದಲಾವಣೆಯನ್ನು ಗಮನಿಸಿದ ಕಾರಣ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿತು. ಹಾಗೆ ಕೊಡಕ್ ಎನ್ನುವ ಕ್ಯಾಮರಾ ಉತ್ಪಾದಿಸುತ್ತಿದ್ದ ಸಂಸ್ಥೆಯ ಕಥೆ ಕೂಡ. ಡಿಜಿಟಲ್ ಮಾರುಕಟ್ಟೆಗೆ ಈಗೀಗ ಅವರು ಹೊಂದಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಕತ್ತೆಗಳ ಕಥೆ

ಇದಕ್ಕೆ ಪೂರಕವಾಗಿ ಇನ್ನೊಂದು ಸಣ್ಣ ಕಥೆಯಿದೆ. ಒಂದೂರಿನಲ್ಲಿ ಮೂರು ಕತ್ತೆಗಳಿದ್ದವಂತೆ. ಅವುಗಳು ಬೀಡಾಡಿ ಕತ್ತೆಗಳು. ಅಂದರೆ ಅವಕ್ಕೆ ಮಾಲೀಕನಿರಲಿಲ್ಲ. ಹೀಗಾಗಿ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದವು. ಹೀಗಿರುವಾಗ ಅವುಗಳಿಗೆ ಊರಿನ ಹೊರಗೆ ಒಂದು ಜಾಗದಲ್ಲಿ ನಿತ್ಯವೂ ಜನರು ತಿಂದು ಬಿಸಾಡಿದ ಊಟದ ಜೊತೆಗೆ ಬಾಳೆ ಎಲೆ ಕೂಡ ಸಿಗುತ್ತಿತ್ತು. ಅವುಗಳನ್ನು ತಿಂದು ಕತ್ತೆಗಳು ಬಹಳ ಖುಷಿಯಾಗಿದ್ದವು. ಹೀಗೆ ಒಂದಷ್ಟು ವರ್ಷ ಕಳೆಯುತ್ತದೆ. ಆ ಊರಿನಲ್ಲಿ ಕೆಲಸದ ಕೊರತೆ ಉಂಟಾಗುತ್ತದೆ. ಹೀಗಾಗಿ ಊರ ಹೊರಗೆ ನೆಲಸಿದ್ದ ಜನ ಬೇರೆ ಊರಿಗೆ ವಲಸೆ ಹೋಗುತ್ತಾರೆ. ಕತ್ತೆಗಳಿಗೆ ಇದು ಗೊತ್ತಾಗುವುದಿಲ್ಲ. ಒಂದೆರೆಡು ದಿನ ಊಟ ಸಿಗದೇ ಅವು ಬೇಸರಗೊಳ್ಳುತ್ತವೆ. ಆಗ ಅವುಗಳಲ್ಲಿ ಒಂದು ಕತ್ತೆ ನನಗ್ಯಾಕೋ ಇನ್ನ್ಮುಂದೆ ಊಟ ಸಿಗುವುದಿಲ್ಲ ಎನ್ನಿಸುತ್ತಿದೆ. ಆಹಾರ ಹುಡುಕಿ ಬೇರೆಡೆಗೆ ಹೋಗಬೇಕು ಎನ್ನುತ್ತದೆ. ಅದಕ್ಕೆ ಉಳಿದೆರೆಡು ಕತ್ತೆಗಳು ನಗುತ್ತವೆ. ಜನ ಮರೆತಿದ್ದಾರೆ. ನಾಳೆ ಖಂಡಿತ ಇಲ್ಲಿ ಎಲ್ಲವೂ ಸಿಗುತ್ತದೆ ಎನ್ನುತ್ತವೆ. ಮೊದಲನೇ ಕತ್ತೆ ಆಹಾರ ಹುಡುಕಲು ಹೊರಡುತ್ತದೆ. ಇನ್ನೊಂದೆರೆಡು ದಿನ ಕಳೆಯುತ್ತದೆ. ಊಟದ ವಾಸನೆ ಕೂಡ ಇಲ್ಲ. ಎರಡನೇ ಕತ್ತೆ ಊಟ ಹುಡುಕಿ ಹೋಗೋಣ ಎನ್ನುತ್ತದೆ. ಮೂರನೇ ಕತ್ತೆ ಬಹಳ ಆಶಾವಾದಿ. ಇಲ್ಲ ನಾಳೆ ಸಿಗುತ್ತದೆ, ನಾನು ಕಾಯುತ್ತೇನೆ. ಹಿರಿಯರು ಹೇಳಿದ್ದಾರೆ ತಾಳಿದವನು ಬಾಳಿಯಾನು ಎನ್ನುತ್ತದೆ. ಎರಡನೇ ಕತ್ತೆ ಒಲ್ಲದ ಮನಸ್ಸಿನಿಂದ ಆಹಾರ ಹುಡುಕಿ ಹೊರಡುತ್ತದೆ. ಕೊನೆಯ ಕತ್ತೆ ಊಟವಿಲ್ಲದೆ ಸಾಯುತ್ತದೆ.

ಬದಲಾವಣೆಯನ್ನು ನಾವು ಗಮನಿಸಬೇಕು. ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಯನ್ನು ಊಹಿಸಿಕೊಳ್ಳಬೇಕು. ಸಮಾಜವನ್ನು, ಜಗತ್ತನ್ನು ಗಮನಿಸಿಸುತ್ತಿದ್ದರೆ ಆಗಬಹುದಾದ ಬದಲಾವಣೆಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಅಂತಹ ಬದಲಾವಣೆಗೆ ಸಿದ್ಧವಾಗಿರಬೇಕು. ಬದಲಾವಣೆಯನ್ನು ಒಪ್ಪಕೊಂಡು ಅದಕ್ಕೆ ಹೊಂದಿಕೊಳ್ಳಬೇಕು.

ಚಾಣಕ್ಯ ನೀತಿಯಲ್ಲಿ ಒಂದುಕಡೆ ಚಾಣಕ್ಯ 'ಯಾವ ಮರವು ಬಾಗದೆ ನೇರವಾಗಿ ನಿಂತಿರುತ್ತದೆ, ಆ ಮರವನ್ನು ಮೊದಲು ಕಡಿಯಲಾಗುತ್ತದೆ' ಎನ್ನುವ ಮಾತನ್ನು ಹೇಳಿದ್ದಾರೆ. ಅರ್ಥವಿಷ್ಟೆ ಬಿರುಸಾದ ಗಾಳಿ ಬಂದಾಗ ಅತ್ತಿತ್ತ ವಾಲಾಡುವ ಮರಗಳು ಉಳಿದುಕೊಳ್ಳುತ್ತವೆ. ಸೆಟೆದು ನಿಂತ ಮರಗಳು ನೆಲ ಕಚ್ಚಿರುತ್ತವೆ. ಉಳಿವಿಗಾಗಿ ಕೆಲವೊಮ್ಮೆ ಹೊಂದಾವಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯ.

ಇಂದಿನ ಸಮಾಜದಲ್ಲಿ ಬುದ್ದಿಮತ್ತೆಯಲ್ಲಿ ಒಂದಂಶ ಕಡಿಮೆಯಿದ್ದರೂ ಹೇಗೋ ಬದುಕಬಹುದು ಆದರೆ, ಫ್ಲೆಕ್ಸಿಬಿಲಿಟಿ ಮತ್ತು ಅಡಾಪ್ಟಬಿಲಿಟಿ ಇಲ್ಲದಿದ್ದರೆ ಬದುಕುವುದು ಬಹಳ ಕಷ್ಟ.

ಸಣ್ಣಪುಟ್ಟ ಬದಲಾವಣೆಗಳಿಗೆ ಒಗ್ಗಿಕೊಳ್ಳಿ

ಬದಲಾವಣೆಗೆ ಒಗ್ಗಿಕೊಳ್ಳುವುದು ಸುಲಭವಲ್ಲ, ಹೀಗಾಗಿ ಇದಕ್ಕೆ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳ ಅವಶ್ಯಕತೆಯಿದೆ. ದೊಡ್ಡದಾದ ಮತ್ತು ನಿಜವಾದ ಬದಲಾವಣೆ ಬರುವುದಕ್ಕೆ ಮುಂಚೆಯೇ ನಮಗೆ ನಾವೇ ಹೊಸತನಕ್ಕೆ ತೆರೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಅಷ್ಟೇನೂ ಮಹತ್ವವಲ್ಲ ಎನ್ನಿಸಬಹುದಾದ ಕೆಲವು ಬದಲಾವಣೆಗಳನ್ನು ನಾವೇ ಮಾಡಿಕೊಳ್ಳಬಹುದು. ಉದಾಹರಣೆಗೆ ನಿತ್ಯವೂ ನಡೆದು ಹೋಗುವ ಹಾದಿ ಬದಲಿಸುವುದು, ನಿತ್ಯದ ವೇಳೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು, ಸಾಮಾನ್ಯವಾಗಿ ಹೋಗುವ ಹೋಟೆಲ್ ಬಿಟ್ಟು ಬೇರೆ ಕಡೆಗೆ ಹೋಗುವುದು, ಹೇರ್ ಕಟ್ ಮಾಡಿಸಿಕೊಳ್ಳಲು ಬೇರೆ ಸಲೂನ್‌ಗೆ ಹೋಗುವುದು . ಇವೆಲ್ಲವೂ ತೀರಾ ಬಾಲಿಶ ಎನ್ನಿಸಬಹುದು. ಆದರೆ ಗಮನಿಸಿ ಇವೆಲ್ಲವೂ ಬದಲಾವಣೆಗೆ ಸಿದ್ಧವಾಗಲು ಸಹಾಯ ಮಾಡುವ ಪುಟಾಣಿ ಹೆಜ್ಜೆಗಳು.

ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಬದಲಾವಣೆಗೆ ನಾವು ಹೊಂದಿಕೊಳ್ಳದಿದ್ದರೆ ಜಗತ್ತಿಗೆ ನಷ್ಟವಿಲ್ಲ. ಅದರಿಂದ ಕಷ್ಟವಾಗುವುದು ನಮಗೆ ಮಾತ್ರ. ಹೀಗಾಗಿ ಫ್ಲೆಕ್ಸಿಬಿಲಿಟಿ ಮತ್ತು ಅಡಾಪ್ಟಬಿಲಿಟಿ ಎನ್ನುವ ಎರಡು ಮಹಾಮಂತ್ರಗಳನ್ನು ಜಪಿಸುವುದು ಮರೆಯುವುದು ಬೇಡ.

(ಬರಹ: ರಂಗಸ್ವಾಮಿ ಮೂಕನಹಳ್ಳಿ)

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

Whats_app_banner