ಬಿಗಿಯಾದ ಬ್ರಾ ಧರಿಸುವುದರಿಂದ ಆಗುವ ಅನಾನುಕೂಲಗಳೇನು? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
ಬಿಗಿಯಾದ ಬ್ರಾ ಧರಿಸುವುದರಿಂದ ಮಹಿಳೆಯರ ಸ್ತನಗಳ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇದು ಉಸಿರಾಟದ ತೊಂದರೆಯಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಯಾವ ರೀತಿಯ ಬ್ರಾಗಳನ್ನು ಧರಿಸಬೇಕು,ಬಿಗಿಯಾದ ಬ್ರಾಗಳ ಅನಾನುಕೂಲಗಳು ಮತ್ತು ಅವುಗಳ ಬಳಕೆಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ಇಲ್ಲಿ ತಿಳಿಯಿರಿ.
ಸ್ತನಗಳ ಆರೋಗ್ಯ, ಆಕಾರ ಮತ್ತು ಸೌಂದರ್ಯಕ್ಕಾಗಿ ಬ್ರಾ ಧರಿಸುವುದು ಮಹಿಳೆಯರಿಗೆ ಅನಿವಾರ್ಯವಾಗಿದೆ. ಆದರೆ, ಸರಿಯಾದ ಬ್ರಾ ಧರಿಸಿದಾಗ ಮಾತ್ರ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಅಧ್ಯಯನವೊಂದರ ಪ್ರಕಾರ ಶೇ. 80ರಷ್ಟು ಮಹಿಳೆಯರು ತಪ್ಪಾದ ಬ್ರಾ ಧರಿಸುತ್ತಾರೆ ಎಂದು ತಿಳಿಸಿದೆ. ಶೇ. 70 ರಷ್ಟು ಮಹಿಳೆಯರು ತಮ್ಮ ಅಳತೆಗಿಂತ ಚಿಕ್ಕದಾಗಿರುವ ಬ್ರಾಗಳನ್ನು ಧರಿಸಿದ್ರೆ, ಶೇಕಡಾ 10 ರಷ್ಟು ಮಹಿಳೆಯರು ತುಂಬಾ ದೊಡ್ಡದಾದ ಬ್ರಾಗಳನ್ನು ಧರಿಸುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು, ಬಿಗಿಯಾದ ಬ್ರಾ ಧರಿಸುವುದರಿಂದ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಹಾಗಿದ್ದರೆ ಯಾವ ರೀತಿಯ ಬ್ರಾಗಳನ್ನು ಧರಿಸಬೇಕು, ಬಿಗಿಯಾದ ಬ್ರಾಗಳನ್ನು ಧರಿಸುವುದರಿಂದ ಆಗುವ ಅನಾನುಕೂಲಗಳೇನು ಮತ್ತು ಬ್ರಾಗಳನ್ನು ಸ್ವಚ್ಛಗೊಳಿಸಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ಇಲ್ಲಿ ತಿಳಿಯಿರಿ.
ಬ್ರಾ ಧರಿಸಲು ಪ್ರಾರಂಭವಾಗಿದ್ದು ಯಾವಾಗ?
ಗ್ರೀಕ್ ಮಹಿಳೆಯರು ಅನೇಕ ವರ್ಷಗಳ ಹಿಂದೆ ಬ್ರಾಗಳನ್ನು ಧರಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಬ್ರಾಗಳನ್ನು ಉಣ್ಣೆ ಅಥವಾ ಲಿನಿನ್ ಪಟ್ಟಿಗಳಿಂದ ತಯಾರಿಸಲಾಗುತ್ತಿತ್ತು. ಇದನ್ನು ಮಹಿಳೆಯರು ತಮ್ಮ ಸ್ತನಗಳ ಸುತ್ತಲೂ ಧರಿಸಲು ಪ್ರಾರಂಭಿಸಿದರು. ಅದರ ನಂತರ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬ್ರಾದ ನೋಟ ಮತ್ತು ಆಕಾರವೂ ಗಮನಾರ್ಹವಾಗಿ ಬದಲಾಗುತ್ತಾ ಬಂದಿತು.
ಬಿಗಿಯಾದ ಬ್ರಾ (ಸ್ತನಬಂಧ) ವನ್ನು ಧರಿಸುವುದರ ಅನಾನುಕೂಲಗಳು
ರಕ್ತ ಪೂರೈಕೆ: ದೊಡ್ಡ ಸ್ತನಗಳನ್ನು ಹೊಂದಿರುವ ಮಹಿಳೆಯರು ತುಂಬಾ ಬಿಗಿಯಾದ ಬ್ರಾ ಧರಿಸಿದರೆ, ಬ್ರಾ ರೇಖೆಯ ಸುತ್ತಲಿನ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಬೆವರು ಕೂಡ ಹೆಚ್ಚಾಗುತ್ತದೆ. ಬಿಗಿಯಾದ ಬ್ರಾ ಧರಿಸುವುದರಿಂದ ಬೆವರು ಸುಲಭವಾಗಿ ಒಣಗಲು ಅನುಮತಿಸುವುದಿಲ್ಲ. ಅಲ್ಲದೆ, ರಕ್ತ ಪರಿಚಲನೆ ಸರಿಯಾಗಿ ಆಗದಿರುವುದರಿಂದ ಭುಜ ಮತ್ತು ಬೆನ್ನು ನೋವು ಬರುವ ಅಪಾಯವಿದೆ. ಬಿಗಿಯಾದ ಸ್ತನಬಂಧವು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.
ದದ್ದುಗಳು: ಬಿಗಿಯಾದ ಸ್ತನಬಂಧವನ್ನು ಧರಿಸುವುದು ಬೆವರು ಮತ್ತು ಸೋಂಕುಗಳು ಮತ್ತು ದದ್ದುಗಳನ್ನು ಉಂಟುಮಾಡಬಹುದು. ಬಿಗಿಯಾದ ಬ್ರಾಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ.ಇದು ಬ್ರಾ ಲೈನ್ ಸುತ್ತಲೂ ತುರಿಕೆ, ಸುಡುವಿಕೆ ಮತ್ತು ದದ್ದುಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಈ ಸಮಸ್ಯೆ ತೀವ್ರವಾಗಿರುತ್ತದೆ. ಕೆಲವರಲ್ಲಿ ಹುಣ್ಣುಗಳೂ ಕಾಣಿಸಿಕೊಳ್ಳುತ್ತವೆ.
ದೇಹದ ಭಂಗಿ: ಬಿಗಿಯಾದ ಬ್ರಾ ಧರಿಸುವುದರಿಂದ ನಿಮ್ಮ ಭಂಗಿಗೆ ಹಾನಿಯಾಗಬಹುದು. ಭುಜಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬ್ರಾ ಬಿಗಿಯಾಗಿರುವುದರಿಂದ, ನಿಮಗೆ ಅರಿವಿಲ್ಲದೆ ಆಗಾಗ ನಿಮ್ಮ ಕೈಗಳಿಂದ ಅದನ್ನು ಎಳೆಯುತ್ತಿರಬಹುದು. ಅಷ್ಟೇ ಅಲ್ಲ, ಇದು ದೇಹದ ಭಂಗಿಯ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ. ನಿಂತಿರುವಾಗ ಮತ್ತು ಕುಳಿತುಕೊಳ್ಳುವಾಗ, ತುಂಬಾ ಕಷ್ಟಪಡಬೇಕಾದೀತು.
ಅಸಿಡಿಟಿ ಸಮಸ್ಯೆ: ನೀವು ಸಂಪೂರ್ಣ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸಿದರೂ ಅಸಿಡಿಟಿ ಸಮಸ್ಯೆಯು ನಿಮ್ಮನ್ನು ಕಾಡುತ್ತಿರುವುದಕ್ಕೆ ಇದೂ ಒಂದು ಕಾರಣ. ಬಿಗಿಯಾದ ಬ್ರಾಗಳು ಅಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಬಿಗಿಯಾದ ಸ್ತನಬಂಧವು ಎದೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.
ಬ್ರಾವನ್ನು ಹೇಗೆ ಸ್ವಚ್ಛಗೊಳಿಸುವುದು?
ವಾಷಿಂಗ್ ಮೆಷಿನ್‌ನಲ್ಲಿ ಬ್ರಾಗಳನ್ನು ತೊಳೆಯಲು ಹಾಕಿದರೆ ಅದರ ಬಾಳಿಕೆ ಬಗ್ಗೆ ಕಾಳಜಿ ವಹಿಸಬೇಕು. ಬ್ರಾ ಮೆಶ್ ಅಥವಾ ಬ್ರಾ ವಾಷಿಂಗ್ ಬ್ಯಾಗ್ ಅನ್ನುವ ಆಯ್ಕೆಯಿದ್ದರೆ ವಾಷಿಂಗ್ ಮೆಷಿನ್‍ನಲ್ಲಿ ಹಾಕಬಹುದು. ಇಲ್ಲದಿದ್ದರೆ ಆದಷ್ಟು ಕೈಯಲ್ಲಿ ನಿಧಾನವಾಗಿ ಒಗೆಯುವುದು ಉತ್ತಮ. ಹೀಗೆ ಮಾಡುವುದರಿಂದ ಬ್ರಾ ಆಕಾರ ಹಾಳಾಗುವುದಿಲ್ಲ. ತೊಳೆದ ಬ್ರಾವನ್ನು ಚೆನ್ನಾಗಿ ಗಾಳಿ ಮತ್ತು ಬಿಸಿಲು ಇರುವ ಸ್ಥಳದಲ್ಲಿ ಒಣಗಿಸಿ. ಅನೇಕ ಜನರು ತಮ್ಮ ಬ್ರಾವನ್ನು ಒಣಗಿಸಿ ಅದನ್ನು ಯಾರಿಗೂ ಕಾಣದಂತೆ ಬೇರೆ ಯಾವುದಾದರೂ ಬಟ್ಟೆಯಿಂದ ಮುಚ್ಚುತ್ತಾರೆ. ಆದರೆ, ಇದು ತಪ್ಪು ಮಾರ್ಗ ಎಂಬುದನ್ನು ನೆನಪಿಡಿ. ಈ ರೀತಿ ಮಾಡುವುದರಿಂದ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ.