logo
ಕನ್ನಡ ಸುದ್ದಿ  /  ಜೀವನಶೈಲಿ  /  ಜಪಾನೀಯರ ನಾಯಿ ಪ್ರೀತಿ ನೆಕ್ಸ್ಟ್‌ ಲೆವೆಲ್‌ನಲ್ಲಿದೆ ಕಣ್ರೀ: ಬೀದಿಗಳಲ್ಲಿ ಡಸ್ಟ್‌ ಬಿನ್ ಕಾಣಿಸದ ಜಪಾನ್ ದೇಶದ ಅಪರೂಪದ ವಿಚಾರಗಳಿವು -ರಂಗ ನೋಟ

ಜಪಾನೀಯರ ನಾಯಿ ಪ್ರೀತಿ ನೆಕ್ಸ್ಟ್‌ ಲೆವೆಲ್‌ನಲ್ಲಿದೆ ಕಣ್ರೀ: ಬೀದಿಗಳಲ್ಲಿ ಡಸ್ಟ್‌ ಬಿನ್ ಕಾಣಿಸದ ಜಪಾನ್ ದೇಶದ ಅಪರೂಪದ ವಿಚಾರಗಳಿವು -ರಂಗ ನೋಟ

D M Ghanashyam HT Kannada

Nov 30, 2024 06:00 AM IST

google News

ನಾಯಿಗಳನ್ನು ಪ್ರೀತಿಸುವ ದೇಶ ಜಪಾನ್. ರಂಗಸ್ವಾಮಿ ಮೂಕನಹಳ್ಳಿ ಜಪಾನ್ ಪ್ರವಾಸ ಕಥನ

    • ರಂಗಸ್ವಾಮಿ ಮೂಕನಹಳ್ಳಿ: ಜಪಾನ್ ನೋಡಬೇಕೆಂಬ ಕನಸು ನನಸಾಗಿಸಿಕೊಂಡ ಸಂತೃಪ್ತಿಯಲ್ಲಿ ಪ್ರವಾಸದ ಅನುಭವನ್ನು ಸರಣಿ ರೂಪದಲ್ಲಿ ‘ರಂಗ ನೋಟ’ದ ಮೂಲಕ ಕಟ್ಟಿಕೊಡಲು ಲೇಖಕರು ಮುಂದಾಗಿದ್ದಾರೆ. ಈ ಸರಣಿಯ ಮೊದಲ ಕಂತಿನಲ್ಲಿ ಸ್ವಚ್ಛತೆಗೆ ಜಪಾನಿಯರು ನೀಡುವ ಮಹತ್ವ ಮತ್ತು ಅವರ ಶ್ವಾನಪ್ರೇಮದ ಇಣುಕುನೋಟ ಇದೆ.
ನಾಯಿಗಳನ್ನು ಪ್ರೀತಿಸುವ ದೇಶ ಜಪಾನ್. ರಂಗಸ್ವಾಮಿ ಮೂಕನಹಳ್ಳಿ ಜಪಾನ್ ಪ್ರವಾಸ ಕಥನ
ನಾಯಿಗಳನ್ನು ಪ್ರೀತಿಸುವ ದೇಶ ಜಪಾನ್. ರಂಗಸ್ವಾಮಿ ಮೂಕನಹಳ್ಳಿ ಜಪಾನ್ ಪ್ರವಾಸ ಕಥನ

ನಾನು ಭಾರತ ಬಿಟ್ಟ ದಿನಗಳಲ್ಲಿ ನಮ್ಮದು ಇವತ್ತಿನ ಭಾರತವಾಗಿರಲಿಲ್ಲ. ಹೆಸರಾಂತ ಒಂದಿಷ್ಟು ಸಂಸ್ಥೆಗಳನ್ನು ಬಿಟ್ಟರೆ ಕೆಲಸದ ಅವಕಾಶಗಳು ಅಷ್ಟಕಷ್ಟೇ. ಮಾರುತಿ 800 ಮತ್ತು ಅಂಬಾಸಡರ್ ಕಾಲವದು. ಮಾರುತಿ ಹೊಸ ಕಾರು ಎಸ್ಟೀಮ್ ಸಂಚಲನ ಉಂಟು ಮಾಡಿತ್ತು ಎಂದರೆ ಈಗಿನ ಪೀಳಿಗೆ ಜನ ನಗುತ್ತಾರೆ. ಅಂದಿಗೆ ಆಯ್ಕೆಗಳು ಇರಲಿಲ್ಲ. ದೂರದರ್ಶನ ಬಿಟ್ಟರೆ ಉದಯ ಮತ್ತು ಈ-ಟಿವಿ ಇದ್ದ ಕಾಲವದು! ಪೇಜರ್ ಪೀಕ್‌ನಲ್ಲಿದ್ದ ಸಮಯ. ಆಗಿನ್ನೂ ಭಾರತದ ಮಟ್ಟಿಗೆ ಮೊಬೈಲ್ ಹುಟ್ಟಿರಲಿಲ್ಲ. ಇಂಥ ಸಮಯದಲ್ಲಿ ಭಾರತ ಬಿಟ್ಟು ಯೂರೋಪ್ ಸೇರಿದಾಗ ಅಲ್ಲಿನ ನಾಯಿಗಳನ್ನು ನೋಡಿ ಹೊಟ್ಟೆಕಿಚ್ಚು ಆಗಿತ್ತು.

ಕಾರಿನ ಹಿಂದಿನ ಸೀಟಿನ ತುಂಬಾ ಮೈಹಾಸಿ ಮಲಗಿಕೊಂಡಿರುತ್ತಿದ್ದವು. ಆ ನಂತರ ಈ ಸೀನ್ ಕಾಮನ್ ಆಗೋಯ್ತು. ಹೀಗಾಗಿ ಅದು ವಿಶೇಷ ಎನ್ನಿಸುತ್ತಿರಲಿಲ್ಲ. ಭಾರತಕ್ಕೆ ವಾಪಸ್ಸು ಬಂದಾಗ ಭಾರತ ಬದಲಾಗಿತ್ತು. ಇಲ್ಲಿಯೂ ಶ್ವಾನ ಪ್ರಿಯರು ಅದ್ಯಾವ ಮಾಯದಲ್ಲೋ ಹುಟ್ಟಿಕೊಂಡು ಬಿಟ್ಟಿದ್ದರು! ಇಷ್ಟೆಲ್ಲಾ ಇವಾಗ ಬರೆಯಲು ಕಾರಣ; ಮೊನ್ನೆ ಜಪಾನ್ ದೇಶದ ಪ್ರವಾಸ ಹೋಗಿ ಬಂದೆ.

ಅಲ್ಲಿನ ಜನರ ನಾಯಿ ಪ್ರೀತಿ ನೆಕ್ಸ್ಟ್ ಲೆವೆಲ್ ಕಣ್ರೀ! ಹೌದು ಇಂದಿಗೂ ಯೂರೋಪಿನಲ್ಲೂ ಕಾಣದ ದೃಶ್ಯವದು! ಮಕ್ಕಳನ್ನು ಮಲಗಿಸಿ ತಳ್ಳಿಕೊಂಡು ಹೋಗುವ ಪ್ರಾಮ್‌ನಲ್ಲಿ ನಾಯಿಯನ್ನು ಮಲಗಿಸಿ ಅದನ್ನು ತಳ್ಳಿಕೊಂಡು ಹೋಗುತ್ತಾರೆ. ಒಂದೆರೆಡು ದೃಶ್ಯವಾಗಿದ್ದರೆ ಯಾರೋ ಫ್ಯಾನಟಿಕ್ ಎಂದುಕೊಳ್ಳಬಹುದಿತ್ತು. ನಾಯಿಯನ್ನು ಕರೆದುಕೊಂಡು ಬರುವ ಎಲ್ಲರದು ಇದೆ ರೀತಿ. ಇದನ್ನು ಕಂಡ ಮೇಲೆ ಬರೋಬ್ಬರಿ 25 ವರ್ಷಗಳ ನಂತರ ಮತ್ತೆ ನಾಯಿ, ಸಾರೀ ಜಪಾನಿ ನಾಯಿಗಳ ಮೇಲೆ ಹೊಟ್ಟೆಕಿಚ್ಚು ಉಂಟಾಗಿದೆ ಕಣ್ರೀ. ಹೆಣ್ಣೋ ಅಥವಾ ಗಂಡೋ ಎನ್ನುವುದರ ಮೇಲೆ ಅದಕ್ಕೆ ಬಟ್ಟೆ, ಬಟ್ಟೆಯ ಬಣ್ಣ ಮತ್ತು ಮೇಕಪ್ ಎಲ್ಲವೂ ಬದಲಾಗುತ್ತದೆ! ಒಂದುಕ್ಷಣಕ್ಕೆ ಇಲ್ಲಿ ನಾಯಿಗಿರುವ ಬದುಕು, ಬೆಲೆ ನಮ್ಮ ದೇಶದ ಕೋಟ್ಯಂತರ ಜನರಿಗೂ ಇಲ್ಲವಲ್ಲ ಎನ್ನಿಸಿ ಮನಸ್ಸು ಪಿಚ್ಚೆನ್ನಿಸಿತು.

ಜಪಾನ್‌ ನೋಡಬೇಕೆಂಬ ಕನಸು ನನಸಾಯ್ತು

ಜಪಾನ್ ದೇಶದ ಬಗ್ಗೆ ಬುದ್ಧಿ ಬಂದಾಗಿನಿಂದ ಕೇಳಿದ್ದೇ ಆಗಿತ್ತು. ಅವರ ಸಮಯಪ್ರಜ್ಞೆ, ಕೆಲಸ ಪ್ರಜ್ಞೆ, ದೇಶಾಭಿಮಾನ ಇತ್ಯಾದಿಗಳನ್ನು ಕೇಳಿ ಒಮ್ಮೆಯಾದರೂ ಹೋಗಬೇಕು ಅನ್ನಿಸಿತ್ತು. ಹೊಟ್ಟೆಗಾದರೆ ಬಟ್ಟೆಗಿಲ್ಲ ಎನ್ನುವ ಬದುಕಿಟ್ಟುಕೊಂಡು ಕನಸು ಕಾಣುವುದು ಕೂಡ ಅಪರಾಧ ಎನ್ನುವ ಸ್ಥಿತಿ. ಹೀಗಿದ್ದಾಗ ನಿಜಕ್ಕೂ ಪ್ರವಾಸ ಮಾಡುವ ಹುಮ್ಮಸ್ಸು, ಚೈತನ್ಯಕ್ಕಿಂತ ಮುಖ್ಯವಾಗಿ ಬೇಕಾಗಿದ್ದ ಹಣವನ್ನು ತರುವುದಾದರೂ ಎಲ್ಲಿಂದ? ಆ ನಂತರದ ವರ್ಷಗಳು ಬದುಕು ಹಸನಾಯ್ತ. ಯೂರೋಪು ಸುತ್ತುವುದರಲ್ಲಿ ಏಷ್ಯಾ ಪೂರ್ಣವಾಗಿ ಮರೆತು ಹೋಗಿತ್ತು. ಭಾರತಕ್ಕೆ ಮರಳಿ ಬಂದ ನಂತರ ಪ್ರಾಜೆಕ್ಟ್ ಏಷ್ಯಾ ಶುರು ಮಾಡಿದೆವು. ಇಲ್ಲಿನ ಮುಕ್ಕಾಲು ದೇಶಗಳ ಪರ್ಯಟನೆ ಮಾಡಿದರೂ ಅದೇಕೋ ಜಪಾನ್‌ಗೆ ತೆರಳಲು ವೇಳೆ ಕೂಡಿ ಬಂದಿರಲಿಲ್ಲ. ಮೂರು ವಾರಗಳ ಹಿಂದೆ ಹೀಗೆ ಸುಮ್ಮನೆ ಮಾತನಾಡುತ್ತಾ ಹೋಗೋಣ ಎನ್ನುವ ನಿರ್ಧಾರ ಮಾಡಿ ಹೊರಟುಬಿಟ್ಟೆವು. ಜಗತ್ತಿನ ಸುಮಾರು 96 ದೇಶಗಳಿಗೆ ಭೇಟಿ ನೀಡಲು ನನಗೆ ವೀಸಾ ಬೇಕಿಲ್ಲ ಎನ್ನುವುದು ಬಹುದೊಡ್ಡ ಪ್ಲಸ್ ಪಾಯಿಂಟ್!

ಕಟ್ಟಡಗಳು ವಾಲಾಡುತ್ತವೆ, ನೆಲಕಚ್ಚುವುದಿಲ್ಲ

ಕ್ಯಾತೆ ಪೆಸಿಫಿಕ್ ವಿಮಾನ ಹತ್ತಿ ಟೋಕಿಯೋ ನಗರಕ್ಕೆ ಬಂದಿಳಿದಾಗ ಕಂಡದ್ದು ಗಗನಚುಂಬಿ ಕಟ್ಟಡಗಳು. ಭೂಕಂಪ ಯಾವಾಗ ಬೇಕಾದರು ಆಗಬಹುದಾದ ಪ್ರದೇಶವಿದು. ನಿತ್ಯ ಸರಾಸರಿ 40 ರಿಂದ 50 ಲಘು ಭೂಕಂಪನ ಅಲ್ಲಿ ಆಗುತ್ತಲೇ ಇರುತ್ತದೆ. ಇದು ಜಪಾನಿಗರೆ ಹೇಳುವ ಮಾತು. ಜೀವ ಹಾನಿ , ಆಸ್ತಿ ಹಾನಿ ಆಗುವ ಮಟ್ಟಿನ ಭೂಕಂಪ ಕೂಡ ಯಾವಾಗ ಬೇಕಾದರೂ ಆಗಬಹುದು. ಇಂತಹ ಬಹು ದೊಡ್ಡ ಸಮಸ್ಯೆ ಇಟ್ಟುಕೊಂಡು ಕೂಡ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದ್ದಾರೆ. ಅವು ಭೂಕಂಪನವಾದರೆ ಅತ್ತಿತ್ತ ವಾಲಾಡುತ್ತವೆಯೇ ವಿನಃ ನೆಲ ಕಚ್ಚುವುದಿಲ್ಲ. ಪ್ರಕೃತಿಗೆ ಸವಾಲು ಹಾಕಿ ಜಪಾನಿಯರು ಬದುಕುತ್ತಿದ್ದಾರೆ. ಇನ್ನು ಈ ನಗರದ ಮೆಟ್ರೋ ಕಥೆ ಕೇಳಿದರೆ ಅಚ್ಚರಿಗೊಳ್ಳುವಿರಿ. ಭೂಮಿಯನ್ನು ಕೊರೆದು ಅದರ ಒಡಲಲ್ಲಿ ಮೆಟ್ರೋ ರೈಲು ಸಂಚರಿಸುವಂತೆ ಮಾಡಿದ್ದಾರೆ.

ಕಸದ ಬುಟ್ಟಿ ಇಲ್ಲದ ನಗರ

ಎಲ್ಲಕ್ಕಿಂತ ಅತ್ಯಂತ ಹೆಚ್ಚು ಆಶ್ಚರ್ಯ ತರಿಸಿದ್ದು ಏನು ಗೊತ್ತೇ ? ಇಡೀ ನಗರದಲ್ಲಿ ಮತ್ತು ಮುಕ್ಕಾಲು ಪಾಲು ನಾನು ನೋಡಿದ ಜಪಾನ್ ದೇಶದ ಎಲ್ಲಾ ನಗರಗಳಲ್ಲಿ ಒಂದು ಹೌದು ಕೇವಲ ಒಂದು ಕಸದ ಬುಟ್ಟಿ ಕಾಣಲಿಲ್ಲ. ಅಲ್ಲಿನ ಸರಕಾರ ಸಾರ್ವಜನಿಕ ಕಸದ ಬುಟ್ಟಿ ಇರಿಸಿಲ್ಲ . ಕಸ ಹಾಕದಿರುವುದು ಮತ್ತು ಸ್ವಚ್ಛತೆ ಕಾಪಾಡುವುದು ಜನರ ಕೆಲಸ ಎನ್ನುವುದು ಅಲ್ಲಿನ ಸರಕಾರದ ಧೋರಣೆ. ಪ್ರತಿಯೊಬ್ಬರೂ , ಪ್ರವಾಸಿಗರು ಕೂಡ ತಮ್ಮ ಬಳಿ ಪ್ಲಾಸ್ಟಿಕ್ ಚೀಲ ಇಟ್ಟುಕೊಳ್ಳುವುದು ಅಲಿಖಿತ ನಿಯಮ. ತಮ್ಮ ಕಸವನ್ನು ತಾವೇ ಕವರ್ ನಲ್ಲಿ ಹಾಕಿ ಇಟ್ಟುಕೊಂಡು ತಮ್ಮ ಮನೆಯ ಕಸದ ಬುಟ್ಟಿಗೆ ಹಾಕಬೇಕು. ಕಸವನ್ನು ಅಲ್ಲಿಂದ ಕಲೆಕ್ಟ್ ಮಾಡಿಕೊಳ್ಳುವ ಸೌಲಭ್ಯವನ್ನು ಸರಕಾರ ಒದಗಿಸುತ್ತದೆ. ಹೀಗಾಗಿ ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ಕಸದಬುಟ್ಟಿ ಇಟ್ಟಿರುವುದಿಲ್ಲ. ಕಾಫಿ ಶಾಪುಗಳಲ್ಲಿ ಕೂಡ ಕಸದಬುಟ್ಟಿ ಇರುವುದಿಲ್ಲ ಎನ್ನುವುದು ಮಾತ್ರ ಸ್ವಲ್ಪ ಅರಗಿಸಿಕೊಳ್ಳಲಗಾದ ವಿಷಯವಾಗಿತ್ತು ನನ್ನ ಪಾಲಿಗೆ.

ಸ್ವಚ್ಛತೆ ಎನ್ನುವುದು ಉಸಿರಾಟದಷ್ಟು ಸಹಜ

ಜಪಾನಿಯರು ಪ್ಲಾಸ್ಟಿಕ್ ಯಥೇಚ್ಛವಾಗಿ ಬಳಸುತ್ತಾರೆ. ದೇಶದಲ್ಲಿ ಸಾರ್ವಜನಿಕ ಕಸದಬುಟ್ಟಿ ಇಲ್ಲ. ಹೀಗಿದ್ದೂ ರಸ್ತೆಯಲ್ಲಿ ಒಂದೇ ಒಂದು ಪೇಪರ್ ಅಥವಾ ಕವರ್ ಕಾಣಲು ಸಿಗಲಿಲ್ಲ. ಸ್ವಚ್ಛತೆ ಎನ್ನುವುದು ಜಪಾನಿಯರಲ್ಲಿ ಉಸಿರಾಡಿದಷ್ಟು ಸಹಜ. ಬೆಳಿಗ್ಗೆ ಎದ್ದ ತಕ್ಷಣ ಮನೆ ಮತ್ತು ಮನೆಯ ಸುತ್ತಮುತ್ತ ಸ್ವಚ್ಛ ಮಾಡುವುದು ಅವರು ಮಾಡುವ ಕೆಲಸ. ಹೀಗಾಗಿ ಸರಕಾರ ಮುಖ್ಯ ರಸ್ತೆಗಳನ್ನು ಮಾತ್ರ ಸ್ವಚ್ಛಗೊಳಿಸಲು ಜನರನ್ನು ನೇಮಿಸುತ್ತದೆ. ಉಳಿದ ಸಣ್ಣಪುಟ್ಟ ರಸ್ತೆಗಳ, ಮನೆಯ ಆಜುಬಾಜಿನ ಶುಚಿತ್ವ ನಾಗರಿಕರ ಹೊಣೆ. ಅವರೂ ಇದನ್ನು ಖುಷಿಯಿಂದ ಮಾಡುತ್ತಾರೆ.

ಸಸ್ಯಾಹಾರಿಯಾದ ನನ್ನಂಥಹ ಜನರಿಗೆ ಜಪಾನ್ ಕಷ್ಟ. ಹಂದಿ ಮತ್ತು ದನದ ಮಾಂಸ ಇವರ ಪ್ರಮುಖ ಆಹಾರ. ಚಿಕನ್ ಕೂಡ ಅಷ್ಟೇ ಪ್ರಮಾಣದಲ್ಲಿ ಖಾಲಿ ಮಾಡಿಬಿಡುತ್ತಾರೆ. ಜಪಾನ್ ದೇಶದ ಲೋಕಲ್ ತಿಂಡಿ ತಿನ್ನಬೇಕು ಎಂದರೆ ನಮಗೆ ಸಿಗುವುದು 'ಆನ್ಪಾನ್' ಎನ್ನುವ ಬನ್ನು. ಇದರಲ್ಲಿ ಬೇಯಿಸಿದ ಸಿಹಿ ಬೀನ್ಸ್ ಕಾಳು ಇಟ್ಟಿರುತ್ತಾರೆ. ಇದರ ಜೊತೆಗೆ ಪಿಜ್ಜಾ ಬನ್ ಕೂಡ ಸಿಗುತ್ತದೆ. ಉಳಿದಂತೆ ಧೈರ್ಯವಾಗಿ ಸೇವಿಸಬಹುದಾದ್ದು ಕಾಫಿ ಮಾತ್ರ!

ಒಟ್ಟಾರೆ ನನಗೆ ದಕ್ಕಿದಷ್ಟು ಅನುಭವ ಪಡೆದುಕೊಂಡು ಬಂದೆ. ಅವನ್ನು ನಿಮಗೂ ಕಂತುಗಳಲ್ಲಿ ದಾಟಿಸುವ ಪ್ರಯತ್ನ ಮಾಡುವೆ. ಇವತ್ತಿಗೆ ಇಷ್ಟು. ಮುಂದೆ ಮತ್ತೊಮ್ಮೆ ಸಿಗೋಣ.

ರಂಗಸ್ವಾಮಿ ಮೂಕನಹಳ್ಳಿ ರಂಗ ನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ