ಸಂಜೆ ಕಾಫಿಗೆ ಸಖತ್ ಕಾಂಬಿನೇಷನ್ ಸ್ವೀಟ್ ಕಾರ್ನ್ ಪಕೋಡ; ಮಕ್ಕಳಿಗೂ ಇಷ್ಟವಾಗುವ ಈ ತಿಂಡಿ ಮಾಡೋದು ಸುಲಭ, ರೆಸಿಪಿ ಇಲ್ಲಿದೆ
Sep 20, 2024 01:24 PM IST
ಸ್ವೀಟ್ ಕಾರ್ನ್ ಪಕೋಡ
- ಸ್ವೀಟ್ ಕಾರ್ನ್ ಬಹುತೇಕರಿಗೆ ಇಷ್ಟವಾಗುತ್ತದೆ. ಮಕ್ಕಳಿಗೂ ಇದಂದ್ರೆ ಬಹಳ ಇಷ್ಟ. ಇದರಿಂದ ಸಖತ್ ಟೇಸ್ಟಿ ಆಗಿರೋ ರೆಸಿಪಿಗಳನ್ನೂ ತಯಾರಿಸಬಹುದು. ಅದರಲ್ಲಿ ಸ್ವೀಟ್ ಕಾರ್ನ್ ಪಕೋಡ ಕೂಡ ಒಂದು. ಕಡಿಮೆ ಸಾಮಗ್ರಿ ಬಳಸಿ, ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ಸ್ವೀಟ್ ಕಾರ್ನ್ ರೆಸಿಪಿ ಮಕ್ಕಳೂ ಇಷ್ಟಪಟ್ಟು ತಿಂತಾರೆ.
ಸ್ವೀಟ್‌ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ, ಸಂಜೆ ವಾಕಿಂಗ್ ಹೋದಾಗ ಬೀದಿ ಬದಿಯಲ್ಲಿ ಸ್ವೀಟ್ ಕಾರ್ನ್ ಮಾರುವವರು ಕಂಡರೆ ಮನಸ್ಸು ಅತ್ತ ಸೆಳೆಯುತ್ತದೆ. ಇದನ್ನು ಬೇಯಿಸಿ ತಿಂದರೂ ರುಚಿ, ಸುಟ್ಟು ತಿಂದರೂ ರುಚಿ. ಒಟ್ಟಾರೆ ಇದು ರುಚಿಯೋ ರುಚಿ. ಇದರಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ, ಕೆಲವೊಂದು ಖ್ಯಾದಗಳಿಗೆ ಗಾರ್ನಿಷ್ ಮಾಡಲು ಸ್ವೀಟ್ ಕಾರ್ನ್ ಬಳಸುತ್ತಾರೆ.
ಸ್ವೀಟ್ ಕಾರ್ನ್‌ನಿಂದ ತಯಾರಿಸುವ ಪಕೋಡವನ್ನು ಸ್ವೀಟ್ ಕಾರ್ನ್ ಫ್ರಿಟರ್ ಎಂಬ ಹೆಸರಿನಿಂದ ಹೊರಗಡೆ ದುಬಾರಿ ಹಣ ಕೊಟ್ಟು ತಿನ್ನುತ್ತೇವೆ. ಆದರೆ ಇದನ್ನು ಸುಲಭವಾಗಿ ಮನೆಯಲ್ಲೂ ಮಾಡಿಕೊಳ್ಳಬಹುದು. ಮಸಾಲೆಗಳು, ಉಪ್ಪು, ಸಿಹಿ ರುಚಿಯ ಈ ಪಕೋಡ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ಹಾಗಾದರೆ ಇದನ್ನು ಮಾಡೋದು ಹೇಗೆ ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಸ್ವೀಟ್ ಕಾರ್ನ್ ಪಕೋಡಕ್ಕೆ ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಸಿಹಿ ಕಾರ್ನ್ – 2 ಕಪ್, ಈರುಳ್ಳಿ – ಒಂದು ಸಣ್ಣ ಕಪ್ (ಚಿಕ್ಕದಾಗಿ ಹೆಚ್ಚಿದ್ದು), ಕಡಲೆಹಿಟ್ಟು – ಅರ್ಧ ಕಪ್, ಅಕ್ಕಿ ಹಿಟ್ಟು – 2 ಟೇಬಲ್ ಚಮಚ, ಅರಿಸಿನ – ಚಿಟಿಕೆ, ಖಾರದ ಪುಡಿ – ಅರ್ಧ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಚಾಟ್ ಮಸಾಲಾ – ಒಂದು ಟೀ ಚಮಚ, ಉಪ್ಪು – ರುಚಿಗೆ,
ಸ್ವೀಟ್ ಕಾರ್ನ್ ಪಕೋಡ ಮಾಡುವ ವಿಧಾನ
ಮೊದಲು ಬೇಯಿಸಿದ ಜೋಳವನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಕೆಲವು ಸ್ವೀಟ್‌ಕಾರ್ನ್ ಬೀಜಗಳು ಹಾಗೇ ಇರುವಂತೆ ಮತ್ತು ಮುದ್ದೆಯಾಗದಂತೆ ನೋಡಿಕೊಳ್ಳಿ. ಈ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಸಣ್ಣಗೆ ಕತ್ತರಿಸಿದ ಈರುಳ್ಳಿ ತುಂಡುಗಳು, ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಸಿನ, ಖಾರದಪುಡಿ, ಚಾಟ್ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಸೇರಿಸಿ. ಇದನ್ನು ನೀರು ಸೇರಿಸದೇ ಚೆನ್ನಾಗಿ ಕಲೆಸಿಕೊಳ್ಳಿ. ಕಾರ್ನ್‌ನಲ್ಲಿ ನೀರಿನಾಂಶವಿದ್ದು, ಇದು ಸಾಕಾಗುತ್ತದೆ. ಈಗ ಒಂದು ಕಡಾಯಿಯನ್ನು ತೆಗೆದುಕೊಂಡು ಡೀಪ್ ಫ್ರೈ ಮಾಡಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಮೇಲೆ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಪಕೋಡ ಆಕಾರದಲ್ಲಿ ಎಣ್ಣೆಗೆ ಬಿಡಿ ಹಾಗೂ ಇದನ್ನು ಡೀಪ್ ಫ್ರೈ ಮಾಡಿ. ಈಗ ನಿಮ್ಮ ಮುಂದೆ ರುಚಿ ರುಚಿಯಾದ ಸ್ವೀಟ್ ಕಾರ್ನ್ ಪಕೋಡ ತಿನ್ನಲು ಸಿದ್ಧ.
ಈ ಸ್ವೀಟ್ ಕಾರ್ನ್ ಪಕೋಡ ಸಂಜೆ ಕಾಫಿಗೆ ಮಸ್ತ್ ಕಾಂಬಿನೇಷನ್ ಎನ್ನಿಸುತ್ತದೆ. ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ತಿನ್ನುವ ಕಾರಣ ಮನೆಯಲ್ಲಿ ಆಗಾಗ ಮಾಡಿ ತಿನ್ನಬಹುದು. ಇದು ಆರೋಗ್ಯಕ್ಕೂ ಉತ್ತಮ, ಯಾವಾಗಲೂ ಖಾಲಿ ಸ್ವೀಟ್ ಕಾರ್ನ್ ತಿಂದು ಬೇಸರ ಆಗಿದ್ರೆ ನೀವು ಖಂಡಿತ ಈ ರೆಸಿಪಿ ಟ್ರೈ ಮಾಡಬಹುದು.
ವಿಭಾಗ