Egg Pulao: 15 ನಿಮಿಷದಲ್ಲಿ ತಯಾರಾಗೋ ಸ್ಪೆಷಲ್ ಮೊಟ್ಟೆ ಪಲಾವ್ ರೆಸಿಪಿ ಇಲ್ಲಿದೆ; ಒಮ್ಮೆ ತಿಂದ್ರೆ ಮತ್ತೆ ಬೇಕೆನ್ನಿಸೋದು ಖಂಡಿತ
Mar 10, 2024 08:00 AM IST
ಮೊಟ್ಟೆ ಪಲಾವ್
- ರೈಸ್ ಐಟಂ ಅಂದ್ರೆ ಇಷ್ಟ, ಆದ್ರೆ ಒಂದೇ ಥರದ ತಿನಿಸುಗಳನ್ನು ತಿಂದು ನಾಲಿಗೆ ಜಡ್ಡುಗಟ್ಟಿದೆ ಅನ್ನಿಸಿದ್ರೆ ನೀವು ಎಗ್ ಪಲಾವ್ ಟ್ರೈ ಮಾಡಬಹುದು. ಇದನ್ನ ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅನ್ನಿಸೋದ್ರಲ್ಲಿ ಅನುಮಾನವಿಲ್ಲ. ಹೇಗ್ ಮಾಡೋದು ಅಂತ ನಾವ್ ಹೇಳ್ತೀವಿ, ನೀವ್ ಕಲ್ತ್ಕೊಳ್ಳಿ.
ದೇಹಕ್ಕೆ ಸಾಕಷ್ಟು ಪೋಷಕಾಂಶ ಸಿಗಬೇಕು ಅಂದ್ರೆ ದಿನಕ್ಕೊಂದು ಮೊಟ್ಟೆ ತಿನ್ನಬೇಕು ಎಂದು ಡಾಕ್ಟರ್ ಹೇಳ್ತಾರೆ. ಆದ್ರೆ ಪ್ರತಿದಿನ ಬೇಯಿಸಿದ ಮೊಟ್ಟೆ ತಿನ್ನೋದು ಬೋರ್ ಆಗಬಹುದು. ಅದಕ್ಕಾಗಿ ನೀವು ಮೊಟ್ಟೆಯಿಂದ ಬೇರೆ ಬೇರೆ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ರೈಸ್ ಐಟಂ ನಿಮಗೆ ತುಂಬಾ ಇಷ್ಟ ಅಂದ್ರೆ ನೀವು ಎಗ್ ಪಲಾವ್ ಮಾಡಬಹುದು. ಇದರ ರುಚಿ ನಿಜಕ್ಕೂ ಅದ್ಭುತ. ಇದನ್ನ ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್‌ಬೇಕು ಅನ್ನಿಸುತ್ತೆ. 15 ರಿಂದ 20 ನಿಮಿಷದಲ್ಲಿ ಸುಲಭವಾಗಿ ಈ ಮೊಟ್ಟೆ ಪಲಾವ್ ಅನ್ನು ತಯಾರಿಸಬಹುದು. ಇದನ್ನು ಮಾಡೋದು ಹೇಗೆ, ಏನೆಲ್ಲಾ ಸಾಮಗ್ರಿಗಳು ಬೇಕು ಅನ್ನೋದಕ್ಕೆ ಮುಂದೆ ಓದಿ.
ಮೊಟ್ಟೆ ಪಲಾವ್
ಬೇಕಾಗುವ ಸಾಮಗ್ರಿಗಳು: ಮೊಟ್ಟೆಗಳು - 4, ಬಾಸ್ಮತಿ ಅಕ್ಕಿ - 1 ಕಪ್, ಎಣ್ಣೆ - ಸಾಕಷ್ಟು, ಈರುಳ್ಳಿ - 1, ಮೆಣಸಿನಕಾಯಿ - 2, ಖಾರದಪುಡಿ - 1 ಚಮಚ, ಕೊತ್ತಂಬರಿ ಪುಡಿ - 1 ಚಮಚ, ಅರಿಸಿನ - ಕಾಲು ಚಮಚ, ಗರಂ ಮಸಾಲಾ - ಅರ್ಧ ಚಮಚ, ಕಾಳುಮೆಣಸಿನ ಪುಡಿ - ಕಾಲು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಬಿರಿಯಾನಿ ಮಸಾಲಾ - ಅರ್ಧ ಚಮಚ, ನೀರು - ಸಾಕಷ್ಟು, ಪುದಿನ - ಸ್ವಲ್ಪ, ಕೊತ್ತಂಬರಿ ಸೊಪ್ಪು - ಸ್ವಲ್ಪ, ಉಪ್ಪು - ರುಚಿಗೆ, ಏಲಕ್ಕಿ - ಎರಡು, ದಾಲ್ಚಿನ್ನಿ - ಒಂದು ತುಂಡು, ಬಿರಿಯಾನಿ ಎಲೆ - ಎರಡು, ಶಜೀರಾ - ಅರ್ಧ ಚಮಚ, ಸೋಂಪು - ಒಂದು, ಲವಂಗ - ನಾಲ್ಕು
ತಯಾರಿಸುವ ವಿಧಾನ
ಮೊಟ್ಟೆ ಬೇಯಿಸಿ, ಅದರ ಸಿಪ್ಪೆ ತೆಗೆದು ಇರಿಸಿಕೊಳ್ಳಿ. ಈಗ ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಅರಿಸಿನ, ಹಸಿಮೆಣಸಿನಕಾಯಿ, ಚಿಟಿಕೆ ಗರಂಮಸಾಲ, ಚಿಟಿಕೆ ಕಾಳುಮೆಣಸಿನ ಪುಡಿ, ಚಿಟಿಕೆ ಕೊತ್ತಂಬರಿ ಪುಡಿ, ಚಿಟಿಕೆ ಉಪ್ಪು ಹಾಕಿ, ಅದಕ್ಕೆ ಬೇಯಿಸಿಟ್ಟುಕೊಂಡ ಕೋಳಿ ಮೊಟ್ಟೆಗಳನ್ನು ಫ್ರೈ ಮಾಡಿ. ಮೊಟ್ಟೆಗಳು ಬಣ್ಣವನ್ನು ಬದಲಾಯಿಸುವವರೆಗೆ ಕೈಯಾಡಿಸಿ, ನಂತರ ತೆಗೆದು ಪ್ಲೇಟ್‌ನಲ್ಲಿ ಹಾಕಿಡಿ. ಈಗ ಅದೇ ಕುಕ್ಕರ್‌ಗೆ ಇನ್ನೂ ಸ್ವಲ್ಪ ಎಣ್ಣೆ ಹಾಕಿ ಮತ್ತು ಲವಂಗ, ದಾಲ್ಚಿನ್ನಿ, ಏಲಕ್ಕಿ, ಬಿರಿಯಾನಿ ಎಲೆ, ಶಜೀರಾ ಮತ್ತು ಸೋಂಪುಗಳನ್ನು ಫ್ರೈ ಮಾಡಿ. ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಅವುಗಳನ್ನು ಫ್ರೈ ಮಾಡಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಈಗ ಅರಿಶಿನ, ಮೆಣಸಿನಕಾಯಿ, ಕೊತ್ತಂಬರಿ ಪುಡಿ ಮತ್ತು ಬಿರಿಯಾನಿ ಮಸಾಲಾ ಸೇರಿಸಿ ಚೆನ್ನಾಗಿ ಎಲ್ಲವನ್ನೂ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೊಸರು ಸೇರಿಸಿ. ಕಡಿಮೆ ಉರಿಯಲ್ಲಿ ಬೇಯಿಸಿ. ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಟ್ಟುಕೊಂಡಿರಿ. ಕುಕ್ಕರ್‌ನಲ್ಲಿರುವ ಮಿಶ್ರಣಕ್ಕೆ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು ಮತ್ತು ಹುರಿದ ಈರುಳ್ಳಿ ಸೇರಿಸಿ. ಮೊದಲೇ ಬೇಯಿಸಿದ ಮೊಟ್ಟೆಗಳನ್ನು ಹಾಕಿ ಮತ್ತು ಕುಕ್ಕರ್ ಅನ್ನು ಮುಚ್ಚಿ. ಎರಡು ಸೀಟಿ ಕೂಗಿದ ಮೇಲೆ ಸ್ಟೌವ್ ಆಫ್ ಮಾಡಿ. ಈಗ ನಿಮ್ಮ ಮುಂದೆ ಸಖತ್ ಟೇಸ್ಟಿಯಾದ ಮೊಟ್ಟೆ ಪಲಾವ್ ತಿನ್ನಲು ಸಿದ್ಧ. ಇದನ್ನು ಮೊಸರು ಬಜ್ಜಿ ಅಥವಾ ರಾಯಿತ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ಈ ರೀತಿ ಮೊಟ್ಟೆ ಪಲಾವ್ ಮಾಡಿಕೊಟ್ಟರೆ ಮಕ್ಕಳ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಮಕ್ಕಳಿಗೆ ಮಾಡುವುದಾದರೆ ಖಾರ ಸ್ವಲ್ಪ ಕಡಿಮೆ ಹಾಕಿ. ಮಕ್ಕಳಿಗೆ ಲಂಚ್ ಬಾಕ್ಸ್ ರೆಸಿಪಿಯಾಗಿಯೂ ಇದನ್ನು ಮಾಡಬಹುದು. ಕೋಳಿ ಮೊಟ್ಟೆಯನ್ನು ಮೊದಲೇ ಬೇಯಿಸಿರುವ ಕಾರಣ ಹೆಚ್ಚು ವಿಶಲ್ ಕೂಗಿಸಬೇಡಿ. ಇದನ್ನು ಮಧ್ಯಾಹ್ನದ ಊಟ ಹಾಗೂ ರಾತ್ರಿಯೂಟಕ್ಕೂ ಮಾಡಬಹುದು.