logo
ಕನ್ನಡ ಸುದ್ದಿ  /  ಜೀವನಶೈಲಿ  /  40 ವರ್ಷ ಮೇಲ್ಪಟ್ಟ ಮಹಿಳೆಯರು ವೇಗವಾಗಿ ತೂಕ ಕರಗಿಸುವುದು ಹೇಗೆ; ಫಿಟ್‌ನೆಸ್ ಪ್ರಶ್ನೆಗೆ ಉತ್ತರ ಇಲ್ಲಿದೆ

40 ವರ್ಷ ಮೇಲ್ಪಟ್ಟ ಮಹಿಳೆಯರು ವೇಗವಾಗಿ ತೂಕ ಕರಗಿಸುವುದು ಹೇಗೆ; ಫಿಟ್‌ನೆಸ್ ಪ್ರಶ್ನೆಗೆ ಉತ್ತರ ಇಲ್ಲಿದೆ

Jayaraj HT Kannada

Oct 23, 2024 05:27 PM IST

google News

40 ವರ್ಷ ಮೇಲ್ಪಟ್ಟ ಮಹಿಳೆಯರು ವೇಗವಾಗಿ ತೂಕ ಕರಗಿಸುವುದು ಹೇಗೆ?

    • ವಯಸ್ಸು 40 ದಾಟಿದ ಮೇಲೆ ದೇಹದ ತೂಕ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುವುದು ತುಸು ಕಷ್ಟ. ಏಷ್ಟೇ ಜಾಗರೂಕರಾಗಿದ್ದರೂ, ತೂಕ ಹೆಚ್ಚಾಗಬಹುದು. ಹೀಗಾಗಿ ಮಹಿಳೆಯರು ಕೆಲವು ಆರೋಗ್ಯಕರ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
40 ವರ್ಷ ಮೇಲ್ಪಟ್ಟ ಮಹಿಳೆಯರು ವೇಗವಾಗಿ ತೂಕ ಕರಗಿಸುವುದು ಹೇಗೆ?
40 ವರ್ಷ ಮೇಲ್ಪಟ್ಟ ಮಹಿಳೆಯರು ವೇಗವಾಗಿ ತೂಕ ಕರಗಿಸುವುದು ಹೇಗೆ? (Pexel)

ವಯಸ್ಸು ಹೆಚ್ಚಾದಂತೆ ಕೆಲವೊಬ್ಬರ ದೇಹದ ತೂಕ ಕೂಡಾ ಹೆಚ್ಚುತ್ತದೆ. ವಯಸ್ಸಾಗುತ್ತಾ ಹೋದಂತೆ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟದ ಕೆಲಸ ಎಂದು ಹೆಚ್ಚಿನವರು ಯೋಚಿಸುತ್ತಾರೆ. ವಯಸ್ಸು ಹೆಚ್ಚಾದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕೂಡಾ ಬಾಧಿಸುತ್ತವೆ. ಈ ನಡುವೆ ದೇಹದ ತೂಕ ಹೆಚ್ಚಾದರೆ, ಹೊಸ ಚಿಂತೆ ಶುರುವಾಗುತ್ತದೆ. ಹೀಗಾಗಿ 40 ವರ್ಷ ದಾಟಿದ ನಂತರ, ಹಲವು ಮಹಿಳೆಯರು ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಸಾಮಾನ್ಯವಾಗಿ ಮಹಿಳೆಯರ ತೂಕವು ಸೊಂಟದ ಬಳಿ ಹೆಚ್ಚು ಗೋಚರಿಸುತ್ತದೆ. ಇದಕ್ಕೆ ಅಸಮರ್ಪಕ ಜೀವನಶೈಲಿ ಪ್ರಮುಖ ಕಾರಣ. ನಿತ್ಯ ಜೀವನದಲ್ಲಿ ಕೆಲವೊಂದು ಅಭ್ಯಾಸಗಳಿಂದಾಗಿ ತೂಕ ಹೆಚ್ಚುತ್ತದೆ.

40 ವರ್ಷ ವಯಸ್ಸು ದಾಟಿದ ಮೇಲೆ ದೇಹದ ತೂಕ ಸಮತೋಲನದಿಂದ ಕಾಪಾಡುವುದು ತುಸು ಸವಾಲಿನ ಕೆಲಸ. ಹಾಗಂತಾ ಅಸಾಧ್ಯವೇನಲ್ಲ. ಆರೋಗ್ಯಕರ ಆಹಾರ ಹಾಗೂ ಜೀವನಶೈಲಿಯ ಮೂಲಕ ಸೂಕ್ತ ವಿಧಾನವನ್ನು ಅಳವಡಿಸಿಕೊಳ್ಳಬಹುದು.

ವ್ಯಾಯಾಮಗಳು

ವಯಸ್ಸು 40 ದಾಟುತ್ತಿದ್ದಂತೆಯೇ ದೇಹದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ. ಈ ಕಾರಣದಿಂದಾಗಿ ಕ್ಯಾಲರಿಗಳನ್ನು ಸುಡುವುದು ತುಂಬಾ ಕಷ್ಟ. ಹೀಗಾಗಿ ವಾರಕ್ಕೆ ಎರಡರಿಂದ ನಾಲ್ಕು ಬಾರಿ ಸಾಮರ್ಥ್ಯ ತರಬೇತಿಯಲ್ಲಿ ಪಾಲ್ಗೊಳ್ಳಿ. ಅಂದರೆ ದೇಹದಿಂದ ಸಾಧ್ಯವಾಗುವ ವ್ಯಾಯಾಮಗಳು, ದೇಹದಂಡನೆ ತರಬೇತಿಯೊಂದಿಗೆ ಸ್ನಾಯುಗಳನ್ನು ಬಲಪಡಿಸಿ. ಇದಲ್ಲದೆ, ಮೂಳೆಗಳು ಮತ್ತು ದೇಹವನ್ನು ಆರೋಗ್ಯಕರವಾಗಿಡಲು ದೈಹಿಕ ಶ್ರಮ ನೆರವಾಗುತ್ತದೆ.

ನಿದ್ರೆಯ ಗುಣಮಟ್ಟದ ಬಗ್ಗೆ ಗಮನ ಕೊಡಿ

ನಿದ್ರೆಯ ಕೊರತೆಯು ಹಾರ್ಮೋನುಗಳ ಸಮತೋಲನವನ್ನು ಪ್ರತಿಬಂಧಿಸುತ್ತದೆ. ಇದು ಹೆಚ್ಚಿನ ಕ್ಯಾಲರಿ ಇರುವ ಆಹಾರ ಸೇವಿಸುವ ಬಯಕೆಯನ್ನು ಹೆಚ್ಚಿಸುತ್ತದೆ. ಕ್ರಮೇಣ ಚಯಾಪಚಯ ನಿಧಾನಗೊಂಡು, ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹೀಗಾಗಿ ನೈಸರ್ಗಿಕ ಕೊಬ್ಬನ್ನು ಕರಗಿಸಲು ಪ್ರತಿದಿನ ರಾತ್ರಿ ವೇಳೆ 7ರಿಂದ 9 ಗಂಟೆಗಳ ನಿದ್ರೆ ಮಾಡುವುದು ಅವಶ್ಯಕ.

ದೇಹವನ್ನು ಸರಿಯಾಗಿ ಹೈಡ್ರೀಕರಿಸಿ

ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಇದರ ಜೊತೆಗೆ ನೀರಿನ ಅಂಶವಿರುವ ಆಹಾರ ಸೇವನೆಯತ್ತ ಗಮನ ಹರಿಸಬಹುದು. ಇದು ತೂಕ ನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ಚಯಾಪಚಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನೀರು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹೀಗಾಗಿ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

ಆಹಾರ ಸೇವನೆ ಮೇಲೆ ಗಮನವಿರಲಿ

ದೇಹಕ್ಕೆ ವಯಸ್ಸಾದಂತೆ ಚಯಾಪಚಯವು ಸ್ವಾಭಾವಿಕವಾಗಿ ನಿಧಾನಗೊಳ್ಳುತ್ತದೆ. ಹೀಗಾಗಿ ನೀವು ಯಾವ ಆಹಾರ ಸೇವಿಸುತ್ತಿದ್ದೀರಿ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ಸೂಕ್ತ ಡಯಟ್‌ ಪಾಲಿಸುವುದು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ತಿನ್ನುವಾಗ ಪ್ರತಿಯೊಂದು ತುತ್ತನ್ನು ಕೂಡಾ ಖುಷಿಯಿಂದ ಸವಿಯಬೇಕು. ಸರಿಯಾಗಿ ಜಗಿದು ಜೀರ್ಣಕ್ರಿಯೆಗೆ ಸಹಕರಿಸಬೇಕು. ಹೊಟ್ಟೆಗೆ ಎಷ್ಟು ಆಹಾರ ಬೇಕು ಎಂಬುವುದನ್ನು ಗುರುತಿಸುವುದು ಕೂಡಾ ನಿಮ್ಮದೇ ಜವಾಬ್ದಾರಿ. ಎಲ್ಲಾ ಪೋಷಕಾಂಗಳಿರುವ ಆಹಾರವನ್ನು ಸೇವಿಸಿ. ಆಹಾರದಲ್ಲಿ ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್‌ಗಳು ಇರುವುದನ್ನು ಖಚಿತಪಡಿಸಿಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ