logo
ಕನ್ನಡ ಸುದ್ದಿ  /  ಜೀವನಶೈಲಿ  /  ರುಚಿಕರವಾದ, ಮಸಾಲೆಯುಕ್ತ ಪೇರಳೆ ಚಾಟ್ ಮಾಡುವುದು ತುಂಬಾ ಸರಳ; ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿಯಿದು

ರುಚಿಕರವಾದ, ಮಸಾಲೆಯುಕ್ತ ಪೇರಳೆ ಚಾಟ್ ಮಾಡುವುದು ತುಂಬಾ ಸರಳ; ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿಯಿದು

Priyanka Gowda HT Kannada

Dec 12, 2024 11:16 AM IST

google News

ರುಚಿಕರವಾದ, ಮಸಾಲೆಯುಕ್ತ ಪೇರಳೆ ಚಾಟ್ ರೆಸಿಪಿ

  • ಪೇರಳೆ ಅಥವಾ ಸೀಬೆ ಹಣ್ಣು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ಜ್ಯೂಸ್ ಮಾಡಿಯೂ ಕುಡಿಯಬಹುದು. ಇದರಿಂದ ಐಸ್ ಕ್ರೀಂ ಅನ್ನು ಕೂಡ ತಯಾರಿಸಬಹುದು. ಅಷ್ಟೇ ಅಲ್ಲ, ಪೇರಳೆಯಿಂದ ಮಸಾಲೆಯುಕ್ತ ಚಾಟ್ ರೆಸಿಪಿ ಕೂಡ ಮಾಡಬಹುದು. ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿಯಿದು. ಇಲ್ಲಿದೆ ಪಾಕವಿಧಾನ.

ರುಚಿಕರವಾದ, ಮಸಾಲೆಯುಕ್ತ ಪೇರಳೆ ಚಾಟ್ ರೆಸಿಪಿ
ರುಚಿಕರವಾದ, ಮಸಾಲೆಯುಕ್ತ ಪೇರಳೆ ಚಾಟ್ ರೆಸಿಪಿ

ಚಳಿಗಾಲದಲ್ಲಿ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದು ತುಂಬಾ ರುಚಿಕರವಾಗಿರುತ್ತದೆ. ಚಳಿಗಾಲದಲ್ಲಿ ಕೆಲವೆಡೆಗಳಲ್ಲಿ ಬಿಸಿಲು ಕಾಣುವುದೇ ಅಪರೂಪ ಎಂಬಂತಾಗಿರುತ್ತದೆ. ಚುಮು ಚುಮು ಚಳಿಗೆ ಸೀಬೆ (ಪೇರಳೆ) ಹಣ್ಣಿನ ಚಾಟ್ ರೆಸಿಪಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಚಾಟ್ ರೆಸಿಪಿ ಮಾಡುವುದು ತುಂಬಾನೇ ಸುಲಭ. ಇದು ತಿನ್ನಲು ರುಚಿಕರವಾಗಿರುವುದು ಮಾತ್ರವಲ್ಲ ಆರೋಗ್ಯಕರವೂ ಆಗಿದೆ. ಈ ಪಾಕವಿಧಾನವನ್ನು ತಯಾರಿಸಲು, ತಾಜಾ ಪೇರಳೆಯನ್ನು ಸಣ್ಣದಾಗಿ ಕತ್ತರಿಸಿ ಮಸಾಲೆ ಹಾಕಿ ಸವಿಯಲಾಗುತ್ತದೆ. ಮಸಾಲೆಯುಕ್ತ ಪೇರಳೆ ಚಾಟ್ ರೆಸಿಪಿಯನ್ನು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಪೇರಳೆ ಚಾಟ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಪೇರಳ- 2, ಕಪ್ಪು ಉಪ್ಪು- ಅರ್ಧ ಟೀ ಚಮಚ, ಜೀರಿಗೆ ಪುಡಿ- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಚಾಟ್ ಮಸಾಲೆ- ಅರ್ಧ ಟೀ ಚಮಚ, ಮೆಣಸಿನ ಪುಡಿ- ಅರ್ಧ ಟೀ ಚಮಚ, ನಿಂಬೆ ರಸ- ಒಂದು ಟೀ ಚಮಚ, ಹಸಿಮೆಣಸಿನಕಾಯಿ- 2.

ಮಾಡುವ ವಿಧಾನ: ಈ ಪೇರಳೆ ಚಾಟ್ ಪಾಕವಿಧಾನವನ್ನು ಮಾಡಲು ತಾಜಾ ಪೇರಲವನ್ನು ಆರಿಸಬೇಕು.

- ಮೊದಲಿಗೆ ಪೇರಳೆಯನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಬೇಕು.

- ಅದರ ನಂತರ ಒಂದು ತಟ್ಟೆಗೆ ಕತ್ತರಿಸಿದ ಪೇರಳೆಯನ್ನು ಸೇರಿಸಿ, ಅದಕ್ಕೆ ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ, ಮೆಣಸಿನಪುಡಿ, ಚಾಟ್ ಮಸಾಲಾ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿಗಳೊಂದಿಗೆ ಮಿಶ್ರಣ ಮಾಡಿ.

- ಪೇರಳೆಯಲ್ಲಿ ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಬೆರೆಸಿದ ನಂತರ, ಅದರಲ್ಲಿ ನಿಂಬೆ ರಸವನ್ನು ಹಿಂಡಿ.

- ಈ ಚಾಟ್ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ, ಮಸಾಲೆಯುಕ್ತ ಪೇರಳೆ ಚಾಟ್ ಸವಿಯಲು ಸಿದ್ಧ.

- ಈ ಚಾಟ್ ಅನ್ನು ಮಾಡಿದ ತಕ್ಷಣ ಬಡಿಸಬೇಕು/ತಿನ್ನಬೇಕು. ತಡವಾದರೆ ಪೇರಳೆಯಿಂದ ನೀರು ಬಿಡುತ್ತದೆ. ಅಷ್ಟೇ ಅಲ್ಲ, ಈ ಚಾಟ್ ಅನ್ನು ಕೂಡಲೇ ತಿನ್ನುವುದರಿಂದ ಬಹಳ ರುಚಿಕರವಾಗಿರುತ್ತದೆ.

ಪೇರಳೆ ಅಥವಾ ಸೀಬೆ ಹಣ್ಣಿನ ಉಪಯೋಗಗಳು

ಸೀಬೆ ಹಣ್ಣಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಈ ಹಣ್ಣು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಸಕ್ಕರೆ ಮಟ್ಟದಲ್ಲಿ ಹಠಾತ್ ಸ್ಪೈಕ್ ಅನ್ನು ತಡೆಯುತ್ತದೆ. ಇದರಲ್ಲಿರುವ ನಾರಿನಂಶವು ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದನ್ನು ತಡೆಯುತ್ತದೆ.

ಮೆಟಾಬಾಲಿಸಮ್ ಅನ್ನು ಹೆಚ್ಚಿಸುವ ಮೂಲಕ ತೂಕ ನಷ್ಟಕ್ಕೆ ಪೇರಳೆ ಸಹಾಯ ಮಾಡುತ್ತದೆ. ಪೇರಳೆ ತಿಂದ ನಂತರ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ವ್ಯಕ್ತಿಯು ಹೆಚ್ಚು ಕ್ಯಾಲೊರಿಗಳನ್ನು ಸೇವಿಸುವುದನ್ನು ತಡೆಯುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಪೇರಳೆಯಲ್ಲಿರುವ ಮೆಗ್ನೀಸಿಯಮ್ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೀಲು ನೋವನ್ನು ನಿವಾರಿಸುತ್ತದೆ. ಅಲ್ಲದೆ, ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ